ಭಾನುವಾರ, 6 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ವಾಚಕರ ವಾಣಿ: ಪ್ರಜಾವಾಣಿ ಓದುಗರ ಈ ದಿನದ ಪತ್ರಗಳು

Published : 13 ಸೆಪ್ಟೆಂಬರ್ 2024, 19:30 IST
Last Updated : 13 ಸೆಪ್ಟೆಂಬರ್ 2024, 19:30 IST
ಫಾಲೋ ಮಾಡಿ
Comments

ಸಂಘಟಿತ ಪ್ರಯತ್ನದಿಂದ ಒಕ್ಕೂಟ ವ್ಯವಸ್ಥೆಗೆ ಬಲ

ಕೇಂದ್ರದ ವಿವಿಧ ತೆರಿಗೆಗಳಲ್ಲಿ ರಾಜ್ಯಗಳಿಗೆ ನ್ಯಾಯಯುತ ಪಾಲು ಕೇಳಲು ಕೇರಳ ಮುಖ್ಯಮಂತ್ರಿಯ ಅಧ್ಯಕ್ಷತೆಯಲ್ಲಿ ನಡೆದ ಕೆಲವು ರಾಜ್ಯಗಳ ಹಣಕಾಸು ಸಚಿವರ ಸಭೆಯಲ್ಲಿ ನಡೆದ ಚರ್ಚೆಗಳು ಹಾಗೂ ಈ ಕುರಿತು ಕರ್ನಾಟಕವು ರಾಜ್ಯಗಳ ಬೇಡಿಕೆ ಕುರಿತು ಒಂಬತ್ತು ರಾಜ್ಯಗಳ ಸಭೆ ಆಯೋಜಿಸಲು ಉದ್ದೇಶಿಸಿರುವುದು ಒಂದು ಸಕಾರಾತ್ಮಕ ಬೆಳವಣಿಗೆ. ಹದಿನೈದನೇ ಹಣಕಾಸು ಆಯೋಗ ಮತ್ತು ಕೇಂದ್ರ ಸರ್ಕಾರದ ತರತಮ ನೀತಿಯಿಂದಾಗಿ ಕರ್ನಾಟಕವು ತೆರಿಗೆ ಹಂಚಿಕೆಯಲ್ಲಿ ಕೇಂದ್ರದಿಂದ ದೊಡ್ಡ ಪ್ರಮಾಣದಲ್ಲಿ ಅನ್ಯಾಯಕ್ಕೆ ಒಳಗಾಗಿ, ದೊಡ್ಡ ಮೊತ್ತದ ಅನುದಾನದಿಂದ ವಂಚಿತವಾಯಿತು. ಇದೇ ರೀತಿ ಇನ್ನೂ ಕೆಲವು ರಾಜ್ಯಗಳು ನಷ್ಟಕ್ಕೆ ಒಳಗಾದವು. ಈಗ ರಾಜ್ಯ ಸರ್ಕಾರವು ಈ ಬಗೆಯ ತಾರತಮ್ಯವನ್ನು ಸರಿಪಡಿಸಲು ಹದಿನಾರನೇ ಹಣಕಾಸು ಆಯೋಗದ ಮುಂದೆ ಆಗ್ರಹಿಸಿದ್ದರೂ ಕೊನೆಗೆ ಕೇಂದ್ರ ಸರ್ಕಾರ ರಾಜಕೀಯ ಕಾರಣಗಳಿಗಾಗಿ ಅದಕ್ಕೆ ಸ್ಪಂದಿಸುವುದು ಸಂಶಯಾಸ್ಪದವಾಗಿದೆ.

ಕೇಂದ್ರದ ತಾರತಮ್ಯ ನೀತಿಯನ್ನು ವಿರೋಧಿಸಲು ರಾಜ್ಯ ಸರ್ಕಾರಗಳು ಒಟ್ಟಾಗಿ ಹೋರಾಡುವುದು ಇಂದು ಬಹಳ ಮುಖ್ಯವಾಗಿದೆ. ಒಕ್ಕೂಟ ವ್ಯವಸ್ಥೆಯನ್ನು ಬಲಪಡಿಸಲು ಕೂಡ ಇದು ಅವಶ್ಯಕ. ನ್ಯಾಯಾಂಗದ ಮೂಲಕವೂ ಹೋರಾಡಬೇಕಾದ ಅಗತ್ಯ ಇದೆ. ಇದೇ ರೀತಿ ರಾಜ್ಯ ಸರ್ಕಾರಗಳು ಒಟ್ಟಾಗಿ ದೇಸಿ ಭಾಷೆಗಳಿಗೆ ಎಲ್ಲ ಹಂತದಲ್ಲಿ ಪ್ರಾಮುಖ್ಯ ಸಿಗುವ ದಿಸೆಯಲ್ಲಿ ಹಾಗೂ ಬ್ಯಾಂಕುಗಳು ಸಹಿತ ಕೇಂದ್ರ ಸರ್ಕಾರದ ಸೇವೆಗಳಲ್ಲಿ ಎಲ್ಲ ರಾಜ್ಯಗಳಿಗೆ ಸಮಾನ ಪ್ರಮಾಣದ ಅವಕಾಶ ಸಿಗುವ ದಿಸೆಯಲ್ಲಿ ಒಗ್ಗಟ್ಟಾಗಿ ಹೋರಾಡುವುದು, ಧ್ವನಿ ಎತ್ತುವುದು ಕೂಡ ಅಗತ್ಯ. ಈ ಕುರಿತು ಒಂದು ಸಂಘಟಿತ ಪ್ರಯತ್ನಕ್ಕೆ ಕರ್ನಾಟಕ ಮುಂದಾಗುತ್ತಿರುವುದು ಒಳ್ಳೆಯ ಬೆಳವಣಿಗೆ. ನಮ್ಮ ಸಂಸದರು ಇಂಥ ಒಂದು ಪ್ರಯತ್ನಕ್ಕೆ ರಾಜಕೀಯವನ್ನು ಬದಿಗಿರಿಸಿ, ಬೆಂಬಲವಾಗಿ ನಿಂತು ರಾಜ್ಯದ ಹಿತಾಸಕ್ತಿಯನ್ನು ಕಾಪಾಡಬೇಕು.

–ವೆಂಕಟೇಶ ಮಾಚಕನೂರ, ಧಾರವಾಡ

***

ಕನ್ನಡದಲ್ಲಿ ಔಷಧ ಚೀಟಿ: ಅವಾಸ್ತವಿಕ ನಡೆ

ಸರ್ಕಾರಿ ವೈದ್ಯರು ಕನ್ನಡದಲ್ಲಿಯೇ ಔಷಧ ಚೀಟಿ ಬರೆಯಲು ಶೀಘ್ರ ಆದೇಶ ಜಾರಿ ಮಾಡಬೇಕು ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರು ಸರ್ಕಾರಕ್ಕೆ ಮನವಿ ಮಾಡಿರುವುದು ಕಾರ್ಯಸಾಧುವಲ್ಲ. ಏಕೆಂದರೆ ವೈದ್ಯಕೀಯ ಶಿಕ್ಷಣ ಇರುವುದು ಇಂಗ್ಲಿಷ್‍ನಲ್ಲಿ, ವೈದ್ಯರು ಅಧ್ಯಯನ ಮಾಡಿರುವುದು ಇಂಗ್ಲಿಷ್‍ನಲ್ಲಿ, ಔಷಧಿಗಳ ಹೆಸರಿರುವುದು ಇಂಗ್ಲಿಷ್‍ನಲ್ಲಿ. ಹಾಗಾಗಿ, ಈಗ ಔಷಧದ ಚೀಟಿಗಳನ್ನು ಕನ್ನಡದಲ್ಲಿ ಬರೆಯಿರಿ ಎಂದರೆ ಅದರಿಂದ ವೈದ್ಯರನ್ನು ಹೊಸ ಸಮಸ್ಯೆಗೆ ಸಿಲುಕಿಸಿದಂತೆ ಆಗುತ್ತದೆ.

