ಶುಕ್ರವಾರ, ಜೂನ್ 5, 2020
27 °C

ಪರಿಶ್ರಮವೇ ಯಶಸ್ಸಿನ ಗುಟ್ಟು

ರಾಘವೇಂದ್ರ ಕೆ. Updated:

ಅಕ್ಷರ ಗಾತ್ರ : | |

Prajavani

ರಚಿತಾ ಗೌಡ ಅವರು ಸ್ಟಾರ್‌ ಸುವರ್ಣದ ಅಮೃತವರ್ಷಿಣಿಯ ಮೈತ್ರಿಯಾಗಿ ಮನೆ ಮಾತಾದವರು. ವೃತ್ತಿ ಬದುಕಿನ ಕುರಿತ ಅವರೊಂದಿಗಿನ ಸಮಾಲೋಚನೆ ಇಲ್ಲಿದೆ.  

ಸಾಮಾನ್ಯ ಒಬ್ಬರು ಸೆಲೆಬ್ರಿಟಿಯಾಗಿ ಬೆಳೆಯಲು ಹೇಗೆ ಸಾಧ್ಯವಾಯಿತು?

ನಿಜಕ್ಕೂ ಸಾಮಾನ್ಯ ಹುಡುಗಿ. ಈ ಕ್ಷೇತ್ರದಲ್ಲಿ ಪೋಷಿಸುವ ಹಿರಿಯರು ಯಾರು ಇರಲಿಲ್ಲ. ಕುಟುಂಬದಲ್ಲೂ ಅಂತಹ ಹಿನ್ನೆಲೆ ಕೂಡ ಇರಲಿಲ್ಲ. ಶುರುವಿನಲ್ಲಿ ಈ ಬಗ್ಗೆ ನನಗೆ ಅರಿವು ಇರಲಿಲ್ಲ. ಆರಂಭದಲ್ಲಿ ಹೇಳಿದ್ದನ್ನು ಮಾಡಿದರಾಯಿತು ಎನ್ನುವ ಮನೋಭಾವ ಇತ್ತು. ಕ್ರಮೇಣ ನಟನೆ ನನಗೆ ಪ್ಯಾಶನ್‌ ಆಯ್ತು. ಕಠಿಣ ಪರಿಶ್ರಮದಿಂದ ಅಭಿನಯಿಸಲು ಶುರುಮಾಡಿದೆ. ಹಾಗಾಗಿ ನಟಿಯಾಗಿ ಬೆಳೆಯುವಂತೆ ಮಾಡಿತು.

ಇದಕ್ಕೂ ಮೊದಲು ನನಗೆ ಇದ್ದಿದ್ದು ಸಣ್ಣ ಆಶೆ. ಸ್ವಲ್ಪ ದಿನ ನಿರೂಪಕಿಯಾಗಿ ಕೆಲಸ ಮಾಡಿದರೆ ಸಾಕು ಎನ್ನುವುದಾಗಿತ್ತು. ಆಗ ಸುವರ್ಣ ವಾಹಿನಿಯ ‘ಅಸಮಾನ್ಯರು’ ಕಾರ್ಯಕ್ರಮವನ್ನು ನಿರೂಪಿಸಿದೆ. ಆಗ ಧಾರಾವಾಹಿಗೆ ಪ್ರವೇಶಿಸುವ ಅವಕಾಶ ಸಿಕ್ಕವು. ‘ಮೇಘಮಂಧಾರ’ ‘ಬಂದೇ ಬರ್ತಾವ ಕಾಲ’ ಮನೆಯೊಂದು ಮೂರು ಬಾಗಿಲು’ ಆದರೆ ‘ಸೂರ್ಯಕಾಂತಿ’ ನನಗೆ ತುಂಬಾ ಹೆಸರನ್ನು ತಂದುಕೊಟ್ಟಿತು. ಆಮೇಲೆ ತಮಿಳಿನಲ್ಲಿ ಅವಕಾಶಗಳು ಹುಡುಕಿಕೊಂಡು ಬಂದವು. ಈಗ ತಮಿಳಿನಲ್ಲಿ ತುಂಬಾ ಬ್ಯುಸಿ ನಟಿಯಾಗಿದ್ದೇನೆ. 

ಸಿನಿಮಾ ಅಂದರೆ ಏಕೆ ಹಿಂದೇಟು?

ದಿಗಂತ್‌ ಅವರ ಜೊತೆ ‘ಪಾರಿಜಾತ’ ಸಿನಿಮಾ ಮಾಡಿದೆ. ನಾನು ನಟಿಸಿದ ಒಂದೇ ಒಂದು ಸಿನಿಮಾ. ಸಿನಿಮಾಕ್ಕೆ ಹೋಗಬಾರದು ಎನ್ನುವ ಯಾವ ಪೂರ್ವಗ್ರಹಗಳು ನನಗಿಲ್ಲ. ನನಗೆ ಏಕೋ ಆಕಡೆ ಆಸಕ್ತಿ ಬಂದಿಲ್ಲ. ಹೆಚ್ಚಿನ ಸಮಯ ಚೆನ್ಹೈನಲ್ಲೇ ಇರುವುದರಿಂದ ಆ ಬಗ್ಗೆ ಯೋಚಿಸಲು ಆಗುವುದಿಲ್ಲ. ಮುಂದಿನ ತಿಂಗಳಿಂದ ತಮಿಳು ಧಾರಾವಾಹಿಯನ್ನು ನಿರ್ಮಿಸುತ್ತಿದ್ದೇನೆ. ಅದರ ನಡುವೆ ಎರಡು ಸಾಕ್ಷ್ಯಾ ಚಿತ್ರಗಳನ್ನು ನಿರ್ದೇಶಿಸಿದ್ದೇನೆ. ಮತ್ತಷ್ಟು ಪಕ್ವವಾಗಿ ನಿರ್ದೇಶನವನ್ನೂ ಮಾಡಬೇಕು. ಅದಕ್ಕೆ ಇನ್ನೂ ಕಲಿಯಬೇಕು. ಐದಾರು ವರ್ಷದಲ್ಲಿ ಪೂರ್ಣ ಪ್ರಮಾಣದ ನಿರ್ದೇಶಿಕಿ ಆಗಬಹುದು. ನಿರ್ದೇಶನ ನಟನೆಯಷ್ಟು ಸುಲಭ ಅಲ್ಲ, ಅದನ್ನು ಹವ್ಯಾಸದಂತೆ ತೆಗೆದುಕೊಳ್ಳಲೂ ಆಗುವುದಿಲ್ಲ. ಅದು ಸಂಪೂರ್ಣ ವೃತ್ತಿಪರವಾಗಿರಬೇಕು, ಸೃಜನಶಿಲವಾಗಿರಬೇಕು. ಸದ್ಯ ಸಮಯ ಇಲ್ಲದಂತಾಗಿದೆ. ‘ಅಮೃತವರ್ಷಿಣಿ’ಯಲ್ಲೂ ಕೂಡ ಅತಿಥಿ ಪಾತ್ರ ಎನ್ನುವುದಕ್ಕೆ ಒಪ್ಪಲು ಸಾಧ್ಯವಾಗಿದೆ. ನನಗೆ ಸಮಯದ ಕೊರತೆ ಇದೆ. 

 ಯಶಸ್ವಿ ನಟಿಯಾಗಬೇಕು ಎಂದರೆ ಯಾವ ರೀತಿಯ ತಯಾರಿಬೇಕು?

ತುಂಬಾ ಜನರಲ್ಲಿ ತಪ್ಪು ಕಲ್ಪನೆಯಿಂದೆ ಗ್ಲಾಮರ್‌ ಆಗಿ ಕಾಣಿಸಿಕೊಂಡರೆ ನಟಿ ಆಗಬಹುದು ಎಂದು ಅಂದು ಒಂದು ಮುಖ ಪಾತ್ರ. ಸಂಪೂರ್ಣ ನಮ್ಮನ್ನು ನಾವು ತೊಡಗಿಸಿಕೊಳ್ಳಬೇಕು. ಯಾವುದೇ ಕೆಲಸ ನಮ್ಮ ಶ್ರಮಕ್ಕೆ ತಕ್ಕ ಫಲವನ್ನು ನೀಡುತ್ತದೆ. ಆದರೆ ಇಲ್ಲಿ ಸ್ವಲ್ಪ ಹೆಚ್ಚೇ ತೊಡಗಿಕೊಳ್ಳಬೇಕು. ಕಲಿಯುವುದು ತುಂಬಾ ಇರುವುದರಿಂದ ಇದೇ ಬದುಕು ಎನ್ನುವ ಮಟ್ಟಿಗೆ ತಿಳಿಯಬೇಕು. ಸುಮಾರಷ್ಟು ಮಂದಿ ಫೋಟೋ ಹಿಡಿದುಕೊಂಡು ಬಂದು ಅವಕಾಶ ಕೇಳುತ್ತಾರೆ. ಅವಕಾಶ ಸಿಕ್ಕರೆ ಅದನ್ನು ಚೆನ್ನಾಗಿ ಉಪಯೋಗಿಸುವ ಜಾಣ್ಮೆ ಮತ್ತು ಶ್ರಮ ಇದ್ದರೆ ಖಂಡಿತ ಒಂದಿಲ್ಲ ಒಂದು ದಿನ ಯಶಸ್ವಿಯಾಗಬಹುದು.

ದೇಹದ ಆರೋಗ್ಯದ ಬಗ್ಗೆ ಕೂಡ ಜಾಗೃತಿ ತೆಗೆದುಕೊಳ್ಳಬೇಕು. ಬೆಳಿಗ್ಗೆ ಬೇಗ ಏಳುವ ರೂಢಿ ಒಳ್ಳೆಯದು. ನಿತ್ಯ ಯೋಗವನ್ನು ಮಾಡಬೇಕು. ಡಯೆಟ್‌ ಅವರಿಗೆ ಬಿಟ್ಟ ವಿಷಯ. ನಾನಂತೂ ತಿನ್ನುವ ವಿಷಯದಲ್ಲಿ ಯಾವ ಕೊರತೆಯನ್ನು ಮಾಡಿಕೊಳ್ಳುವುದಿಲ್ಲ. 

ನಿಮ್ಮ ಮೈತ್ರಿ ಪಾತ್ರ ಹೇಗಿದೆ? 

ಕನ್ನಡದ ನಂಟು ತುಂಬಾ ದಿನಗಳಿಂದ ಬಿಟ್ಟಿತ್ತು. ‘ಅಮೃತವರ್ಷಿಣಿ’ಗೆ ಕರೆ ಬಂದಾಗ ಡೇಟ್ಸ್‌ ಸಮಸ್ಯೆಯ ಬಗ್ಗೆ ಹೇಳಿದ್ದೆ. ತಂಡಕ್ಕೆ ಪಾತ್ರವನ್ನು ನನಗೆ ಕೊಡಬೇಕು ಎನ್ನುವ ಯೋಚನೆ. ಆಗ ಒಂದು ಸೀನ್‌ನ ಕಥೆ ಹೇಳಿದರು. ನಿಜಕ್ಕೂ ವಿಭಿನ್ನ ಅನ್ನಿಸಿತು. ಈವರೆಗೆ ನಾನು ತಾಯಿ ಪಾತ್ರ ಮಾಡಿಲ್ಲ. ನಾಯಕಿಯ ಪಾತ್ರವನ್ನೇ ಮಾಡುತ್ತಿದ್ದೇನೆ. ಇದರಲ್ಲಿ ಅವಳಿ ಮಕ್ಕಳ ತಾಯಿ ಪಾತ್ರವನ್ನು ನಿರ್ವಹಿಸಲೇಬೇಕು. ಮಕ್ಕಳು ತಂದೆಯನ್ನು ಕಳೆದುಕೊಂಡಿದ್ದಾರೆ. ವಿಧವೆಯಾದ ನಾನೂ ಭೀಕರ ಅಪಘಾತದಲ್ಲಿ ಮಕ್ಕಳನ್ನು ಅಗಲುತ್ತೇನೆ. ಇಂತಹ ಕರುಣಾಜನಕ ಸ್ಥಿತಿಯಲ್ಲಿ ಕಥೆಯ ಹೂರಣ ಇದೆ. ಎಂತಹವರೂ ಒಂದು ಕ್ಷಣ ಭಾವುಕರಾಗುವ ಕರುಣಾಜನಕ ಪಾತ್ರ ಮಾಡುವ ಅವಕಾಶ ಇದರಲ್ಲಿ ನನಗೆ ಲಭಿಸಿದೆ. 

ತಮಿಳನ್ನು ಹೇಗೆ ಪಳಗಿಸಿದಿರಿ?

ಬೆಂಗಳೂರಿನಲ್ಲಿ ಬೆಳೆದ ನನಗೆ ಸ್ವಲ್ಪಮಟ್ಟಿಗೆ ತಮಿಳು ಮಾತನಾಡಲು ಬರ್ತಾ ಇತ್ತು. ತಮಿಳು ಕಿರುತೆರೆಯಲ್ಲಿ ದೊಡ್ಡಮಟ್ಟದ ಯಶಸ್ಸು ಸಿಕ್ಕಿದ್ದರಿಂದ ಹಲವಾರು ಧಾರಾವಾಹಿಗಳಲ್ಲಿ ನಟಿಸಿದೆ. ಅದು ಜನಪ್ರಿಯಂತೆಯನ್ನು ತಂದು ಕೊಟ್ಟಿತು. ಆಗ ನನ್ನ ಸಂದರ್ಶನಗಳು ಪತ್ರಿಕೆಗಳಲ್ಲಿ ಬರಲು ಆರಂಭಿಸಿದವು. ನನ್ನ ಸಂದರ್ಶನವನ್ನು ನಾನೇ ಓದಬೇಕು ಎಂಬ ಸಂಕಲ್ಪದಿಂದ ಓದು, ಬರಹವನ್ನೂ ಕಲಿತೆ. ಈಗ ಗ್ರಂಥಸ್ಥ ತಮಿಳು ಒಂದು ಮಟ್ಟಿಗೆ ಹಿಡಿತಕ್ಕೆ ಬಂದಿದೆ ಅಂದರೆ ಅದಕ್ಕೆ ಅಭ್ಯಾಸ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.