ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರ ವಾಣಿ- ಬಜೆಟ್: ಅರಿಯುವ ಕ್ರಮದಲ್ಲಿ ಅಡಗಿದೆ ಮಹತ್ವ

Last Updated 6 ಫೆಬ್ರುವರಿ 2023, 18:51 IST
ಅಕ್ಷರ ಗಾತ್ರ

ಅರಿಯುವ ಕ್ರಮದಲ್ಲಿ ಅಡಗಿದೆ ಮಹತ್ವ

ಕೇಂದ್ರ ಬಜೆಟ್‌ಗೆ ರಾಜಕೀಯ ನಾಯಕರ ಪ್ರತಿಕ್ರಿಯೆ ಕೇವಲ ಮನರಂಜನೆಯಂತೆ ಇರುತ್ತದೆ ಎಂದು ಆರ್‌.ಲಕ್ಷ್ಮೀನಾರಾಯಣ ಅವರು ಹೇಳಿರುವುದು (ವಾ.ವಾ., ಫೆ. 2) ಸಮಂಜಸವಲ್ಲ. ಬಜೆಟ್‌ ವಿಶ್ಲೇಷಣೆಯನ್ನು ಅರಿಯುವ ಕ್ರಮದಲ್ಲಿ ಅದು ಮನರಂಜನೆಯೇ ಅಲ್ಲವೇ ಎಂಬುದು ಅಡಗಿರುತ್ತದೆ. ಬಜೆಟ್‌ನಲ್ಲಿ ಹಣಕಾಸಿನ ತತ್ವ ಮತ್ತು ತಕ್ಷಣದ ಲೆಕ್ಕ ಎರಡೂ ಇರುತ್ತವೆ. ಅಂದರೆ ಬಜೆಟ್‌, ದೇಶವು ಸರ್ವತೋಮುಖವಾಗಿ ತಲುಪಬೇಕಾದ ಆರ್ಥಿಕ ಗುರಿ ಮತ್ತು ಅದನ್ನು ತೆರಿಗೆ ಸಂಗ್ರಹದಿಂದ ತಲುಪುವ ದಾರಿ ಎರಡನ್ನೂ ಹೊಂದಿರುತ್ತದೆ. ರಾಜಕೀಯ ನಾಯಕರ ಹೇಳಿಕೆಗಳನ್ನು ಗಮನಿಸಿದಾಗ ಈ ವಿವರ ಸ್ಪಷ್ಟವಾಗುತ್ತದೆ.

ವಿವಿಧ ಪಕ್ಷಗಳ ರಾಜ್ಯ ಮತ್ತು ರಾಷ್ಟ್ರ ಮಟ್ಟದ ನಾಯಕರಾದ ಸಿದ್ದರಾಮಯ್ಯ, ಅರವಿಂದ ಕೇಜ್ರಿವಾಲ್‌, ರಾಹುಲ್‌ ಗಾಂಧಿ, ಪಿಣರಾಯಿ ವಿಜಯನ್‌, ಪಿ.ಚಿದಂಬರಂ, ಸುಬ್ರಮಣಿಯನ್ ಸ್ವಾಮಿ, ಎಚ್‌.ಡಿ.ಕುಮಾರಸ್ವಾಮಿ ಅಂತಹವರು ಈ ಬಾರಿಯೂ ಹಲವು ಪ್ರಮುಖ ಅಂಶಗಳನ್ನು ಮುಂದಿಟ್ಟು, ಬಜೆಟ್‌ನಲ್ಲಿ ನಿಗದಿಯಾಗಿರುವ ಅನುದಾನವನ್ನು ಪ್ರಶ್ನೆ ಮಾಡಿದ್ದಾರೆ. ಪುಸ್ತಕದ ವಿಮರ್ಶೆಯಲ್ಲಿ ಒಂದು ಸಾಹಿತ್ಯ ಕೃತಿಯ ಅಂತರಾತ್ಮವನ್ನು ಗ್ರಹಿಸಿದಂತೆ, ಬಜೆಟ್‌ ಕುರಿತ ವಿಶ್ಲೇಷಣೆಯಲ್ಲಿ ಅದರ ಅಂತರಂಗವನ್ನು ಗಮನಿಸಬೇಕು. ಆಗ ಅದು ಮನರಂಜನೆಯಂತೆ ಅನಿಸುವುದಿಲ್ಲ.

ಎಸ್‌.ಆರ್‌.ವಿಜಯಶಂಕರ, ಬೆಂಗಳೂರು

ಮೋಡಿ ಮಾಡಿದ ಸಿರಿಕಂಠದ ಮಾಧುರ್ಯ

ಹಿಂದೆ, ನಾವು ಚಿಕ್ಕವರಿದ್ದಾಗ ರೇಡಿಯೊದಲ್ಲಿ ಚಿತ್ರಗೀತೆಗಳನ್ನು ಕೇಳಲು ಮನೆಯ ಹಿರಿಯರ ಅನುಮತಿ ಬೇಕಾಗಿತ್ತು. ಹೀಗೆ ಒಮ್ಮೆ ರೇಡಿಯೊ ಹಾಕಿಬಿಟ್ಟಾಗ, ‘ಯಾರೋ ಅದು ರೇಡಿಯೊ ಹಾಕಿದ್ದು, ಓದೋದು ಬಿಟ್ಟು’ ಅಂತ ಗದರಿದರು. ಅಷ್ಟರಲ್ಲಿ ವಾಣಿ ಜಯರಾಂ ಅವರು ಹಾಡಿದ್ದ, ಶ್ರೋತೃಗಳನ್ನು ಕಾಡುತ್ತಿದ್ದ ‘ಬೋಲೊರೆ, ಪಪ್ಪಿಹರಾ’ ಹಾಡು ಪ್ರಸಾರವಾಗುತ್ತಿದ್ದಂತೆಯೇ, ಎಲ್ಲರೂ ಅದನ್ನು ಆಸ್ವಾದಿಸಲಾರಂಭಿಸಿದರು. ರೇಗುವುದು ನಿಂತುಹೋಯಿತು. ಅಲ್ಲಿಂದ ಆರಂಭವಾದ ಅವರ ಸಿನಿಹಾಡುಗಳ ಪಯಣ, ಶ್ರೋತೃಗಳ ಕಿವಿಯಲ್ಲಿ ಸದಾ ಗುನುಗುನಿಸುತ್ತಿದೆ. ಕೀಟ್ಸ್ ಕವಿಯ ‘Melody is sweet, but those unheard are sweeter’ ಎಂಬ ಸಾಲುಗಳ ಸಾತತ್ಯವು ವಾಣಿ ಅವರ ಸಿರಿಕಂಠದ ಮಾಧುರ್ಯಕ್ಕೆ ಸೂಕ್ತವಾಗಿ ಅನ್ವಯವಾಗಿತ್ತು.

ಪ್ರೊ. ಎಂ.ಎಸ್.ರಘುನಾಥ್, ಬೆಂಗಳೂರು

ದಂಡಕ್ಕೆ ರಿಯಾಯಿತಿ: ಅವಧಿ ವಿಸ್ತರಿಸಿ

ಸಂಚಾರ ನಿಯಮ ಉಲ್ಲಂಘನೆಗೆ ವಿಧಿಸಿದ ದಂಡದ ಒಟ್ಟು ಮೊತ್ತದಲ್ಲಿ ಶೇಕಡ 50ರಷ್ಟು ರಿಯಾಯಿತಿ ನೀಡಿ, ಉಳಿದ ಹಣ ಪಾವತಿಗೆ ಸರ್ಕಾರ ಆದೇಶಿಸಿರುವುದು ನಿಜಕ್ಕೂ ಸ್ತುತ್ಯರ್ಹ ಸಂಗತಿ. ಆದರೆ ದಂಡ ಪಾವತಿಸಲು ನೀಡಿರುವ ಸಮಯದ ಅವಧಿ ಅತ್ಯಂತ ಕಡಿಮೆ. ಈ ಅವಧಿಯಲ್ಲಿ ಊರಿನಲ್ಲಿ ಇಲ್ಲದವರು ಹಾಗೂ ಶಾಲಾ ಕಾಲೇಜು
ವಿದ್ಯಾರ್ಥಿಗಳಿಗೆ ಇಷ್ಟು ಕಡಿಮೆ ಸಮಯದಲ್ಲಿ ಹಣ ಹೊಂದಿಸಿಕೊಳ್ಳಲು ಕಷ್ಟವಾಗುತ್ತದೆ. ಹಾಗಾಗಿ ಸರ್ಕಾರ ಈ ಹಣದ ಪಾವತಿಗೆ ಕಾಲಮಿತಿ ಹೆಚ್ಚಿಸಿ ಜನಸಾಮಾನ್ಯರ ಆರ್ಥಿಕ ಬವಣೆಗೆ ಸ್ಪಂದಿಸಬೇಕಿದೆ.

ಆರ್.ವೆಂಕಟರಾಜು, ಬೆಂಗಳೂರು

ಆಗಬೇಕಿರುವುದು ಶಾಲೆ ವಿಲೀನವಲ್ಲ

ಯಾವುದೇ ಸಮಾಜ, ದೇಶದ ಅಭಿವೃದ್ಧಿ ಆಗಬೇಕಾದರೆ ಶಿಕ್ಷಣ ಕ್ಷೇತ್ರಕ್ಕೆ ಆದ್ಯತೆ ಕೊಡಬೇಕಾಗುತ್ತದೆ. ಇಂದಿಗೂ ನಮ್ಮ ಗ್ರಾಮೀಣ ಪ್ರದೇಶಗಳಲ್ಲಿ, ಕೊಳೆಗೇರಿ, ಬುಡಕಟ್ಟು ಪ್ರದೇಶ, ಹಿಂದುಳಿದ ಪ್ರದೇಶಗಳಲ್ಲಿ ಎಷ್ಟೋ ಮಕ್ಕಳು ಶಿಕ್ಷಣದಿಂದ ವಂಚಿತರಾಗಿದ್ದಾರೆ. ಶಾಲೆಗೆ ಹೋಗದೆ ದುಡಿಯುತ್ತಿದ್ದಾರೆ ಮತ್ತು ಬೀಡಾಡಿಯಾಗಿ ಕಾಲ ಕಳೆಯುತ್ತಿ
ದ್ದಾರೆ. ಇಂತಹ ಮಕ್ಕಳನ್ನು ಹುಡುಕಿ, ತಂದೆ–ತಾಯಿ, ಮಕ್ಕಳ ಮನಸ್ಸು ಪರಿವರ್ತಿಸಿ ಶಾಲೆಗೆ ಮಕ್ಕಳನ್ನು ಕರೆತರ
ಬೇಕಾಗಿದೆ. ಆಗ ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ದಾಖಲಾತಿ ಹೆಚ್ಚಾಗುತ್ತದೆ, ಇನ್ನೂ ಹೆಚ್ಚಿನ ಶಾಲೆಗಳೇ ಬೇಕಾಗಬಹುದು.

ಇದಾವುದನ್ನೂ ಗಣನೆಗೆ ತೆಗೆದುಕೊಳ್ಳದೆ, ಮಕ್ಕಳ ದಾಖಲಾತಿ ಕಡಿಮೆ ಇರುವ ಶಾಲೆಗಳನ್ನು ವಿಲೀನ ಮಾಡಬೇಕು ಎಂದು ಆಡಳಿತ ಸುಧಾರಣಾ ಆಯೋಗವು ಸರ್ಕಾರಕ್ಕೆ ಶಿಫಾರಸು ಮಾಡಿರುವುದು ದುರದೃಷ್ಟಕರ. ಇಂದು ಆಡಳಿತ ಸುಧಾರಣೆಗೆ ಬೇಕಾಗಿರುವುದು ಪಾರದರ್ಶಕತೆ ಮತ್ತು ಸರ್ಕಾರಿ ಹುದ್ದೆಯಲ್ಲಿರುವ ಪ್ರತಿಯೊಬ್ಬರ ಉತ್ತರದಾಯಿತ್ವ ಅಥವಾ ಹೊಣೆಗಾರಿಕೆ. ಖಾಸಗಿ ಸಂಸ್ಥೆಗಳಲ್ಲಿ ದುಡಿಯುವವರು ಹೊಣೆಗಾರಿಕೆ ಇಲ್ಲದೆ ಕೆಲಸ ಮಾಡಿದರೆ ಒಂದೇ ತಿಂಗಳಲ್ಲಿ ಮನೆಗೆ ಕಳುಹಿಸುತ್ತಾರೆ. ಸರ್ಕಾರಿ ನೌಕರಿಯಲ್ಲಿ ಇರುವವರಿಗೂ ಹೊಣೆಗಾರಿಕೆ ಬೇಕು. ಆಗ ಲಂಚದ ಆಸೆ ಬಿಟ್ಟು, ಆಗುವ ಕೆಲಸಗಳಿಗೆ ಅಡೆತಡೆ ಉಂಟುಮಾಡದೆ ಸಾಧನೆ ತೋರಿಸುವ ಮನೋಭಾವ ಬೆಳೆಯುತ್ತದೆ.

ಗೋಡೆ ಶಿವರಾಜ್ ಸಿರಿಗೇರಿ, ಬಳ್ಳಾರಿ

ಜಾತಿ ನಿಂದನೆ ತರವಲ್ಲ

ಜೆಡಿಎಸ್‌ನ ಪಂಚರತ್ನ ಯಾತ್ರೆಯನ್ನು ಟೀಕಿಸಿದ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರ ವಿರುದ್ಧ ಶೃಂಗೇರಿ ಮಠ ಒಡೆದ, ಗಾಂಧಿಯ ಕೊಂದ ವಂಶದವರು ಎಂದು ಎಚ್‌.ಡಿ.ಕುಮಾರಸ್ವಾಮಿ ಅವರು ಮಾಡಿರುವ ವಾಗ್ದಾಳಿ‌ (ಪ್ರ.ವಾ., ಫೆ. 6) ಬಾಲಿಶವಾಗಿದೆ. ಚುನಾವಣೆ ಹತ್ತಿರವಾದಂತೆಲ್ಲಾ ಮತದಾರನನ್ನು ಒಲಿಸಿಕೊಳ್ಳಲು ಹರಸಾಹಸ ಮಾಡುತ್ತಿರುವ ರಾಜಕಾರಣಿಗಳು ಮನಸೋ ಇಚ್ಛೆ ವಾಚಾಳಿತನ ಮೆರೆಯುತ್ತಿರುವುದು ಆರೋಗ್ಯಕರ
ಪ್ರಜಾಪ್ರಭುತ್ವದ ಒಳ್ಳೆಯ ಬೆಳವಣಿಗೆ ಅಲ್ಲ.

ಕುಮಾರಸ್ವಾಮಿ ಅವರ ಮನೆಯಲ್ಲಿ ಎಚ್‌.ಡಿ.ದೇವೇಗೌಡರಿಂದ ಸೂರಜ್ ರೇವಣ್ಣ ಅವರವರೆಗೆ ನವ
ರಾಜಕಾರಣಿಗಳಿದ್ದಾರೆ, ಅದಕ್ಕಾಗಿ ನವರತ್ನ ಯಾತ್ರೆ ಮಾಡುವುದು ಸೂಕ್ತ ಎಂದು ಜೋಶಿ ಅವರು ಹೇಳಿರುವುದರಲ್ಲಿ
ತಪ್ಪೇನಿದೆ? ಕುಟುಂಬದ ಸದಸ್ಯರನ್ನು ರಾಜಕೀಯದ ಮುನ್ನೆಲೆಗೆ ತರುವುದಕ್ಕೂ ಒಂದು ಇತಿಮಿತಿ ಇರಬೇಕು. ಎಲ್ಲರೂ ಪಕ್ಷದ ಆಯಕಟ್ಟಿನ ಸ್ಥಳದಲ್ಲಿ ಕುಳಿತು ಅಧಿಕಾರ ಚಲಾಯಿಸಲು ಪ್ರಯತ್ನಿಸಿದರೆ ಉಳಿದವರ ಪಾಡೇನು? ವೈಯಕ್ತಿಕವಾಗಿ ಜಾತಿ ನಿಂದನೆ ಮಾಡುವುದು ಕುಮಾರಸ್ವಾಮಿ ಅವರ ಘನತೆಗೆ ಶೋಭೆ ತರುವುದಿಲ್ಲ.

ಎಚ್.ಎನ್. ಕಿರಣ್ ಕುಮಾರ್, ಹಳೇಹಳ್ಳಿ, ಗೌರಿಬಿದನೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT