ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರ ವಾಣಿ | ಬೆಂಬಲ ಬೆಲೆ ಅಪ್ರಯೋಜಕವಾಗದಿರಲಿ

ಅಕ್ಷರ ಗಾತ್ರ

ಬೆಂಬಲ ಬೆಲೆ ಅಪ್ರಯೋಜಕವಾಗದಿರಲಿ

ಕಡಲೆ ಬೆಳೆ ಕಟಾವು ನಡೆದಿದ್ದು, ಬಹುತೇಕ ರೈತರು ಇದೀಗ ಕಡಲೆಯನ್ನು ರಾಶಿ ಮಾಡಿ, ಸ್ವಚ್ಛ ಮಾಡಿಕೊಂಡು ಸರ್ಕಾರದ ಬೆಂಬಲ ಬೆಲೆಗಾಗಿ ಕಾಯುತ್ತಿದ್ದಾರೆ. ಅತಿಯಾದ ಮಳೆಯಿಂದ ಕಂಗೆಟ್ಟಿರುವ ರೈತನ ಮುಖದಲ್ಲಿ ಕಡಲೆ ನಗು ತರಿಸಿದೆ. ಖರೀದಿ ಕೇಂದ್ರದಲ್ಲಿ ರೈತರಿಂದ ಪಹಣಿ ಪಡೆದು ಅದನ್ನು ಪರಿಶೀಲಿಸಲು 15 ದಿನಗಳು ಕಾಲಹರಣ ಮಾಡದೆ ಸರ್ಕಾರ ತುರ್ತಾಗಿ ಬೆಂಬಲ ಬೆಲೆ ಕೇಂದ್ರವನ್ನು ತೆರೆದು ಖರೀದಿ ಮಾಡಬೇಕು.

ಖರೀದಿ ತಡವಾದರೆ ಬಹುತೇಕ ರೈತರು ಕಡಿಮೆ ಬೆಲೆಗೆ ಮಾರಿಬಿಡುವ ಸಾಧ್ಯತೆ ಇದೆ ಮತ್ತು ಕಡಲೆಗೆ ಹುಳು ಹತ್ತಿ ನಿರ್ವಹಣೆ ವೆಚ್ಚ ಹೆಚ್ಚಾಗುತ್ತದೆ. ಹೀಗಾದರೆ ಬೆಂಬಲ ಬೆಲೆ ನೀಡಿಯೂ ಪ್ರಯೋಜನವಿಲ್ಲದಂತೆ ಆಗುತ್ತದೆ.

ಬಸನಗೌಡ ಪಾಟೀಲ, ಯರಗುಪ್ಪಿ

ಬೆಲೆ ಏರಿಕೆ: ಪಾಕ್‌ ಜೊತೆ ಹೋಲಿಕೆ ಸಲ್ಲ

ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ಇತ್ತೀಚೆಗೆ ಸಭೆಯೊಂದರಲ್ಲಿ ಮಾತನಾಡುತ್ತಾ,
‘ಪಾಕಿಸ್ತಾನದಲ್ಲಿ ಒಂದು ಗ್ಯಾಸ್ ಸಿಲಿಂಡರ್ ಬೆಲೆ ಹತ್ತು ಸಾವಿರ ರೂಪಾಯಿ, ಪೆಟ್ರೋಲ್ ಬೆಲೆ ಮುನ್ನೂರು ರೂಪಾಯಿ ಇದೆ. ಭಾರತದಲ್ಲಿ ನರೇಂದ್ರ ಮೋದಿಯವರು ಸಿಲಿಂಡರ್ ಬೆಲೆಯನ್ನು ನೂರು ರೂಪಾಯಿ, ಪೆಟ್ರೋಲ್ ಬೆಲೆಯನ್ನು 10 ರೂಪಾಯಿ ಏರಿಸಿದರೆ ಹಾರಾಡ್ತೀರಿ, ಹೋಗ್ರಿ ಪಾಕಿಸ್ತಾನದಲ್ಲಿ ಬದುಕ್ರಿ!’ ಎಂದು ಹಾರಾಡಿದ್ದು ಮಾಧ್ಯಮಗಳಲ್ಲಿ ವರದಿಯಾಗಿದೆ. ಭಾರತ ಮತ್ತು ಪಾಕಿಸ್ತಾನ ಎರಡರಲ್ಲೂ ಕರೆನ್ಸಿಯನ್ನು ರೂಪಾಯಿ ಎಂದೇ ಕರೆದರೂ ಎರಡೂ ದೇಶಗಳಲ್ಲಿನ ರೂಪಾಯಿ ಬೆಲೆಯಲ್ಲಿ ಅಜಗಜಾಂತರ ಇದೆ.

ಪಾಕಿಸ್ತಾನ ಈಗ ತೀವ್ರ ಆರ್ಥಿಕ ಮುಗ್ಗಟ್ಟಿನಿಂದ ಬಳಲುತ್ತಿದೆ. ಅಲ್ಲಿನ ದುರಾಡಳಿತ, ಭಾರಿ ಭ್ರಷ್ಟಾಚಾರ ಇಂತಹ ದುಃಸ್ಥಿತಿಗೆ ಕಾರಣ. ಇದರಿಂದಾಗಿ ಅಲ್ಲಿನ ರೂಪಾಯಿ ಬೆಲೆಯಲ್ಲಿ ಭಾರಿ ಇಳಿಕೆಯಾಗಿದೆ. ಅಲ್ಲಿನ ಒಂದು ರೂಪಾಯಿಗೆ ಭಾರತೀಯ ರೂಪಾಯಿಯಲ್ಲಿ ಕೇವಲ 32 ಪೈಸೆ ಪಾವತಿಸಿದರೆ ಸಾಕು. ಅಂದರೆ ನಮ್ಮ ಒಂದು ರೂಪಾಯಿಗೆ ಪಾಕಿಸ್ತಾನಿ ರೂಪಾಯಿಯಲ್ಲಿ 3.16 ರೂಪಾಯಿ ಪಾವತಿಸಬೇಕಾಗುತ್ತದೆ. ಪಾಕಿಸ್ತಾನದಲ್ಲಿ ಇತ್ತೀಚೆಗೆ ವಿಶ್ವಬ್ಯಾಂಕ್‌ನ ಸೂಚನೆಯ ಮೇರೆಗೆ ತೈಲದ ದರಗಳಲ್ಲಿ ಭಾರಿ ಏರಿಕೆ ಮಾಡಲಾಯಿತು. ಈಗ ಅಲ್ಲಿ ಪೆಟ್ರೋಲ್ ಬೆಲೆ ಲೀಟರ್‌ಗೆ
₹ 272 ಇದೆ. ಆದಾಗ್ಯೂ ಇದನ್ನು ಭಾರತದ ರೂಪಾಯಿಗೆ ಪರಿವರ್ತಿಸಿದಾಗ ನಮ್ಮ ₹ 85.15 ಆಗುತ್ತದೆ. ಎಂದರೆ ಭಾರತದಲ್ಲಿ ಇದ್ದದ್ದಕ್ಕಿಂತಲೂ (₹ 110) ಪಾಕಿಸ್ತಾನದಲ್ಲೇ ಪೆಟ್ರೋಲ್ ದರ ಕಡಿಮೆ ಇದೆ ಎಂದು ವರದಿಯಾಗಿದೆ. ಆದರೆ ಕೆಲವು ಸುದ್ದಿ ಮಾಧ್ಯಮಗಳಲ್ಲಿ ಹಾಗೂ ಜಾಲತಾಣಗಳ ಸುದ್ದಿಗಳಲ್ಲಿ ಇದನ್ನು ಸರಿಯಾಗಿ ವಿವರಿಸದೆ,
ಪಾಕಿಸ್ತಾನದಲ್ಲಿ ಮಾತ್ರ ಹಾಗಾಗಿದೆ, ನಮ್ಮಲ್ಲಿ ಮಾತ್ರ ಎಲ್ಲವೂ ಸರಿ ಇದೆ ಎಂದು ತಪ್ಪಾಗಿ ಬಿಂಬಿಸಲಾಗುತ್ತಿದೆ. ಹಾಗೆಯೇ ಪಾಕಿಸ್ತಾನದ ಬೆಲೆ ವಿಚಾರವನ್ನು ವರದಿ ಮಾಡುವಾಗ, ಪಾಕಿಸ್ತಾನಿ ರೂಪಾಯಿ ಎಂದು ಸ್ಪಷ್ಟವಾಗಿ ತಿಳಿಸಬೇಕು. ಆಗ ಇಂತಹ ಗೊಂದಲಗಳಿಗೆ ಅವಕಾಶವಾಗುವುದಿಲ್ಲ.

ಮುಳ್ಳೂರು ಪ್ರಕಾಶ್, ಮೈಸೂರು

ಸಚಿವರ ಹೇಳಿಕೆ: ಮೂಗಿಗೆ ತುಪ್ಪ?

ಬೆಂಗಳೂರು ನಗರದಲ್ಲಿ ಇನ್ನು ಮುಂದೆ ‘ಬಿ’ ಖಾತಾ ಸ್ವತ್ತುಗಳ ಮೇಲಿನ ತೆರಿಗೆ ಇಳಿಸಬೇಕೆಂದು ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದು ಕಂದಾಯ ಸಚಿವರು ಹೇಳಿದ್ದಾರೆ (ಪ್ರ.ವಾ., ಫೆ. 21), ಸಂತೋಷ. ಸರಿಸುಮಾರು ಹತ್ತು ತಿಂಗಳ ಹಿಂದೆಯಷ್ಟೇ ಸಚಿವರೊಬ್ಬರು ನಗರದ ಎಲ್ಲ ‘ಬಿ’ ಖಾತಾ ಸ್ವತ್ತುಗಳಿಗೆ ಅಭಿವೃದ್ಧಿ ಶುಲ್ಕ ಕಟ್ಟಿಸಿಕೊಂಡು ‘ಎ’ ಖಾತೆ ನೀಡುವುದಾಗಿ ಪತ್ರಿಕೆಗಳ ಮುಖೇನ ಹೇಳಿಕೆ ನೀಡಿದ್ದರು. ಆ ಪತ್ರಿಕಾ ಸುದ್ದಿಯ ಪ್ರತಿ ಹಿಡಿದು ಸಂಬಂಧಪಟ್ಟ ಕಚೇರಿಗಳಿಗೆ ಅಲೆದರೂ ನಕಾರಾತ್ಮಕ ಸ್ಪಂದನೆಯೇ ಸಿಗುತ್ತಿದೆ. ಇದರಿಂದಾಗಿ ಆ ಸಚಿವರ ಹೇಳಿಕೆಯು ಮೂಗಿಗೆ ತುಪ್ಪ ಸವರಿದಂತಾಗಿದೆ. ಕಂದಾಯ ಸಚಿವರ ಈಗಿನ ಹೇಳಿಕೆಯೂ ಹಾಗೇ ಆಗುವುದೇ ಎಂಬ ಅನುಮಾನ ಕಾಡದೆ ಇರುತ್ತದೆಯೇ?!

ರಮೇಶ್, ಬೆಂಗಳೂರು

ಧಾರ್ಮಿಕ ಸ್ಥಳದಲ್ಲೂ ಚಿತ್ರನಟರ ಗುಂಗೇಕೆ?

ವಿಜಯನಗರ ಜಿಲ್ಲೆಯ ಶ್ರೀ ಕೊಟ್ಟೂರು ಗುರುಬಸವೇಶ್ವರರ ಜಾತ್ರೆಗೆ ಕಳೆದ ವಾರ ದಾವಣಗೆರೆಯಿಂದ ಪಾದಯಾತ್ರೆಯ ಮೂಲಕ ತೆರಳಿದ್ದೆ. ಆ ಸಂದರ್ಭದಲ್ಲಿ ಕೆಲ ಪಾದಯಾತ್ರಿಗಳು, ಕನ್ನಡದ ಕೆಲವು ಚಿತ್ರನಟರ ಫೋಟೊಗಳನ್ನು ಹಿಡಿದು ಸಾಗುತ್ತಿದ್ದ ದೃಶ್ಯಗಳು ಅಲ್ಲಲ್ಲಿ ಕಂಡುಬಂದವು. ಇಷ್ಟೇ ಅಲ್ಲದೆ ರಥೋತ್ಸವದ ದಿನದಂದು ರಥದ ಸಮೀಪವೇ ಚಿತ್ರನಟರ ಚಿತ್ರವಿರುವ ಫೋಟೊಗಳು, ಬೃಹತ್ ಗಾತ್ರದ ಬಾವುಟಗಳು ರಾರಾಜಿಸುತ್ತಿದ್ದವು. ಇವರಿಗೆ ದೇವರಿಗಿಂತ ಚಿತ್ರನಟರ ಮೇಲಿನ ಭಕ್ತಿಯೇ ಜಾಸ್ತಿಯಾದಂತಿದೆ ಎನಿಸಿತು.

ಚಿತ್ರನಟರ ಫೋಟೊಗಳನ್ನು ಪ್ರದರ್ಶಿಸಲು ತನ್ನದೇ ಆದ ವೇದಿಕೆ ಅಥವಾ ಸ್ಥಳವಿರುತ್ತದೆ. ಆದರೆ ಧಾರ್ಮಿಕ
ಸ್ಥಳಗಳಲ್ಲಿಯೂ ಈ ರೀತಿ ಪ್ರದರ್ಶಿಸಿದರೆ ದೇವರಿಗೂ ಇವರಿಗೂ ವ್ಯತ್ಯಾಸವೇ ಇರುವುದಿಲ್ಲ. ಅರ್ಥಾತ್ ಜಾತ್ರೆಗಳು ಕೂಡ ಭವಿಷ್ಯದಲ್ಲಿ ವಾಣಿಜ್ಯೀಕರಣಗೊಂಡು ಅಭಿಮಾನಿಗಳ ಮಧ್ಯೆ ಪೈಪೋಟಿ ಆರಂಭವಾಗುವುದರಲ್ಲಿ ಅನುಮಾನವಿಲ್ಲ. ಅಭಿಮಾನ ಇರಬೇಕು, ಆದರೆ ಅತಿಯಾದರೆ ಅಮೃತವೂ ವಿಷವೆ ಎಂಬುದನ್ನು ಅರಿಯಬೇಕು.

ಮುರುಗೇಶ ಡಿ., ದಾವಣಗೆರೆ

ಘನತೆ ಮರೆತ ರಾಜಕಾರಣಿಗಳು

ರಾಜಕಾರಣಿಗಳಿಗೆ ಘನತೆಯಿಂದ ಮಾತಾಡಲು ಗೊತ್ತಿಲ್ಲ ಎಂಬುದು ಈಚೆಗೆ ಪದೇ ಪದೇ ಸ್ಪಷ್ಟವಾಗುತ್ತಿದೆ. ಅರಸು, ಎಸ್.ಎಂ.ಕೃಷ್ಣ, ವೀರೇಂದ್ರ ಪಾಟೀಲ, ಖರ್ಗೆ ಅಂಥವರು ನೆನಪಿಗೆ ಬರುತ್ತಾರೆ. ಇವರು ಘನತೆ ಮರೆತು ಮಾತಾಡಿದ್ದು ನನಗೆ ಗೊತ್ತಿಲ್ಲ. ಆಡಳಿತಾರೂಢ ಪಕ್ಷದ ಕೆಲವು ಮುಖಂಡರು ಬಳಸುತ್ತಿರುವ ಭಾಷೆ ಹೊಲಸು ಎನಿಸಿದೆ.

ಈ ನಡುವೆ ಕೊಲೆಗಾರರಿಗೆ, ರೌಡಿಗಳಿಗೆ, ಭ್ರಷ್ಟರಿಗೆ, ರಾಜಕೀಯ ಪಕ್ಷಗಳು ಟಿಕೆಟ್ ನೀಡಲು ಮುಂದಾಗಿವೆ. ಇಂತಹ ವ್ಯವಸ್ಥೆಯಿಂದ ರಾಜ್ಯದ ಜನ ಅಭಿವೃದ್ಧಿ ಹೊಂದಲು ಸಾಧ್ಯವೇ?

ಎಂ.ಕೆ.ವಾಸುದೇವರಾಜು, ಮೈಸೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT