ಟೆನಿಸ್ ಲೋಕದ ನವತಾರೆ ನವೊಮಿ

7

ಟೆನಿಸ್ ಲೋಕದ ನವತಾರೆ ನವೊಮಿ

Published:
Updated:
ಅಮೆರಿಕ ಓಪನ್ ಟ್ರೋಫಿಯೊಂದಿಗೆ ನವೊಮಿ ಒಸಾಕ

ಜಪಾನ್‌ನ ಒಸಾಕದ ಚೌ ಕೂ ಪಟ್ಟಣ. ಆ ಮನೆಯ ಪಡಸಾಲೆಯಲ್ಲಿ ಟಿ.ವಿ. ಪರದೆಯ ಮುಂದೆ ಕುಳಿತಿದ್ದ ವಯೋವೃದ್ಧ ದಂಪತಿಯ ಕಣ್ಣುಗಳಿಂದ ಕಣ್ಣೀರು ಧಾರೆಯಾಗಿ ಹರಿದಿತ್ತು. ಕೆಲವೇ ಕ್ಷಣಗಳ ನಂತರ ಅವರಿಬ್ಬರೂ ಸಿಹಿ ಪದಾರ್ಥಗಳನ್ನು ಎತ್ತಿಕೊಂಡು ನೆರೆಹೊರೆಯವರು, ಸ್ನೇಹಿತರು ಹಾಗೂ ಮಕ್ಕಳ ಬಾಯಿಗಿಟ್ಟು ತಮ್ಮ ಕಣ್ಣೀರು ಒರಸಿಕೊಂಡರು.

‘ನನ್ನ ಮೊಮ್ಮಗಳು ನವೊಮಿ, ಅಮೆರಿಕ ಓಪನ್ ಪ್ರಶಸ್ತಿ ಗೆದ್ದಿದ್ದಾಳೆ ನೋಡಿ. ಟೆನಿಸ್ ತಾರೆ ಸೆರೆನಾ ವಿಲಿಯಮ್ಸ್‌ ಅವರನ್ನು ಸೋಲಿಸಿ ಈ ಪ್ರಶಸ್ತಿ ಗಳಿಸಿದ್ದಾಳೆ. 2020ರ ಒಲಿಂಪಿಕ್ಸ್‌ನಲ್ಲಿ ಜಪಾನ್‌ಗೆ ಚಿನ್ನ ಗೆದ್ದುಕೊಡ್ತಾಳೆ’ ಎಂದು ಗದ್ಗದಿತ ಧ್ವನಿಯಲ್ಲಿ ಹೇಳಿದರು.

ಹೋದ ಭಾನುವಾರ, ನವೊಮಿ ಒಸಾಕ ಅವರು ಅಮೆರಿಕ ಓಪನ್ ಪ್ರಶಸ್ತಿ ಗೆದ್ದ ಮೊಟ್ಟಮೊದಲ ಜಪಾನಿ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಆ ದಿನ ಇಡೀ ಜಪಾನ್ ದೇಶ ಹೆಮ್ಮೆಯ ಭಾವದಲ್ಲಿ ಸಂಭ್ರಮಿಸುತ್ತಿದ್ದರೆ, ಟೆನಿಸ್‌ ಎಂಬ ಆಟವು ಈ ಕುಟುಂಬದಲ್ಲಿ ಹಲವು ವರ್ಷಗಳಿಂದ ಇದ್ದ ದ್ವೇಷವನ್ನು ಶಮನಗೊಳಿಸಿತು ಎಂಬುದು ವಿಶೇಷ.

ಹೌದು; ನವೊಮಿಯ ತಾಯಿ ತಮಾಕಿ ಒಸಾಕ ಜಪಾನಿ ಮಹಿಳೆ. ತಂದೆ ಹೈಟಿಯ (ಕೆರಿಬಿಯನ್ ದ್ವೀಪದ ಪುಟ್ಟ ದೇಶ) ಲಿಯೊನಾರ್ಡ್ ಸ್ಯಾನ್ ಫ್ರಾಂಕೋಸ್ ಕಪ್ಪು ಜನಾಂಗದವರು. ನ್ಯೂಯಾರ್ಕ್ ವಿಶ್ವವಿದ್ಯಾಲಯದಲ್ಲಿ ಅಧ್ಯಯನ ಮಾಡುವಾಗ ಇಬ್ಬರೂ ಪ್ರೀತಿಸಿದ್ದರು. ಲಿಯೊನಾರ್ಡ್‌ ಕೂಡ ಜಪಾನ್‌ನಲ್ಲಿ ಉದ್ಯೋಗ ಗಳಿಸಿದರು. ತಮಾಕಿಯನ್ನು ಮದುವೆಯಾದರು. ಜನಾಂಗೀಯ ಕಾರಣಗಳಿಗಾಗಿ ತಮಾಕಿಯ ತಂದೆಯು ಲಿಯೊನಾರ್ಡ್‌ನನ್ನು ಅಳಿಯನೆಂದು ಒಪ್ಪಿಕೊಳ್ಳಲಿಲ್ಲ. ಸುಮಾರು ಒಂದು ದಶಕ ಮಗಳೊಂದಿಗೆ ಮಾತನ್ನೇ ಆಡಿರಲಿಲ್ಲ. ಆದರೆ ನವೊಮಿ ಮತ್ತು ಸಹೋದರಿ ಮೇರಿ ಅವರು ಜೂನಿಯರ್ ಸರ್ಕಿಟ್‌ನಲ್ಲಿ ಮಾಡುತ್ತಿದ್ದ ಸಾಧನೆಗಳಿಂದಾಗಿ ಅಜ್ಜ, ಮೊಮ್ಮಕ್ಕಳ ಸಮೀಪ ಬಂದರು. ಎರಡೂ ಕುಟುಂಬಗಳು ಮತ್ತೆ ಒಂದುಗೂಡಿದವು.

ಅಮ್ಮನ ಸರ್‌ನೇಮ್:

ನವೊಮಿ ಮತ್ತು ಅವರ ಅಕ್ಕ ಮೇರಿಗೆ ತಾಯಿಯ ಸರ್‌ನೇಮ್‌ ಅನ್ನೇ ದಾಖಲಿಸಲಾಯಿತು. ಇಬ್ಬರಿಗೂ ಜಪಾನಿ ಪೌರತ್ವ ದೊರೆಯಿತು. ನವೊಮಿ ಮೂರು ವರ್ಷದ ಬಾಲಕಿಯಾಗಿದ್ದಾಗಲೇ ಕುಟುಂಬವು ಫ್ಲಾರಿಡಾಗೆ ಬಂದು ನೆಲೆಸಿತು. ಲಿಯೊನಾರ್ಡ್ ತನ್ನ ಇಬ್ಬರೂ ಹೆಣ್ಣಮಕ್ಕಳಿಗೆ ಟೆನಿಸ್ ಕಲಿಸುತ್ತಿದ್ದರು. ಅವರಿಬ್ಬರ ಆಸಕ್ತಿ, ವೇಗದ ಆಟ ಮತ್ತು ಚಾಣಾಕ್ಷತೆ ಗುರುತಿಸಿದ ಅವರು, ಅಮೆರಿಕದ ಕ್ಲಬ್‌ಗಳಿಗೆ ಸೇರಿಸಲು ಓಡಾಡಿದರು. ಆದರೆ ಉತ್ತಮ ಸ್ಪಂದನೆ ದೊರೆಯದ ಕಾರಣ ಜಪಾನ್ ಟೆನಿಸ್ ಸಂಸ್ಥೆಯ ಮೊರೆ ಹೋದರು. ಅಲ್ಲಿಯೇ ದಾಖಲಿಸಿದರು.

ಸದಾ ಭೂಕಂಪ, ಚಂಡಮಾರುತಗಳ ಹೊಡೆತಕ್ಕೆ ನಲುಗುವ ಜಪಾನ್, ಫೀನಿಕ್ಸ್‌ ಹಕ್ಕಿಯಂತೆ ಏಳುವ ಗುಣ ಹೊಂದಿದೆ. ಯಾವ ರಂಗದ ಅಭಿವೃದ್ಧಿಯಲ್ಲೂ ಹಿಂದೆಬೀಳುವುದಿಲ್ಲ. ಕ್ರೀಡೆಯಲ್ಲಿಯೂ ಅಷ್ಟೇ. ಆದರೆ ಟೆನಿಸ್ ವಿಚಾರದಲ್ಲಿ ಮಾತ್ರ ಹೆಚ್ಚು ಚಾಂಪಿಯನ್‌ಗಳನ್ನು ಈ ದೇಶ ಹೊಂದಿಲ್ಲ. ಇತ್ತೀಚಿನ ವರ್ಷಗಳಲ್ಲಿ ಪುರುಷರ ವಿಭಾಗದಲ್ಲಿ ಕೀ ನಿಶಿಕೋರಿ ಮಿಂಚುತ್ತಿದ್ದಾರೆ. ಮಹಿಳೆಯರ ವಿಭಾಗದಲ್ಲಿ ಒಸಾಕ ಸಹೋದರಿಯರು ಭರವಸೆ ಮೂಡಿಸುತ್ತ ಬೆಳೆದರು. ನವೊಮಿ ಮತ್ತು ಮೇರಿ, ಐಟಿಎಫ್ ಡಬಲ್ಸ್‌ನಲ್ಲಿ ಆಡಿದರು. ನವೊಮಿ ಸಿಂಗಲ್ಸ್‌ನಲ್ಲಿಯೂ ಹೆಚ್ಚು ಸಾಧನೆ ಮಾಡತೊಡಗಿದರು.

‘ಜಪಾನಿ– ಹೈಟಿ’ ಮಿಶ್ರ ಜನಾಂಗದ ಆಟಗಾರ್ತಿ ಎಂಬ ವ್ಯಂಗ್ಯಗಳನ್ನು ಕೇಳುತ್ತಲೇ ಬೆಳೆದ ನವೊಮಿ ಟೀಕೆಗಳಿಗೆ ತಲೆಕೆಡಿಸಿಕೊಳ್ಳಲಿಲ್ಲ. ತಮ್ಮ ಟೆನಿಸ್ ಅಭ್ಯಾಸದತ್ತ ಚಿತ್ತ ನೆಟ್ಟರು. ತಮ್ಮ ಕುಟುಂಬದ ‘ಜನಾಂಗೀಯ ಮಿಶ್ರಣ’ವನ್ನು ಸಕಾರಾತ್ಮಕವಾಗಿ ತೆಗೆದುಕೊಂಡರು.

‘ಎರಡು ದೇಶ ಮತ್ತು ಜನಾಂಗಗಳ ಸಾಂಸ್ಕೃತಿಕ ವಾತಾವರಣದಲ್ಲಿ ಬೆಳೆದಿದ್ದೇನೆ. ಅಪ್ಪನ ತಂದೆ– ತಾಯಿ ವೆಸ್ಟ್ ಇಂಡೀಸ್ ಮೂಲದ ಖಾರವಾದ ಅಡುಗೆ ಮಾಡಿಕೊಡುತ್ತಿದ್ದರು. ಅದು ನನಗೆ ಇಷ್ಟ. ಅಮ್ಮನ ಜಪಾನಿ ಅಡುಗೆ ಕೂಡ ಸ್ವಾದಿಷ್ಟ. ಹಾಡು, ನೃತ್ಯ, ಆಟ, ಪಾಠ ಎಲ್ಲವೂ ನನ್ನನ್ನು ಸುಸಂಸ್ಕೃತ ಮತ್ತು ಸದೃಢಳನ್ನಾಗಿಸಿದೆ’ ಎಂದು ನವೊಮಿ ಕ್ವಾಡ್‌ಬುಕ್ಸ್‌ ಜಾಲತಾಣಕ್ಕೆ ನೀಡಿದ್ದ ಸಂದರ್ಶನದಲ್ಲಿ ಹೇಳಿದ್ದರು.

ಬಹುಶಃ ಇದೇ ಗುಣ ಅವರ ಸಾಧನೆಯ ಹಿಂದಿನ ಗುಟ್ಟಿರಬೇಕು. ಟೆನಿಸ್ ಲೋಕದ ದಿಗ್ಗಜ ಆಟಗಾರ್ತಿ ಸೆರೆನಾ ವಿಲಿಯಮ್ಸ್‌ ಅವರನ್ನು ಫೈನಲ್‌ನಲ್ಲಿ ಸೋಲಿಸುವುದೆಂದರೆ ಸಣ್ಣ ಮಾತೇನಲ್ಲ. ಅದೂ ಆ ಪಂದ್ಯದಲ್ಲಿ ರೆಫರಿ ರಾಮೋಸ್ ವಿರುದ್ಧ ಗರ್ಜಿಸಿದ್ದ ಸೆರೆನಾ ಅವರ ರೌದ್ರಾವತಾರವೇ ಹೆಚ್ಚು ಸುದ್ದಿಯಾಗಿತ್ತು. ಇದೆಲ್ಲದರ ನಡುವೆಯೂ ತಣ್ಣನೆಯ ಮನಸ್ಥಿತಿಯೊಂದಿಗೆ ಎರಡು ನೇರ ಸೆಟ್‌ಗಳಲ್ಲಿ ನವೊಮಿ ಗೆದ್ದು ಬೀಗಿದ್ದರು. ಸ್ವತಃ ಸೆರೆನಾ ಅವರೇ ಹೋಗಿ ನವೊಮಿಯನ್ನು ಅಪ್ಪಿ ಅಭಿನಂದಿಸಿದ್ದರು.

‘ಬಾಲ್ಯದಿಂದಲೂ ಸೆರೆನಾ ಮತ್ತು ರೋಜರ್‌ ಫೆಡರರ್ ಅವರ ಆಟವನ್ನು ಮೆಚ್ಚಿಕೊಳ್ಳುತ್ತ ಬೆಳೆದವಳು ನಾನು. ನಾವು ಅವರಿಬ್ಬರ ಬಹಳ ದೊಡ್ಡ ಅಭಿಮಾನಿ. ಸೆರೆನಾ ಎದುರು ಫೈನಲ್ ಆಡುವ ಅವಕಾಶ ಲಭಿಸಿದಾಗ ಪುಳಕಿತಳಾಗಿದ್ದೆ. ಅವರ ಮುಂದೆ ಆಡಲು ದೇಹಕ್ಕಿಂತ ಮನಸ್ಸನ್ನು ಗಟ್ಟಿಗೊಳಿಸಿಕೊಳ್ಳುವ ಅವಶ್ಯಕತೆ ಹೆಚ್ಚಿತ್ತು. ಅದರಲ್ಲಿ ತಕ್ಕಮಟ್ಟಿಗೆ ಸಫಲಳಾಗಿದ್ದೇನೆ’ ಎಂದು ಒಸಾಕ ಪ್ರಶಸ್ತಿ ಗೆದ್ದ ನಂತರ ಹೇಳಿದ್ದರು.

ಈ ಟೂರ್ನಿಯಲ್ಲಿ ನವೊಮಿ ಸೆಮಿಫೈನಲ್‌ ಪ್ರವೇಶಿಸುವವರೆಗೂ ಹೆಚ್ಚು ಸುದ್ದಿಯಲ್ಲಿರಲಿಲ್ಲ. ಅವರು ಕ್ವಾರ್ಟರ್‌ಫೈನಲ್‌ನಲ್ಲಿ ಉಕ್ರೇನ್‌ನ ಲುಸಿಯಾ ಸುರೆಂಕೊ ವಿರುದ್ಧ ಗೆದ್ದಿದ್ದರು. ಇದೇ ಮೊದಲ ಬಾರಿಗೆ ಅವರು ಗ್ರ್ಯಾನ್‌ಸ್ಲಾಮ್ ಟೂರ್ನಿಯೊಂದರ ಸೆಮಿಗೆ ಪ್ರವೇಶಿಸಿದ್ದರು. ಪುರುಷರಲ್ಲಿ ಕೀ ನಿಶಿಕೊರಿ ಕೂಡ ನಾಲ್ಕರ ಘಟ್ಟಕ್ಕೆ ಪ್ರವೇಶಿಸಿದ್ದರು. 20ನೇ ಶ್ರೇಯಾಂಕದ ನವೊಮಿ ಅವರು ಸೆಮಿಫೈನಲ್‌ನಲ್ಲಿ ಅಮೆರಿಕದ 14ನೇ ಶ್ರೇಯಾಂಕದ ಮ್ಯಾಡಿಸನ್ ಕೀಸ್ ವಿರುದ್ಧ ಗೆದ್ದರು. ನಾಕೌಟ್ ಹಂತದ ಮೂರು ಹಂತಗಳಲ್ಲಿಯೂ ಅವರು ಎರಡು ನೇರ ಸೆಟ್‌ಗಳಿಂದ ಗೆದ್ದಿದ್ದು ಅವರ ಸಾಮರ್ಥ್ಯಕ್ಕೆ ಹಿಡಿದ ಕೈಗನ್ನಡಿ.

ಅವರು ಕಳೆದ ಮೂರು ವರ್ಷಗಳಿಂದ ಆಡಿದ ಯಾವ ಗ್ರ್ಯಾನ್‌ಸ್ಲಾಮ್‌ ಟೂರ್ನಿಯಲ್ಲಿಯೂ ನಾಕೌಟ್ ಹಂತ ತಲುಪಿರಲಿಲ್ಲ. ವಿಂಬಲ್ಡನ್, ಫ್ರೆಂಚ್ ಓಪನ್ ಮತ್ತು ಆಸ್ಟ್ರೇಲಿಯಾ ಓಪನ್‌ನಲ್ಲಿ ಅವರು ಈ ವರ್ಷವೂ ಅದೃಷ್ಟ ಪಣಕ್ಕೊಡ್ಡಿದ್ದರು. ಆದರೆ 32ರ ಘಟ್ಟದಲ್ಲಿ ಆಡುವಷ್ಟರ ಮಟ್ಟಿಗೆ ಸಫಲರಾಗಿದ್ದರು. ಆದರೆ, ಅಮೆರಿಕದ ಹಾರ್ಡ್‌ ಕೋರ್ಟ್‌ನಲ್ಲಿ ತವರಿನ ತಾರೆ ಸೆರೆನಾ ವಿರುದ್ಧ ಗೆದ್ದಿದ್ದು ಅವರ ವರ್ಚಸ್ಸು ಉತ್ತುಂಗಕ್ಕೆ ಏರಲು ಕಾರಣವಾಗಿದೆ. 23 ಗ್ರ್ಯಾನ್‌ಸ್ಲಾಮ್‌ ಪ್ರಶಸ್ತಿಗಳ ಒಡತಿ ಸೆರೆನಾ ಅವರನ್ನು ಮಣಿಸಿದ್ದು 20ರ ಹರೆಯದ ನವೊಮಿಯ ಆತ್ಮವಿಶ್ವಾಸ ಇಮ್ಮಡಿಗೊಳಿಸಿದೆ.

ಟೆನಿಸ್ ಲೋಕದಲ್ಲಿ ಹೊಸ ತಾರೆಯ ಹುಡುಕಾಟದಲ್ಲಿದ್ದಬ್ರ್ಯಾಂಡ್ ಕಂಪನಿಗಳು ಈಗ ಮೈಕೊಡವಿಕೊಂಡು ಎದ್ದು ನಿಂತಿವೆ. ಅಡಿದಾಸ್‌ನಂತಹ ದಿಗ್ಗಜ ಕಂಪನಿಯೂ ಸೇರಿದಂತೆ ಹಲವು ಪ್ರತಿಷ್ಠಿತ ಉದ್ಯಮಗಳು ನವೊಮಿ ಮನೆ ಮುಂದೆ ಸರತಿ ಸಾಲಿನಲ್ಲಿ ನಿಂತಿವೆಯಂತೆ.

ನಯವಾದ ಮತ್ತು ಹಾಸ್ಯಭರಿತ ಮಾತುಗಾರ್ತಿಯಾಗಿರುವ ನವೊಮಿ ಈಗ ದೃಶ್ಯಮಾಧ್ಯಮಗಳ ಕಣ್ಮಣಿಯಾಗಿದ್ದಾರೆ. ಏಕಕಾಲಕ್ಕೆ ಜಪಾನ್, ಹೈಟಿ ಮತ್ತು ಅಮೆರಿಕ ದೇಶಗಳ ಕ್ರೀಡಾಪ್ರಿಯರ ‘ಪೋಸ್ಟರ್ ಗರ್ಲ್‌’ ಆಗಿ ಸ್ಥಾನ ಪಡೆದಿದ್ದಾರೆ.

ಇನ್ನೆರಡು ವರ್ಷಗಳ ನಂತರ ತಮ್ಮದೇ ದೇಶದ ರಾಜಧಾನಿ (ಟೋಕಿಯೊ)ಯಲ್ಲಿ ನಡೆಯುವ ಒಲಿಂಪಿಕ್ಸ್‌ನಲ್ಲಿ ಮೊಮ್ಮಗಳ ಪದಕ ಸಾಧನೆ ನೋಡಲು ಒಸಾಕ ಅಜ್ಜ (ತಾಯಿಯ ತಂದೆ) ಕಾದು ಕೂತಿದ್ದಾರೆ.

ಬರಹ ಇಷ್ಟವಾಯಿತೆ?

 • 28

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !