ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜಕೀಯ ಪಲ್ಲಟ; ಕುತೂಹಲದ ಕಣ

Last Updated 6 ಮೇ 2018, 19:30 IST
ಅಕ್ಷರ ಗಾತ್ರ

ಕಲಬುರ್ಗಿ ಜಿಲ್ಲೆಯಲ್ಲಿ ಕಾಂಗ್ರೆಸ್‌ ಈ ಬಾರಿಯೂ ಗಟ್ಟಿಯಾಗಿಯೇ ಇದೆ. ಹಿರಿಯರಾದ ಮಲ್ಲಿಕಾರ್ಜುನ ಖರ್ಗೆ ನಾಯಕತ್ವ, ಆಡಳಿತ ಪಕ್ಷ ಎನ್ನುವ ನಾಮಬಲ, ಅಭ್ಯರ್ಥಿಗಳ ಆಯ್ಕೆ, ಪೂರ್ವಸಿದ್ಧತೆ ಹಾಗೂ ಕಾರ್ಯಕರ್ತರ ಪಡೆ ನೆರವಿಗೆ ಬಂದಿವೆ.

ಕಳೆದ ಚುನಾವಣೆಯಲ್ಲಿ ಬಿಜೆಪಿ ಹೋಳಾಗಿತ್ತು. ಈಗ ಒಂದಾಗಿದೆ. ತನ್ನ ಶಕ್ತಿಯನ್ನು ಒಟ್ಟುಗೂಡಿಸಿಕೊಂಡು ಕಾಂಗ್ರೆಸ್‌ಗೆ ಪ್ರಬಲ ಪೈಪೋಟಿ ನೀಡುತ್ತಿದೆ. ಆದರೆ, ನಾಯಕತ್ವ ಹಾಗೂ ಸಂಘಟನೆಯ ಕೊರತೆಯಿಂದ ನಿಶ್ಶಕ್ತವಾಗಿದ್ದ ಜೆಡಿಎಸ್‌ ಪಕ್ಷವು ಪಕ್ಷಾಂತರಿಗಳಿಂದ ಕೊಂಚ ಶಕ್ತಿಯನ್ನು ಹೆಚ್ಚಿಸಿಕೊಂಡಿದೆ.

ಜಿಲ್ಲೆಯಲ್ಲಿ 9 ಕ್ಷೇತ್ರಗಳು ಇವೆ. ಮೇಲ್ನೋಟಕ್ಕೆ ನಾಲ್ಕು ಕಡೆ ಕಾಂಗ್ರೆಸ್‌, ಬಿಜೆಪಿ, ಜೆಡಿಎಸ್‌ ನಡುವೆ ತ್ರಿಕೋನ ಸ್ಪರ್ಧೆ, ಐದು ಕಡೆ ಕಾಂಗ್ರೆಸ್‌– ಬಿಜೆಪಿ ನಡುವೆ ನೇರ ಸ್ಪರ್ಧೆ ಇರುವಂತೆ ಕಾಣಿಸುತ್ತದೆ. ಆದರೆ, ಒಳಹೊಕ್ಕು ನೋಡುತ್ತಾ ಹೋದರೆ ಸಕಾರಾತ್ಮಕ ಹಾಗೂ ನಕಾರಾತ್ಮಕ ಅಂಶಗಳು ಮೂರೂ ಪಕ್ಷಗಳ ‘ಭವಿಷ್ಯ’ವನ್ನು ಹೇಳುತ್ತವೆ.

2013ರ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷವು ಬಿಜೆಪಿಯ ಒಡಕಿನ ಲಾಭವನ್ನು ಪಡೆದು ಏಳು ಸ್ಥಾನಗಳನ್ನು ಗೆದ್ದುಕೊಂಡಿತು. ಬಳಿಕ ತಮ್ಮದೇ ಪಕ್ಷ ಅಧಿಕಾರಕ್ಕೆ ಬಂದದ್ದು ಶಾಸಕರಿಗೆ ವರವಾಯಿತು. ಕ್ಷೇತ್ರಗಳಲ್ಲಿಅವರು ಅಭಿವೃದ್ಧಿ ಕೆಲಸಗಳನ್ನು ಮಾಡಿಸಿದರು. ಈಗ ಅವುಗಳನ್ನೇ ಮುಂದಿಟ್ಟು ಮತ್ತೊಮ್ಮೆ ಆಶೀರ್ವಾದ ಬೇಡುತ್ತಿದ್ದಾರೆ.

ಹೈದರಾಬಾದ್‌ ಕರ್ನಾಟಕ ಪ್ರದೇಶಕ್ಕೆ ನೀಡಿರುವ 371(ಜೆ) ವಿಶೇಷ ಸ್ಥಾನಮಾನವು ಸಾವಿರಾರು ಜನರಿಗೆ ಉದ್ಯೋಗ ನೀಡಿದೆ. ಈ ಭಾಗದ ವಿದ್ಯಾರ್ಥಿಗಳು ವೈದ್ಯಕೀಯ, ಎಂಜಿನಿಯರಿಂಗ್‌ ಸೇರಿದಂತೆ ವೃತ್ತಿಪರ ಕೋರ್ಸ್‌ಗಳಿಗೆ ಸೇರಲು ಅವಕಾಶವಾಗಿದೆ. ಇಂತಹ ‘ಫಲ’ ಪಡೆದವರು ಕಾಂಗ್ರೆಸ್‌ ಪರವಾಗಿ ಒಳ್ಳೆಯ ಮಾತುಗಳನ್ನು ಆಡುತ್ತಿದ್ದಾರೆ.

ಜಿಲ್ಲೆಯಲ್ಲಿ ಮಲ್ಲಿಕಾರ್ಜುನ ಖರ್ಗೆ ಮತ್ತು ಮಾಜಿ ಮುಖ್ಯಮಂತ್ರಿ ಎನ್‌.ಧರ್ಮಸಿಂಗ್‌ ಜೋಡಿ ಪಕ್ಷದ ನೊಗವನ್ನು ಹೊತ್ತುಕೊಂಡಿತ್ತು. ಈಗ ಧರ್ಮಸಿಂಗ್‌ ಇಲ್ಲ. ಹೀಗಾಗಿ ಖರ್ಗೆ ಏಕಾಂಗಿಯಾಗಿ ಬಿರುಗಾಳಿಯಂತೆ ಸುತ್ತುತ್ತಾ ಪಕ್ಷವನ್ನು ಗೆಲ್ಲಿಸಿಕೊಳ್ಳಲು ಪ್ರಯತ್ನ ನಡೆಸಿದ್ದಾರೆ.

ಜಿಲ್ಲೆಯಲ್ಲಿ ಚುನಾವಣೆ ವೇಳೆಯಲ್ಲಿ ಮಹತ್ವದ ರಾಜಕೀಯ ‘ಪಲ್ಲಟ’ಗಳಾಗಿವೆ.

ಕಲಬುರ್ಗಿ ಉತ್ತರ ಕ್ಷೇತ್ರದ ಶಾಸಕ ಖಮರುಲ್‌ ಇಸ್ಲಾಂ ನಿಧನರಾಗಿದ್ದಾರೆ. ಸಹಜವಾಗಿಯೇ ಅವರ ಪತ್ನಿ ಕನ್ನೀಜ್‌ ಫಾತಿಮಾ ರಾಜಕೀಯ ಪ್ರವೇಶಿಸಿದ್ದಾರೆ. ಕ್ಷೇತ್ರದಲ್ಲಿ ಅನುಕಂಪದ ಅಲೆ ಇಲ್ಲದಿದ್ದರೂ, ಖಮರುಲ್‌ ಹೆಸರು ಪತ್ನಿಗೆ ಶ್ರೀರಕ್ಷೆಯಾಗಿದೆ.

ಅನಾರೋಗ್ಯ ಮತ್ತು ವಯಸ್ಸಿನ ಕಾರಣಕ್ಕಾಗಿ ಕಲಬುರ್ಗಿ ಗ್ರಾಮೀಣ ಕ್ಷೇತ್ರದ ಶಾಸಕ ಜಿ.ರಾಮಕೃಷ್ಣ ಅವರಿಗೆ ಕಾಂಗ್ರೆಸ್‌ ಟಿಕೆಟ್‌ ನೀಡಿಲ್ಲ. ಬದಲಾಗಿ ಪುತ್ರ ವಿಜಯಕುಮಾರ್‌ ಅವರನ್ನು ಕಣಕ್ಕೆ ಇಳಿಸಲಾಗಿದೆ. ಇದೇ ಕ್ಷೇತ್ರದಲ್ಲಿ ಬಿಜೆಪಿಯು ಮಾಜಿ ಸಚಿವ ರೇವುನಾಯಕ ಬೆಳಮಗಿ ಬದಲು ಯುವಕ, ಜಿಲ್ಲಾ ಪಂಚಾಯಿತಿ ಸದಸ್ಯ ಬಸವರಾಜ ಮತ್ತಿಮೂಡ ಅವರಿಗೆ ಟಿಕೆಟ್‌ ನೀಡಿದೆ. ಇದರಿಂದ ಆಕ್ರೋಶಗೊಂಡ ‘ಮಾಜಿ ಪೈಲ್ವಾನ್‌’ ಬೆಳಮಗಿ, ಜೆಡಿಎಸ್‌ನಿಂದ ಅಖಾಡಕ್ಕೆ ಇಳಿದಿದ್ದಾರೆ.

ಅಫಜಲಪುರ ಕ್ಷೇತ್ರದ ಕಾಂಗ್ರೆಸ್‌ನ ಹಿರಿಯ ಶಾಸಕ ಮಾಲೀಕಯ್ಯ ಗುತ್ತೇದಾರ ಬಿಜೆಪಿ ಸೇರಿದ್ದಾರೆ. ಬಿಜೆಪಿಯಲ್ಲಿದ್ದ ಎಂ.ವೈ.ಪಾಟೀಲ ಕಾಂಗ್ರೆಸ್‌ ಹುರಿಯಾಳು. ಇವರು ಮೂರು ದಶಕಗಳಿಂದ ಸಾಂಪ್ರದಾಯಿಕ ಎದುರಾಳಿಗಳು.

ತಮಗೆ ಸಿಗಬೇಕಾದ ಸಚಿವ ಸ್ಥಾನವನ್ನು ತಪ್ಪಿಸಿ, ತಮ್ಮ ಪುತ್ರನಿಗೆ ಕೊಡಿಸಿದರು ಎಂದು ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಬಹಿರಂಗವಾಗಿಯೇ ಮಾಲೀಕಯ್ಯ ತೊಡೆ ತಟ್ಟಿದ್ದಾರೆ. ಖರ್ಗೆಯವರು ಪ್ರತಿಕ್ರಿಯಿಸದೆ ಮುತ್ಸದ್ದಿಯಂತೆ ನಡೆದುಕೊಂಡಿದ್ದಾರೆ. ಆದರೆ, ಪುತ್ರ ಪ್ರಿಯಾಂಕ್‌ ಖರ್ಗೆ ಕಠಿಣವಾಗಿ ಉತ್ತರ ನೀಡುವ ಮೂಲಕ ಒಬ್ಬರನ್ನೊಬ್ಬರು ಸೋಲಿಸುವ ಶಪಥ ಮಾಡಿದ್ದಾರೆ!

ಆಳಂದ ಕ್ಷೇತ್ರದಲ್ಲಿ, ಸಮಾಜವಾದಿ ಹಿನ್ನೆಲೆಯ ಬಿ.ಆರ್‌.ಪಾಟೀಲ ಕೆಜೆಪಿಯಿಂದ ಶಾಸಕರಾಗಿದ್ದರು. ವರ್ಷದ ಹಿಂದೆ ಕಾಂಗ್ರೆಸ್‌ ಸೇರಿ, ಕಣದಲ್ಲಿದ್ದಾರೆ. ಇಲ್ಲಿಯೂ ಇವರ ಸಾಂಪ್ರದಾಯಿಕ ಎದುರಾಳಿ ಸುಭಾಷ್‌ ಗುತ್ತೇದಾರ ಬಿಜೆಪಿಯಿಂದ ಪೈಪೋಟಿ ನೀಡುತ್ತಿದ್ದಾರೆ.

ಇಂತಹ ಬದಲಾವಣೆಗಳು ಫಲಿತಾಂಶವನ್ನು ಏರುಪೇರು ಮಾಡುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ.

ಬಿಜೆಪಿಯು ನಾಯಕತ್ವದ ಕೊರತೆ ಎದುರಿಸುತ್ತಿದೆ. ಕಾಂಗ್ರೆಸ್‌ಗೆ ‘ಖರ್ಗೆ’ ಎನ್ನುವಂತೆ ಬಿಜೆಪಿಗೆ ಇಲ್ಲಿ ‘ಯಾರೂ’ ಇಲ್ಲ. ಅಭ್ಯರ್ಥಿಗಳು ಪ್ರಧಾನಿ ನರೇಂದ್ರ ಮೋದಿ, ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಅವರನ್ನೇ ನೆಚ್ಚಿಕೊಂಡಿದ್ದಾರೆ.

ಬಿಜೆಪಿ ಮುಖಂಡರಿಗೆ ಟಿಕೆಟ್‌ ಹಂಚಿಕೆಯೇ ದೊಡ್ಡ ತಲೆ ನೋವಾಗಿತ್ತು. ಪ್ರತಿ ಕ್ಷೇತ್ರದಲ್ಲೂ ಐದಾರು ಮಂದಿ ಪ್ರಬಲ ಆಕಾಂಕ್ಷಿಗಳು ಇದ್ದರು. ಅವರೆಲ್ಲ ಈಗ ಒಟ್ಟಾಗಿರುವಂತೆ ತೋರಿಸಿಕೊಳ್ಳುತ್ತಿದ್ದಾರೆ. ಇದು ನಿಜವೇ ಆಗಿದ್ದಲ್ಲಿ ಬಿಜೆಪಿಯು ಕಾಂಗ್ರೆಸ್‌ನ ಬೆವರಿಳಿಸುವುದು ಖಚಿತ.

‘ಲಿಂಗಾಯತ ಪ್ರತ್ಯೇಕ ಧರ್ಮ’ ಶಿಫಾರಸು ಕಾಂಗ್ರೆಸ್‌ಗೆ ಹೆಚ್ಚಿನ ಲಾಭವನ್ನಾಗಲಿ, ಬಿಜೆಪಿಗೆ ನಷ್ಟವನ್ನಾಗಲಿ ಮಾಡುವಂತೆ ಕಾಣಿಸುತ್ತಿಲ್ಲ. ಇದು ಬಿಜೆಪಿ ನಿಟ್ಟುಸಿರು ಬಿಡುವಂತೆ ಮಾಡಿದೆ.

ಜಿಲ್ಲೆಯಲ್ಲಿ ‘ಜನತಾ ಪರಿವಾರ’ ಕಾಂಗ್ರೆಸ್‌ಗೆ ಸಮರ್ಥ ಎದುರಾಳಿ ಆಗಿತ್ತು. ಆದರೆ, ಅದು ವಿಭಜನೆ ಆಗುತ್ತಲೇ ಹೋದ ಕಾರಣ, ಅಲ್ಲಿದ್ದ ಹೆಚ್ಚಿನವರು ಬಿಜೆಪಿಗೆ ವಲಸೆದರು. ಹೀಗಾಗಿ, ಎಚ್‌.ಡಿ.ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಗಳಿಸಿದ ಜನಪ್ರಿಯತೆಯನ್ನೇ ಅಭ್ಯರ್ಥಿಗಳು ‘ಠೇವಣಿ’ಯನ್ನಾಗಿ ಮಾಡಿಕೊಂಡಿದ್ದಾರೆ.

ಇಬ್ಬರು ಮುಖ್ಯಮಂತ್ರಿಗಳು

ಚಿಂಚೋಳಿಯಿಂದ ಆಯ್ಕೆಯಾಗುತ್ತಿದ್ದ ವೀರೇಂದ್ರ ಪಾಟೀಲರು ಎರಡು ಬಾರಿ ಮುಖ್ಯಮಂತ್ರಿಯಾಗಿದ್ದರು. ಈ ಕ್ಷೇತ್ರದಿಂದ ಒಮ್ಮೆ ಇವರ ಪುತ್ರ ಕೈಲಾಸನಾಥ ಪಾಟೀಲ ಶಾಸಕರಾಗಿದ್ದರು.

ಜೇವರ್ಗಿಯಿಂದ ಸತತವಾಗಿ ಏಳು ಬಾರಿ ಗೆದ್ದಿದ್ದ ಎನ್‌.ಧರ್ಮಸಿಂಗ್‌ ಒಮ್ಮೆ ಮುಖ್ಯಮಂತ್ರಿ ಆಗಿದ್ದರು. 2008ರಲ್ಲಿ ಬಿಜೆಪಿಯ ದೊಡ್ಡಪ್ಪಗೌಡ ಪಾಟೀಲ ನರಿಬೋಳ ವಿರುದ್ಧ 69 ಮತಗಳಿಂದ ಪರಾಭವಗೊಂಡರು. 2013ರಲ್ಲಿ ಪುತ್ರ ಡಾ. ಅಜಯ್‌ ಸಿಂಗ್‌ ಅವರನ್ನು ಕಣಕ್ಕೆ ಇಳಿಸಿ ಭಾರಿ ಅಂತರದಿಂದ ಗೆಲ್ಲುವಂತೆ ಮಾಡಿದರು. ಅಜಯ್‌ ಸಿಂಗ್‌, ದೊಡ್ಡಪ್ಪಗೌಡ ಪಾಟೀಲ ಮತ್ತೆ ಮುಖಾಮುಖಿಯಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT