ಚಿಣ್ಣರ ಕುಂಚದಲ್ಲಿ ಅರಳಿದ ಜೀವ ಜಗತ್ತು

ಬುಧವಾರ, ಜೂನ್ 19, 2019
28 °C
ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಚಿತ್ರಕಲಾ ಸ್ಪರ್ಧೆ 167 ಶಾಲಾ ಮಕ್ಕಳು ಭಾಗಿ

ಚಿಣ್ಣರ ಕುಂಚದಲ್ಲಿ ಅರಳಿದ ಜೀವ ಜಗತ್ತು

Published:
Updated:
Prajavani

ಚಾಮರಾಜನಗರ: ಪರಿಸರದ ಮೇಲೆ ಚಿಣ್ಣರಿಗೆ ಇರುವ ಕಾಳಜಿ ಕುಂಚದಲ್ಲಿ ಮೂಡಿತ್ತು. ಪರಿಸರ ಸಂರಕ್ಷಿಸುವ ಅವರ ತುಡಿತ ಅವರ ಚಿತ್ರಕಲೆಯಲ್ಲಿ ವ್ಯಕ್ತವಾಗುತ್ತಿತ್ತು.  

ನಗರದ ಚಾಮರಾಜೇಶ್ವರ ದೇವಸ್ಥಾನದ ಆವರಣದಲ್ಲಿರುವ ಉದ್ಯಾನದಲ್ಲಿ ‌ಸೋಮವಾರ ಶಾಲಾ ಮಕ್ಕಳ ಕಲರವ. ಕೈಯಲ್ಲಿ ಕುಂಚ ಹಿಡಿದು ಬಿಳಿ ಹಾಳೆಯಲ್ಲಿ ಬಣ್ಣಗಳನ್ನು ಬಳಿದು ಪರಿಸರ ಸಂರಕ್ಷಣೆಯ ಸಂದೇಶವನ್ನೇ ಸಾರಿದರು.

ವಿಶ್ವಪರಿಸರ ದಿನಾಚರಣೆ ಅಂಗವಾಗಿ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಸಹಯೋಗದಲ್ಲಿ ವಿವಿಧ ಪ್ರಾಥಮಿಕ, ಮಾಧ್ಯಮಿಕ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಆಯೋಜಿಸಲಾಗಿದ್ದ ಚಿತ್ರಕಲಾ ಸ್ಪರ್ಧೆ ಇಂತಹ ಸನ್ನಿವೇಶಕ್ಕೆ ಸಾಕ್ಷಿಯಾಯಿತು. ಬೆಳಿಗ್ಗೆ 11 ಗಂಟೆಗೆ ಆರಂಭವಾದ ಸ್ಪರ್ಧೆಯಲ್ಲಿ ಚಿತ್ರಗಳನ್ನು ಬಿಡಿಸಲು ವಿದ್ಯಾರ್ಥಿಗಳಿಗೆ 2 ಗಂಟೆಗಳ ಅವಕಾಶ ನೀಡಲಾಯಿತು‌.

164 ಮಕ್ಕಳು: ಚಿತ್ರಕಲಾ ಸ್ಪರ್ಧೆಯಲ್ಲಿ ಸರ್ಕಾರಿ ಶಾಲೆ, ದೀನಬಂಧು ಆಶ್ರಮ ಶಾಲೆ, ಕಿತ್ತೂರುರಾಣಿ ಚೆನ್ನಮ್ಮ ಶಾಲೆ, ವಿಎಚ್‌ಪಿ ಶಾಲೆ, ಸೆಂಟ್‌ ಫ್ರಾನ್ಸಿಸ್‌ ಶಾಲೆ, ಜೆಎಸ್ಎಸ್ ಪ್ರೌಢಶಾಲೆ, ಎಂವೈಎಫ್‌ ಶಾಲೆ, ರಾಮಸಮುದ್ರ ಬಾಲರಪಟ್ಟಣ ಶಾಲೆ, ಸೇಂಟ್‌ ಜೋಸೆಫ್ ಶಾಲೆ, ಜೆಎಸ್ಎಸ್ ಪಬ್ಲಿಕ್‌ ಶಾಲೆ, ಸೋಮವಾರಪೇಟೆ ಎಂಸಿಎಸ್‌ ಶಾಲೆ, ಯೂನಿವರ್ಸಲ್ ಶಾಲೆ ಸೇರಿದಂತೆ ನಗರ ವ್ಯಾಪ್ತಿಯ ವಿವಿಧ ಶಾಲೆಗಳಿಂದ 164 ಮಕ್ಕಳು ಭಾಗವಹಿಸಿ ಬೆಟ್ಟ, ಗುಡ್ಡ, ಗಿಡ, ಮರಗಳು ಸೇರಿದಂತೆ ಪರಿಸರ ನಾಶದಿಂದಾಗುವ ಪರಿಣಾಮ, ಪರಿಸರ ಸಂರಕ್ಷಣೆಯಿಂದ ಆಗುವ ಲಾಭಗಳನ್ನು ತಮ್ಮ ಕುಂಚದಲ್ಲಿ ಅರಳಿಸಿದರು. 

ಮಕ್ಕಳ ಗುಂಪು, ಜಾಗೃತಿ: ಉದ್ಯಾನದ ಹಸಿರ ಪರಿಸರದಲ್ಲಿ ಗುಂಪುಗುಂಪಾಗಿ ಕುಳಿತ ಮಕ್ಕಳ ತಮ್ಮದೇ ಕಲ್ಪ‍ನೆಯ ಪ‍ರಿಸರದ ಚಿತ್ರಣವನ್ನು ಬಿಡಿಸಲು ತೊಡಗಿದರು.

ಪೃಥ್ವಿಯನ್ನು ರಕ್ಷಣೆ ಮಾಡುವುದು, ಮರಕಡಿಯಬೇಡಿ, ಮರಬೆಳೆಸಿ ನಾಡು ಉಳಿಸಿ, ಮರಗಳ ತೋಪು, ಬೆಟ್ಟಗುಡ್ಡ ಅರಣ್ಯ ಕುರಿತು ವಿವಿಧ ಬಗೆಯ ಚಿತ್ರಬಿಡಿಸುವ ಮೂಲಕ ಸಾರ್ವಜನಿಕರಲ್ಲಿ ಪರಿಸರ ಸಂರಕ್ಷಣೆ ಕುರಿತು ಜಾಗೃತಿ ಮೂಡಿಸಲು ಮುಂದಾದರು.  

ಚಿತ್ರಪಟದಲ್ಲಿ: ನೀರಿನ ಸಂರಕ್ಷಣೆ, ಜನರ ದುರಾಸೆಗೆ ಬೆಟ್ಟ, ಗುಡ್ಡ, ಅರಣ್ಯ ದಿನೇ ದಿನೇ ನಾಶವಾಗುತ್ತಿರುವುದು, ಕಾರ್ಖಾನೆಗಳು ಹೊರ ಹಾಕುವ ಹೊಗೆ ಹಾಗೂ ಕಲುಷಿತ ನೀರಿನಿಂದ ವಾಯುಮಾಲಿನ್ಯ, ಪರಿಸರ ಮಾಲಿನ್ಯವಾಗುವುದು ಇತ್ಯಾದಿ ಚಿತ್ರಗಳನ್ನು ಮಕ್ಕಳು ರಚಿಸಿದರು.

ಮಕ್ಕಳು ಪರಿಸರ ಸಂರಕ್ಷಣೆಗೆ ಮುಂದಾಗಬೇಕು: ‘ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಆಯೋಜಿಸಿರುವ ಚಿತ್ರಕಲಾ ಸ್ಪರ್ಧೆಯಲ್ಲಿ ಮಾತ್ರ ಮಕ್ಕಳ ಪರಿಸರ ಪ್ರೇಮ ವ್ಯಕ್ತವಾಗಬಾರದು. ಚಿತ್ರ ಬರೆದು ಹಾಳೆಗೆ ಸೀಮಿತವಾಗದೆ ತಮ್ಮ ಸುತ್ತಮುತ್ತಲಿನ ಪರಿಸರವನ್ನು ಕಾಪಾಡಲು, ಸಂರಕ್ಷಿಸಿ ಉಳಿಸಲು ಮುಂದಾಗಬೇಕು’ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ವಿಷಯ ಪರಿವೀಕ್ಷಕ ಬಸವರಾಜ ಓಲೇಕಾರ್ ಸಲಹೆ ನೀಡಿದರು.

‘ಪರಿಸರದ ಬಗ್ಗೆ ಚಿಕ್ಕ ವಯಸ್ಸಿನಲ್ಲೇ ಅರಿವು ಮೂಡಿಸಿಕೊಂಡವರು ಉತ್ತಮ ವ್ಯಕ್ತಿಯಾಗಲು ಸಾಧ್ಯ. ಉತ್ತಮ ಪರಿಸರ ಇದ್ದರೆ ಮಾತ್ರ ಮನುಷ್ಯ ಆರೋಗ್ಯದಿಂದ ಇರಬಹುದು. ಈ ನಿಟ್ಟಿನಲ್ಲಿ ಸರ್ಕಾರಗಳು ಯೋಜನೆಗಳನ್ನು ರೂಪಿಸಿ ನಮಗೆ ನೀಡುತ್ತವೆ. ಅದರ ಉಪಯೋಗವನ್ನು ಎಲ್ಲರೂ ಸದುಪಯೋಗಪಡಿಸಿಕೊಳ್ಳಬೇಕು’ ಎಂದರು.

ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಉಪ ಪರಿಸರ ಅಧಿಕಾರಿ ವೈ.ಎಸ್.ರಾಧಾ, ಸಹಾಯಕ ಪರಿಸರ ಅಧಿಕಾರಿ ಹರಿಪ್ರಸಾದ್, ನಗರಸಭೆಯ ಪರಿಸರ ಅಧಿಕಾರಿ ಗಿರಿಜಮ್ಮ, ತೀರ್ಪುಗಾರರಾದ ಮಹೇಂದ್ರ, ಸಂಪತ್ ಕುಮಾರ್ ಇದ್ದರು.

ಜೂನ್‌ 7ರಂದು ಬಹುಮಾನ ವಿತರಣೆ
ಚಿತ್ರಕಲಾ ಸ್ಪರ್ಧೆಯಲ್ಲಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನಗಳನ್ನು ನೀಡಲಾಗುತ್ತದೆ. ಉತ್ತಮ ಚಿತ್ರಗಳನ್ನು ಬಿಡಿಸಿ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಜೂನ್‌ 7 ರಂದು ನಗರದ ಜೆ.ಎಚ್.ಪಟೇಲ್ ಸಭಾಂಗಣದಲ್ಲಿ ನಡೆಯುವ ‘ವಿಶ್ವ ಪರಿಸರ ದಿನಾಚರಣೆ’ ಕಾರ್ಯಕ್ರಮದಲ್ಲಿ ಬಹುಮಾನ ವಿತರಿಸಲಾಗುತ್ತದೆ ಎಂದು ಆಯೋಜಕರು ತಿಳಿಸಿದರು. 

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

  • 0

    Happy
  • 0

    Amused
  • 0

    Sad
  • 0

    Frustrated
  • 0

    Angry

Comments:

0 comments

Write the first review for this !