ಗುರುವಾರ , ಆಗಸ್ಟ್ 11, 2022
21 °C

ನೇಪಥ್ಯದಲ್ಲಿ ಉಳಿದ ದಲಿತ ನಾಯಕ

ಎಚ್‌.ಟಿ. ಪೋತೆ Updated:

ಅಕ್ಷರ ಗಾತ್ರ : | |

Prajavani

ಅಂಬೇಡ್ಕರ್‌ ಪ್ರಣೀತ ದಲಿತ ಚಳವಳಿಯನ್ನು ಯಶಸ್ವಿಯಾಗಿ ಮುನ್ನಡೆಸಿದ ಬಿ.ಶ್ಯಾಮಸುಂದರ್‌ ದೇಶ ಕಂಡ ಬಹುದೊಡ್ಡ ನಾಯಕ. ಅಪ್ರತಿಮ ಸಾಧನೆಗಳ ನಡುವೆಯೂ ಅವರು ನೇಪಥ್ಯದಲ್ಲಿ ಉಳಿದರು, ಯಾಕೋ?

ಇಪ್ಪತ್ತನೆಯ ಶತಮಾನದ ಭಾರತದಲ್ಲಿ ಜೀವಪರ ಬಹುದೊಡ್ಡ ಹೋರಾಟ, ಸಂಘಟನಾತ್ಮಕ ಚಿಂತನೆ ನಡೆಸಿದ ಪ್ರಮುಖರಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಪ್ರಮುಖರು. ನೊಂದವರ, ದುಡಿಯುವ ವರ್ಗಗಳ, ಶೋಷಿತರ ದೀನದಲಿತರ ಬಾಳಿಗೆ ಬೆಳ್ಳಿಚುಕ್ಕೆಯಾಗಿ ಅವರು ಬೆಳಗಿದ್ದಾರೆ. ಅವರಂತೆಯೆ ಅಸಮಾನತೆಯನ್ನು ಕಿತ್ತೆಸೆದು ಸಮಸಮಾಜ ಕಟ್ಟಬಯಸಿದ, ಪ್ರಭಾವ ಬೀರಿದ ಮಹಾತ್ಮ ಜ್ಯೋತಿಬಾ ಫುಲೆ, ಛತ್ರಪತಿ ಶಾಹೂ ಮಹಾರಾಜ್, ನಾರಾಯಣ ಗುರು, ಪೆರಿಯಾರ್, ಲೋಹಿಯಾ ಮುಂತಾದ ಸಮಾಜ ಸುಧಾರಕರು ಜೀವಪರ ಚಳವಳಿಯ ಪ್ರಮುಖ ನೇತಾರರಾಗಿದ್ದಾರೆ.

ಇಂತಹ ಮಹನೀಯರ ವಿಚಾರ ಕ್ರಾಂತಿಗಳಿಂದ ಹೊತ್ತಿಸಿದ ಜಾಗೃತಿಯ ಜ್ಯೋತಿಯನ್ನು ಬಿ. ಶ್ಯಾಮಸುಂದರ್ ಅವರು ಮುಂದಿನ ತಲೆಮಾರಿಗೆ ಯಶಸ್ವಿಯಾಗಿ ದಾಟಿಸಿದವರು. ಈ ಕಾರಣಕ್ಕಾಗಿ ಬಿ. ಶ್ಯಾಮಸುಂದರ್ ಅವರನ್ನು ‘ದಲಿತ ಚಳವಳಿ’ಯ ಪಿತಾಮಹನೆಂದೂ ಅಂಬೇಡ್ಕರೋತ್ತರ ದಲಿತ ಚಳವಳಿಯ ಮಹಾನಾಯಕನೆಂದೂ ಪರಿಗಣಿಸಲಾಗುತ್ತದೆ. ದಲಿತರ, ಕಾರ್ಮಿಕರ ಮಹಿಳೆಯರ ಏಳ್ಗೆಗಾಗಿ ತಮ್ಮ ಬದುಕನ್ನೇ ಮುಡಿಪಾಗಿಟ್ಟುಕೊಂಡು ಸಾಮಾಜಿಕ, ಸಾಂಸ್ಕೃತಿಕ, ಆರ್ಥಿಕ, ಶೈಕ್ಷಣಿಕವಾಗಿ ಹಿಂದುಳಿದ, ಕೆಳವರ್ಗದವರನ್ನು ಸಬಲೀಕರಣಗೊಳಿಸಲು ಅವಿರತವಾಗಿ ದುಡಿದ ಕೀರ್ತಿ ಅವರಿಗೆ ಸಲ್ಲುತ್ತದೆ.

ಸಂಘಟನೆ, ಹೋರಾಟ, ಸಾಹಿತ್ಯ ರಚನೆ, ಕಾನೂನು ಸಮರದ ಮೂಲಕ ಭಾರತದ ಶೋಷಿತ ದಲಿತ ಸಮುದಾಯಗಳನ್ನು ಉದ್ಧರಿಸಲು ಹಗಲಿರುಳು ಶ್ರಮಿಸಿದವರು ಅವರು. ಆದರೆ, ಇಂತಹ ಜನನಾಯಕನ ಚರಿತ್ರೆಯೇ ದಾಖಲಾಗಿಲ್ಲ. ಬೆಂಕಿಯನ್ನು ಬಚ್ಚಿಡುವುದು ಸಾಧ್ಯವಿಲ್ಲ ಎಂಬಂತೆ ಶ್ಯಾಮಸುಂದರ್ ಅವರ ಹೋರಾಟದ ಕ್ರಾಂತಿ ಜ್ವಾಲೆಗಳು ದೇದೀಪ್ಯಮಾನವಾಗಿ ಬೆಳಗಿವೆ.

ಮಹಾರಾಷ್ಟ್ರದ ಔರಂಗಾಬಾದ್ ಮೂಲದ ಶ್ಯಾಮಸುಂದರ್ ಅವರು ಹುಟ್ಟಿದ್ದು 1908ರ ಡಿಸೆಂಬರ್ 21ರಂದು. ಅವರ ತಂದೆ ಬದುಲಾ ಮಾಣಿಕ್ಯಂ, ತಾಯಿ ಸುಧಾಬಾಯಿ. ಅಸ್ಪೃಶ್ಯರೆನಿಸಿದ ‘ಮಾಲಾ’ ಜಾತಿಗೆ ಅವರು ಸೇರಿದ್ದರು. ಶ್ಯಾಮಸುಂದರ್ ಅವರು ಪ್ರಾಥಮಿಕ ಶಿಕ್ಷಣವನ್ನು ಕ್ರೈಸ್ತ ಮಿಷನರಿಯ ಸೆವೆನ್ ಫ್ಲವರ್ ಶಾಲೆಯಲ್ಲಿ ಪೂರೈಸಿ, ಮಾಧ್ಯಮಿಕ ಶಿಕ್ಷಣವನ್ನು ಮುಸ್ಲಿಂ ಶಾಲೆಗಳಲ್ಲಿ ಪೂರ್ಣಗೊಳಿಸಿದರು. ಒಳ್ಳೆಯ ಪ್ರಾಧ್ಯಾಪಕನಾಗಬೇಕೆಂಬ ಮಹತ್ವಾಕಾಂಕ್ಷೆ ಅವರದಾಗಿತ್ತು. ಜ್ಞಾನದ ಮೂಲಕ ಆತ್ಮಗೌರವ ಸಂಪಾದಿಸಬೇಕೆಂಬ ಅವರ ಭಾವನೆಗೆ ನೀರೆರೆದದ್ದು ಕ್ರೈಸ್ತ ಮಿಷನರಿ ಹಾಗೂ ಮುಸ್ಲಿಂ ಶಾಲೆಗಳು ಎಂಬುದು ಗಮನಾರ್ಹ. ಹಿಂದೂ ಶಿಕ್ಷಣ ಸಂಸ್ಥೆಗಳಾವುವೂ ಇವರಿಗೆ ಓದಲು ಅವಕಾಶ ನೀಡಲಿಲ್ಲ. ಅವರ ತಂದೆ ರೈಲ್ವೆ ಇಲಾಖೆಯಲ್ಲಿ ಇದ್ದುದರಿಂದ ಔರಂಗಾಬಾದ್‍ನಿಂದ ಹೈದರಾಬಾದ್‌ಗೆ ವರ್ಗಾವಣೆಗೊಂಡರು. ಶ್ಯಾಮಸುಂದರ್ ಹೈದರಾಬಾದ್‌ನಲ್ಲಿ ಉನ್ನತ ವ್ಯಾಸಂಗ ಮುಂದುವರಿಸಿದರು.

ಉಸ್ಮಾನಿಯಾ ವಿಶ್ವವಿದ್ಯಾಲಯದಿಂದ ಅರ್ಥಶಾಸ್ತ್ರದಲ್ಲಿ ಬಿ.ಎ. ಪದವಿಯನ್ನು ರ‍್ಯಾಂಕ್ ಸಮೇತ ಪಡೆದರು (1924). ಖೂಸ್ರು-ಎ-ದಖ್ಖನ್ ಎಂಬ ಬಿರುದು ಮತ್ತು ಚಿನ್ನದ ಪದಕವನ್ನೂ ಪಡೆದರು. ಎಲ್‌ಎಲ್‌ಬಿ ಪದವಿಯನ್ನು ಕೂಡ ಪೂರ್ಣಗೊಳಿಸಿದರು. 1939ರಲ್ಲಿ ಸರೋಜಿನಿ ನಾಯ್ಡು ಅವರ ಅಧ್ಯಕ್ಷತೆಯಲ್ಲಿ ಹೈದರಾಬಾದ್‌ನಲ್ಲಿ ಜರುಗಿದ ಪದವೀಧರರ ಸಮಾವೇಶದ ಕಾರ್ಯದರ್ಶಿಯಾಗಿ ಸಕ್ರಿಯವಾಗಿ ತೊಡಗಿಸಿಕೊಂಡರು. 1944ರಲ್ಲಿ ಉಸ್ಮಾನಿಯಾ ವಿಶ್ವವಿದ್ಯಾಲಯದ ಸೆನೆಟ್ ಸದಸ್ಯರಾಗಿಯೂ ಕೆಲಸ ಮಾಡಿದರು. 1946ರಲ್ಲಿ ನಿಜಾಮ್ ಸ್ಟೇಟ್ ರೈಲ್ವೆ ನೌಕರರ ಸಂಘದ ಅಧ್ಯಕ್ಷರಾಗಿಯೂ, ಹೈದರಾಬಾದ್ ನಿಜಾಮ ಸ್ಥಾಪಿಸಿದ ಶಿಕ್ಷಣ ಕ್ಷೇತ್ರದ ಶಾಸನಾಧಿಕಾರಗಳ ಸಮಿತಿಯ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದರು.

ಸಾಮಾಜಿಕ ಸೇವೆಗಾಗಿ ತೊಡಗಿಸಿಕೊಂಡ ಶ್ಯಾಮಸುಂದರ್ ಅವರು ತಮ್ಮ ಜನರಿಗಾಗುತ್ತಿರುವ ಅನ್ಯಾಯ, ಅವಮಾನ, ಅಸಮಾನತೆ, ಶೋಷಣೆ ವಿರುದ್ಧ ವೈಚಾರಿಕ, ವೈಜ್ಞಾನಿಕ ನೆಲೆಯಲ್ಲಿ ಸಂಘಟನಾತ್ಮಕವಾಗಿ ಹೋರಾಟ ರೂಪಿಸಿದರು. ದೀನದಲಿತರ, ಹಿಂದುಳಿದವರ, ಅಲ್ಪಸಂಖ್ಯಾತರ ಏಳ್ಗೆಗಾಗಿ ಸರ್ವಸ್ವವನ್ನೇ ತ್ಯಾಗಮಾಡಿದರು. ಅಸ್ಪೃಶ್ಯತೆ, ಅವಮಾನ, ಶೋಷಣೆಗಳನ್ನು ಬಾಲ್ಯದಿಂದಲೇ ಸ್ವತಃ ಅನುಭವಿಸಿದ್ದರಿಂದ ಯುವಕರ ಸಮಾವೇಶಗಳನ್ನು ಸಂಘಟಿಸಿ ದಾಸ್ಯದ ಶೃಂಕಲೆಗಳನ್ನು ಕಿತ್ತೆಸೆಯಲು ಪ್ರೇರೇಪಿಸಿದರು.

ವಕೀಲಿ ವೃತ್ತಿಯಲ್ಲಿ ತೊಡಗಿದ್ದ ಅವರು ಸಾಮಾಜಿಕ ಹೋರಾಟಕ್ಕಾಗಿ ವೃತ್ತಿಯನ್ನೇ ತ್ಯಜಿಸಿದರು. ಮನಸ್ಸು ಮಾಡಿದ್ದರೆ ಅವರು ಉನ್ನತ ದರ್ಜೆಯ ಅಧಿಕಾರಿಯಾಗಿ, ಗೌರವಯುತ ಸ್ಥಾನಮಾನ ಅಲಂಕರಿಸಬಹುದಾಗಿತ್ತು. ಆದರೆ, ನೌಕರಿ ಎಂಬ ಜೀತ ತೊರೆದು ತಮ್ಮ ಜನಸಮುದಾಯದ ಜೀತ ವಿಮೋಚನೆಗಾಗಿ ಸಮರ್ಪಿಸಿಕೊಂಡ ಅಪ್ರತಿಮ ಮೇಧಾವಿ ಅವರು.

ಉಳ್ಳವರ ಸೊತ್ತಾಗಿದ್ದ ಶಿಕ್ಷಣ ಮಡಿವಂತರ ಹಿಡಿತದಲ್ಲಿತ್ತು. ಅದನ್ನರಿತ ಶ್ಯಾಮಸುಂದರ್ ಅವರು ನಿಜಾಮ ಸಂಸ್ಥಾನದಲ್ಲಿರುವ 40 ಲಕ್ಷಕ್ಕೂ ಹೆಚ್ಚಿದ್ದ ಅಸ್ಪೃಶ್ಯರನ್ನು ವಿಮೋಚನೆಗೊಳಿಸಲು ಹತ್ತು ಹಲವು ಮೌಲಿಕ ಕಾರ್ಯಕ್ರಮಗಳನ್ನು ರೂಪಿಸುವಂತೆ ಸಂಸ್ಥಾನದ ದೊರೆಯನ್ನು ಪ್ರೇರೇಪಿಸಿದರು. ಇವರ ಹೋರಾಟಗಳ ಕುರಿತು ಅರಿತಿದ್ದ ದೊರೆ ಒಂದು ಕೋಟಿ ರೂಪಾಯಿಯ ನಿಧಿಯನ್ನು ಸ್ಥಾಪಿಸಿ ಅದಕ್ಕೊಂದು ಟ್ರಸ್ಟ್ ಮಾಡಿ ಶ್ಯಾಮಸುಂದರ್ ಅವರನ್ನೇ ಟ್ರಸ್ಟ್‌ನ ಅಧ್ಯಕ್ಷರನ್ನಾಗಿ ನೇಮಿಸಿದರು.

1942ರಲ್ಲಿ ಆ ನಿಧಿಯಿಂದ ನಿಜಾಮ ಸಂಸ್ಥಾನದ ವ್ಯಾಪ್ತಿಯಲ್ಲಿ ಸುಮಾರು 28 ವಸತಿ ಶಾಲೆಗಳನ್ನು ಶ್ಯಾಮಸುಂದರ್‌ ಪ್ರಾರಂಭಿಸಿದರು. ಔರಂಗಾಬಾದಿನಲ್ಲಿರುವ ಡಾ. ಬಿ.ಆರ್. ಅಂಬೇಡ್ಕರ್ ಅವರು ಸ್ಥಾಪಿಸಿದ ಜನತಾ ಶಿಕ್ಷಣ ಸಂಸ್ಥೆಗೆ 12 ಲಕ್ಷ ರೂಪಾಯಿ ಧನಸಹಾಯ ನೀಡಿದರು. Madrasa-E-Akwam ಎಂಬ ಹೆಸರಿನಲ್ಲಿ ಅಸ್ಪೃಶ್ಯ ಮಕ್ಕಳಿಗಾಗಿ ವಸತಿ ಶಾಲೆಗಳನ್ನು ಪ್ರಾರಂಭಿಸಿದರು. ಅಲ್ಲಿನ ವಿದ್ಯಾರ್ಥಿಗಳಿಗೆ ವಾರ್ಷಿಕವಾಗಿ 4, 6 ಮತ್ತು 8 ರೂಪಾಯಿಗಳಂತೆ ವಿದ್ಯಾರ್ಥಿ ವೇತನ ನಿಗದಿಗೊಳಿಸಿ ಮಂಜೂರು ಮಾಡಿದರು.

ಅಸ್ಪೃಶ್ಯರು ಹೊಸ ಬಟ್ಟೆ ಧರಿಸುವಂತಿರಲಿಲ್ಲ. ಮೀಸೆ ಬೆಳೆಸುವಂತಿರಲಿಲ್ಲ. ಕಾಲಲ್ಲಿ ಚಪ್ಪಲಿ (ಚಡಾವು) ಧರಿಸುವಂತಿರಲಿಲ್ಲ. ಕೈಯಲ್ಲಿ ಕೋಲು (ಬಡಿಗೆ) ಹಿಡಿಯುವಂತಿರಲಿಲ್ಲ ಎಂಬ ಮನುಸ್ಮೃತಿ ಆಧಾರಿತ ನಿಯಮಗಳು ಆಗ ಜಾರಿಯಲ್ಲಿದ್ದವು. ಇಂತಹ ಅನಾಗರಿಕ ಪದ್ಧತಿಗಳನ್ನು ವಿರೋಧಿಸಿ 1946ರಲ್ಲಿ ಮಹಾರಾಷ್ಟ್ರದ ನಾಂದೇಡದಲ್ಲಿ ಸಮ್ಮೇಳನವೊಂದನ್ನು ಏರ್ಪಡಿಸಿದರು. ಸಮ್ಮೇಳನಕ್ಕೆ ಬರುವ ದಲಿತ ಯುವಕರು, ಮುಖದ ಮೇಲೆ ಮೀಸೆ ಬೆಳೆಸಿರಬೇಕು, ಹೊಸಬಟ್ಟೆ ಧರಿಸಿರಬೇಕು, ಕಾಲಲ್ಲಿ ಚಪ್ಪಲಿ ಹಾಕಿರಬೇಕು, ಕೈಯಲ್ಲಿ ಕೋಲು (ಬಡಿಗೆ) ಹಿಡಿದು ಸಮ್ಮೇಳನದಲ್ಲಿ ಭಾಗವಹಿಸಬೇಕೆಂದು ಸುತ್ತೋಲೆ ಹೊರಡಿಸಿ, ಬದಲಾವಣೆ ಗಾಳಿ ಬೀಸುವಂತೆ ಮಾಡಿದರು.

ಅಸ್ಪೃಶ್ಯರು ಉದ್ಧಾರವಾಗಬೇಕಾದರೆ ಶಿಕ್ಷಣದಷ್ಟೇ ಮಹತ್ವದ್ದು ಭೂಒಡೆತನ. ಸಾಮಾಜಿಕ, ಆರ್ಥಿಕವಾಗಿ ಬೆಳವಣಿಗೆ ಹೊಂದಬೇಕಾದರೆ ಭೂಮಿ ಹಂಚಿಕೆಯಾಗಬೇಕೆಂಬುದು ಅವರ ನಿಲುವಾಗಿತ್ತು. ಪ್ರಬಲ ಜಾತಿಯ ಒಡೆತನದಲ್ಲಿರುವ ಭೂಮಿ ಹಂಚಿಕೆಯಾಗಿ ‘ಉಳುವವನೇ ಭೂಮಿಯ ಒಡೆಯ’ ನಿಯಮವನ್ನು ತರುವಲ್ಲಿ ಶ್ರಮಿಸಿದರು. ಹಾಗೆಯೇ ನಿಜಾಮ ಸರ್ಕಾರದ ಬಳಿಯಿದ್ದ ಖಾಲಿ ಭೂಮಿಯನ್ನು ಅಸ್ಪೃಶ್ಯರಿಗೆ ಹಂಚಿಕೆ ಆಗುವಂತೆ ಶ್ರಮಿಸಿದ ಮಹಾನ್‌ ಸುಧಾರಣಾವಾದಿ ಅವರಾಗಿದ್ದರು.

1947ರಲ್ಲಿ ನಿಜಾಮ ಸರ್ಕಾರದ ವತಿಯಿಂದ ವಿಶ್ವಸಂಸ್ಥೆಗೆ ನಿಯೋಗವೊಂದನ್ನು ಕಳುಹಿಸಲಾಯಿತು. ಅದರ ನೇತೃತ್ವವನ್ನು ಶ್ಯಾಮಸುಂದರ್ ವಹಿಸಿಕೊಂಡು ಯುರೋಪ್‌ನ ಹತ್ತಾರು ರಾಷ್ಟ್ರಗಳಿಗೆ ಭೇಟಿ ನೀಡಿ ರಾಜಕೀಯ ಗಣ್ಯರ ಸಂಪರ್ಕ ಸಾಧಿಸಿದರು. ಚೀನಾದ ಚೌ, ವಿಯಟ್ನಾಂನ ಹೋ ಚಿ ಮಿನ್ ಮತ್ತು ಇಂಗ್ಲೆಂಡ್‌ನ ವಿನ್‍ಸ್ಟನ್ ಚರ್ಚಿಲ್ ಮೊದಲಾದ ನಾಯಕರ ಜೊತೆ ದೇಶದ ಸಾಮಾಜಿಕ ವ್ಯವಸ್ಥೆ ಕುರಿತು ಸುದೀರ್ಘವಾಗಿ ಚರ್ಚಿಸಿದ್ದರು.

1957-1962ರವರೆಗೆ ಮೈಸೂರು ವಿಧಾನಸಭೆಗೆ ಬೀದರ್‌ ಜಿಲ್ಲೆಯ ಭಾಲ್ಕಿ ಕ್ಷೇತ್ರದಿಂದ ಪ್ರತಿನಿಧಿಯಾಗಿದ್ದರು. ಅಪಾರ ಅನುಭವ, ಅಧ್ಯಯನಶೀಲತೆ, ವಿದ್ವತ್ತು, ವಾಕ್‍ಚಾತುರ್ಯ, ರಾಜಕೀಯ ಪ್ರೌಢಿಮೆಯಿಂದಾಗಿ ವಿಧಾನಸಭೆಯಲ್ಲೂ ಎತ್ತರದ ಸ್ಥಾನ ಪಡೆದುಕೊಂಡರು. ಸಾಮಾಜಿಕ ಹಿತಕ್ಕಾಗಿ ವಿಧಾನಸಭೆಯ ಒಳಗೂ ಹೊರಗೂ ಧ್ವನಿಯೆತ್ತಿದರು.

ರಾಜ್ಯದ ಗಡಿ ಪ್ರದೇಶದ ಆಳಂದ ತಾಲ್ಲೂಕಿನ ಚಿಂಚನಸೂರ ಮಹಾಪೂರ ತಾಯಿ, ಹಡಲಗಿಯ ಯಲ್ಲಮ್ಮ ದೇವತೆಗಳ ಪೂಜೆಯ ಹೆಸರಿನಲ್ಲಿ ನಡೆಯುತ್ತಿದ್ದ ಅಮಾನವೀಯ ಬೆತ್ತಲೆ ಸೇವೆಯನ್ನು ಸದನದ ಗಮನಕ್ಕೆ ತಂದು ತಡೆಗಟ್ಟುವಂತೆ ಒತ್ತಡ ಹೇರಿದರು. ಭಾರತೀಯ ಸಮಾಜದಲ್ಲಿ ಜಾತಿ ವ್ಯವಸ್ಥೆ, ಅಸ್ಪೃಶ್ಯತೆಯನ್ನು ತಾರ್ಕಿಕ ನೆಲೆಯಲ್ಲಿ ಖಂಡಿಸುತ್ತಾ (We are Mool Bharatis, Original Sons of the Soil; ನಾವು ಮೂಲ ಭಾರತೀಯರು, ಈ ಮಣ್ಣಿನ ಮಕ್ಕಳು) ಎಂದು ದಲಿತರನ್ನು ಬಡಿದೆಚ್ಚರಿಸಿದರು. ಅವರ ರಾಜಕೀಯ ಘೋಷಣೆ ಎಷ್ಟು ಸ್ಪಷ್ಟ ಮತ್ತು ಗಂಭೀರವಾಗಿತ್ತೆಂದರೆ ‘ಖೋಯಾ ಹುವಾ ರಾಜ್ ಮಾಂಗನೆ ಸೇ ನಹಿ ಮಿಲ್ತಾ, ಉಸೆ ಛೀನಾ ಜಾತಾಹೈ’ (ಕಳೆದುಹೋದ ರಾಜ್ಯಾಧಿಕಾರ ಬೇಡುವುದರಿಂದ ಕೈಗೆಟುಕುವುದಿಲ್ಲ, ಬದಲಿಗೆ ಅದನ್ನು ಆಳುವ ವರ್ಗದ ಕೈಯಿಂದ ಕಿತ್ತುಕೊಳ್ಳಬೇಕು) ಎಂದು ಅಭಿಪ್ರಾಯಪಟ್ಟಿದ್ದರು.

ಗುಲಾಮಗಿರಿಯ ಹಂಗು ತೊರೆದು ದಲಿತರ ಏಳ್ಗೆಗಾಗಿ ಎದೆಯೆತ್ತಿ ಅವಿರತವಾಗಿ ಹೋರಾಡಿದರು ಶ್ಯಾಮಸುಂದರ್‌. ದಲಿತರ, ಕಾರ್ಮಿಕ, ಹಿಂದುಳಿದವರ ಏಳ್ಗೆಯು ಶಿಕ್ಷಣ ಸಂಘಟನೆ, ಹೋರಾಟದ ಅರಿವಿನಿಂದ ಮಾತ್ರ ಸಾಧ್ಯವೆಂದು ಸಾರಿದವರು. ಅಂಬೇಡ್ಕರ್ ಅವರ ಪ್ರತ್ಯೇಕ ಪ್ರತಿನಿಧಿತ್ವ ಬೇಡಿಕೆಯ ಮುಂದುವರಿಕೆ ಎಂಬಂತೆ ಶ್ಯಾಮಸುಂದರ್ ಅವರು ಈ ದೇಶದ ದಲಿತ-ದಮನಿತರಿಗೆ ಪ್ರತ್ಯೇಕ ಹಳ್ಳಿಗಳು, ಅವರ ಶಿಕ್ಷಣಕ್ಕಾಗಿ ಪ್ರತ್ಯೇಕ ವಿಶ್ವವಿದ್ಯಾಲಯಗಳು ಬೇಕು ಎಂದು ಪ್ರತಿಪಾದಿಸಿದ್ದರು.

ಸ್ವಾತಂತ್ರ್ಯಾ ನಂತರದಲ್ಲಿ ದಲಿತರನ್ನು ಸಂಘಟಿಸಿ ಅನೇಕ ಅರಿವಿನ ಕಾರ್ಯಕ್ರಮಗಳನ್ನು ರೂಪಿಸಿದರು. ಹಲವಾರು ಚಿಂತನಾಪರ ಕೃತಿಗಳನ್ನು ರಚಿಸಿದರು. ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ದಲಿತ ಚಳವಳಿಗೆ ನಾಂದಿ ಹಾಡಿದರು. ಆ ಕಾರಣಕ್ಕಾಗಿಯೇ ಅಂಬೇಡ್ಕರ್ ಅವರ 77ನೇ ಹುಟ್ಟುಹಬ್ಬದ ಅಂಗವಾಗಿ ‘ಭಾರತೀಯ ಭೀಮಸೇನೆ’ ಎಂಬ ಸಂಘಟನೆಯನ್ನು ಕಟ್ಟಿ, ವೈಚಾರಿಕ, ಪ್ರಗತಿಪರ ಚಿಂತನೆಯ ಕಿಚ್ಚು ಹೊತ್ತಿಸಿದರು. ತಮ್ಮ ಜೀವಿತದ ಉದ್ದಕ್ಕೂ ಜನಹಿತ, ಸಮಾಜದ ಹಿತರಕ್ಷಣೆಗಾಗಿಯೇ ತಮ್ಮನ್ನು ಸಮರ್ಪಿಸಿಕೊಂಡ ಅಪರೂಪದ ತ್ಯಾಗಮಯಿ ಹೋರಾಟಗಾರ ಶ್ಯಾಮಸುಂದರ್ ಎಂಬುದನ್ನು ಮರೆಯುವಂತಿಲ್ಲ.   

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು