ಅನಂತಕುಮಾರ ಹೆಗಡೆ ನಾಮಪತ್ರ ಸಲ್ಲಿಕೆ, ಹಲವು ಬಿಜೆಪಿ ನಾಯಕರು ಭಾಗಿ 

ಭಾನುವಾರ, ಏಪ್ರಿಲ್ 21, 2019
26 °C

ಅನಂತಕುಮಾರ ಹೆಗಡೆ ನಾಮಪತ್ರ ಸಲ್ಲಿಕೆ, ಹಲವು ಬಿಜೆಪಿ ನಾಯಕರು ಭಾಗಿ 

Published:
Updated:

ಕಾರವಾರ: ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಅನಂತಕುಮಾರ ಹೆಗಡೆ ಜಿಲ್ಲಾ ಚುನಾವಣಾಧಿಕಾರಿ ಡಾ.ಕೆ.ಹರೀಶಕುಮಾರ್ ಅವರಿಗೆ ಮಂಗಳವಾರ ನಾಮಪತ್ರ ಸಲ್ಲಿಸಿದರು.

ಈ ಸಂದರ್ಭದಲ್ಲಿ ಹೆಗಡೆ ಅವರ ಪತ್ನಿ ಶ್ರೀರೂಪಾ, ಶಾಸಕ ಜಗದೀಶ ಶೆಟ್ಟರ್, ಬಿಜೆಪಿ ಜಿಲ್ಲಾಘಟಕದ ಅಧ್ಯಕ್ಷ ಕೆ.ಜಿ.ನಾಯ್ಕ ಹಾಗೂ ಹಿಂದೂ ಜಾಗರಣಾ ವೇದಿಕೆಯ ಮುಖಂಡ ಬಿ.ಎಸ್.ಪೈ ಜತೆಗಿದ್ದರು.

ನಾಮಪತ್ರ ಸಲ್ಲಿಸಿದ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಅನಂತಕುಮಾರ ಹೆಗಡೆ, ‘ದೇಶದಲ್ಲಿ ಕಳೆದ ಐದು ವರ್ಷಗಳ ಅವಧಿಯಲ್ಲಿ ವ್ಯಾಪಕ ಬದಲಾವಣೆಯಾಗಿದೆ. ಅವುಗಳನ್ನು ಪ್ರಜ್ಞಾವಂತ ಮತದಾರರು ಬೆಂಬಲಿಸುತ್ತಾರೆ. ಕಳೆದ ಬಾರಿಗಿಂತಲೂ ಹೆಚ್ಚು ಸ್ಥಾನಗಳನ್ನು ಈ ಬಾರಿ ಬಿಜೆಪಿ ಗೆಲ್ಲಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಕೇರಳದ ವಯನಾಡಿನಿಂದ ಸ್ಪರ್ಧಿಸುತ್ತಿರುವ ಬಗ್ಗೆ ಮಾತನಾಡಿದ ಅವರು, ‘ಅಮೇಥಿಯಲ್ಲಿ ಪರಿವಾರ ರಾಜಕಾರಣ ವೈಚಾರಿಕವಾಗಿ ದಿವಾಳಿತನ ಕಂಡಿದೆ. ಹಾಗಾಗಿ ಕೇರಳಕ್ಕೆ ಬಂದು ಸ್ಪರ್ಧಿಸುತ್ತಿರುವುದು ಹಾಸ್ಯಾಸ್ಪದ’ ಎಂದು ಟೀಕಿಸಿದರು.

‘ಮೋದಿ ಹೆಸರಲ್ಲೇ ಮತ ಕೊಡಿ’ ಎಂದು ಬಿಜೆಪಿ ಅಭ್ಯರ್ಥಿಗಳು ಕೇಳುತ್ತಿದ್ದಾರೆ. ನಿಮ್ಮ ಸಾಧನೆಗಳ ಮೇಲೆ ಯಾಕೆ ಕೇಳುತ್ತಿಲ್ಲ ಎಂದು ಪತ್ರಕರ್ತರು ಕೇಳಿದಾಗ, 'ಪಕ್ಷದಲ್ಲಿ ಮೊದಲಿನಿಂದಲೂ ಸಭ್ಯತೆ, ಸಂಸ್ಕೃತಿ ಆಧಾರದಲ್ಲಿ ಮತ ಕೇಳಲಾಗುತ್ತದೆ. ನಮ್ಮದು ಮೋದಿ ನೇತೃತ್ವದ ಸರ್ಕಾರಕ್ಕಾಗಿ ಚುನಾವಣೆ. ನನ್ನ ವೈಯಕ್ತಿಕ ಚುನಾವಣೆಯಲ್ಲ. ಸಭ್ಯತೆ ಇರುವ ಜನರು ಪಕ್ಷಕ್ಕೆ, ನಾಯಕತ್ವಕ್ಕೆ ಮತ ಕೇಳ್ತಾರೆ' ಎಂದು ಪ್ರತಿಕ್ರಿಯಿಸಿದರು.

ಶಾಸಕ ಜಗದೀಶ ಶೆಟ್ಟರ್ ಮಾತನಾಡಿ, ‘ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಸರ್ಕಾರದವರು ಭ್ರಮೆಯಿಂದ ಹೊರಗೆ ಬರಲಿ. ಮೊದಲು ನಿಮ್ಮ ಮನೆ ಸರಿ ಮಾಡಿಕೊಳ್ಳಿ. ಹಾಸನ, ಮೈಸೂರು, ತುಮಕೂರು, ದಾವಣಗೆರೆ, ಧಾರವಾಡದಲ್ಲಿ ಕಾಂಗ್ರೆಸ್ ಪರಿಸ್ಥಿತಿ ಹೇಗಿದೆ ಎಂದು ಎಲ್ಲರಿಗೂ ತಿಳಿದಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಜೆಡಿಎಸ್‌ಗೆ ಟಿಕೆಟ್ ಕೊಡಬಾರದಿತ್ತು. ನನಗೆ ಬೇಸರವಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ ಹೇಳಿಕೊಂಡಿದ್ದಾಗಿ ಕೇಳಿದ್ದೇನೆ. ಒಟ್ಟೂ ಗೊಂದಲದಲ್ಲಿದ್ದಾರೆ. ಮತದಾರರು ಬಿಜೆಪಿ ಬೆಂಬಲಿಸಲಿದ್ದಾರೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಈ ವೇಳೆ, ಬಿಜೆಪಿ ಶಾಸಕರಾದ ರೂಪಾಲಿ ನಾಯ್ಕ, ಸುನೀಲ್ ನಾಯ್ಕ, ಮುಖಂಡರಾದ ಸುನೀಲ ಹೆಗಡೆ, ಗಂಗಾಧರ ಭಟ್, ಲಿಂಗರಾಜ ಪಾಟೀಲ, ಸಾವಿರಾರು ಕಾರ್ಯಕರ್ತರು ಹಾಜರಿದ್ದರು. ಬಳಿಕ ನಗರದಲ್ಲಿ ಮೆರವಣಿಗೆಯ ಮೂಲಕ ದೈವಜ್ಞ ಸಭಾಂಗಣದಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಿದರು.

ಬರಹ ಇಷ್ಟವಾಯಿತೆ?

 • 3

  Happy
 • 1

  Amused
 • 0

  Sad
 • 0

  Frustrated
 • 7

  Angry

Comments:

0 comments

Write the first review for this !