ಶುಕ್ರವಾರ, ಅಕ್ಟೋಬರ್ 18, 2019
24 °C

ಮೂಕಜ್ಜಿಗೆ 130, ಕಾರಂತರಿಗೆ 116

Published:
Updated:
Deccan Herald

ಶಿವರಾಮ ಕಾರಂತರು ‘ಮೂಕಜ್ಜಿಯ ಕನಸುಗಳು’ ಕಾದಂಬರಿ ಬರೆದಾಗ‌ ಕೃತಿಯಲ್ಲಿನ ಕಥಾನಾಯಕಿ ಮೂಕಾಂಬಿಕೆಗೆ ಎಂಬತ್ತು ವರ್ಷ. ಕಾದಂಬರಿ ಪ್ರಕಟಗೊಂಡು ಐವತ್ತು ವರ್ಷಗಳಾದ ಲೆಕ್ಕಾಚಾರದಲ್ಲಿ, ಮೂಕಜ್ಜಿಗೀಗ 130 ವರ್ಷ. ಗಾಂಧೀಜಿಯ 150ನೇ ಜಯಂತಿಯನ್ನೂ ಮೂಕಜ್ಜಿಯ 130ನೇ ಜಯಂತಿಯನ್ನೂ ಒಟ್ಟಿಗೆ ಆಚರಿಸಬಹುದು. ಇವುಗಳ ಜೊತೆಗೆ, ಕಾದಂಬರಿಯ 50ನೇ ವಾರ್ಷಿಕೋತ್ಸವ ಹಾಗೂ ಕಾರಂತರ 116ನೇ ಹುಟ್ಟುಹಬ್ಬಕ್ಕೂ ಅಕ್ಟೋಬರ್ ತಿಂಗಳು ಒಟ್ಟಿಗೆ ಸಾಕ್ಷಿಯಾಗಿದೆ.

1968ರ ತಮ್ಮ ಹುಟ್ಟುಹಬ್ಬದ ದಿನದಂದು (ಅ.10) ‘ಮೂಕಜ್ಜಿಯ ಕನಸುಗಳು’ ಕೃತಿಗೆ ಬರೆದಿರುವ ಮುನ್ನುಡಿಯಲ್ಲಿ ಮೂಕಜ್ಜಿಯ ಬಗ್ಗೆ ಕಾರಂತರು ಹೇಳಿರುವುದು ಹೀಗೆ: ‘ಸಾಂಪ್ರದಾಯಿಕತೆಯಿಂದ ಹೆರೆಗಟ್ಟಿದ ಮನಸ್ಸುಗಳನ್ನು ತುಸು ತುಸುವಾಗಿ ಕಾಯಿಸಿ, ಕರಗಿಸುವ ಕೆಲಸ ಅವಳದ್ದು. ಅಂಥ ಅಜ್ಜಿಯೊಬ್ಬಳು ಇದ್ದಾಳೆಯೇ ಎಂಬ ಸಂಶಯ ಬಂದರೆ, ನಮ್ಮ ಸಂಸ್ಕೃತಿಯ ನಂಬಿಕೆಗಳ ಕುರಿತಾದ ಸಂಶಯ ಪಿಶಾಚಿಯ ರೂಪವೇ ಅವಳೆಂದು ತಿಳಿದರಾಯಿತು’. ಸಾಂಪ್ರದಾಯಿಕತೆ ಮತ್ತು ಸಂಸ್ಕೃತಿ ಎರಡೂ ಮತ್ತಷ್ಟು ಗಾಢವಾಗಿ ಈ ತಲೆಮಾರಿನ ಮನಸ್ಸುಗಳನ್ನು ಹೆರೆಗಟ್ಟಿರುವ ಸಂದರ್ಭದಲ್ಲಿ ಮೂಕಜ್ಜಿ ಈ ಹೊತ್ತಿಗೂ ಹೆಚ್ಚು ‍ಪ್ರಸ್ತುತ.

ಮೂಕಜ್ಜಿಯದು ಕರಾವಳಿಯ ಮೂಡೂರು ಎಂಬ ಹಳ್ಳಿ. ಅಶ್ವತ್ಥವೃಕ್ಷವನ್ನು ಬಿಟ್ಟರೆ ಮೂಕಿಯೇ ಊರಿಗೆ ಹಿರಿಯವಳು. ಎಂಟಕ್ಕೆ ಮದುವೆಯಾಗಿ, ಮದುವೆಯ ಪರಿಕಲ್ಪನೆ ಅರ್ಥವಾಗುವ ಮೊದಲೇ ಗಂಡನನ್ನು ಕಳಕೊಂಡು ತವರಿಗೆ ಹಿಂತಿರುಗಿದವಳು– ಪ್ರಾಯ ತುಂಬಿದಾಗ ತನ್ನಷ್ಟಕ್ಕೆ ತಾನು ಮಾತನಾಡಿಕೊಳ್ಳುತ್ತಿದ್ದಳಂತೆ. ಊರವರಿಂದ ಮರುಳು ಅನ್ನಿಸಿಕೊಂಡು, ಮಂತ್ರವಾದಿಯಿಂದ ಬೆನ್ನಿಗೆ ಬಾಸುಂಡೆ ಬರುವಂತೆ ಏಟು ತಿಂದ ಕ್ಷಣದಿಂದ ಮೂಕಾಂಬಿಕೆ ಮೂಕಿಯೇ ಆಗಿಬಿಡುತ್ತಾಳೆ. ಆಕೆ ಮತ್ತೆ ಮಾತನಾಡುವುದು ನಲವತ್ತಾದಾಗಲೇ –ಮೊಮ್ಮಕ್ಕಳು ಮೈ ಮೇಲೆ ಬಿದ್ದು ‘ಅಜ್ಜಿ ಅಜ್ಜಿ ಕಥೆ ಹೇಳು’ ಎಂದು ಕಾಡಿದಾಗಲೇ. ‘ತಲೆಭಾರ ಇಳಿದ, ಅಂಗಾರ ಬೆಳೆದ, ಮೈಯನ್ನು ಮುಚ್ಚಿದ ಕೆಂಪುಸೀರೆ’ಯ ಇಂಥ ನತದೃಷ್ಟ ಹೆಣ್ಣುಮಕ್ಕಳು ಎಲ್ಲ ಊರುಕೇರಿಗಳಲ್ಲೂ ಇದ್ದವರೇ. ಆದರೆ, ಇವರೆಲ್ಲರಿಗೂ ಮೂಕಜ್ಜಿ ಭಿನ್ನ ಎನ್ನಿಸುವುದು ಬದುಕನ್ನು ನೋಡಲು ಭಿನ್ನ ಮನೋಧರ್ಮ ಹಾಗೂ ವಿಚಾರಶಕ್ತಿಯಿಂದಾಗಿ.

ದೇವರು ಹಾಗೂ ಬದುಕಿನ ಕುರಿತ ಅಜ್ಜಿಯ ಕಲ್ಪನೆ ಸಾಂಪ್ರದಾಯಿಕ ನಂಬಿಕೆಗಳನ್ನೇ ಹುಡಿಗೊಳಿಸುವಂತಹದ್ದು. ‘ಹೆಂಡತಿ ಮಕ್ಕಳನ್ನು ಬಿಟ್ಟರು ದಾಸರು. ವಿಠಲನನ್ನು, ನಾರಾಯಣನನ್ನು ನಂಬಿ ಹಾಡಿದರು. ನಂಬಿದ್ದೇ ನಂಬಿದ್ದು; ಹಾಡಿದ್ದೇ ಹಾಡಿದ್ದು. ಅವರು ತಮ್ಮ ಹೆಂಡಿರನ್ನು ದಾರಿ ಮೇಲೆ ಕೆಡೆದು ಹೋದದ್ದು ನಿಜ. ಹಾಗೆ ಮಾಡಿ ಬೇಡಿದ್ದು ಯಾರನ್ನು? ತಂತಮ್ಮ ಹೆಂಡಿರೊಡನೆ ಸುಖವಾಗಿ ವೈಕುಂಠದಲ್ಲೋ ಕೈಲಾಸದಲ್ಲೋ ಇರುವಂಥ ವಿಷ್ಣುವನ್ನು, ಶಿವನನ್ನು. ಅವರೇನು ಕೊಟ್ಟಾರು? ಅವರಿಗೂ ಅವರ ಹೆಂಡಂದಿರಿಂದ ಮುಕ್ತಿ ಸಿಗದೆ ಇರುವಾಗ?’ ಎನ್ನುವ ನಿಲುವಿನ ಅಜ್ಜಿಗೆ ಬದುಕನ್ನು ಅದು ಇದ್ದಂತೆ ಸವೆಸುವುದು ಸಹಜವೇ ಹೊರತು, ಇಲ್ಲದುದಕಾಗಿ ಕೊರಗುವುದಲ್ಲ, ಬೇಡುವುದಂತೂ ಮೊದಲೇ ಸಲ್ಲ.

‘ನಮಗೆ ಕನಸು ಗಿನಸು ಎಂಬುದಿರುವ ತನಕವೂ ಇದೂ ಅಷ್ಟೇ ನಿಜ. ಸಂಸಾರವೂ ಹಾಗೆಯೇ, ಸುಖ–ದುಃಖಗಳು ಹಾಗೆಯೇ, ಈ ಜಗತ್ತು ಕೂಡ ಹಾಗೆಯೇ, ದೇವರೂ ಹಾಗೆಯೇ, ದಿಂಡರೂ ಹಾಗೆಯೇ, ಅವು ಎಲ್ಲವೂ ನಾವು ಕಟ್ಟಿಕೊಂಡ ಹಾಗೆ’ ಎನ್ನುವ ಮೂಕಜ್ಜಿ ಬದುಕನ್ನು ಒಂದು ದೀರ್ಘ ಸ್ವಪ್ನದ ಹಾಗೆ ಭಾವಿಸುತ್ತಾಳೆ. ದೇವರನ್ನು, ದೇವರ ಅವತಾರಗಳನ್ನು, ದೇಗುಲಗಳ ಪರಿಕಲ್ಪನೆಗಳನ್ನು
ಪ್ರಶ್ನಿಸುವ ಅಜ್ಜಿಯ ಒಳಗಣ್ಣಿಗೆ ದೇಗುಲಗಳ ಹಿನ್ನೆಲೆಯಲ್ಲಿ ಮತ– ಧರ್ಮಗಳ ಮೇಲಾಟಗಳು, ರಕ್ತಪಾತ ಕಾಣಿಸುತ್ತದೆ.

ದಾಂಪತ್ಯಸುಖದಿಂದ ವಂಚಿತಳಾದರೂ ದಾಂಪತ್ಯದ ಬಗ್ಗೆ, ಲೈಂಗಿಕತೆಯ ಬಗ್ಗೆ ಮೂಕಜ್ಜಿಯ ನಿಲುವು ಅಚ್ಚರಿ ಹುಟ್ಟಿಸುವಷ್ಟು ಆರೋಗ್ಯಕರವಾದುದು, ಆಧುನಿಕವಾದುದು. ತನ್ನ ಕಣ್ಣೆದುರೇ ನಡೆಯುವ ಮದುವೆ, ಸಂಸಾರ, ಮಕ್ಕಳಲೀಲೆಗಳನ್ನು ನಿರ್ಮಲವಾಗಿ ಕಾಣುವ, ಬದುಕಿನ ಬಗ್ಗೆ ತುಸುವೂ ಕಹಿಯಿಲ್ಲದ ಮನಸ್ಸು ಅವರದು. ಹೆಣ್ಣು–ಗಂಡಿನ ಸಂಬಂಧ ಅಜ್ಜಿಯ ಕಣ್ಣಿಗೆ ನಿಜ ಅರ್ಥದಲ್ಲಿ ದೈವಲೀಲೆ. ಗಾಣದ ರಾಮಣ್ಣ ಹಾಗೂ ನಾಗಿಯ ಕುರಿತು ಅಜ್ಜಿ ತಳೆಯುವ ನಿಲುವು ಸಂಬಂಧಗಳ ಘನತೆಯನ್ನು ಸೂಚಿಸುವಂತಿದೆ. ಇದೇ ಅಜ್ಜಿ – ತನ್ನ ಮೊಮ್ಮಗನ ಬೀಗ ಅನಂತರಾಯ ಹೆಣ್ಣಿನೊಂದಿಗಿನ ಸಂಬಂಧದ ಬಗ್ಗೆ ಲಘುವಾಗಿ ಮಾತನಾಡಿದಾಗ–
‘ನಿನಗೆ ‘ಹೆಣ್ಣು ಅಸಹ್ಯ’ ಎಂತ ಕಾಣಿಸಬಹುದು. ಅದು ಬೇಡವಾದರೆ ಬಿಡು. ಆದರೆ, ಹೆಣ್ಣಿನೊಡನೆ ಆಡುವ ಆಟವನ್ನು ಗಂಡಿನೊಡನೆ ಆಡುವವರಿಗೆ ಅಷ್ಟೆಲ್ಲ ಅಧಿಕಪ್ರಸಂಗ ಯಾತಕ್ಕೆ?’ ಎಂದು ತರಾಟೆಗೆ ತೆಗೆದುಕೊಳ್ಳುತ್ತಾಳೆ. ಮೂಕಜ್ಜಿಯು ಸಲಿಂಗಕಾಮವನ್ನು ಅಸಹಜ ಎನ್ನುತ್ತಾಳೆ. ಆದರೆ, ಅಸಹ್ಯವೆಂದು ಭಾವಿಸುವುದಿಲ್ಲ.

‘ದೇವರು ಮಾಡಿಟ್ಟ ಜಾತಿ ಎರಡೇ ಎರಡು. ಗಂಡು, ಹೆಣ್ಣು. ನಾವು, ನೀವು ಮಾಡಿಕೊಂಡಿದ್ದು ನೂರು, ಸಾವಿರ. ಈ ಪಾಟಿ ಜಾತಿಗಳು ಯಾವ ಜೀವಿಗಳಲ್ಲೂ ಇಲ್ಲ’ ಎನ್ನುವ ಮೂಲಕ ಜಾತ್ಯತೀತಳಾಗಿಯೂ ಮೂಕಜ್ಜಿ ಕಾಣಿಸುತ್ತಾಳೆ. ರೂಢಿಗತ ಯೋಚನೆಗಳಿಗೆ ಭಿನ್ನವಾದ ಚಿಂತನೆಯ ಕಾರಣದಿಂದಾಗಿಯೇ ಊರವರ ಕಣ್ಣಿಗೆ ಆಕೆ ಮರುಳಳಂತೆ ಕಾಣಿಸುತ್ತಾಳೆ. ವರ್ತಮಾನದಲ್ಲಿ ಕೂಡ ಸಂಪ್ರದಾ
ಯದಲ್ಲಿನ ಜಡತೆಯನ್ನು ಪ್ರಶ್ನಿಸುವವರಿಗೆ ದೊರೆಯುವ ಹಣೆಪಟ್ಟಿ ‘ಮರುಳತನ’ವೇ ಅಲ್ಲವೇ?

ಕಾದಂಬರಿಯನ್ನು ಓದುವಾಗ ಅನೇಕ ಸಲ ಮೂಕಜ್ಜಿಯೇ ಕಾರಂತರು ಎನ್ನಿಸುವುದಿದೆ. ಮೂಕಜ್ಜಿಯ ಹೆಸರಿನಲ್ಲಿ ಕಾರಂತರು ತಮ್ಮನ್ನೇ ಚಿತ್ರಿಸಿಕೊಂಡಂತೆ ಕಾಣಿಸುವುದಕ್ಕೆ ಕೃತಿಯಲ್ಲಿ ಹಲವು ಉದಾಹರಣೆಗಳನ್ನು ಹೆಕ್ಕಬಹುದು. ‘ಇರುವ ನಾಲ್ಕು ದಿನ ಚಂದವಾಗಿ ಇರುವುದಪ್ಪ; ಹೋಗುವ ಕಾಲ ಬಂದರೆ ಹೋಗುವುದು’ ಎನ್ನುವ ಅವಳ ನಂಬಿಕೆ, ಕೃತಿಕಾರ ಕಾರಂತರ ‘ಬಾಳ್ವೆಯೇ ಬೆಳಕು’ ನಿಲುವಿಗೆ ಪೂರಕವಾದುದು. ‘ಇನ್ನೊಬ್ಬರಿಗೆ ಅನ್ಯಾಯವಾಗದ ರೀತಿಯಲ್ಲಿ ಬದುಕುವುದು. ಪರರಿಗೆ ಸುಖ ಕೊಡಲು ಬಾರದೆ ಹೋದರೆ, ದುಃಖ ಕೊಡದೆ ಇರುವುದು’ ಎನ್ನುವ ಮೂಕಜ್ಜಿಯ ಉದ್ಗಾರವೇ– ‘ನಾವು ಭೂಮಿಗೆ ಬಂದ ದಿನ ನಮ್ಮ ಸುತ್ತಣ ಬದುಕು ಇದಕ್ಕಿಂತ ಒಂದಿಷ್ಟು ಹೆಚ್ಚು ಚಂದವಾಗುವಂತೆ ಮಾಡಿ ಇಲ್ಲಿಂದ ಹೊರಡಬೇಕು ಎಂಬ ಭಾವನೆ ನನ್ನ ಬದುಕನ್ನು ನಡೆಸಿದ ಸೂತ್ರ. ಜಾತ್ರೆಗೆ ಬಂದವರು ಜಾತ್ರೆ ಮುಗಿಸಿ ಹೊರಡುವಂತೆ, ತಾವು ನಲಿದು, ಉಂಡು ಹೋದ ನೆಲದ ಮೇಲೆ ಎಲ್ಲೆಲ್ಲೂ ತಮ್ಮ ಉಚ್ಚಿಷ್ಟವನ್ನು ಚೆಲ್ಲಿ ಹೋದರೆ ಹೇಗಾದೀತು? ನಾವೇ ಅಲ್ಲಿಗೆ ತಿರುಗಿ ಬರದಿದ್ದರೇನಾಯಿತು? ಅಲ್ಲಿಗೆ ಬರುವ ನಮ್ಮ ಮಕ್ಕಳು ಏನೆಂದುಕೊಂಡಾರು? ಅಷ್ಟನ್ನಾದರೂ ಯೋಚಿಸುವ ಬುದ್ಧಿ ಈ ದೇಶವನ್ನು ನಡೆಸುವ ಹಿರಿಯರಿಗೆ ಇಲ್ಲದೆ ಹೋದರೆ ಹೇಗೆ?’ ಎಂದು ಕಾರಂತರ ಆತ್ಮಕಥೆಯಲ್ಲಿ ವಿಸ್ತೃತರೂಪ ಪಡೆದಂತಿದೆ.

ಕಾರಂತರನ್ನು ಇತ್ತೀಚೆಗೆ ಅವರ ಕೆಲವು ಹೇಳಿಕೆಗಳ ಮೂಲಕ ಚರ್ಚಿಸಲಾಗುತ್ತಿದೆ. ಆದರೆ, ಕಾರಂತರು ನಮ್ಮ‌‌ ಮನಸ್ಸಿನಲ್ಲಿ ಉಳಿದಿರುವುದು ಮೂಕಜ್ಜಿಯಂಥ ಸಾಂಸ್ಕೃತಿಕ‌ ಪಠ್ಯಗಳ ಮೂಲಕವೇ ಹೊರತು– ಅವರು ಯಾರ ಬಳಿ ಏನು ಹೇಳಿದರು ಹಾಗೂ ಯಾವ ವಿಷಯದ ಬಗ್ಗೆ ಅವರ ಪ್ರತಿಕ್ರಿಯೆ ಏನಿತ್ತು ಎನ್ನುವ ಚರ್ಚೆಗಳ ಮೂಲಕವಲ್ಲ. ತುರ್ತು ಪರಿಸ್ಥಿತಿ ಹೇರಿಕೆಯನ್ನು ವಿರೋಧಿಸಿ  ಕೇಂದ್ರ ಸರ್ಕಾರ ತಮಗೆ ನೀಡಿದ ‘ಪದ್ಮಭೂಷಣ’ ಪುರಸ್ಕಾರವನ್ನು ಹಿಂದಿರುಗಿಸುತ್ತಾ ರಾಷ್ಟ್ರಪತಿಗಳಿಗೆ ಬರೆದ ಪತ್ರದಲ್ಲಿ – ‘ಯಾವನೇ ವ್ಯಕ್ತಿಗೂ, ಯಾವುದೇ ನೆಪದಿಂದ, ಅನ್ಯ ಪ್ರಜೆಗಳ ವ್ಯಕ್ತಿಸ್ವಾತಂತ್ರ್ಯವನ್ನು ಅಪಹರಿಸಲು ಹಕ್ಕಿದೆ ಎಂದು ನಾನು ತಿಳಿಯುವುದಿಲ್ಲ’ ಎಂದು ಕಾರಂತರು ಉದ್ಗರಿಸುತ್ತಾರೆ. ಆ ನಿಲುವು– ವಿವೇಕ ಈ ಹೊತ್ತಿಗೆ ಕಾರಂತರನ್ನು ನಮ್ಮೊಳಗೆ ಮತ್ತೂ ಮತ್ತೂ ಜೀವಂತಗೊಳಿಸುತ್ತದೆ.

ಐವತ್ತು ವರ್ಷಗಳ ನಂತರವೂ ‘ಮೂಕಜ್ಜಿಯ ಕನಸುಗಳು’ ಕಥನ ಈ ಹೊತ್ತಿನ ತಳಮಳಗಳ ನಿರೂಪಣೆಯಂತೆಯೇ ಕಾಣಿಸುವುದರಿಂದಾಗಿ, ಮೂಕಜ್ಜಿ ನಮ್ಮ ನಡುವೆ ಉಳಿದು ಬೆಳೆದು ಬಂದಿದ್ದಾಳೆ ಎನ್ನಿಸುತ್ತದೆ. ಮೂಕಜ್ಜಿಗೆ ಇನ್ನಷ್ಟು ವಯಸ್ಸಾಗಬಹುದು, ಅವಳ ಮನೆಯ ಮುಂದಿನ ಅಶ್ವತ್ಥ ಮಣ್ಣಾದರೂ ಅಜ್ಜಿ ಉಳಿಯಬಹುದು. ನಾವು ಮಾತ್ರ ಅಜ್ಜಿಯ ಮೊಮ್ಮಗ ಸುಬ್ರಾಯನಂತೆ ಚರಿತ್ರೆಯ ಗತವೈಭವವನ್ನು ಕೆದಕುತ್ತಾ ಪುಲಕಗೊಳ್ಳುತ್ತಿರುತ್ತೇವೆಯೇ ಹೊರತು, ಅಜ್ಜಿಯ ಬದುಕು– ಚಿಂತನೆಗಳ ವಾರಸುದಾರರಾಗಲು ತುಡಿಯುವುದಿಲ್ಲ. ಏಕೆಂದರೆ, ಮೂಕಜ್ಜಿಯನ್ನಾಗಲೀ ಗಾಂಧಿಯನ್ನಾಗಲೀ ನಮ್ಮ ಸಂಭ್ರಮಕ್ಕೆ ಒದಗಿಬರುವ ಕೃತಿ–ಆಕೃತಿಗಳಾಗಿ ಭಾವಿಸಿದ್ದೇವೆಯೇ ಹೊರತು ಅನುಸರಣೆಯ ಮಾರ್ಗಗಳಾಗಿ ಅಲ್ಲ.

Post Comments (+)