ಆಡಳಿತದ ಎಲ್ಲ ಕ್ಷೇತ್ರಗಳಲ್ಲಿ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಕನ್ನಡ ಪೂರ್ಣಪ್ರಮಾಣದಲ್ಲಿ ಬಳಕೆಯಾಗುತ್ತಿಲ್ಲ ಎಂಬುದು ಎಲ್ಲರಿಗೂ ತಿಳಿದಿರುವಂಥದ್ದೇ. ಇಂಗ್ಲಿಷ್ ಮಾಧ್ಯಮದ ಖಾಸಗಿ ಶಾಲೆಗಳು ಸರ್ಕಾರದ ಕನ್ನಡ ಮಾಧ್ಯಮ ಶಾಲೆಗಳನ್ನು ಆಪೋಶನ ತೆಗೆದುಕೊಳ್ಳುತ್ತಿರುವ ಈ ಹೊತ್ತಿನಲ್ಲಿ, ತುರ್ತಾಗಿ ಕನ್ನಡ ಶಾಲೆಗಳನ್ನು ಉಳಿಸುವ ಮತ್ತು ಬೆಳೆಸುವ ದಿಸೆಯಲ್ಲಿ ಯೋಜನೆ ಕೈಗೊಳ್ಳುವಂತೆ ಪ್ರಾಧಿಕಾರವು ಸರ್ಕಾರವನ್ನು ಒತ್ತಾಯಿಸಬೇಕು. ಕನ್ನಡ ಶಾಲೆಗಳನ್ನು ಉಳಿಸುವುದರ ಭಾಗವಾಗಿ, ಸರ್ಕಾರದ ಸಂಬಳದ ಮೇಲೆ ಬದುಕು ಕಟ್ಟಿಕೊಂಡಿರುವ ಅಧಿಕಾರಿಗಳು ಮತ್ತು ನೌಕರರು ಒಳಗೊಂಡಂತೆ ಸರ್ಕಾರಿ ಉದ್ಯೋಗಿಗಳೆಲ್ಲರೂ ಕಡ್ಡಾಯವಾಗಿ ಸರ್ಕಾರಿ ಕನ್ನಡ ಶಾಲೆಗಳಿಗೇ ಮಕ್ಕಳನ್ನು ಸೇರಿಸುವಂತೆ ಆದೇಶ ಹೊರಡಿಸಲು ಪ್ರಾಧಿಕಾರದ ಅಧ್ಯಕ್ಷರು ಸರ್ಕಾರವನ್ನು ಒತ್ತಾಯಿಸಿದರೆ ಅದೊಂದು ಅರ್ಥಪೂರ್ಣವಾದ ಕ್ರಮವಾಗುತ್ತದೆ. ಅದುಬಿಟ್ಟು ಔಷಧ ಚೀಟಿಗಳನ್ನು ಕನ್ನಡದಲ್ಲಿ ಬರೆಯುವಂತೆ ಆದೇಶಿಸಲು ಒತ್ತಾಯಿಸುವುದರಿಂದಾಗಲೀ ಕನ್ನಡೇತರರಿಗೆ ಕನ್ನಡ ಕಲಿಸುವ ಯೋಜನೆಗಾಗಿ ಹಣವನ್ನು ಪೋಲು ಮಾಡುವುದರಿಂದಾಗಲೀ ಕನ್ನಡ ಭಾಷೆ ಬೆಳೆಯುವುದಿಲ್ಲ.

–ಸಿ.ಚಿಕ್ಕತಿಮ್ಮಯ್ಯ ಹಂದನಕೆರೆ, ಬೆಂಗಳೂರು

***

ತರುಣ ವಕೀಲರಿಗೆ ಸಿಗಲಿ ವಿಶೇಷ ತರಬೇತಿ

‘ಮುಡಾ ನಿವೇಶನ ಹಂಚಿಕೆಗೆ ಸಂಬಂಧಿಸಿದಂತೆ ತಮ್ಮ ವಿರುದ್ಧದ ಕ್ರಿಮಿನಲ್‌ ಪ್ರಕರಣದ ತನಿಖೆಗೆ ರಾಜ್ಯಪಾಲರು ನೀಡಿರುವ ಆದೇಶವನ್ನು ಪ್ರಶ್ನಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಲ್ಲಿಸಿದ್ದ ರಿಟ್‌ ಅರ್ಜಿಯ ವಿಚಾರಣೆಗೆ ಸಂಬಂಧಿಸಿದ ತೀರ್ಪನ್ನು ಹೈಕೋರ್ಟ್‌  ಕಾಯ್ದಿರಿಸಿದೆ (ಪ್ರ.ವಾ., ಸೆ. 13). ಈ ಸಂಬಂಧದ ವಾದ ಮಂಡನೆಯ ಒಂದು ಹಂತದಲ್ಲಿ, ಚುನಾಯಿತ ಮುಖ್ಯಮಂತ್ರಿ ಪದವಿ ಮತ್ತು ನೇಮಕಾತಿ ಹೊಂದಿದ ರಾಜ್ಯಪಾಲರ ವಿವೇಚನಾಧಿಕಾರದ ಏರುಪೇರಿನ ಬಗ್ಗೆ ಸಹ ಕಿಂಚಿತ್ ಪ್ರಸ್ತಾಪವಾಯಿತು. ವಾದ-ಪ್ರತಿವಾದಗಳನ್ನು ನ್ಯಾಯಮೂರ್ತಿಗಳು ಸಕ್ರಿಯರಾಗಿ ಕೇಳಿದ್ದಾರಾದ್ದರಿಂದ ಮತ್ತು ಅಂತಿಮ ತೀರ್ಪಿನ ಬಗ್ಗೆ ತರಾತುರಿ ತೋರಿಲ್ಲವಾದ್ದರಿಂದ, ನಿರ್ಣಯ ಹೇಗೇ ಬಂದರೂ ಅದು ನ್ಯಾಯದ ಗೆಲುವು ಎಂದು, ನ್ಯಾಯಾಂಗದಲ್ಲಿ ವಿಶ್ವಾಸವುಳ್ಳ ಸಾಮಾನ್ಯರೆಲ್ಲರೂ ಒಪ್ಪಿಕೊಂಡಾರು. ಸಂಬಂಧಿಸಿದ ಕಕ್ಷಿದಾರರಿಗಾದರೋ ಮೇಲ್ಮನವಿಯ ಅವಕಾಶ ಇದ್ದೇ ಇರುತ್ತದೆ!

ಸಂಸತ್ತು ಮತ್ತು ಶಾಸಕಾಂಗದ ಕಲಾಪಗಳಂತೆ ನ್ಯಾಯಾಲಯದ ಕಲಾಪಗಳನ್ನು ಸಹ ಸಾರ್ವಜನಿಕರು ವೀಕ್ಷಿಸಲು ಅವಕಾಶ ಮಾಡಿಕೊಟ್ಟಿದ್ದು ಅಭಿನಂದನಾರ್ಹ. ಕೆಲವು ಎಳೆಯ ವಕೀಲರ ಎಳಸು ಬುದ್ಧಿಯನ್ನು ಕಣ್ಣಾರೆ ಕಾಣಲು ಇದು ಅವಕಾಶ ಕಲ್ಪಿಸಿತು!  ಲಾಯರ್‌ಗಿರಿ ಸಹ ವೈದ್ಯ–ಎಂಜಿನಿಯರಿಂಗ್‌ನಷ್ಟೇ ವೃತ್ತಿಪರವಾಗಿದ್ದು, ವಾಸ್ತವಿಕ ಜ್ಞಾನ, ಸಾಮಾನ್ಯ ಪ್ರಜ್ಞೆ ಮತ್ತು ಸಾಂದರ್ಭಿಕ ವಾಕ್ಚಾತುರ್ಯವನ್ನು ವಿಶೇಷವಾಗಿ ಅಪೇಕ್ಷಿಸುತ್ತದೆ. ನ್ಯಾಯಾಂಗ ತನ್ನದೇ ಮರ್ಯಾದೆ ಮತ್ತು ವಿಶ್ವಾಸಾರ್ಹತೆಯ ದೃಷ್ಟಿಯಿಂದ, ತರುಣ ವಕೀಲರಿಗಾಗಿ ವಿಶೇಷ ಪ್ರಶಿಕ್ಷಣ ವ್ಯವಸ್ಥೆಯನ್ನು ರೂಪಿಸಿಕೊಳ್ಳುವ ಆವಶ್ಯಕತೆ ಇದೆ ಎನಿಸುತ್ತದೆ.

–ಆರ್.ಕೆ.ದಿವಾಕರ, ಬೆಂಗಳೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT