7
ಎಂಟು ರಾಷ್ಟ್ರಗಳಲ್ಲಿ ದೊರೆಯದ ಮಾತೃತ್ವ ರಜೆ

ಭಾರತ ಸೇರಿ 90ಕ್ಕೂ ಹೆಚ್ಚು ದೇಶಗಳಲ್ಲಿ ಪಿತೃತ್ವ ರಜೆ ಇಲ್ಲ!

Published:
Updated:
ಭಾರತ ಸೇರಿ 90ಕ್ಕೂ ಹೆಚ್ಚು ದೇಶಗಳಲ್ಲಿ ಪಿತೃತ್ವ ರಜೆ ಇಲ್ಲ!

ವಿಶ್ವಸಂಸ್ಥೆ: ತಾಯಂದಿರಿಗೆ ಹೆರಿಗೆ ರಜೆ ನೀಡುವಂತೆ, ತಂದೆಯರಿಗೆ ಪಿತೃತ್ವ ರಜೆ ನೀಡದ ವಿಶ್ವದ 90ಕ್ಕೂ ಹೆಚ್ಚು ರಾಷ್ಟ್ರಗಳಲ್ಲಿ ಭಾರತವೂ ಒಂದು ಎಂದು ಯುನಿಸೆಫ್‌ ಹೇಳಿದೆ.

ಒಂದು ವರ್ಷದೊಳಗಿನ 90 ದಶಲಕ್ಷ ಮಕ್ಕಳಿರುವ ದೇಶಗಳಲ್ಲಿ, ತಂದೆಗೆ ಒಂದು ದಿನವೂ ಕೂಡ ವೇತನ ಸಹಿತ ಪಿತೃತ್ವ ರಜೆ ನೀಡಲಾಗುತ್ತಿಲ್ಲ ಅಥವಾ ಇಂಥದ್ದೊಂದು ನಿಯಮವನ್ನು ಒಳಗೊಂಡ ರಾಷ್ಟ್ರೀಯ ನೀತಿ ರೂಪಿಸಿಕೊಂಡಿಲ್ಲ ಎಂದು ಅದು ವಿಶ್ಲೇಷಿಸಿದೆ.

ವಿಶ್ವದಾದ್ಯಂತ ಕೌಟುಂಬಿಕ ಸ್ನೇಹಿ ನೀತಿಗಳನ್ನು ಹೆಚ್ಚಾಗಿ ರೂಪಿಸಲಾಗುತ್ತಿದೆ. ಹೆಚ್ಚು ಶಿಶುಸಂಖ್ಯೆ ಹೊಂದಿರುವ ಭಾರತದಲ್ಲಿ ಕೂಡ ಅಧಿಕಾರಿಗಳು ಉದ್ದೇಶಿತ ‘ಪಿತೃತ್ವ ಸೌಲಭ್ಯ ಮಸೂದೆ’  ರೂಪಿಸುವ ಕೆಲಸದಲ್ಲಿ ತೊಡಗಿದ್ದು, ಸಂಸತ್‌ನ ಮುಂದಿನ ಅಧಿವೇಶನದಲ್ಲಿ ಈ ಮಸೂದೆಯನ್ನು ಗಣನೆಗೆ ತೆಗೆದುಕೊಳ್ಳುವ ಸಾಧ್ಯತೆ ಇದೆ. ಈ ಮಸೂದೆಯು, ತಂದೆಯಂದಿರಿಗೆ ಮೂರು ತಿಂಗಳವರೆಗೆ ವೇತನಸಹಿತ ಪಿತೃತ್ವ ರಜೆಯ ಅವಕಾಶ ನೀಡಲಿದೆ ಎಂದು ಯುನಿಸೆಫ್‌ ಹೇಳಿದೆ.

ಅಮೆರಿಕವೂ ಸೇರಿದಂತೆ ವಿಶ್ವದ ಎಂಟು ಪ್ರಮುಖ ರಾಷ್ಟ್ರಗಳಲ್ಲಿ ವೇತನ ಸಹಿತ ಪಿತೃತ್ವ ರಜೆ ಮಾತ್ರವಲ್ಲ, ಮಾತೃತ್ವ ರಜೆಯೂ ಇಲ್ಲ. ಈ ಎಂಟು ರಾಷ್ಟ್ರಗಳಲ್ಲಿಯೇ ಒಂದು ವರ್ಷದೊಳಗಿನ ನಾಲ್ಕು ದಶಲಕ್ಷ ಶಿಶುಗಳಿವೆ.

ಹೆಚ್ಚು ಶಿಶುಸಂಖ್ಯೆ ಹೊಂದಿರುವ ಬ್ರೆಜಿಲ್‌ ಮತ್ತು ಕಾಂಗೊ ಸೇರಿದಂತೆ ವಿಶ್ವದ ಹಲವು ರಾಷ್ಟ್ರಗಳು ವೇತನ ಸಹಿತ ಪಿತೃತ್ವ ರಜೆ ನೀಡುತ್ತಿದ್ದು, ಈ ಸಂಬಂಧ ರಾಷ್ಟ್ರೀಯ ನೀತಿ ರೂಪಿಸಿವೆ.

‘ಶಿಶುವಿನ ಪ್ರಾರಂಭಿಕ ದಿನಗಳಲ್ಲಿ ತಾಯಿ ಮತ್ತು ತಂದೆಯೊಂದಿಗಿನ ಸಕಾರಾತ್ಮಕ ಮತ್ತು ಅರ್ಥಪೂರ್ಣ ಸಂವಹನದಿಂದ ಆ ಶಿಶುವಿನ ಮಿದುಳಿನ ಬೆಳವಣಿಗೆ ಉತ್ತಮವಾಗಿರುತ್ತದೆ. ಅಲ್ಲದೆ, ಅದು ಆರೋಗ್ಯವಾಗಿಯೂ, ಸಂತೋಷವಾಗಿಯೂ ಇರುವುದಲ್ಲದೆ, ಅದರ ಕಲಿಕೆಯ ಸಾಮರ್ಥ್ಯವೂ ವೃದ್ಧಿಸುತ್ತದೆ. ಈ ನಿಟ್ಟಿನಲ್ಲಿ ಗಮನಹರಿಸುವುದು ಎಲ್ಲರ ಜವಾಬ್ದಾರಿಯಾಗಿದೆ’ ಎಂದು ಯುನಿಸೆಫ್‌ನ ಕಾರ್ಯನಿರ್ವಾಹಕ ನಿರ್ದೇಶಕರಾದ ಹೆನ್ರಿಯೆಟ್‌ ಫೋರ್ ಹೇಳುತ್ತಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry