ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಲನಚಿತ್ರ ಗೀತೆಗಳ ಮೌಲ್ಯ ಅರಿಯಿರಿ

Last Updated 28 ಜನವರಿ 2019, 20:24 IST
ಅಕ್ಷರ ಗಾತ್ರ

ಶಾಲಾ ವಾರ್ಷಿಕೋತ್ಸವಗಳಲ್ಲಿ ಚಲನಚಿತ್ರ ಗೀತೆಗಳಿಗೆ ವಿದ್ಯಾರ್ಥಿಗಳಿಂದ ನೃತ್ಯ, ಅಭಿನಯ ಮಾಡಿಸದಂತೆ ಶಿಕ್ಷಣ ಇಲಾಖೆ ನಿರ್ದೇಶಿಸಿದೆ. ಈ ಕುರಿತಾದ ‘ಎಲ್ಲ ಹಾಡಿಗೆ ನಿರ್ಬಂಧ ಬೇಡ’ (ವಾ.ವಾ., ಜ. 21) ಪತ್ರಕ್ಕೆ ಪೂರಕವಾಗಿ ಈ ಪತ್ರ. ಅಂತಹ ಕಾರ್ಯಕ್ರಮಗಳಲ್ಲಿ ಎಲ್ಲರೊಂದಿಗೆ ವೀಕ್ಷಿಸಲು ಮುಜಗರ ಪಡುವಂತಹ ಗೀತೆಗಳನ್ನು ಆಯ್ಕೆ ಮಾಡುವುದು ಖಂಡಿತ ಸರಿಯಲ್ಲ. ಆದರೆ ನಾಡು ನುಡಿಯ ಹಿರಿಮೆ, ದುಡಿಮೆಯ ಮಹತ್ವ, ತಂದೆತಾಯಿ ಹಾಗೂ ಗುರುಹಿರಿಯರಿಗೆ ಕೊಡಬೇಕಾದ ಗೌರವವನ್ನು ಬಿಂಬಿಸುವ ಹಾಡುಗಳನ್ನು ಮತ್ತು ಶೈಕ್ಷಣಿಕವಾಗಿ ಉಪಯುಕ್ತವಾಗುವ ಹಾಡುಗಳನ್ನು ಆಯ್ದುಕೊಂಡರೆ ಆ ಕಾರ್ಯಕ್ರಮಗಳ ಸೊಬಗು ಹೆಚ್ಚುವುದರಲ್ಲಿ ಸಂದೇಹವಿಲ್ಲ. ಅಂತಹ ಹಲವಾರು ಗೀತೆಗಳನ್ನು ನಮ್ಮ ಕವಿಪುಂಗವರು, ಚಿತ್ರಸಾಹಿತಿಗಳು ರಚಿಸಿಕೊಟ್ಟಿದ್ದಾರೆ.

‘ಕನ್ನಡದ ರವಿ ಮೂಡಿಬಂದ’ ನಮ್ಮ ನಾಡಿನ ಹಿರಿಮೆಯನ್ನು ಸಾರುವ ಒಂದು ಉತ್ಕೃಷ್ಟ ಗೀತೆ. ಹಾಗೆಯೇ ‘ತಾಯೆ ಬಾರ ಮೊಗವ ತೋರ’, ‘ಕನ್ನಡದ ಮಕ್ಕಳೆಲ್ಲ ಒಂದಾಗಿ ಬನ್ನಿ’, ‘ಕನ್ನಡತಿ ನಮ್ಮೊಡತಿ’, ‘ಎಂತಹ ಭಾಗ್ಯವಿದು ಭಾರತ ಮಕ್ಕಳದು’, ‘ಸಿರಿವಂತನಾದರೂ ಕನ್ನಡ ನಾಡಲ್ಲೆ ಮೆರೆವೆ’ ಮುಂತಾದವು ಸಹ ಅದೇ ಮಾದರಿಯ ಸುಶ್ರಾವ್ಯ ಗೀತೆಗಳು. ಮಕ್ಕಳಿಗೆ ದುಡಿಮೆಯ ಮಹತ್ವವನ್ನು ಸಾರಿ ಹೇಳುವ ‘ಬೆಳುವಲದ ಮಡಿಲಲ್ಲಿ’ ಗೀತೆ ‘ದುಡಿಮೇಲಿ ಯಾವತ್ತೂ ಇರಬೇಕು ಭಕ್ತಿ, ಬಡತನವಾ ಓಡ್ಸೋಕೆ ಅದು ಒಂದೇ ಯುಕ್ತಿ’ ಎಂಬಂತಹ ಆಹ್ಲಾದಕರ ಅಂತ್ಯ‍ಪ್ರಾಸಗಳುಳ್ಳ ಸಾಲುಗಳನ್ನು ಒಳಗೊಂಡಿದೆ. ಒಮ್ಮೆ ಕೇಳಿದರೆ ಮತ್ತೊಮ್ಮೆ ಮಗದೊಮ್ಮೆ ಕೇಳಬೇಕೆನಿಸುವ ಹಾಡು ಅದು. ‘ಅಮ್ಮಾ ಎಂದರೆ ಮೈಮನವೆಲ್ಲ ಹೂವಾಗುವುದಮ್ಮಾ’ ಮುಂತಾದವು ಮಾತೃವಾತ್ಸಲ್ಯ ಕುರಿತಾದ ಗೀತೆಗಳಾದರೆ ‘ತಾಯಿಯಾ ತಂದೆಯಾ ಮಮತೆ ವಾತ್ಸಲ್ಯ’ ಗೀತೆಯು ಮಾತಾಪಿತೃಗಳ ಅಂತಃಕರಣವನ್ನು ಕಣ್ಣುಗಳು ತೇವಗೊಳ್ಳುವಂತೆ ಬಣ್ಣಿಸುತ್ತದೆ.

‘ಏಳು ಸ್ವರವು ಸೇರಿ ಸಂಗೀತವಾಯಿತು’ ಗೀತೆಯು ಬಿಳಿಯ ಬಣ್ಣವು ಏಳು ಬಣ್ಣಗಳಿಂದಾದ ವೈಜ್ಞಾನಿಕ ಸತ್ಯವನ್ನು ತಿಳಿಸುತ್ತಲೇ ‘ಕಡಲಿನಿಂದ ನೀರ ಆವಿ ಮೋಡವಾಯಿತು, ಮೋಡ ಗಿರಿಗೆ ಮುತ್ತನಿಡೆ ಮಳೆಯು ಆಯಿತು’ ಎನ್ನುತ್ತ ಶಾಲೆಗಳಲ್ಲಿ ಬೋಧಿಸುವ ಜಲವಿಜ್ಞಾನದ ವೃತ್ತವನ್ನೇ ಕಾವ್ಯಮಯವಾಗಿ ಕಟ್ಟಿಕೊಡುತ್ತದೆ. ಚಿತ್ರಗೀತೆಗಳೆಂದರೆ ಮೂಗು ಮುರಿಯುವ, ಹೀಯಾಳಿಸುವ ಜನ ಪೂರ್ವಗ್ರಹಪೀಡಿತರಾಗದೇ ಅವುಗಳಲ್ಲಿಯ ಮೌಲ್ಯಗಳನ್ನೂ ಗಮನಿಸುವುದು ಸೂಕ್ತ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT