ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೀತೆ– ನೇರ ಉತ್ತರ

ಅಕ್ಷರ ಗಾತ್ರ

ಜಾತಿ ಭೇದ ಪ್ರತಿಪಾದಿಸುವ ಇಡೀ ಭಗವದ್ಗೀತೆಯನ್ನು ಸುಡಬೇಕು ಎಂದಿದ್ದ ಮೈಸೂರಿನ ಕೆ.ಎಸ್‌. ಭಗವಾನ್‌ ಮತ್ತು ಮಿತ್ರರ ಹೇಳಿಕೆಗೆ ನಾಡಿನಾದ್ಯಂತ ವಿರೋಧ ವ್ಯಕ್ತವಾಗುತ್ತಿದ್ದಂತೆ,  ಅದರಲ್ಲಿ ‘ಅಸ್ಪೃಶ್ಯತೆ’ ವಿಷಯವಿರುವ 9ನೇ ಅಧ್ಯಾಯದ 32 ಮತ್ತು 33ನೇ ಶ್ಲೋಕಗಳನ್ನು ಮಾತ್ರ ಸುಡಬೇಕು ಎಂದು ಈಗ ಹೇಳಿದ್ದಾರೆ (ಪ್ರಜಾವಾಣಿ, ಮಾ. 15).

ಆ ಶ್ಲೋಕಗಳು ಹೀಗಿವೆ – ‘ಮಾಂ ಹಿ ಪಾರ್ಥ ವ್ಯಪಾಶ್ರಿತ್ಯ ಯೇಪಿ ಸ್ಯುಃ ಪಾಪಯೋನಯಃ/ ಸ್ತ್ರಿಯೋ ವೈಶ್ಯಾಸ್ತಥಾ ಶೂದ್ರಾಸ್ತೇಪಿ ಯಾಂತಿ ಪರಾಂ ಗತಿಂ// ಕಿಂ ಪುನಬ್ರಾಹ್ಮಣಾಃ ಪುಣ್ಯಾ ಭಕ್ತಾ ರಾಜರ್ಷಯಸ್ತಥಾ/ ಅನಿತ್ಯಮಸುಖಂ ಲೋಕಮಿಮಂ ಪ್ರಾಪ್ಯ ಭಜಸ್ವಮಾಮ್‌// ಈ ಶ್ಲೋಕಗಳ ಪ್ರಕಾರ, ಸ್ತ್ರೀಯರು ಶೂದ್ರರು, ಬ್ರಾಹ್ಮಣರು, ಕ್ಷತ್ರಿಯರು, ವೈಶ್ಯರು, ‘ಪಾಪಯೋನಿ’ಗಳು.

ಇವರು ಭಗವಂತನ  ಮೊರೆ ಹೊಕ್ಕರೆ,  ಪರಮಗತಿ ಅಥವಾ  ಮೋಕ್ಷವನ್ನು ಪಡೆಯತ್ತಾರೆ. ‘ಪಾಪಯೋನಿ’ ಎಂದರೆ ಬಹುಶಃ ಅಂತ್ಯಜ ಅಥವಾ ಅಸ್ಪೃಶ್ಯರು ಅಲ್ಲ. ವೇದ, ಉಪನಿಷತ್ತು, ಗೀತೆಗಳ ಕಾಲದಲ್ಲಿ ವೃತ್ತಿಗತ ವರ್ಣಭೇದ ಪದ್ಧತಿ ಇತ್ತೇ ಹೊರತು ಜನ್ಮಗತ ಭೇದ ಇರಲಿಲ್ಲ. ‘ಬ್ರಾಹ್ಮಣ’ ಇತ್ಯಾದಿ ‘ವರ್ಣ’ಗಳು ವ್ಯಕ್ತಿ ಆರಿಸಿಕೊಂಡವು– ಹುಟ್ಟಿನಿಂದ ಬಂದುವಲ್ಲ.

‘ಅಂತ್ಯಜ’ ಪರಿಕಲ್ಪನೆಯು ಬಂದುದು ಕ್ರಿಸ್ತಶಕದಿಂದ ಈಚೆಗೆ. ‘ಪಾಪಯೋನಿ’ ಎಂದರೆ ಕೆಲವರು ಅಂತ್ಯಜ ಎಂದು ಅರ್ಥೈಸಿದರೂ ಅದು ಬಹುಶಃ ಅಕ್ರಮ ಸಂತಾನದಿಂದ ಜನಿಸಿದವರನ್ನು ಹೇಳುತ್ತದೆಯೆಂದು ಹೇಳಲವಕಾಶವಿದೆ.

ಒಂದು ವೇಳೆ ‘ಪಾಪಯೋನಿ’ ಎಂದರೆ ಅಂತ್ಯಜ ಎಂದರ್ಥವಾದರೂ, ಗೀತೆಯ ಪ್ರಕಾರ ಶುಭ್ರ ಜೀವನವನ್ನು  ನಡೆಸಿದ ಪಾಪಯೋನಿಜನೂ ಅಥವಾ ಅಂತ್ಯಜನೂ ಭಗವಂತನ ಸಾಕ್ಷಾತ್ಕಾರಕ್ಕೆ  ಅರ್ಹನಾದವನೇ ಆಗುತ್ತಾನೆ. ಆದ್ದರಿಂದ, ಭಗವದ್ಗೀತೆಯು ಬ್ರಾಹ್ಮಣರನ್ನು ಅಂತ್ಯಜರನ್ನು ಸಮಾನವಾಗಿಯೇ ಕಾಣುವ ಉದಾತ್ತ ಗ್ರಂಥ. ಅದು ಖಂಡಿತ ನಿಂದನೀಯ ಕೃತಿ ಅಲ್ಲ; ಅದನ್ನು, ಅದರ ವಿಶೇಷವಾಗಿ ಎರಡು ಶ್ಲೋಕಗಳನ್ನು ಸುಡಬೇಕು ಎಂಬ ಭಗವಾನ್‌ ಮತ್ತು ಅವರ ಮಿತ್ರರ ಘೋಷಣೆ ಖಂಡಿತ ಸಾಧುವಾದುದಲ್ಲ.

ವಚನಕಾರರೂ ಕೂಡ ‘ಅಂತ್ಯಜ’ರ ಬಗ್ಗೆ ಮಾತನಾಡಿದ್ದಾರೆ. ಆದರೆ ಅವರು ಎಲ್ಲರಂತೆ ಶಿವಭಕ್ತಿಗೆ ಶಿವಕೃಪೆಗೆ ಅರ್ಹರು ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ‘ಕ್ಷುದ್ರಂ ಹೃದಯ ದೌರ್ಬಲ್ಯಂ, ತ್ತ್ಯಕ್ತ್ವೋತ್ತಿಷ್ಠ ಪರಂತಪ’, ‘ಕರ್ಮಣ್ಯೇವಾಧಿಕಾರಸ್ತೇ, ಮಾ ಫಲೇಷು ಕದಾಚನ’ ಇತ್ಯಾದಿ ಉಕ್ತಿಗಳು, ‘ಸ್ಥಿತ ಧೀ’ ಬೋಧನೆ ಇಂತಹ ಪರಿಕಲ್ಪನೆ ನನಗೆ ಧೈರ್ಯವನ್ನು ತುಂಬಿವೆ; ಭಗವದ್ಗೀತೆಯ ಸ್ಮರಣೆ ನನ್ನ ಬದುಕಿನ ಭಾಗ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT