ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರ ವಾಣಿ: ಶರಣ ಸೇನೆ; ಆರೋಗ್ಯಪೂರ್ಣ ಚರ್ಚೆ ಇರಲಿ‌

Last Updated 16 ಮಾರ್ಚ್ 2021, 19:30 IST
ಅಕ್ಷರ ಗಾತ್ರ

ಸಮಾಜಮುಖಿ ಕಾರ್ಯಗಳನ್ನು ಮತ್ತಷ್ಟು ತೀವ್ರಗೊಳಿಸುವ ದಿಸೆಯಲ್ಲಿ ಯುವಜನಾಂಗಕ್ಕೊಂದು ಸಂಘಟನೆ ಅಗತ್ಯವಿದೆಯೆಂದು ಚಿತ್ರದುರ್ಗದ ಮುರುಘಾ ಮಠದ ಭಕ್ತರು ಮತ್ತು ಆಪ್ತರು ವರ್ಷದಿಂದ ಚರ್ಚಿಸುತ್ತಿದ್ದರು. ನಾಡಿನಾದ್ಯಂತ ಬಸವಕೇಂದ್ರಗಳು, ಬಸವಸೇನೆ, ಬಸವದಳ ಮೊದಲಾದ ಸಂಘಟನೆಗಳು ಈ ದಿಸೆಯಲ್ಲಿ ಕಾರ್ಯಪ್ರವೃತ್ತವಾಗಿದ್ದು, ಇನ್ನೊಂದು ಸಂಘಟನೆಯ ಅಗತ್ಯವೇನಿದೆ ಎಂದು ಮಠದ ಡಾ. ಶಿವಮೂರ್ತಿ ಮುರುಘಾ ಶರಣರು ಪ್ರಶ್ನಿಸಿದ್ದರು. ಪಟ್ಟುಬಿಡದ ಭಕ್ತರು ಜಾತ್ಯತೀತ, ಪಕ್ಷಾತೀತ ಮತ್ತು ಧರ್ಮಾತೀತವಾಗಿ ಕಾರ್ಯನಿರ್ವಹಿಸಲು ಹಾಗೂ ಬಸವಾದಿ ಶರಣರ ತತ್ವ, ವಿಚಾರಗಳನ್ನು ಪ್ರಚಾರ, ಪ್ರಸಾರ ಮಾಡುವುದರೊಂದಿಗೆ ಅತಿವೃಷ್ಟಿ, ಅನಾವೃಷ್ಟಿಯಂತಹ ಪ್ರಾಕೃತಿಕ ವೈಪರೀತ್ಯಗಳು ಸಂಭವಿಸಿದಾಗ ಸಂತ್ರಸ್ತರಿಗೆ ಸಹಾಯ ಮಾಡುವಂತಹ ವಿಧಾಯಕ
ಕಾರ್ಯಗಳನ್ನು ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಅರಿಕೆ ಮಾಡಿಕೊಂಡಿದ್ದರು.

ಶ್ರೀಮಠದ ಪ್ರಯೋಗಶೀಲತೆ, ಅಭಿವೃದ್ಧಿ ಹಾಗೂ ಸಮಾಜ ಸುಧಾರಣಾ ಕೆಲಸಗಳನ್ನು ಸಹಿಸಲಾರದ ಕೆಲ ದುಷ್ಟಶಕ್ತಿಗಳು ಒಂದಿಲ್ಲೊಂದು ಚಿತಾವಣೆ ಮಾಡುತ್ತ ವ್ಯವಸ್ಥೆಯನ್ನು ಅಭದ್ರಗೊಳಿಸುವ ಹುನ್ನಾರ ನಡೆಸುತ್ತಾ ಬಂದಿವೆ. ಕಾನೂನಾತ್ಮಕ ಕ್ರಮಗಳ ಮೂಲಕ ದಿಟ್ಟತನದಿಂದ ಅಂಥ ಶಕ್ತಿಗಳನ್ನು ಹಿಮ್ಮೆಟ್ಟಿಸುತ್ತ ಬರಲಾಗಿದೆ. ಪಟ್ಟಭದ್ರ ಹಿತಾಸಕ್ತರ ವಿರುದ್ಧ ಒಂದು ಸಂಘಟನೆ ಮುಖಾಂತರ ಹೋರಾಡುವುದು ಅನಿವಾರ್ಯ ಎಂದು ಅಭಿಮಾನಿಗಳು ಒತ್ತಾಯಿಸಿದರು. ಶ್ರೀಗಳು ಶರಣ ಸೇನೆ ಸಂಘಟನೆಗೆ ಚಾಲನೆ ನೀಡಿದರು. ಉತ್ತಮ ಕಾರ್ಯಗಳಿಗೆ ಹತ್ತಿರಿರು; ದುಷ್ಟ ಕೆಲಸಗಳಿಂದ ದೂರವಿರು ಎಂಬುದು ಮುರುಘಾ ಶರಣರ ಆಶಯವಾಗಿದೆ. ಎಲ್ಲರನ್ನೂ ಒಳಗೊಳ್ಳುವ ಪ್ರಕ್ರಿಯೆಯಲ್ಲಿ ಅವರು ಬಹುಮುಂದೆ ಸಾಗಿದ್ದಾರೆ. ಅಂಥವರನ್ನು ದೂರವಿಟ್ಟು ಸಂಘಟನೆ ಮಾಡಿದ ಉದಾಹರಣೆ ಕಣ್ಮುಂದೆ ಇದೆ. ಶರಣ ಸೇನೆಯು ಜಾತ್ಯತೀತ ಮತ್ತು ಪಕ್ಷಾತೀತ ಸಂಘಟನೆ ಆಗಿದ್ದು, ಸೈದ್ಧಾಂತಿಕ ನಿಲುವನ್ನು ಹೊಂದಿದೆ.

ಆಯಾ ದಾರ್ಶನಿಕರನ್ನು ಸತಾಯಿಸಿದವರು ಆಯಾ ಜನಾಂಗದವರೇ ಆಗಿದ್ದಾರೆ. ಸ್ವಜಾತಿ ಮಾತ್ರವಲ್ಲ ಯಾವುದೇ ಹಂತದಲ್ಲೂ ಅವಹೇಳನಕಾರಿ ವಿದ್ಯಮಾನಗಳು ನಡೆದಲ್ಲಿ ಅಂಥವುಗಳ ವಿರುದ್ಧ ಹೋರಾಡುತ್ತ ಶರಣ ಸೇನೆಯು ಹಿರಿಯರ ಮಾರ್ಗದರ್ಶನದಲ್ಲಿ ಮುಂದುವರಿಯಲಿದೆ. ಯುವಶಕ್ತಿಗೆ ಸೂಕ್ತ ಮಾರ್ಗದರ್ಶನ ನೀಡುತ್ತ, ದಾರ್ಶನಿಕರ ಹಾಗೂ ಬಸವಾದಿ ಶರಣರು ಸಾರಿದ ಮೌಲ್ಯಗಳನ್ನು ಪುನಃ ಸ್ಥಾಪಿಸಲು ಮತ್ತು ಅವನ್ನು ಮುಂದುವರಿಸುವ ದಿಸೆಯಲ್ಲಿ ಧಾರ್ಮಿಕ, ಆಧ್ಯಾತ್ಮಿಕ ಪರಂಪರೆಯೊಳಗೆ ಶರಣ ಸೇನೆ ಕಾರ್ಯನಿರ್ವಹಿಸುತ್ತದೆ. ಶರಣ ಸೇನೆಯ ಬಗ್ಗೆ ಆರೋಗ್ಯಪೂರ್ಣ ಚರ್ಚೆ ಮಾತ್ರ ಇರಲಿ.

-ನಾನಾಗೌಡ ಪಾಟೀಲ, ಸಿಂದಗಿ / ಸುರೇಶ ಚನ್ನಶೆಟ್ಟಿ, ಬೀದರ್‌ / ಈಶ್ವರ ಸಾಣಿಕೊಪ್ಪ, ಧಾರವಾಡ / ಅರುಣ ಕುಮಾರ, ಬೆಂಗಳೂರು, ಶರಣ ಸೇನಾಭಿಮಾನಿಗಳು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT