PHOTOS | ಯುಗಾದಿ 2023: ನವ ಪಲ್ಲವ
ನಮಗೆ ನಿತ್ಯವೂ ನಿದ್ದೆಗೊಮ್ಮೆ ಮರಣ, ಮತ್ತೆ ಎದ್ದೊಡನೆ ಹೊಸಹುಟ್ಟು. ಯುಗಯುಗಾಂತರಗಳ ಹಿಂದೆಯೇ ಪ್ರಕೃತಿ ಹುಟ್ಟು ಪಡೆದರೂ ವರುಷಕ್ಕೊಮ್ಮೆ ಹೊಸಹುಟ್ಟು. ಪ್ರಕೃತಿ ಜೀವನ್ಮುಖಿ, ನಿಂತ ನೀರಲ್ಲ. ಕಾಲಕ್ಕೆ ಸರಿಯಾಗಿ ನಿಸರ್ಗದ ಬದಲಾವಣೆ ನಿರಂತರ. ಇದುವೇ ಋತುಮಾನ. ಋತುವಿನ ಆರಂಭವೆಂದರೆ ಹೊಸ ಜೀವನ ಯಾನ. ನವಿರು, ಸೊಗಸು, ವೈವಿಧ್ಯ ತುಂಬಿದ ನವ ಪಲ್ಲವಿಯ ಋತುಗಾನ. ಕಂಗೊಳಿಸುವ ನಿಸರ್ಗವನ್ನು ನೋಡುವುದೇ ಆಪ್ಯಾಯಮಾನ.ಈಗ ನಿಸರ್ಗದ ಹೋಳಿ ಆರಂಭಗೊಂಡಿದೆ. ಬೋಳಾದ ಮರಗಳಲ್ಲಿ ಬಣ್ಣಬಣ್ಣದ ಚಿಗುರೆಲೆಗಳು, ಹೂಗಳು ಮೂಡಿವೆ. ಎಲೆಯೋ ಹೂವೋ ತಿಳಿಯದಂತೆ ವರ್ಣಮಯ ಮರಗಳ ಒಡಲಲ್ಲಿ ವಿವಿಧ ಹಕ್ಕಿಗಳ ಹಾಡು ವಸಂತನ ಆಗಮನದ ಕುರುಹು ನೀಡುತ್ತಿವೆ. ಜೇನು ಹುಳು, ಭ್ರಮರದ ಉಲ್ಲಾಸ, ಕೀಟಗಳ ಹಾರಾಟ ಮಧುಪಾನದ ಕುರುಹಾಗಿದೆ. ಕಾಡೊಳಗೆ ವಿವಿಧ ಹೂಗಳ ಸುವಾಸನೆ ಮಿಶ್ರಿತಗೊಂಡು ವಿಶಿಷ್ಟ ಪರಿಮಳ ಪಸರಿಸುತ್ತಿದೆ. ಹೊಂಗೆಯ ಹುಲುಸು, ಅರಳಿಯ ಸೊಗಸು, ಬೇವಿನ ಕುಡಿ, ಮಾವಿನ ಮಿಡಿ, ಜಾಜಿ, ಜಾಲಿ, ಗೊಬ್ಬಳಿ ಹೂವಿನ ಚಪ್ಪರ, ರಸ್ತೆಯುದ್ದಕ್ಕೂ ಗುಲ್‍ಮೊಹರಿನ ಮೊಹರು. ಹಾದಿಗುಂಟ ಹೂ ಮಳೆ ಸುರಿಸಿದ ಮಳೆಮರ, ಕಾಪರ್ ಪಾಡ್ ಮರ ಭೂರಮೆಯ ಬೆಡಗಿಗೆ ಸಾಕ್ಷಿಯಾಗುತ್ತಲಿವೆ. ಹೂನಂತೆ ಭಾಸವಾಗುವ ತಿಳಿಗೆಂಪು, ಹಳದಿ, ನಸುಗೆಂಪು, ತಿಳಿಹಳದಿ, ಚಿನ್ನದ ಬಣ್ಣದ ಚಿಗುರೆಲೆಗಳ ಸೊಬಗು ಚೈತ್ರದಲ್ಲಿ ರಂಗುರಂಗಿನ ಹೋಳಿಯಾಟ ಆಡುತ್ತಲಿವೆ. ನಿಸರ್ಗದ ಉಲ್ಲಾಸವನ್ನು ನೋಡುವುದೇ ಒಂದು ದೊಡ್ಡಹಬ್ಬ.ಭೂಮಿ ಚಂದ್ರರ ಚಲನೆಯ ಪರಿಣಾಮದ ಫಲವೇ ಪ್ರಕೃತಿಯ ಸ್ಥಿತ್ಯಂತರದ ಭಾಗವಾಗುವ ಆಶಯ ನಮ್ಮಗಳದ್ದು. ಪ್ರಕೃತಿಯ ಹೊಸಹುಟ್ಟನ್ನು ನೋಡುತ್ತಾ ನಮ್ಮಲ್ಲೂ ಬದಲಾವಣೆಯ ತುಡಿತದೊಂದಿಗೆ ಉಲ್ಲಾಸದ ಆಚರಣೆಯೇ, ಉತ್ಸಾಹದ ಪ್ರತೀಕವೇ ಉಗಾದಿ ಹಬ್ಬದ ಹರುಷಕ್ಕೆ ಕಾರಣ. ಬಾಳಿನ ಸಿಹಿಕಹಿಯನ್ನು ಸಮನಾಗಿ ಸ್ವೀಕರಿಸುವ ಆಶಯವೇ ಹಬ್ಬದ ಹೂರಣ.
Published : 18 ಮಾರ್ಚ್ 2023, 16:16 IST