ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರ ವಾಣಿ: ಶರಣಸೇನೆಯೋ? ಶರಣರ ಸೇನೆಯೋ?

Last Updated 15 ಮಾರ್ಚ್ 2021, 19:30 IST
ಅಕ್ಷರ ಗಾತ್ರ

ಚಿತ್ರದುರ್ಗದ ಮುರುಘಾ ಮಠದ ಡಾ. ಶಿವಮೂರ್ತಿ ಮುರುಘಾ ಶರಣರು ಸೇನೆ ಕಟ್ಟುತ್ತಿದ್ದಾರೆ ಎಂದು ಪತ್ರಿಕಾ ವರದಿಗಳು ತಿಳಿಸಿವೆ. ಸಾಮಾನ್ಯವಾಗಿ ಮಠಗಳಲ್ಲಿ ಅಕ್ಕನ, ಅಣ್ಣನ ಬಳಗ ಇರುವುದು ಗೊತ್ತಿದೆ. ಸಂಘ, ಸೇವಾದಳಗಳೂ ಉಂಟು. ಹಿಂದಿದ್ದ ದೊರೆ, ಪಾಳೇಗಾರರು ಶತ್ರುಗಳ ವಿರುದ್ಧ ಸೇನೆ ಕಟ್ಟಿಕೊಂಡಿದ್ದರು. ಭಕ್ತರು ಕಟ್ಟಿದ ಮಠಗಳಿಗೆ ಸೇನೆಯ ಅಗತ್ಯವಿದೆಯೇ?! ಸಾಕ್ರೆಟಿಸ್, ಏಸು, ಬುದ್ಧ, ಬಸವ, ಗಾಂಧಿ ಅವರೆಲ್ಲರಿಗೂ ತಮ್ಮನ್ನು ಹೋಲಿಸಿಕೊಂಡ ಶರಣರು, ಅವರುಗಳು ವಿರೋಧಿಗಳನ್ನು ತಾತ್ವಿಕವಾಗಿ ಎದುರಿಸಿದರೇ ವಿನಾ ಸೇನೆ ಕಟ್ಟಲಿಲ್ಲವೆಂಬುದನ್ನು ಮರೆಯುತ್ತಾರೆ. ಸೇನೆ ಕಟ್ಟಿದವರ ವಿರುದ್ಧವೇ ಸೇನೆಗಳು ತಿರುಗಿಬಿದ್ದ ಇತಿಹಾಸವನ್ನೂ ನೆನೆಯುವುದಿಲ್ಲ!

ಜೈಕಾರ ಹಾಕಿಸಿಕೊಂಡ ಶರಣರು ನವ ಸೇನೆಯನ್ನು ರಾಜಕಾರಣಿ ಬಿ.ವೈ.ವಿಜಯೇಂದ್ರ ಅವರಿಂದ ಉದ್ಘಾಟಿಸಿದರು. ಅವರೋ ರಾಜ್ಯದಾದ್ಯಂತ ಕಟ್ಟೋಣ ಅಂದಿದ್ದಾರೆ. ಮತ ಬೇಟೆಗಾಗಿ ಇದ್ದೀತೇನೋ. ಕೋಟಿಗಟ್ಟಲೆ ಅನುದಾನವನ್ನೂ ಕೊಟ್ಟಾರು. ಸೇನೆಯ ಅಧ್ಯಕ್ಷರಂತೂ ಮಠ ವಿರೋಧಿಸಿ ಕೊಡಲಿ ಬೀಸಿದರೆ ಕೊಡಲಿ ಎತ್ತುವೆವು ಎಂದು ಹ್ಞೂಂಕರಿಸಿದ್ದಾರೆ. ಸೇನೆ ಉದ್ಘಾಟಿಸಿದ ವಿಜಯೇಂದ್ರ, ಕಾಲು ಜಾರುವುದರಿಂದ ಆಗುವ ಅಪಾಯಗಳಿಗಿಂತ ನಾಲಿಗೆ ಜಾರಿದರೇ ಅಪಾಯ ಜಾಸ್ತಿಯೆಂದು ಮಾರ್ಮಿಕವಾಗಿ ಎಚ್ಚರಿಸಿದ್ದು ಸಮಯೋಚಿತ.

ಜಾತಿಗೊಬ್ಬ ಸ್ವಾಮಿಗಳನ್ನು ಮಾಡಿ ಶರಣರು ಪಟ್ಟ ಸಂತೋಷಕ್ಕಿಂತ ಉಂಡ ನೋವುಗಳೇ ಹೆಚ್ಚು. ಕೈ ಕೊಟ್ಟು ಹಗ್ಗ ಕಟ್ಟಿಸಿಕೊಳ್ಳುವ ಚಾಳಿಯ ಶರಣರಿಂದ ಸೇನೆಯಲ್ಲಿರುವ ಹುಡುಗಬಟ್ಟೆಗಳನ್ನು ನಿಯಂತ್ರಿಸಲು ಸಾಧ್ಯವೇ? ಮಠದ ಹಿತೈಷಿಯಾಗಿ ನನ್ನ ಕಳಕಳಿ ಇಷ್ಟೆ, ಮಠ ಇರುವ ಈಗಿನ ಸ್ಥಿತಿಯಲ್ಲಿ ಇದೆಲ್ಲಾ ಬೇಕಿತ್ತಾ?

- ಡಾ. ಬಿ.ಎಲ್.ವೇಣು, ಚಿತ್ರದುರ್ಗ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT