ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಪಿಎಸ್‌ಸಿ: ರಾಜಕೀಯ ಬೇಡ

Last Updated 26 ನವೆಂಬರ್ 2012, 21:41 IST
ಅಕ್ಷರ ಗಾತ್ರ

ಅನುಭವದಿಂದ ತಾನು ಪಾಠ ಕಲಿಯಲಾರೆ ಎಂಬುದು ರಾಜ್ಯ ಸರ್ಕಾರದ ಧೋರಣೆ ಎಂಬಂತಿದೆ. ಏಕೆಂದರೆ, ಚುನಾವಣೆಗೆ ಸ್ಪರ್ಧಿಸಿ ಸೋತಿದ್ದ ಮೈಲಾರಪ್ಪರನ್ನು ಬೆಂಗಳೂರು ವಿಶ್ವವಿದ್ಯಾನಿಲಯದ ಕುಲಸಚಿವ ಸ್ಥಾನದಿಂದ ಕಿತ್ತೊಗೆದು, ರಾಜ್ಯ ಉಚ್ಚನ್ಯಾಯಾಲಯವು ರಾಜ್ಯ ಸರ್ಕಾರಕ್ಕೆ  ಕಪಾಳಮೋಕ್ಷ ಮಾಡಿತ್ತು. ಇದರಿಂದ ತೀವ್ರ ಮುಖಭಂಗಕ್ಕೊಳಗಾಗಿದ್ದ ರಾಜ್ಯ ಸರ್ಕಾರವು ನಂತರದ ದಿನಗಳಲ್ಲಾದರೂ ಪಾಠ ಕಲಿಯಬೇಕಿತ್ತು.

ಆದರೆ, ಹೈಕೋರ್ಟ್ ಆದೇಶ ಬಂದು ಇನ್ನೂ ಬೆರಳೆಣಿಕೆಯೆ ದಿನ ಕಳೆದಿಲ್ಲ. ಆಗಲೇ, ರಾಜ್ಯದ ಅತ್ಯುನ್ನತ ವಿಶ್ವಾಸಾರ್ಹ, ಪಾರದರ್ಶಕ ಸಂಸ್ಥೆಯಾಗಬೇಕಿದ್ದ ಕರ್ನಾಟಕ ಲೋಕಸೇವಾ ಆಯೋಗಕ್ಕೆ(ಕೆ.ಪಿ.ಎಸ್.ಸಿ) ರಾಜಕೀಯ ಹಿನ್ನೆಲೆಯ ಮಹಿಳೆಯೊಬ್ಬರನ್ನು ಸದಸ್ಯರನ್ನಾಗಿ ನೇಮಿಸಲಾಗಿದೆ.

ಕಳೆದ ಬಾರಿ ಬೆಂಗಳೂರು ಮಹಾನಗರಪಾಲಿಕೆ ಚುನಾವಣೆಗೆ ಬಿಜೆಪಿಯಿಂದ ಸ್ಪರ್ಧಿಸಿ ಸೋತಿದ್ದ, ಬಿಜೆಪಿ ರಾಜ್ಯ ಉಪಾಧ್ಯಕ್ಷೆಯಾಗಿದ್ದಮಂಗಳಾ ಶ್ರಿಧರ್ ಎಂಬುವರನ್ನು ನೇಮಿಸಿರುವುದು ಇಡೀ ಕೆಪಿಎಸ್‌ಸಿ ನೇಮಕಾತಿ ಪ್ರಕ್ರಿಯೆಯ ಪಾರದರ್ಶಕತೆಯ ವಿಶ್ವಾಸದ ಮೇಲೆಯೇ ಕರಿಛಾಯೆ ಮೂಡಿಸುತ್ತಿದೆ.

ಕನಿಷ್ಠ ಮೈಲಾರಪ್ಪ ಪ್ರಕರಣದಿಂದಲಾದರೂ, ರಾಜ್ಯ ಸರ್ಕಾರವು ತನ್ನ ತಪ್ಪನ್ನು ತ್ದ್ದಿದಿಕೊಳ್ಳಬೇಕಿತ್ತು. ಆದರೆ, ಅಧಿಕಾರದ ಅಮಲಿನಲ್ಲಿರುವವರಿಗೆ ಇದೆಲ್ಲವೂ ಗೌಣ.  ಕಳೆದ 4 ವರ್ಷಗಳಲ್ಲಿ ಸರ್ಕಾರ ಮೇಲಿಂದ ಮೇಲೆ ನ್ಯಾಯಾಲಯಗಳಲ್ಲಿ ಮುಖಭಂಗ ಅನುಭವಿಸುತ್ತಿದೆ.

ಹಿಂದೆ ಕಾಂಗ್ರೆಸ್ ಅಥವಾ ಜೆಡಿಎಸ್ ಸರ್ಕಾರ ಗಳಿದ್ದಾಗ ಅಧಿಕಾರ- ರಾಜಕೀಯವೇನೇ ಇದ್ದರೂ, ಶೈಕ್ಷಣಿಕ ಸಂಸ್ಥೆಗಳು, ವಿಶ್ವವಿದ್ಯಾಲಯ, ಕೆಪಿಎಸ್‌ಸಿ, ಅರೆ ನ್ಯಾಯಿಕ ಸ್ಥಾನಮಾನ ಹೊಂದಿರುವ ಹಿಂದುಳಿದ ವರ್ಗಗಳು, ಅಲ್ಪಸಂಖ್ಯಾತರ, ಪರಿಶಿಷ್ಟರ ಆಯೋಗಗಳು, ಮಕ್ಕಳ ಆಯೋಗ ಮತ್ತಿತರ ನಿಷ್ಪಕ್ಷಪಾತವಾಗಿ ಕಾರ್ಯನಿರ್ವಹಿಸಬೇಕಾದ ಸಂಸ್ಥೆಗಳಲ್ಲಿ ರಾಜಕೀಯ ಮುಖಂಡರನ್ನು ದೂರವಿರಿಸಿ, ಆಯಾ ಕ್ಷೇತ್ರದ ತಜ್ಞ, ಅನುಭವಿಗಳನ್ನು ನೇಮಿಸಲಾಗುತ್ತಿತ್ತು. ಆದರೆ, ಬಿಜೆಪಿ ಸರ್ಕಾರದ ಅವಧಿಯಲ್ಲಿ ಇವೆಲ್ಲವೂ ರಾಜಕೀಯ ಕ್ಷೇತ್ರವಾಗಿ ಮಾರ್ಪಟ್ಟಿರುವುದು ರಾಜ್ಯದ ಜನತೆಯ ದುರಂತವೇ ಸರಿ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT