ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರ ವಾಣಿ: ಬೇಕು ಮೀಸಲಾತಿ ಮೀರಿದ ಹೊಸ ನೀತಿ

Published 9 ಅಕ್ಟೋಬರ್ 2023, 17:43 IST
Last Updated 9 ಅಕ್ಟೋಬರ್ 2023, 17:43 IST
ಅಕ್ಷರ ಗಾತ್ರ

ಬೇಕು ಮೀಸಲಾತಿ ಮೀರಿದ ಹೊಸ ನೀತಿ

ಜಾತಿ ಜನಗಣತಿ ಮತ್ತು ಮೀಸಲಾತಿ ಕುರಿತ ಸದ್ಯದ ಚಿಂತನೆಯನ್ನು ಇನ್ನೊಂದು ದಿಕ್ಕಿನಿಂದಲೂ ನೋಡಬೇಕಾದ ಕಾಲ ಬಂದಿದೆ. ಮೀಸಲಾತಿಯನ್ನು ಬಳಸಿಕೊಳ್ಳಲಾಗದ ಜಾತಿಗಳೂ ಇವೆ. ಹಿಂದುಳಿದವರಲ್ಲಿ ಈ ಸೌಲಭ್ಯವನ್ನು ಉಪಯೋಗಿಸಿಕೊಂಡು ಈಗ ಮುಂದೆ ಬಂದಿರುವ ಜಾತಿಗಳಿಗೆ ಸಂಖ್ಯಾಬಲವಿತ್ತು. ಕೆಲವು ಜಾತಿಗಳು ಆಸ್ತಿವಂತ

ಜಾತಿಗಳಾಗಿದ್ದವು. ಮೀಸಲಾತಿಯನ್ನು ಹೇಗೆ ತಮ್ಮ ಅನುಕೂಲಕ್ಕೆ ತಕ್ಕಂತೆ ಬಳಸಿಕೊಳ್ಳಬೇಕು ಎಂದು ಯೋಚಿಸುವುದಕ್ಕೆ ಸಂಖ್ಯಾಬಲ ಮತ್ತು ಆಸ್ತಿ ಒಡೆತನ ಪೂರಕವಾಗಿ ಕೆಲಸ ಮಾಡಿದವು. ಕ್ರಮೇಣ ಈ ಜಾತಿಗಳು ಬಲಿಷ್ಠವಾದವು; ಜಾತಿ ಜನಗಣತಿಯೇ ಬೇಡವೆನ್ನುವಷ್ಟು. ಸಂಖ್ಯಾಬಲವೂ ಇಲ್ಲದ, ಯಾವುದೇ ರೀತಿಯ ಆಸ್ತಿಯ ಒಡೆತನವೂ ಇಲ್ಲದ ನೂರಾರು ಜಾತಿಗಳ ಜನಸಂಖ್ಯೆಯೇ ಹಿಂದುಳಿದವರಲ್ಲಿ ಶೇಕಡ 15–20ರಷ್ಟು ಇದೆ. ಸಣ್ಣಪುಟ್ಟ ಜಾತಿಗಳು ಎಂದು ಇವರ

ಅಸಹಾಯಕತೆಯನ್ನು ಗುರುತಿಸಲಾಗುತ್ತದೆ. ಯಾವುದೇ ರೀತಿಯ ಮೀಸಲಾತಿಯನ್ನೂ ಬಳಸಿಕೊಳ್ಳಲಾಗದ

ಸ್ಥಿತಿಯಲ್ಲಿರುವ ಈ ವರ್ಗ ಏನು ಮಾಡಬೇಕು? ಜಾತಿಗಣತಿ ಮತ್ತು ಮೀಸಲಾತಿಯನ್ನು ಮೀರಿದ ಹೊಸ ನೀತಿಯ ಬಗ್ಗೆ ಯೋಚಿಸಲು ಇದು ಸಕಾಲವಾಗಿರಬಹುದೇ?

–ಕೆ.ಸತ್ಯನಾರಾಯಣ, ಬೆಂಗಳೂರು

ನೇರ ಕೌನ್ಸೆಲಿಂಗ್‌ ಅವಕಾಶ ಸಿಗಲಿ

ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಖಾಸಗಿ, ಸರ್ಕಾರಿ ಮತ್ತು ಸರ್ಕಾರಿ ಅನುದಾನಿತ ಕಾಲೇಜುಗಳಲ್ಲಿನ ಸರ್ಕಾರದ ಪಾಲಿನ ಎಂಜಿನಿಯರಿಂಗ್, ಪಶುವೈದ್ಯಕೀಯ, ದಂತವೈದ್ಯಕೀಯದಂತಹ ವೃತ್ತಿಪರ ಕೋರ್ಸುಗಳಿಗೆ ಮೂರು ಸುತ್ತುಗಳಲ್ಲಿ ವಿದ್ಯಾರ್ಥಿಗಳಿಗೆ ಪ್ರವೇಶ ನೀಡಲಾಗುತ್ತಿದೆ. ಆದರೆ ಗ್ರಾಮೀಣ ಮತ್ತು ನಗರ ಪ್ರದೇಶದ ಸಾವಿರಾರು ಅನಕ್ಷರಸ್ಥ ಪೋಷಕರ ಮಕ್ಕಳು ಸೂಕ್ತ ಮಾರ್ಗದರ್ಶನದ ಕೊರತೆಯಿಂದ ತಮ್ಮ ಆಯ್ಕೆಯ ಕೋರ್ಸ್ ಹಾಗೂ ಕಾಲೇಜನ್ನು ಸರಿಯಾದ ರೀತಿಯಲ್ಲಿ ಆಯ್ಕೆ ಮಾಡಿಕೊಳ್ಳದೆ, ವೃತ್ತಿಪರ ಕೋರ್ಸುಗಳ ಸೀಟುಗಳಿಂದ

ವಂಚಿತರಾಗುತ್ತಿದ್ದಾರೆ. ಹೀಗಾಗಿ, ಸಾಮಾಜಿಕ ನ್ಯಾಯದ ಪರಿಕಲ್ಪನೆಯ ಮೀಸಲು ವರ್ಗ ಮತ್ತು ಕಲ್ಯಾಣ ಕರ್ನಾಟಕ ಕೋಟಾ ಪ್ರವರ್ಗದ ಸೀಟುಗಳು ಕಾಲೇಜುಗಳಲ್ಲಿ ಭರ್ತಿಯಾಗದೇ ಉಳಿಯುತ್ತಿರುವುದನ್ನು ಕಾಣಬಹುದಾಗಿದೆ.

ಉನ್ನತ ಶಿಕ್ಷಣ ಸಚಿವರು ಈ ಬಗ್ಗೆ ಗಮನಹರಿಸಿ, ಕೊನೆಯ ಸುತ್ತಿನ ನಂತರ ಸರ್ಕಾರಿ ಮತ್ತು ಅನುದಾನಿತ ಕಾಲೇಜುಗಳಲ್ಲಿ ಭರ್ತಿಯಾಗದೇ ಉಳಿಯುವ ಎಲ್ಲಾ ಸೀಟುಗಳಿಗೆ ಮಾಪ್ ಅಪ್ ಸುತ್ತಿನಲ್ಲಿ ನೇರ ಕೌನ್ಸೆಲಿಂಗ್‌ ಮೂಲಕ ಇಂತಹ ಅವಕಾಶವಂಚಿತ ವಿದ್ಯಾರ್ಥಿಗಳಿಗೆ ಪ್ರವೇಶ ನೀಡಬೇಕು. ಇದಕ್ಕಾಗಿ ಸರ್ಕಾರವು ಕಾಲೇಜುಗಳ ಆಡಳಿತ ಮಂಡಳಿಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ಇದರಿಂದ ವಿದ್ಯಾರ್ಥಿಗಳಿಗೆ ಅನುಕೂಲವಾಗುವುದರ ಜೊತೆಗೆ ಉಳಿಕೆ ಸೀಟುಗಳಿಗೆ ಲಭ್ಯವಾಗುವ ಶುಲ್ಕದಿಂದ ಕಾಲೇಜುಗಳಿಗೂ ಆರ್ಥಿಕವಾಗಿ ಅನುಕೂಲವಾಗುತ್ತದೆ.

–ಆರ್.ಕುಮಾರ್, ಬೆಂಗಳೂರು

ಅನಗತ್ಯ ಧ್ವನಿ– ಪ್ರತಿಧ್ವನಿ

ಲಿಂಗಾಯತ ಅಧಿಕಾರಿಗಳಿಗೆ ಆಯಕಟ್ಟಿನ ಜಾಗಗಳಲ್ಲಿ ಅವಕಾಶಗಳು ಸಿಗುತ್ತಿಲ್ಲ ಎಂಬ ಶಾಸಕ ಶಾಮನೂರು ಶಿವಶಂಕರಪ್ಪ ಅವರ ಹೇಳಿಕೆಗೆ ಇದೀಗ ಎಚ್.ಡಿ.ಕುಮಾರಸ್ವಾಮಿ ಅವರೂ ಧ್ವನಿಗೂಡಿಸಿದ್ದಾರೆ (ಪ್ರ.ವಾ.,

ಅ. 9). ಕೆಲವು ದಿನಗಳ ಹಿಂದೆ ಬಿಜೆಪಿ ಮುಖಂಡ ಯಡಿಯೂರಪ್ಪ ಅವರು ಸಹ ಶಾಮನೂರು ಅವರ ವಾದವನ್ನು ಬೆಂಬಲಿಸಿದ್ದುಂಟು. ಹಾಗೆ ನೋಡಿದರೆ ಈ ಧ್ವನಿ ಮತ್ತು ಪ್ರತಿಧ್ವನಿಗಳು ನಿಜಕ್ಕೂ ಅನಗತ್ಯವಾಗಿದ್ದವು. ಏಕೆಂದರೆ, ಸಾವಿರಾರು ವರ್ಷಗಳಿಂದ ಯಾವ ಜಾತಿಗಳಿಗೆ ಸಾಮಾಜಿಕವಾಗಿ ಅನ್ಯಾಯವಾಗಿದೆಯೋ ಅಂತಹ ಜಾತಿಗಳಿಗೆ ಮಾತ್ರ ಸಾಮಾಜಿಕ, ರಾಜಕೀಯ, ಉದ್ಯೋಗ, ಶಿಕ್ಷಣದ ಅವಕಾಶ ಕಲ್ಪಿಸಿ, ಮುಖ್ಯವಾಹಿನಿಯಲ್ಲಿ ಅವರು ಬೆರೆಯುವಂತೆ ಮಾಡಿ, ದೇಶದ ಭಾವೈಕ್ಯ ಕಾಪಾಡಬೇಕೆಂಬುದು ನಮ್ಮ ಸ್ವಾತಂತ್ರ್ಯ ಹೋರಾಟಗಾರರ ಆಶಯವಾಗಿತ್ತು. ಬುದ್ಧ, ಬಸವೇಶ್ವರ, ಅಂಬೇಡ್ಕರ್, ಮಹಾತ್ಮ ಗಾಂಧಿಯವರ ಕಾಳಜಿಯೂ ಅದೇ ಆಗಿತ್ತು. ಅದೇ ನಿಜವಾದ ಅಭಿವೃದ್ಧಿ ಎಂಬುದನ್ನು ನಾವು ಅರಿಯಬೇಕಿದೆ. ಆದರೆ ಅದಕ್ಕೆ ವ್ಯತಿರಿಕ್ತವಾಗಿ ಈ ರೀತಿ ಪ್ರಬಲ ಜಾತಿಯ ಅಥವಾ ಸಮುದಾಯದ ಪರ ಧ್ವನಿ ಎತ್ತುವುದು, ಮತ್ತದನ್ನು ಬೆಂಬಲಿಸುವುದು ಸರಿಯಲ್ಲ.

ಇನ್ನೂ ಯಾವ ಪ್ರಾತಿನಿಧ್ಯವೂ ಸಿಗದ, ಅವಕಾಶವಂಚಿತವಾಗಿರುವ ಅನೇಕ ಜಾತಿ, ಸಮುದಾಯಗಳಿಲ್ಲವೇ? ಅವರ ಪರಿಸ್ಥಿತಿಯನ್ನು ಸಹ ನಾವು ಗಮನಿಸಬೇಕಲ್ಲವೇ?

–ಹುರುಕಡ್ಲಿ ಶಿವಕುಮಾರ, ಬಾಚಿಗೊಂಡನಹಳ್ಳಿ, ಹಗರಿಬೊಮ್ಮನಹಳ್ಳಿ

ಅಡ್ಡಗೋಡೆ ಮೆಟ್ಟಿನಿಲ್ಲಲಿ ಕರುಣೆಯ ಗೋಡೆ

‘ಹಿತಚಿಂತನ ಚಾರಿಟಬಲ್ ಟ್ರಸ್ಟ್’ ವತಿಯಿಂದ ‘ಅಗತ್ಯವಿಲ್ಲದಿದ್ದರೆ, ಇಲ್ಲಿ ಇಡಿ, ಅಗತ್ಯವಿದ್ದರೆ ತೆಗೆದುಕೊಳ್ಳಿ’ ಎಂಬ ಧ್ಯೇಯವಾಕ್ಯದೊಂದಿಗೆ ‘ಕರುಣೆಯ ಗೋಡೆ’ ಎಂಬ ಕಪಾಟನ್ನು ನೆಲಮಂಗಲದಲ್ಲಿ ಸ್ಥಾಪಿಸಿರುವುದರ ಬಗ್ಗೆ ವರದಿಯಾಗಿದೆ (ಪ್ರ.ವಾ., ಅ. 7). ಉದ್ದೇಶ ಮೆಚ್ಚತಕ್ಕದ್ದೇ. ಆದರೆ ‘ಕರುಣೆಯ ಗೋಡೆ’ಗೆ ಅಡ್ಡಗೋಡೆಗಳ ಕಾಟ ಇರುವಂತೆ ಆಗಬಾರದು. ಹಿಂದೆ ಬೆಂಗಳೂರಿನಲ್ಲಿ, ಹಸಿದವರಿಗೆ ಅನ್ನ ಕೊಡುವ ಇಂಥದ್ದೇ ಕೇಂದ್ರ ಪ್ರಾರಂಭವಾಯಿತು. ಅದು ಮುಂದುವರಿದ ಬಗ್ಗೆ ಮಾಹಿತಿಯಿಲ್ಲ. ಮನೆಗಳಲ್ಲಿ ದೂಳು ತಿನ್ನುತ್ತಾ ಬಿದ್ದಿರುವ ಪುಸ್ತಕಗಳನ್ನು ಕೊಡುವ ಮತ್ತು ಪುಸ್ತಕ ಬೇಕಾದವರು ತಲಾ ಎರಡು ಪುಸ್ತಕಗಳನ್ನು ಪಡೆಯುವ ‘ಪುಸ್ತಕ ಜಾತ್ರೆ’ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಪ್ರತಿವರ್ಷ ನಡೆಯುತ್ತಿತ್ತು. ಕೋವಿಡ್‌ನಿಂದಾಗಿ ಅದೂ ನಿಂತಿದೆ.

ಅನಾಥಾಶ್ರಮದ ಸಿಬ್ಬಂದಿ ಮನೆಮನೆಗೆ ಬಂದು ಹಳೆ ಬಟ್ಟೆಬರೆ ಪಡೆಯುತ್ತಾರೆ. ಇದರಲ್ಲಿ ಬಹಳಷ್ಟು ಬಟ್ಟೆಗಳು ಕಸದ ತೊಟ್ಟಿಯ ಹತ್ತಿರ ಬಿದ್ದಿರುತ್ತವೆ. ಆಹಾರ ಪದಾರ್ಥ, ಪುಸ್ತಕ, ಬಟ್ಟೆಬರೆ, ಪಾತ್ರೆಪಗಡ ಇಂತಹವನ್ನೆಲ್ಲಾ ಜನ ಅವು ಪೂರ್ತಿ ಹಾಳಾಗಿ ತಾವು ಇನ್ನು ಅವುಗಳನ್ನು ಉಪಯೋಗಿಸಲು ಸಾಧ್ಯವೇ ಇಲ್ಲ ಎಂಬಂಥ ಸ್ಥಿತಿಯಲ್ಲಿ ಕೊಡುತ್ತಾರೆ. ಇದರಿಂದ, ಒಳ್ಳೆಯ ಧ್ಯೇಯೋದ್ದೇಶದಿಂದ ಪ್ರಾರಂಭವಾಗುವ ಇಂಥ ಯೋಜನೆಗಳು ಮುಂದುವರಿಯುವುದಿಲ್ಲ. ಒಂದುವೇಳೆ ಉತ್ತಮ ಸ್ಥಿತಿಯಲ್ಲಿರುವ ವಸ್ತುಗಳನ್ನು ಈ ಕಪಾಟುಗಳಲ್ಲಿ ಜನ ತಂದು ಇಟ್ಟರೆ, ತೆಗೆದುಕೊಂಡು ಹೋಗುವವರು ಅವುಗಳನ್ನು ಸ್ವಂತಕ್ಕೆ ಬಳಸುವರೇ ಅಥವಾ ಅವುಗಳನ್ನು ಮಾರಿಕೊಳ್ಳುವರೇ ಎಂಬುದನ್ನು ಕಂಡುಹಿಡಿಯುವುದಕ್ಕೆ ಸಾಧ್ಯವಿಲ್ಲ. ಆದ್ದರಿಂದ ದಾನಿಗಳು ಮತ್ತು ದಾನ ಸ್ವೀಕರಿಸುವವರು ಮಾಡುವ ಎಡವಟ್ಟು ಕೆಲಸಗಳು ಈ ಇಬ್ಬರ ಮಧ್ಯೆ ಸೇತುವೆಯಾಗಿ ಕಾರ್ಯನಿರ್ವಹಿಸಬಯಸುವ ‘ಕರುಣೆಯ ಗೋಡೆ’ಯಂತಹ ಕಾರ್ಯಕ್ರಮಗಳಿಗೆ ಅಡ್ಡಗೋಡೆಯಾಗದಂತೆ ನೋಡಿಕೊಳ್ಳಬೇಕಾಗಿದೆ.

–ಸಿ.ಚಿಕ್ಕತಿಮ್ಮಯ್ಯ ಹಂದನಕೆರೆ, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT