ಕರಣ್: ಬದುಕಿದ್ದೂ ಕಥೆ, ಕಟ್ಟಿದ್ದೂ ಕಥೆ!

7

ಕರಣ್: ಬದುಕಿದ್ದೂ ಕಥೆ, ಕಟ್ಟಿದ್ದೂ ಕಥೆ!

Published:
Updated:

‘ಪ್ಯಾನ್ಸಿ’-ಹೀಗೊಂದು ಪದ ಅಂಗಾತ ಮಲಗಿದ ಹುಡುಗನ ತಲೆಯೊಳಗೆ ಗುಂಗಿಹುಳುವಾಗಿತ್ತು. ಮುಂಬೈನ ಗ್ರೀನ್ಲಾಸ್ ಸ್ಕೂಲ್‌ನಲ್ಲಿ ಸಹಪಾಠಿಗಳು ಹೀಗೆ ಕರೆದಾಗಲೆಲ್ಲ ಪರಮ ಸಂಕಟ. ಈ ಪದದ ಅರ್ಥ ‘ಹೆಣ್ಣಿಗ’. ಆತ್ಮೀಯರು ‘ಕೆಜೋ’ ಎಂದೇ ಸಂಬೋಧಿಸುವ, ಈ ದಿನಮಾನದ ಯಶಸ್ವಿ ಸಿನಿಮಾ ನಿರ್ದೇಶಕ-ನಿರ್ಮಾಪಕ ಕರಣ್ ಜೋಹರ್ ಬಾಲ್ಯದ ಕಥೆ ಇದು. 

1990ರ ದಶಕದಲ್ಲಿ ಧರ್ಮ ಪ್ರೊಡಕ್ಷನ್ಸ್ ಸಿನಿಮಾಗಳ ಕುರಿತು ಅನೇಕರು ಮಾತನಾಡುತ್ತಿದ್ದರು. ಯಶ್ ಜೋಹರ್ ಅಂಥದೊಂದು ನಿರ್ಮಾಣ ಸಂಸ್ಥೆ ಕಟ್ಟಿ ಬೆಳೆಸಿದ್ದರು. ಅವರ ಮನೆಯ ಕುಡಿ ಕರಣ್. ಒಂದು ಕ್ವಿಂಟಲ್‌ಗೂ ಹೆಚ್ಚಿನ ದೇಹತೂಕದ ಮಗನನ್ನು ಅಡಿಗಡಿಗೂ ಮೂದಲಿಸುವವರಿದ್ದರು. ಹೀಯಾಳಿಸುವವರಿದ್ದರು. ಎಲ್ಲ ನೋವುಗಳ ಕೇಳಿಸಿಕೊಂಡು, ಕಣ್ತುಂಬಿಕೊಂಡು ಮಗ ಮನೆಗೆ ಬಂದಾಗ ಅಪ್ಪ ತಲೆ ನೇವರಿಸಿ, ಸಮಾಧಾನ ಮಾಡುತ್ತಿದ್ದರು. ಅಮ್ಮನಿಗೂ ಮಗನೇ ಮುದ್ದು. ಅಪ್ಪ-ಅಮ್ಮನ ಪ್ರೀತಿಯ ಬೆಳಕಲ್ಲಿ ಕವಿದ ಕತ್ತಲನ್ನು ಮರೆಯುತ್ತಲೇ ಸಿನಿಮಾ ಕನವರಿಕೆಯನ್ನು ನೇವರಿಸತೊಡಗಿದ್ದ.

ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದ ಮೇಲೆ ಕರಣ್ ಸಿನಿಮಾ ಲೋಕಕ್ಕೆ ನೇರವಾಗಿ ಪದಾರ್ಪಣೆ ಮಾಡಿದ್ದು. ಅದಕ್ಕೂ ಮೊದಲು ಪ್ರಜ್ಞಾಪೂರ್ವಕವಾಗಿ ಬಣ್ಣದ ಲೋಕದಿಂದ ಅವರನ್ನು ಅಪ್ಪ-ಅಮ್ಮ ದೂರವೇ ಇಟ್ಟಿದ್ದರು.
‘ದಿಲ್‌ವಾಲೆ ದುಲ್ಹನಿಯಾ ಲೇ ಜಾಯೇಂಗೆ’ ಸಿನಿಮಾದಲ್ಲಿ ಶಾರುಖ್ ಖಾನ್ ತೊಟ್ಟ ವಸ್ತ್ರಗಳ ವಿನ್ಯಾಸಕರಾಗಿ ಕರಣ್ ಗುರುತಾದರು. ಸಹಾಯಕ ನಿರ್ದೇಶಕನಾಗಿ ದೃಶ್ಯ ಸಂಯೋಜನೆಯ ಸೂಕ್ಷ್ಮಗಳನ್ನು ಕಲಿತದ್ದೂ ಆಗಲೇ. ದೂರದಿಂದಲೇ ಸಿನಿಮಾ ನಾಡಿಮಿಡಿತವನ್ನು ಓದಿ, ಕೇಳಿ ತಿಳಿಯುತ್ತಿದ್ದ ಕರಣ್, ಹತ್ತಿರದಿಂದ ಅನುಭವಿಸಿದ ಮೇಲೆ ಚಿತ್ರಕಥಾ ರಚನೆಗೆ ಮುಂದಾದರು. ಅವರ ಪಾಲಿನ ಗುರು ಆದಿತ್ಯ ಚೋಪ್ರಾ. ಅವರೇ ಸಿನಿಮಾ ನಿರ್ದೇಶಿಸುವಂತೆ ಮೊದಲು ಪುಸಲಾಯಿಸಿದ್ದು.

ಸಂಬಂಧಗಳ ಹಲವು ಭಾವಗಳ ‘ಕುಚ್ ಕುಚ್ ಹೋತಾ ಹೈ’ ಹಿಂದಿ ಸಿನಿಮಾ ಹಿಟ್ ಆಯಿತು. ಅದು ನಿರ್ದೇಶಕನಾಗಿ ಕರಣ್ ಮೊದಲ ಕೂಸು.

ಸಿನಿಮಾ ಬದುಕು ಹಸನಾಗಿ ಸಾಗುತ್ತಿರುವಾಗಲೇ 2004ರಲ್ಲಿ ಅಪ್ಪ ಅಸುನೀಗಿದರು. ತಂದೆಯ ಪ್ರೀತಿಯ ಅರಳಿಮರದ ತಂಪು ನೆರಳಲ್ಲಿ ಬೆಳೆದ ಮಗನಿಗೆ ಅದು ದೊಡ್ಡ ಆಘಾತ. ಪ್ರತಿ ನಿರ್ಧಾರಕ್ಕೂ ಅಪ್ಪನ ಸಮ್ಮತಿ ಕೇಳುವುದು ಅಭ್ಯಾಸವಾಗಿದ್ದರಿಂದ ಕಳವಳಗೊಂಡರು. ಅಪ್ಪನ ನಿರ್ಮಾಣ ಸಂಸ್ಥೆಯನ್ನೇ ಮುಚ್ಚಬೇಕೆಂಬ ತೀರ್ಮಾನಕ್ಕೆ ಬಂದು ಬಿಟ್ಟರು. ಆಗ ಸಿನಿಮಾ ನಟರೊಬ್ಬರು ಕೈಗಿತ್ತದ್ದು ಒಂದು ಲಕೋಟೆ. ಅದರಲ್ಲಿ ಕಂಪನಿಯನ್ನು ಹೇಗೆಲ್ಲ ನಡೆಸಬೇಕು ಎಂದು ಅಪ್ಪ ಬರೆದಿಟ್ಟಿದ್ದರು. ತಾವು ಕಟ್ಟಿದ ಸಂಸ್ಥೆಯನ್ನು ಮುನ್ನಡೆಸಿಕೊಂಡು ಹೋಗಬೇಕು ಎನ್ನುವುದು ಮಗನಲ್ಲಿ ಅವರು ಮಾಡಿದ ವಿನಂತಿ. ಅಪ್ಪನ ಕೊನೆಯ ಬಯಕೆ ಮಗನನ್ನು ಕಟ್ಟಿಹಾಕಿತು.

ಮೊನ್ನೆ ಮೊನ್ನೆ ‘ಧಡಕ್’ ಹಿಂದಿ ಸಿನಿಮಾದ ಚಿತ್ರ ಶೀರ್ಷಿಕೆ ತೋರುವ ಮೊದಲು ಸುತ್ತಿದ ಧರ್ಮ ಪ್ರೊಡಕ್ಷನ್ಸ್‌ ಲಾಂಛನದ ಚಕ್ರ ಕರಣ್ ಪಾಲಿಗೆ ತುಂಬಾ ಮುಖ್ಯವಾದ ಸಂಕೇತವೇ ಹೌದು.

ಮೂವತ್ತೆರಡನೇ ವಯಸ್ಸಿನಲ್ಲಿ ತಂದೆಯನ್ನು ಕಳೆದುಕೊಂಡ ಕರಣ್ ಒಂಥರಾ ಕತ್ತಲೆ ಕವಿದ ಸ್ಥಿತಿಯಲ್ಲಿದ್ದರು. ಮತ್ತೆ ಅವರು ಸಿನಿಮಾ ನಿರ್ಮಾಣದಲ್ಲಿ ತೊಡಗಿಕೊಂಡು ಆ ಕಹಿಯನ್ನು ಮರೆಯುತ್ತಾ ಸಾಗಿದರಾದರೂ, ನಲವತ್ತು ದಾಟಿದ ಮೇಲೆ ಖಿನ್ನತೆ ಕಾಡಿತು. ಒಮ್ಮೆ ಸಭೆಯಲ್ಲಿ ಕುಳಿತಿದ್ದಾಗ ಹೃದಯಾಘಾತ ಆಗುತ್ತಿದೆಯೇನೋ ಅನ್ನಿಸಿತು. ಸೀದಾ ಎದ್ದು ಅಲ್ಲಿಂದ ಹೋದದ್ದು ವೈದ್ಯರಲ್ಲಿಗೆ. ‘ನಿಮಗೆ ಖಿನ್ನತೆಯ ದಾಳಿಯಾಗಿದೆ’ ಎಂದು ವೈದ್ಯರು ಹೇಳಿದ್ದೇ, ಮನಃಶಾಸ್ತ್ರಜ್ಞರತ್ತ ದೌಡಾಯಿಸಿದರು.

ಅಲ್ಲಿಂದ ಒಂದೂವರೆ ವರ್ಷ ಚಿಕಿತ್ಸೆ. ಔಷಧೋಪಚಾರದ ಜೊತೆಗೆ ಜೀವನಶೈಲಿಯಲ್ಲಿ ಅಗತ್ಯ ಮಾರ್ಪಾಟುಗಳನ್ನು ಮಾಡಿಕೊಂಡ ಕರಣ್, ಪ್ರೀತಿ ಹಂಚಿಕೊಳ್ಳಲು ಸಂಗಾತಿಯೇ ಇಲ್ಲವಲ್ಲ ಎಂದು ನೊಂದಿದ್ದರ ಫಲವದು.

ಇಷ್ಟೆಲ್ಲ ದುಗುಡಗಳನ್ನು ಮೀರಿಯೂ ಅವರು ಯುವಜೋಡಿಗಳ ಮನೋಧರ್ಮವನ್ನು ಚೆನ್ನಾಗಿ ಅರಿತ ನಿರ್ದೇಶಕ ಎನಿಸಿಕೊಂಡಿದ್ದಾರೆ. ‘ಕುಚ್ ಕುಚ್ ಹೋತಾ ಹೈ’ ಸಿನಿಮಾ ಕಚಗುಳಿಯಂತೆ ಕಾಣುತ್ತದೆ. ‘ಮೈ ನೇಮ್ ಈಸ್ ಖಾನ್’ ಧರ್ಮಸೂಕ್ಷ್ಮ ಹೇಳುತ್ತದೆ. ‘ಸ್ಟೂಡೆಂಟ್ ಆಫ್ ದಿ ಇಯರ್’ ಯುವೋತ್ಸಾಹವೊಂದಿದ್ದರೆ ಡಬ್ಬಾ ಸಿನಿಮಾವನ್ನೂ ಓಡಿಸಬಹುದು ಎನ್ನುವುದಕ್ಕೆ ನಿದರ್ಶನದಂತೆ. ಇದೀಗ ‘ಸೈರಾಟ್’ ಮರಾಠಿ ಚಲನಚಿತ್ರದ ರೀಮೇಕ್ ‘ಧಡಕ್’. ಮಗಳು ಜಾಹ್ನವಿಯ ಕಣ್ಣಿನಲ್ಲಿ ಅಮ್ಮ ಶ್ರೀದೇವಿಯ ಬೆಳಕಿನ ದರ್ಶನ ಮಾಡಿಸಲು ಮನಸ್ಸು ಮಾಡಿದ ನಿರ್ಮಾಪಕ ಕೂಡ ಇದೇ ಕರಣ್.

ಹೀಗೆ ಪ್ರೀತಿ ನಂಬಿದ ಡಜನ್ನುಗಟ್ಟಲೆ ಯುವ ಮನಸ್ಸುಗಳನ್ನು ಬಳಸಿ ಅಲೆಯೊಂದನ್ನು ಎಬ್ಬಿಸುವ ಕರಣ್, ತಮ್ಮ ಮಾನಸ ಸರೋವರದ ಆಳದಲ್ಲಿ ಬೆಳೆದ ಕಳೆಗಳನ್ನೂ ಕಿತ್ತವರೇ. ನಟ, ನಿರ್ಮಾಪಕ, ವಸ್ತ್ರ ವಿನ್ಯಾಸಕ, ನಿರ್ದೇಶಕ, ರಿಯಾಲಿಟಿ ಷೋ ತೀರ್ಪುಗಾರ, ಟೀವಿ ಷೋ ನಿರೂಪಕ ಎಲ್ಲವೂ ಆಗಿರುವ ಕರಣ್ ಅವರನ್ನು ಅಲ್ಲಾಡಿಸಿದರೆ ಹೊಸಕಾಲದ ಹೋರಾಟದ ಕಥೆಗಳು ಪುಂಖಾನುಪುಂಖವಾಗಿ ಉದುರುತ್ತವೆ.

ಬರಹ ಇಷ್ಟವಾಯಿತೆ?

 • 7

  Happy
 • 0

  Amused
 • 2

  Sad
 • 0

  Frustrated
 • 0

  Angry

Comments:

0 comments

Write the first review for this !