ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿವೇಕಾನಂದ, ಗೋಖಲೆ ಹೆಸರು ಬಿಟ್ಟುಹೋದದ್ದೇಕೆ?

Last Updated 27 ಸೆಪ್ಟೆಂಬರ್ 2021, 19:30 IST
ಅಕ್ಷರ ಗಾತ್ರ

ಮತಾಂತರ ನಿಷೇಧ ಕಾಯ್ದೆಯ ಅಗತ್ಯವನ್ನು ಪ್ರತಿಪಾದಿಸುತ್ತಾ ಬಿ.ಎಸ್.ಜಯಪ್ರಕಾಶ ನಾರಾಯಣ ಬರೆದ ಪತ್ರ (ವಾ.ವಾ., ಸೆ. 25) ಓದಿ ಆಶ್ಚರ್ಯವಾಯಿತು. ಏಕೆಂದರೆ ಅದರಲ್ಲಿ ಹಿಂದೂ ಧರ್ಮ ಸುಧಾರಕರನ್ನು ಹೆಸರಿಸುವಾಗ ಸ್ವಾಮಿ ವಿವೇಕಾನಂದ ಮತ್ತು ಗೋಪಾಲಕೃಷ್ಣ ಗೋಖಲೆಯವರ ಹೆಸರುಗಳು ಬಿಟ್ಟು ಹೋಗಿ ಸಾವರ್ಕರ್, ತಿಲಕ್ ಮತ್ತು ಶಾಮಪ್ರಸಾದ್ ಮುಖರ್ಜಿಯವರ ಹೆಸರುಗಳು ಸೇರಿರುವುದು. ಮುಖರ್ಜಿಯವರ ಹಿಂದೂ ಧರ್ಮ ಸುಧಾರಣೆಯ ಪ್ರಯತ್ನಗಳ ಬಗ್ಗೆ ಬಿಜೆಪಿ ಕಾರ್ಯಕರ್ತರ ಹೊರತಾಗಿ ಸಾಮಾನ್ಯ ಜನರಿಗೆ ಇನ್ನೂ ಅಷ್ಟು ಮಾಹಿತಿ ಇಲ್ಲವಾದರೂ, ತಿಲಕರು ಮತ್ತು ಸಾವರ್ಕರ್ ಅವರು ಹಿಂದೂ ಧರ್ಮ ಸುಧಾರಣೆಗಾಗಿ ನಡೆಸಿದ ಪ್ರಯತ್ನಗಳ ಮಾಹಿತಿ ನಮ್ಮ ಚರಿತ್ರೆಯ ಪುಟಗಳಲ್ಲಿ ಬಹಳಷ್ಟು ದಾಖಲಾಗಿದೆ.

ಬಾಲಗಂಗಾಧರ ತಿಲಕರು ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ವಹಿಸಿದ ಪಾತ್ರ ಧೀರೋದಾತ್ತವಾದು
ದಾದರೂ ಹಿಂದೂ ಧರ್ಮ- ಸಮಾಜ ಸುಧಾರಣೆಯ ವಿಷಯದಲ್ಲಿ ಅದು ಅತ್ಯಂತ ವಿವಾದಾಸ್ಪದವಾದು
ದಾಗಿದೆ. 19ನೆಯ ಶತಮಾನದ ಉತ್ತರಾರ್ಧದಲ್ಲಿ ಬ್ರಿಟಿಷ್ ಸರ್ಕಾರ ಸಾರ್ವಜನಿಕ ಶಿಕ್ಷಣವನ್ನು ಸಮಾಜದ ಎಲ್ಲರಿಗೂ ಮುಕ್ತವಾಗಿ ತೆರೆದಿಟ್ಟಾಗ ತಿಲಕರು ಆಕ್ರೋಶಗೊಂಡರು. ಸಾರ್ವಜನಿಕ ಶಾಲೆಗಳಿಗೆ ಅಸ್ಪೃಶ್ಯರೂ ಸೇರಿದಂತೆ ಬ್ರಾಹ್ಮಣೇತರರು ಮತ್ತು ಮಹಿಳೆಯರಿಗೆ ಪ್ರವೇಶ ನೀಡಬಾರದೆಂದು ಪಟ್ಟು ಹಿಡಿದರು. ಅವರ ಪ್ರಕಾರ, ಅದು ಹಿಂದೂ ಧರ್ಮದಲ್ಲಿನ ಹಸ್ತಕ್ಷೇಪವಾಗಿತ್ತು.

ಪೇಶ್ವೆಗಳ ಬ್ರಾಹ್ಮಣ ಪರಮಾಧಿಕಾರದ ಆಳ್ವಿಕೆಯ ಅಭಿಮಾನಿಯಾಗಿದ್ದ ಅವರು ಫುಲೆ, ಗೋಖಲೆ, ಅಗರ್ಕರ್, ಭಂಡಾರ್ಕರ್ ಮುಂತಾದವರಿಂದ ಕೂಡಿದ್ದ ಅಂದಿನ ಸುಧಾರಕರ ಗುಂಪು ಪ್ರತಿಪಾದಿಸಿದ ಸರ್ವರ ಸಮಾನತೆಯ ತತ್ವವನ್ನು ಒಪ್ಪದೆ, ಸರ್ವರಿಗೂ ಶಿಕ್ಷಣ ನೀಡುವುದು, ಅದೂ ಇಂಗ್ಲಿಷ್ ಶಿಕ್ಷಣಕ್ಕೆ ಅವರನ್ನು ತೆರೆದಿಡುವುದು ಜಾತಿ ವ್ಯವಸ್ಥೆಯ ಶಿಸ್ತು ಭಂಗಕ್ಕೆ ಕಾರಣವಾಗುತ್ತದೆ ಎಂದು ವಾದಿಸಿದರು. ಇದರಿಂದ ಹಿಂದೂ ಸಮಾಜ ಅನೀತಿಯ ಮತ್ತು ಅಶಾಂತಿಯ ಆಗರವಾಗುತ್ತದೆ ಎಂದು ವಿವರಿಸಿದರು. ಇಂಥವರನ್ನು ಹಿಂದೂ ಧರ್ಮ ಸುಧಾರಕರೆಂದು ಹೆಸರಿಸಿ ಮತಾಂತರವನ್ನು ನಿಷೇಧಿಸಬೇಕೆಂದು ಹೇಳುವುದು ಕ್ರೂರ ವ್ಯಂಗ್ಯವೇ ಆಗುತ್ತದೆ.

ಇನ್ನು ವಿ.ಡಿ.ಸಾವರ್ಕರರು ನಾಸ್ತಿಕರಾಗಿದ್ದು ಹಿಂದೂ ಧರ್ಮದ ಎಲ್ಲ ವಿಧಿ-ಕರ್ಮಾಚರಣೆಗಳನ್ನು ಅವು ಅರ್ಥಹೀನವೆಂದು ಅವುಗಳ ವಿರೋಧಿಯಾಗಿದ್ದರು ಮತ್ತು ಗೋವಧೆ ನಿಷೇಧವನ್ನು ಸ್ವಾಮಿ ವಿವೇಕಾನಂದರಂತೆಯೇ ಹಿಂದೂ ಧರ್ಮದ ಭಾಗವೆಂದು ನಂಬಿರಲಿಲ್ಲ ಮತ್ತು ಗೋಮಾಂಸವನ್ನು ಆಹಾರವಾಗಿ ಬಳಸುವುದರ ಬಗ್ಗೆ ಅವರ ವಿರೋಧವಿರಲಿಲ್ಲ. ಸಾವರ್ಕರರ ಹಿಂದೂ ಸಮಾಜ ಸುಧಾರಣೆಯು ಅವರು ಮುಸ್ಲಿಮರ ಪ್ರಾರ್ಥನಾ ಸ್ಥಳಗಳನ್ನು ಧ್ವಂಸ ಮಾಡಿರಿ, ಮುಸ್ಲಿಂ ಮಹಿಳೆಯರ ಶೀಲಭಂಗ ಮಾಡಿರಿ ಎಂದು ತಮ್ಮ ಪುಸ್ತಕವೊಂದ
ರಲ್ಲಿ ಹಿಂದೂಗಳಿಗೆ ಕೊಟ್ಟ ಕರೆಯವರೆಗೂ ವಿಸ್ತರಿಸಿತ್ತೆಂಬುದು ಜಯಪ್ರಕಾಶ ನಾರಾಯಣರಿಗೆ ಚೆನ್ನಾಗಿ ಗೊತ್ತು. ಏಕೆಂದರೆ ಅವರು ಕನ್ನಡಕ್ಕೆ ಅನುವಾದಿಸಿರುವ ಸಾವರ್ಕರ್ ಕುರಿತ ವೈಭವ್ ಪುರಂದರೆ ಅವರ ಪುಸ್ತಕದಲ್ಲೇ ಈ ಮಾಹಿತಿ ಇದೆ. ಇದು ಹಿಂದೂ ಸಮಾಜ ಸುಧಾರಣೆಯ ಕ್ರಮವೆಂದು ಅವರು ಭಾವಿಸುವರೋ? ಹೀಗಾಗಿ ಮತಾಂತರ ನಿಷೇಧ ಕುರಿತ ಅವರ ವಾದ ದುರ್ಬಲ ಮಾತ್ರವಲ್ಲ, ಅನುಮಾನಾಸ್ಪದವಾಗಿಯೂ ಕಾಣುತ್ತದೆ.

- ಡಿ.ಎಸ್.ನಾಗಭೂಷಣ,ಶಿವಮೊಗ್ಗ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT