ಸುಮಲತಾ ಗೆದ್ದರೆ ಬಿಜೆಪಿ ಸೇರಲಿದ್ದಾರೆ: ಡಿ.ವಿ.ಸದಾನಂದ ಗೌಡ

ಮಂಗಳವಾರ, ಏಪ್ರಿಲ್ 23, 2019
31 °C

ಸುಮಲತಾ ಗೆದ್ದರೆ ಬಿಜೆಪಿ ಸೇರಲಿದ್ದಾರೆ: ಡಿ.ವಿ.ಸದಾನಂದ ಗೌಡ

Published:
Updated:

ಬೆಂಗಳೂರು: ಮಂಡ್ಯ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಸುಮಲತಾ ಅವರು ಗೆದ್ದರೆ ನಂತರ ಬಿಜೆಪಿ ಸೇರುತ್ತಾರೆ. ಶೇ 99ರಷ್ಟು ನನ್ನ ಈ ಮಾತು ನಿಜವಾಗಲಿದೆ ಎಂದು ಕೇಂದ್ರ ಸಾಂಖ್ಯಿಕ, ಕಾರ್ಯಕ್ರಮ ಅನುಷ್ಠಾನ, ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ ಡಿ.ವಿ. ಸದಾನಂದ ಗೌಡ ಅವರು ಅಭಿಪ್ರಾಯಪಟ್ಟರು.

ಪ್ರಜಾವಾಣಿ ಮತ್ತು ಡೆಕ್ಕನ್ ಹೆರಾಲ್ಡ್ ಪತ್ರಿಕೆಯ ಬೆಂಗಳೂರು ಕಚೇರಿಯಲ್ಲಿ ಸೋಮವಾರ ನಡೆದ ‘ಪ್ರಜಾ ಮತ’ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಅವರ ಮಾತುಗಳ ಪೂರ್ಣ ಸಾರ ಇಲ್ಲಿದೆ.

* ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿ ಆಗಬೇಕು ಏಕೆ?

- ದೇಶದ ಸುಮಾರು 70 ವರ್ಷಗಳ ಇತಿಹಾಸದಲ್ಲಿ ಕೊಟ್ಟ ಭರವಸೆಗಳನ್ನು ನೂರಕ್ಕೆ ನೂರು ಈಡೇರಿಸಿದವರು ಪ್ರಧಾನಿ ನರೇಂದ್ರ ಮೋದಿ. ಇವತ್ತು ದೇಶ ಯಶಸ್ವಿ ದೇಶಗಳ ಪಟ್ಟಿಯಲ್ಲಿದೆ. ದೇಶವೇ ನನ್ನ ಮನೆ, ದೇಶದ 130 ಕೋಟಿ ಜನ ನನ್ನ ಕುಟುಂಬ, ನಾನು ಈ ದೇಶದ ಪ್ರಧಾನಿ ಅಲ್ಲ, ಪ್ರಧಾನ ಸೇವಕ ಎನ್ನುವ ಅವರ ತತ್ವ ದೇಶಕ್ಕೆ ಹೊಸ ದಿಕ್ಕು ಕೊಟ್ಟಿದೆ.

ಗಡಿ ರಕ್ಷಣೆ ವಿಚಾರದಲ್ಲಿ ಅವರು ತೆಗೆದುಕೊಂಡ ಸ್ಪಷ್ಟ ನಿಲುವು, ವಿದೇಶಾಂಗ ನೀತಿಗಳು ಅದ್ಭುತ ಗಮನಾರ್ಹ ಹೆಜ್ಜೆಗಳನ್ನು ದಾಖಲಿಸಿವೆ. ಹೆದ್ದಾರಿ, ಬಂದರು ಅಭಿವೃದ್ಧಿ ಮಾತ್ರವೇ ಅಲ್ಲದೆ, ವ್ಯಕ್ತಿಯೊಬ್ಬ ಸ್ವಾಭಿಮಾನದಿಂದ ಬದುಕುವ ಹತ್ತು ಹಲವು ಯೋಜನೆಗಳನ್ನು ಜಾರಿ ಮಾಡಿ ತೋರಿಸಿಕೊಟ್ಟರು. ದೇಶದಲ್ಲಿ ಇಂದು ಆರ್ಥಿಕ ಸ್ಥಿರತೆ ಇದೆ. ಅವರು ತೆಗೆದುಕೊಂಡ ಹತ್ತುಹಲವು ನಿರ್ಧಾರಗಳ ಕಾರಣ ವಿಶ್ವಬ್ಯಾಂಕ್ ನಮ್ಮ ದೇಶವನ್ನು ಶ್ಲಾಘಿಸಿದೆ. ಬಂಡವಾಳ ಹೂಡಿಕೆಗೆ ಭಾರತ ಪ್ರಶಸ್ತ ತಾಣವಾಗಿದೆ. ಕೊಟ್ಟ ಭರವಸೆ ಈಡೇರಿಸುವುದು ಮಾತ್ರವಲ್ಲ, ಮೋದಿ ಅವರು ದೇಶವನ್ನು ಹೊಸ ದಿಕ್ಕಿಗೆ ಕೊಂಡೊಯ್ದಿದ್ದಾರೆ. ಶೇ 83 ಜನ ದೇಶಬಾಂಧವರು ಮೋದಿ ಮತ್ತೊಮ್ಮೆ ಪ್ರಧಾನಿ ಆಗಬೇಕು ಅಂದಿದ್ದಾರೆ. ಅದಕ್ಕಾಗಿ ಮತ್ತೊಮ್ಮೆ ಮೋದಿ ಬರಬೇಕು.

* ಪುಲ್ವಾಮಾ ದಾಳಿಯಿಂದ ಬಿಜೆಪಿಗೆ ಲಾಭವಾಗಿದೆಯೇ?

– ಪುಲ್ವಾಮಾ ದಾಳಿಯಿಂದ ಬಿಜೆಪಿಗೆ ಲಾಭ ಆಗಿದೆ ಆಂತ ನನಗೆ ಅನಿಸುತ್ತಿಲ್ಲ. ಆದರೆ ಮೋದಿ ನಿರ್ಧಾರಕ್ಕೆ ದೇಶದಾದ್ಯಂತ ಶ್ಲಾಘನೆ ವ್ಯಕ್ತವಾಗಿದೆ. ದೇಶಕ್ಕೆ ಸ್ವಾತಂತ್ರ್ಯ ದೊರೆತ ನಂತರ ಸಶಸ್ತ್ರಪಡೆಗಳಿಗೆ ಇಷ್ಟೊಂದು ಸ್ವಾತಂತ್ರ್ಯ ಎಂದಿಗೂ ಸಿಕ್ಕಿರಲಿಲ್ಲ. ಮೊದಲ ಬಾರಿಗೆ ಸೇನೆಗೆ ಸ್ವಾತಂತ್ರ್ಯ ಕೊಡಲಾಯಿತು. ಮೋದಿ ನಿರ್ಧಾರವನ್ನು ಅಮೆರಿಕ, ಚೀನಾ ಸಹ ಶ್ಲಾಘಿಸಿವೆ.

* ಉದ್ಯೋಗ ಸೃಷ್ಟಿ ಭರವಸೆ ಈಡೇರಿಸಿಲ್ಲ ಎಂಬ ಆರೋಪಕ್ಕೆ ಏನನ್ನುತ್ತೀರಿ?

– ಖಂಡಿತವಾಗಿಯೂ ಉದ್ಯೋಗ ಸೃಷ್ಟಿಯಾಗಿದೆ. ಉದ್ಯೋಗ ಸಮೀಕ್ಷೆಗಳೂ ಇದನ್ನೇ ಹೇಳಿವೆ. ಕೆಲ ಗೊಂದಲಗಳು ಇರಬಹುದು. ಉದ್ಯೋಗ ಅಂದರೆ ಕೇವಲ ಸರ್ಕಾರಿ ಕೆಲಸವೇ ಅಲ್ಲ. ಸ್ವಉದ್ಯೋಗವೂ ಉದ್ಯೋಗ ತಾನೇ? ಕೌಶಲ ಅಭಿವೃದ್ಧಿ ನಮ್ಮ ಸರ್ಕಾರ ತೆಗೆದುಕೊಂಡ ದೊಡ್ಡ ನಿರ್ಧಾರ. ಮುದ್ರಾ ಯೋಜನೆಯಿಂದ ಯುವಜನರಿಗೆ ಅನುಕೂಲವಾಗಿದೆ.

* ನೋಟು ರದ್ದತಿಯಿಂದ ಭಯೋತ್ಪಾದನೆ ತಡೆಯಲು ಸಾಧ್ಯ ಅಂದಿದ್ರು...

– ನೋಟು ರದ್ದತಿಯ ನಂತರ ಜಾರ್ಖಂಡ್ ಹೊರತುಪಡಿಸಿ ಬೇರೆಲ್ಲಿಯೂ ನಕ್ಸಲ್ ಚಳವಳಿ ನಡೆದಿಲ್ಲ. ನಕ್ಸಲ್‌ಪೀಡಿತ ಪ್ರದೇಶಗಳಿಂದ ₹3 ಸಾವಿರ ಕೋಟಿ ವಶಪಡಿಸಿಕೊಳ್ಳಲಾಗಿದೆ. ಕಾಶ್ಮೀರದಲ್ಲಿ ದುಡ್ಡುಕೊಟ್ಟು ಕಲ್ಲುತೂರಾಟ ಮಾಡಿಸುವ ಕೆಲಸ ಆಗುತ್ತಿತ್ತು. ಅದೂ ನಿಂತು ಹೋಯಿತು. 15 ದಿನಗಳಲ್ಲಿ ಶಾಲೆ–ಕಾಲೇಜು ಶುರುವಾಯಿತು. ನೋಟು ರದ್ದತಿಯ ನಂತರ ನಕ್ಸಲ್, ಭಯೋತ್ಪಾದನೆ ಕಡಿಮೆಯಾಯಿತು.

ಕಾಶ್ಮೀರದಲ್ಲಿ ಉಗ್ರರ ದಾಳಿ ಆಗಿದೆ. ಅದರೆ ಕಾಶ್ಮೀರದಿಂದ ಹೊರಗೆ ಭಯೋತ್ಪಾದಕರ ಕೃತ್ಯಗಳು ನಡೆಯಲಿಲ್ಲ. ಕಾಶ್ಮೀರ ಭಯೋತ್ಪಾದನೆಯ ಕೇಂದ್ರವಾಗಿದೆ. ಅದನ್ನು ನಿಲ್ಲಿಸಲೆಂದೇ ನಿರ್ದಿಷ್ಟ ದಾಳಿ ನಡೆಸಿದ್ದು. ಅದನ್ನು ನಿಲ್ಲಿಸಲು ಹೊಸ ರೀತಿಯ ಆಲೋಚನೆಗಳನ್ನು ಅನುಷ್ಠಾನಕ್ಕೆ ತರಲಾಗಿದೆ. ಕಪ್ಪುಹಣವನ್ನು ತಡೆಯಲು ನೋಟು ರದ್ದತಿ ಒಂದು ಹೆಜ್ಜೆಯಾಗಿದೆ.

* ಪ್ರಧಾನಿಯವರದ್ದು ವಿದೇಶ ಪ್ರವಾಸವೇ ವಿದೇಶಾಂಗ ನೀತಿಯೇ?

– ಬಾಲಾಕೋಟ್ ದಾಳಿಯ ನಂತರ ವಿಶ್ವದ ಯಾವುದೇ ದೇಶ ಪಾಕಿಸ್ತಾನಕ್ಕೆ ಬೆಂಬಲ ನೀಡಲಿಲ್ಲ. ಎಲ್ಲರೂ ಪ್ರಧಾನಿ ತೆಗೆದುಕೊಂಡ ಕ್ರಮ ಸರಿ ಅಂತಲೇ ಹೇಳಿದರು. ಇದಕ್ಕೆ ಕಾರಣ ವಿವಿಧ ದೇಶಗಳನ್ನು ಸಂಚರಿಸಿ, ಅಲ್ಲಿನ ನಾಯಕರನ್ನು ಮಾತನಾಡಿಸಿದ್ದ ಪ್ರಧಾನಿಯವರ ಕ್ರಮ. ಬಾಲಾಕೋಟ್ ನಂತರ ಪಾಕಿಸ್ತಾನ ಏಕಾಂಗಿಯಾಯಿತು.

* ಅವರೊಬ್ಬರೇ ಹೋಗುತ್ತಾರೆ ಏಕೆ?

– ಅದು ಅವರ ವಿವೇಚನೆ. ಬೇಕು ಎನ್ನಿಸಿದರೆ ಜೊತೆಗೆ ಸಚಿವರನ್ನು ಕರೆದೊಯ್ಯುತ್ತಾರೆ.

* ನೋಟು ರದ್ದತಿ ಹಠಾತ್ ಮಾಡಿದ್ದು ಏಕೆ?

– ಎಲ್ಲವನ್ನೂ ಕೇಳಿ ಮಾಡಲು ಆಗುವುದಿಲ್ಲ. ಅವರು ಸಂಪುಟ ಸಭೆ ಕರೆದು, ನಮ್ಮನ್ನು ಅರ್ಧಗಂಟೆ ಕುಳಿತಿರಿ ಅಂತ ಹೇಳಿ ನಂತರ ಹೊರಗೆ ಹೋಗಿ ದೇಶದ ಜನರನ್ನು ಉದ್ದೇಶಿಸಿ ಮಾತನಾಡಿ ಬಂದರು. ಅವರು ದೇಶದ ಹಿತಾಸಕ್ತಿಯಿಂದ ತೆಗೆದುಕೊಳ್ಳುವ ಗಟ್ಟಿ ನಿರ್ಧಾರಗಳ ಕಾರಣದಿಂದಲೇ ಅವರು ವಿಶ್ವನಾಯಕರಾದರು.

* ಪ್ರಧಾನಿಯವರು ಕಣ್ಣಲ್ಲಿ ಕಣ್ಣಿಟ್ಟು ಮಾತನಾಡುವುದಿಲ್ಲ ಎಂಬ ಲೋಕಸಭೆ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆಯವರ ಹೇಳಿಕೆ ಮತ್ತು ಸಿಬಿಐನಲ್ಲಿ ಪ್ರಧಾನಿ ಹಸ್ತಕ್ಷೇಪದ ಬಗ್ಗೆ ಏನೆನ್ನುತ್ತೀರಿ?

– ಪ್ರಧಾನಿ ಕಚೇರಿಯಲ್ಲಿ ಪ್ರತಿ ಸಚಿವಾಲಯಕ್ಕೆ ಸಂಬಂಧಿಸಿದ ವಿವಿಧ ಹಂತದ ಅಧಿಕಾರಿಗಳಿರುತ್ತಾರೆ. ಪಾಲಿಸಿ ವಿಷಯಗಳು ಬಂದಾಗ ಪ್ರಧಾನಿ ನಮ್ಮನ್ನು ಕರೆಸಿ ಮಾತನಾಡುತ್ತಾರೆ. ಕೊನೆಯ ಹಂತದಲ್ಲಿ ಮಾತನಾಡ್ತಾರೆ ಬಿಟ್ಟರೆ ನಮ್ಮ ಕೆಲಸಗಳಲ್ಲಿ ಮಧ್ಯಪ್ರವೇಶಿಸುವುದಿಲ್ಲ. ನನಗೆ ಅನುಮಾನಗಳಿದ್ದರೆ ನಾನು ನೇರವಾಗಿ ಪ್ರಧಾನಿ ಜೊತೆಗೆ ಮಾತನಾಡುತ್ತೇವೆ. ಎಲ್ಲವನ್ನೂ ಮೋದಿಯೇ ಮಾಡುತ್ತಾರೆ, ನಮಗೆ ಸ್ವಾತಂತ್ರ್ಯ ಕೊಟ್ಟಿಲ್ಲ ಅನ್ನೋದು ಸುಳ್ಳು. ಮೋದಿ ದಿನದ 24 ಗಂಟೆಯೂ ದೇಶದ ಬಗ್ಗೆ ಯೋಚನೆ ಮಾಡುತ್ತಾರೆ. ವಿರೋಧ ಪಕ್ಷದ ಸ್ಥಾನಮಾನ ಗಳಿಸಲು ಸಾಧ್ಯವಾಗದ ನಾಯಕರು ಹೀಗೆ ಮಾತನಾಡೋದು ಎಷ್ಟು ಸೂಕ್ತ ಅಂತ ಜನರೇ ತೀರ್ಮಾನ ಮಾಡಲಿದ್ದಾರೆ.

ಸಿಬಿಐನಲ್ಲಿ ಅಧಿಕಾರಿಗಳ ಒಳಜಗಳದಿಂದ ಸ್ವಾಯತ್ತ ಸಂಸ್ಥೆ ಕೆಡುತ್ತೆ ಅಂದಾಗ ಪ್ರಧಾನಿ ಮಧ್ಯಪ್ರವೇಶಿಸುವುದು ಅನಿವಾರ್ಯವಾಯಿತು. ಸಿವಿಸಿ ಜೊತೆ ಸಮಾಲೋಚಿಸಿ ಮುಂದಿನ ಹೆಜ್ಜೆ ಇಟ್ಟಿದ್ದಾರೆ. ಕಳ್ಳರನ್ನು ಹಿಡಿದಾಗ ಆಡಳಿತ ಪಕ್ಷದ ಮೇಲೆ ಗೂಬೆ ಕೂಡಿಸುವುದು ಸ್ವಾಭಾವಿಕ. ಕಳೆದ ಐದು ವರ್ಷಗಳಲ್ಲಿ ಯಾವುದಾದರೂ ಮಂತ್ರಿ ಹಣ ದುರುಪಯೋಗ ಮಾಡಿದ ಆರೋಪ ಇದೆಯಾ? ಕಾಂಗ್ರೆಸ್ ಕಾಲದಲ್ಲಿ ಹೇಗಿತ್ತು? ಮೊಬೈಲ್ ತರಂಗ ಕದಿಯುವ ಕೆಲಸ ಮಾಡಿದವರು ಹೀಗೆ ಹೇಳುತ್ತಾರೆ. ಉತ್ತರ ಪ್ರದೇಶ, ಪಶ್ಚಿಮ ಬಂಗಾಳದಲ್ಲಿ ಕಾಂಗ್ರೆಸ್‌ಗೆ ಬಾಗಿಲು ಹಾಕಿದೆ.

ಕಾಂಗ್ರೆಸ್ ಹೇಳುವಂತೆ ಎಲ್ಲಕ್ಕೂ ಪ್ರಧಾನಿಯೇ ಉತ್ತರ ಹೇಳಬೇಕು ಅಂದ್ರೆ ಸಚಿವರು ಏಕೆ ಇರಬೇಕು?

* ಪ್ರಧಾನಿ ನರೇಂದ್ರ ಮೋದಿಯವರ ದೌರ್ಬಲ್ಯಗಳೇನು?

– ನಾನು ಪ್ರಧಾನಿಯವರ ಬಗ್ಗೆ ಮಾತನಾಡುವುದಿಲ್ಲ. ನರೇಂದ್ರ ಮೋದಿಯ ದೌರ್ಬಲ್ಯ ಕಂಡುಹಿಡಿಯುವಷ್ಟು ದೊಡ್ಡವನಲ್ಲ. ಅವರು ಐದು ವರ್ಷಗಳಲ್ಲಿ ಒಂದೂ ರಜೆ ತೆಗೆದುಕೊಳ್ಳಲಿಲ್ಲ, ಹಣ ಲೂಟಿ ಮಾಡಲಿಲ್ಲ. ವಿರೋಧ ಪಕ್ಷದವರು ದೇಶದ ಹಿತಾಸಕ್ತಿ ಬಗ್ಗೆ ಮಾತನಾಡುತ್ತಿಲ್ಲ. ವೈಯಕ್ತಿಕ ವಿಚಾರಗಳನ್ನು ಪ್ರಸ್ತಾಪಿಸಿ ಟೀಕೆ ಮಾಡುತ್ತಿವೆ. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ನಾನು ವಿರೋಧ ಪಕ್ಷದ ನಾಯಕನಾಗಿದ್ದೆ. ಬಜೆಟ್ ಬಗ್ಗೆ ಮಾತನಾಡುವಾದ ಸಿದ್ದರಾಮಯ್ಯ ಅವರ ಬಗ್ಗೆ ವೈಯಕ್ತಿಕವಾಗಿ ಮಾತನಾಡಲಿಲ್ಲ. ಆದರೆ ಬಜೆಟ್‌ನ ಲೋಪದೋಷಗಳನ್ನು ಹೇಳಿದ್ದೆ. ಸಿದ್ದರಾಮಯ್ಯ ನಾನು ಕೊಟ್ಟ ಅಂಕಿಅಂಶ ಒಪ್ಪಿಕೊಂಡಿದ್ದರು. ನನಗೂ ಖುಷಿಯಾಯಾಗಿತ್ತು. ಅದು ಬಿಟ್ಟು ವಿರೋಧಪಕ್ಷಗಳು ನನ್ನ ಬಟ್ಟೆ ಬಗ್ಗೆ, ನಗುವಿನ ಬಗ್ಗೆ ಮಾತನಾಡಿದ್ರೆ ಏನು ಪ್ರಯೋಜನ?

ಹಿಂದೆ ಪ್ರತಿಪಕ್ಷ ಅಂತ ಕರೀತಿದ್ದರು. ಈಗ ಕೇವಲ ವಿರೋಧ ಪಕ್ಷ ಮಾತ್ರ ಇದೆ. ಎಲ್ಲವನ್ನೂ ವಿರೋಧಿಸುವ ಪಕ್ಷ ಇದಾಗುತ್ತಿದೆ. ಇಂದಿರಾಗಾಂಧಿಯನ್ನು ಅಟಲ್‌ಜಿ ದುರ್ಗಾದೇವಿಗೆ ಹೋಲಿಸಿದ್ದರು. ಅವರೂ ಆಗ ಪ್ರತಿಪಕ್ಷದಲ್ಲಿಯೇ ಇದ್ದರು. ಆದರೆ ಇಂದು ಇವರ ಕಥೆ ಏನಾಗಿದೆ. ಮೊಸರಿನಲ್ಲಿ ಕಲ್ಲು ಹುಡುಕಿದಂತೆ ಆಗುತ್ತಿದೆ.

* ಸಾಕಷ್ಟು ಉದ್ಯೋಗ ಸೃಷ್ಟಿ ಆಗಿದೆ ಎನ್ನುತ್ತೀರಾ?

– ಉದ್ಯೋಗವನ್ನು ಎರಡು ರೀತಿ ಅಂದಾಜು ಮಾಡುತ್ತೇವೆ. ಒಂದು ಪಿಎಫ್ ಮತ್ತೊಂದು ಅಸಂಘಟಿತ ಕಾರ್ಮಿಕರು. ಬ್ಯಾಂಕ್ ಲೋನ್ ಆಧರಿಸಿಯೂ ಉದ್ಯೋಗ ಅಂದಾಜು ಮಾಡುತ್ತೇವೆ. ನನ್ನ ಜೊತೆ 6500 ಉದ್ಯೋಗಿಗಳಿದ್ದಾರೆ. ಚುನಾವಣೆ ಘೋಷಣೆಯಾದ ಕಾರಣ ಅಧಿಕೃತ ಅಂಕಿಅಂಶ ಹೊರಗೆ ಬರಲಿಲ್ಲ. ಅಂಕಿಅಂಶಗಳ ಆಯೋಗದ ಮುಖ್ಯಸ್ಥರು ರಾಜೀನಾಮೆಯಿಂದ ಪ್ರಕಟಿಸಲು ಆಗಲಿಲ್ಲ. ಮುದ್ರಾ ಯೋಜನೆಯಿಂದ 14 ಕೋಟಿ ಜನರಿಗೆ ಉದ್ಯೋಗ ಸಿಕ್ಕಿದೆ. ಮೈಸೂರು–ಬೆಂಗಳೂರು ಹೆದ್ದಾರಿಯಲ್ಲಿ 6000 ಜನರಿಗೆ ಉದ್ಯೋಗ ಸಿಕ್ಕಿದೆ.

* ಪಕೋಡ ಮಾರುವುದು ಸ್ವ ಉದ್ಯೋಗ ಎಂದು ಭಾವಿಸುತ್ತೀರಾ?

– ಪಕೋಡ ಮಾಡುವುದು ಒಂದು ಸ್ವ ಉದ್ಯೋಗ ಅಂತ ನನಗೆ ಅನ್ನಿಸುತ್ತದೆ. ಯಾವುದರಿಂದ ಜೀವನ ಮಾಡಲು ಕೆಲಸ ಮಾಡುತ್ತೇವೋ ಅವೆಲ್ಲವೂ ಸ್ವ ಉದ್ಯೋಗ.

* 2020ಕ್ಕೆ ನಿರುದ್ಯೋಗ ಮಟ್ಟ ಹೆಚ್ಚಾಗುತ್ತದೆ ಎಂಬುದನ್ನು ಒಪ್ಪುತ್ತೀರಾ?

– ನಾನು ಅದನ್ನು ನಿರಾಕರಿಸುವುದಿಲ್ಲ. ಸಾಂಖ್ಯಿಕ ಇಲಾಖೆ ವರದಿ ಪ್ರಕಟವಾಗುವವರೆಗೆ ಅಧಿಕೃತವಾಗಿ ಏನೂ ಹೇಳಲು ಆಗುವುದಿಲ್ಲ. ಹೊಸ ಸರ್ಕಾರ ಅದನ್ನು ಜನರ ಮುಂದೆ ಇಡಲಿದೆ.

* ಪ್ರಧಾನಿ ಯಾಕೆ ಮಾಧ್ಯಮಗಳ ಮುಂದೆ ಮಾತನಾಡುವುದಿಲ್ಲ?

* ಈಗ ಸಾಮಾಜಿಕ ಮಾಧ್ಯಮ ಪ್ರಭಾವಶಾಲಿಯಾಗಿದೆ. ಒಂದು ಕಾಲದಲ್ಲಿ ರೇಡಿಯೋ, ನಂತರ ಮುದ್ರಣ, ಎಲೆಕ್ಟ್ರಾನಿಕ್ ಮೀಡಿಯಾ ಬಂತು. ಹಲವಾರು ಜನ ಕೆಲಸ ಮಾಡುವವರು ಟಿವಿ ಮುಂದೆ ಕೂರಲು ಆಗದು. ಸಾಮಾಜಿಕ ಮಾಧ್ಯಮಗಳಲ್ಲಿ ತಕ್ಷಣದ ಮಾಹಿತಿ ದೊರೆಯುತ್ತದೆ. ಕಾಲಕ್ಕೆ ತಕ್ಕಂತೆ ಪ್ರಧಾನಿ ಅಪ್‌ಡೇಟ್ ಆಗ್ತಿದ್ದಾರೆ. ಅವರಿಗೆ ಸಾಮಾಜಿಕ ಮಾಧ್ಯಮಗಳಲ್ಲಿ ದೊಡ್ಡ ಹಿಂಬಾಲಕರಿದ್ದಾರೆ. ಮಾಧ್ಯಮಗಳ ಎದುರು ಹೋಗಿ ಮಾತನಾಡಿದರೆ ಮಾತ್ರ ಯಾವುದೋ ಕೆಲಸ ಯಶಸ್ವಿ ಅಂತ ಹೇಳಲು ಆಗದು. ಪ್ರಧಾನಿ ಅನುಸರಿಸುವ ಕ್ರಮವೇ ಸರಿ.

ಇನ್ನು ಪ್ರಧಾನಿಗೆ ನೇರವಾಗಿ ಪ್ರಶ್ನೆಗಳನ್ನು ಎದುರಿಸಲು ಅವಶ್ಯಕತೆಯೇ ಬಂದಿಲ್ಲ. ಮಾಧ್ಯಮದವರು ಪ್ರಶ್ನೆ ಕೇಳೋದು, ಅದಕ್ಕೆ ಉತ್ತರ ಕೇಳಲು ಆಗದೆ ತಡಕಾಡುವುದು ಜನರಿಗೆ ಇಷ್ಟವಾಗಬಹುದು. ಆದರೆ ಅದೇ ಸರ್ವಸ್ವ ಅಲ್ಲ. ತಂತ್ರಜ್ಞಾನ ಸುಧಾರಣೆಯಾದ ಹಾಗೆ ನಾವೂ ಬದಲಾಗುತ್ತೇವೆ.

* ಪ್ರತಿಯೊಬ್ಬರ ಖಾತೆಗೆ ₹15 ಲಕ್ಷ ಹಾಕುವ ಪ್ರಧಾನಿ ಭರವಸೆ ಬಗ್ಗೆ...

– ಮೋದಿ ಮಾತನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಿ. ₹15 ಲಕ್ಷ ನೇರವಾಗಿ ನಿಮ್ಮ ಖಾತೆಗೆ ಬರುತ್ತೆ ಅಂತ ಅವರ ಮಾತಿನ ಅರ್ಥವಲ್ಲ. ಈಗ ತೆರಿಗೆ ಸಂಗ್ರಹ ಸರಿಯಾಗಿ ಆಗ್ತಿದೆ, ತೆರಿಗೆ ಪಾವತಿದಾರರ ಸಂಖ್ಯೆ ಹೆಚ್ಚಾಗಿದೆ. ಇದರಿಂದ ಆರ್ಥಿಕ ಸ್ಥಿತಿ ಸುಧಾರಿಸುತ್ತಿದೆ. ಕಪ್ಪುಹಣ ವಿದೇಶದಿಂದ ದೇಶಕ್ಕೆ ಬಂದರೆ ಆರ್ಥಿಕ ಸ್ಥಿತಿ ಸುದಾರಿಸುತ್ತೆ ಎಂದು ಅದರ ಅರ್ಥ.

ಮೋದಿ ಅಧಿಕಾರಕ್ಕೆ ಬಂದ ತಕ್ಷಣ ಕಪ್ಪುಹಣ ನಿಗ್ರಹಕ್ಕೆ ಎಸ್‌ಐಟಿ ಆರಂಭಿಸಿದರು. ನಾವು ಜವಾಬ್ದಾರಿ ನಿರ್ವಹಿಸಿದ್ದೇವೆ.

* ನಿಮ್ಮ ಸಾಧನೆ ಬಗ್ಗೆ ಏನೆನ್ನುತ್ತೀರಿ?

– ನನ್ನ ಪರೀಕ್ಷೆಯ ರಿಪೋರ್ಟ್‌ ಕಾರ್ಡ್‌ ಜನರ ಮುಂದೆ ಇಟ್ಟಿದ್ದೇನೆ. ನಾನು ವಾರದಲ್ಲಿ ಎರಡು ದಿನ ಮಾತ್ರ ಕ್ಷೇತ್ರದಲ್ಲಿ ಇರಲು ಸಾಧ್ಯ. ನನ್ನ 8 ವಿಧಾನಸಭಾ ಕ್ಷೇತ್ರಗಳಲ್ಲಿ 180 ಬಾರಿ ಪ್ರವಾಸ ಮಾಡಿದ್ದೇನೆ. ನಾನು ಮುಖ್ಯಮಂತ್ರಿಯಾಗಿದ್ದಾಗ ಬೆಳಿಗ್ಗೆ 6.15ಕ್ಕೆ ಕಚೇರಿಯಲ್ಲಿ ಇರುತ್ತಿದ್ದೆ. 8.15ಕ್ಕೆ ಸ್ನಾನಕ್ಕೆ ಹೋಗಿ, 9ಕ್ಕೆ ತಯಾರಿ ಆಗುತ್ತೇನೆ. ಯಾರು ಬಂದರೂ ನಾಳೆ ಬಾ ಅಂತ ಹೇಳಲ್ಲ. ನನ್ನ ಮಾದರಿ ಗ್ರಾಮ ದೇಶಕ್ಕೇ ಅತ್ಯುತ್ತಮ ಅಂತ ನೀವೇ ಬರೆದಿದ್ದೀರಿ. ಇನ್‌ಫೋಸಿಸ್ ಸೇರಿದಂತೆ ದಾನಿಗಳ ನೆರವಿನಿಂದ ಹಲವು ಶಾಲೆಗಳನ್ನು ಸುದಾರಿಸಿದ್ದೇನೆ.

ನಾನು ಈವರೆಗೆ ಯಾರಲ್ಲಿಯೂ ಕೋಪ ಮಾಡಿಕೊಳ್ಳಲಿಲ್ಲ. ನನ್ನ ಕ್ಷೇತ್ರದಲ್ಲಿ ಎರಡನೇ ಹೆಸರು ಬರಲೇ ಇಲ್ಲ. ನಾನು ರಾಜಕಾರಣಕ್ಕೆ ಬಂದು 25 ವರ್ಷವಾಯಿತು. ಹಲವು ಅಧಿಕಾರಿಗಳನ್ನು ನಿರ್ವಹಿಸಿದ್ದೇನೆ. ಈ ಸಲ ಬಿಟ್ಟುಬಿಡೋಣ ಅಂದುಕೊಂಡಿದ್ದೆ. ಆದರೆ ಪಕ್ಷದ ಹಿರಿಯರು ಹೆಳಿದ ಕಾರಣ ಈ ಬಾರಿ ಸ್ಪರ್ಧೆ ಮಾಡುತ್ತಿದ್ದೇನೆ. ನಾನು ನಡೆದ ರೀತಿ ಸರಿಯಿದೆ. ಹಾಗಿದ್ದರೆ ಮಾತ್ರ ನನಗೆ ರಾತ್ರಿ ನಿದ್ದೆ ಬರುತ್ತದೆ. ಇವತ್ತು ನಾಮಪತ್ರ ಸಲ್ಲಿಕೆ ವೇಳೆ ಸುಮಾರು 8 ಸಾವಿರ ಜನ ಬಂದಿದ್ದರು.

* ರಾಹುಲ್ ಗಾಂಧಿಯವರ ಕನಿಷ್ಠ ವೇತನ ಭರವಸೆ ಕುರಿತು ಏನು ಹೇಳುತ್ತೀರಿ?

– ರಾಹುಲ್ ಗಾಂಧಿ ಏನು ಘೋಷಣೆ ಮಾಡಿದರೂ ಅದು ಅನುಷ್ಠಾನವಾಗಲ್ಲ ಅಂತ ದೇಶಕ್ಕೇ ಗೊತ್ತಿದೆ. ಅವರ ಅಜ್ಜಿ ಗರೀಬಿ ಹಠಾವೋ ಅಂತ ಘೋಷಿಸಿ ಮೂರು ಸಲ ಕಾಂಗ್ರೆಸ್ ಗೆದ್ದಿತು. ಯಾರದು ಬಡತನ ಹೋಯಿತು ಅಂತ ಜನರಿಗೆ ಗೊತ್ತಿದೆ. ಕಾಂಗ್ರೆಸ್ ನಾಯಕರದ್ದು ಹೋಯಿತು. ಸದಾನಂದಗೌಡ ಸುಳ್ಳು ಹೇಳಿದರೂ ಜನರಿಗೆ ಗೊತ್ತಾಗುತ್ತದೆ. ಜನ ಬುದ್ಧಿವಂತರಾಗಿದ್ದಾರೆ.

* 2014ರಲ್ಲಿ ಕಾಂಗ್ರೆಸ್‌ಮುಕ್ತ ಭಾರತ ಎಂದಿದ್ದೀರಿ, ಸಾಧ್ಯವಾಯಿತೇ?

– ರಾಜಕಾರಣದಲ್ಲಿ ಪೊಲಿಟಿಕಲ್ ಸ್ಟ್ರಾಟಜಿ ಇರುತ್ತೆ. ಒಂದು ಹಂತದಲ್ಲಿ ’ಕಾಂಗ್ರೆಸ್ ಹಠಾವೋ‘ ಜನರ ಅಪೇಕ್ಷೆ ಆಗಿತ್ತು. ನಾವು ಗಾಂಧೀಜಿ ಹೇಳಿದ ಹಲವು ಆಶಯಗಳನ್ನು ಅನುಷ್ಠಾನಕ್ಕೆ ತಂದೆವು. ಅದೇ ರೀತಿ ಕಾಂಗ್ರೆಸ್ ಮುಕ್ತ ಭಾರತವೂ ಗಾಂಧಿ ಅವರ ಅಪೇಕ್ಷೆ ಆಗಿತ್ತು. ಪ್ರಯತ್ನ ಪಟ್ಟೆವು ಅಷ್ಟೆ.

* 2004ರಲ್ಲಿ ವಾಜಪೇಯಿ ಪ್ರಧಾನಿಯಾಗಿದ್ದಾಗ ಬಿಜೆಪಿಗೆ ಆದ ಸ್ಥಿತಿ ಮತ್ತೆ ಎದುರಾಗಬಹುದೇ?
 
– ಹಿಂದೆ ಇಂಡಿಯಾ ಶೈನಿಂಗ್ ಅಂತ ನಾವು ಹೇಳಿದ್ದೆವು. ಆದರೆ ಜನರನ್ನು ತಲುಪಲು ಆಗಲಿಲ್ಲ. ಈಗ ಹಾಗಲ್ಲ. ನಾವು ಹೇಳಿದ್ದನ್ನು ಮಾಡಿ ತೋರಿಸಿದ್ದೇವೆ.

ಅಟಲ್‌ಜಿ ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆ, ಕಿಸಾನ್ ಕ್ರೆಡಿಟ್ ಕಾರ್ಡ್, ಸರ್ವ ಶಿಕ್ಷಾ ಅಭಿಯಾನದ ಮೂಲಕ ಜನರಿಗೆ ಅನುಕೂಲ ಮಾಡಿಕೊಟ್ಟಿದ್ದರು. ನಮ್ಮ ಜಾಹೀರಾತುಗಳನ್ನು ಜನರು ನೋಡಲಿಲ್ಲ. ಆದರೆ ಈಗ ಪರಿಸ್ಥಿತಿ ಬದಲಾಗಿದೆ. ಸಾಮಾಜಿಕ ಮಾಧ್ಯಮಗಳ ಮೂಲಕ ಜನರಿಗೆ ನಮ್ಮ ಸಾಧನೆ ಮನವರಿಕೆ ಮಾಡಿಕೊಟ್ಟಿದ್ದೇವೆ.

* ತೇಜಸ್ವಿನಿ ಅನಂತಕುಮಾರ್‌ಗೆ ಟಿಕೆಟ್ ಘೋಷಣೆಯಾಗದ ಬಗ್ಗೆ...

– ಬೆಂಗಳೂರು ದಕ್ಷಿಣದಿಂದ ತೇಜಸ್ವಿನಿ ಅನಂತಕುಮಾರ್ ಅವರ ಹೆಸರು ನಾವು ಶಿಫಾರಸು ಮಾಡಿದ್ದೆವು. ಈವರೆಗೆ ಯಾಕೆ ಹೆಸರು ಘೋಷಿಸಿಲ್ಲ ಅಂತ ನಾನು ಹೇಳಲು ಸಾಧ್ಯವಿಲ್ಲ. ಪ್ರಧಾನಿ ಬೆಂಗಳೂರಿನಿಂದ ಸ್ಪರ್ಧಿಸುವ ಬಗ್ಗೆ ನಮಗೆ ಯಾವುದೇ ಸೂಚನೆ ಬಂದಿಲ್ಲ.

*ದೇವೇಗೌಡರ ಜತೆ ಒಳಒಪ್ಪಂದ ಮಾಡಿಕೊಂಡಿದ್ದೀರಿ ಎಂಬ ಆರೋಪವಿದೆಯಲ್ಲ?

– ದೇವೇಗೌಡರ ಜೊತೆಗೆ ಒಳಒಪ್ಪಂದ ಅಂದರೆ ಖುಷಿಯಾಗುತ್ತದೆ. ನನಗೆ ಅಷ್ಟೊಂದು ಶಕ್ತಿ ಇದೆ ಅಂತ ನೀವು ನಂಬುತ್ತೀರಲ್ಲಾ? ನಾನು ಕರಾವಳಿ ಗೌಡ. ಈ ಕಡೆ ಹಳೇ ಮೈಸೂರು ಭಾಗದವನಲ್ಲ. ದೇವೇಗೌಡರು ಬಂದಿದ್ದರೂ ಅವರ ಬಗ್ಗೆ ಗೌರವ ಇದೆ. ಅದರೆ ಭಯ ಇಲ್ಲ. ಇದನ್ನು ಹಿಂದೆಯೂ ಹೇಳಿದ್ದೇನೆ.

ನಾನು ಸುಳ್ಯ ತಾಲ್ಲೂಕಿನವನು. ನನ್ನ ಪಕ್ಷ ಪುತ್ತೂರಿನಲ್ಲಿ ಸ್ಪರ್ಧಿಸುವಂತೆ ಹೇಳಿತು. ಸ್ಪರ್ಧಿಸಿ ಗೆದ್ದೆ. ನಂತರ ಕೊಡಗು–ಮಂಗಳೂರಿನಲ್ಲಿ ಸ್ಪರ್ಧಿಸಿದೆ. ಅನಿವಾರ್ಯ ಪರಿಸ್ಥಿತಿಯಲ್ಲಿ ಉಡುಪಿ–ಚಿಕ್ಕಮಗಳೂರು ಕ್ಷೇತ್ರದಲ್ಲಿ ಸ್ಪರ್ಧಿಸಿದೆ. ನಂತರ ಬೆಂಗಳೂರಿಗೆ ಬಂದೆ. ಬೆಂಗಳೂರು ಉತ್ತರದಲ್ಲಿ 30 ಲಕ್ಷ ಮತದಾರರು ಇದ್ದಾರೆ. ಇದು ದೇಶದ 2ನೇ ದೊಡ್ಡ ಕ್ಷೇತ್ರ. ನಾನು ವಲಸೆ ಆಗಬಾರದು. ಇಲ್ಲೇ ನಿಲ್ಲಬೇಕು ಅಂತ ಈ ಸಲ ನಿಂತೆ.

ಪಕ್ಷದ ಕೆಲ ಅಭ್ಯರ್ಥಿಗಳು ಲೋಕಸಭೆಗೆ ಆಯ್ಕೆಯಾಗುವ ಸಾಧನೆ ಮಾಡಿಲ್ಲ. ಆದರೆ ಮೋದಿಯೇ ನಮ್ಮ ಶಕ್ತಿ. ಶೇ50ರಷ್ಟು ಮತಗಳು ಮೋದಿಯಿಂದಲೇ ಬರುತ್ತವೆ.

* ರಾಜ್ಯದಲ್ಲಿ ಎಷ್ಟು ಸ್ಥಾನ ಗೆಲ್ಲಲಿದ್ದೀರಿ? ಬಿಜೆಪಿ ಒಂದಂಕಿ ದಾಟಲಾರದು ಎಂಬ ಸಿದ್ದರಾಮಯ್ಯನವರ ಹೇಳಿಕೆ ಬಗ್ಗೆ ಏನೆನ್ನುತ್ತೀರಿ?

– ರಾಜ್ಯದ 28ರ ಪೈಕಿ 22 ಸ್ಥಾನಗಳನ್ನು ನಾವು ಗೆಲ್ಲಲಿದ್ದೇವೆ. ಈ ಚುನಾವಣೆ ರಾಷ್ಟ್ರೀಯ ವಿಷಯಗಳ ಮೇಲೆ ನಡೆಯುತ್ತವೆ. ಸ್ಥಳೀಯ ವಿಷಯಗಳ ಮೇಲೆ ನಡೆಯುವುದಿಲ್ಲ. ಸಿದ್ದರಾಮಯ್ಯ ಹೇಳಿದ್ದು ಅವರ ಮೂಡ್‌ನಲ್ಲಿ ಸರಿಯಿರಬಹುದು. ಆದರೆ ಈಗ ಕಾಲ ಬದಲಾಗಿದೆ.

* ಯಡಿಯೂರಪ್ಪನವರ ನಾಯಕತ್ವ ಒಪ್ಪಿಕೊಳ್ಳುತ್ತೀರಾ?

– ಯಡಿಯೂರಪ್ಪ ಒಬ್ಬ ಮಾಸ್ ಲೀಡರ್. ಒಬ್ಬ ವ್ಯಕ್ತಿ ಅಂದ ಮೇಲೆ ಒಳ್ಳೆಯದು–ಕೆಟ್ಟದ್ದು ಅಂತ ಇರುತ್ತದೆ. ನಾವು ಮನಃಪೂರ್ವಕ ಪ್ರಾರ್ಥನೆ ಮಾಡುವುದು ದೇವರನ್ನೇ. ಯಡಿಯೂರಪ್ಪ ಅವರ ಹೋರಾಟ, ನಡೆದುಬಂದ ದಾರಿ ಎಲ್ಲವನ್ನೂ ನೋಡಿದಾಗ ಅವರು ರಾಜ್ಯದ ‘ನಂಬರ್ 1’ ನಾಯಕ ಎಂಬುದರಲ್ಲಿ ಅನುಮಾನವಿಲ್ಲ.

* ಯಡಿಯೂರಪ್ಪನವರ ಉತ್ತರಾಧಿಕಾರಿ ಯಾರಾಗಲಿದ್ದಾರೆ?

– ಯಡಿಯೂರಪ್ಪ ಅ ಸ್ಥಾನದಿಂದ ಹಿಂದೆ ಬರುತ್ತಾರೆ ಅಂದ ಮೇಲೆ ಉತ್ತರಾಧಿಕಾರಿ ಪ್ರಶ್ನೆ ಬರುವುದು. ಯಡಿಯೂರಪ್ಪ ವಿಚಾರದಲ್ಲಿ ಈ ಪ್ರಶ್ನೆ ಬೇಡ.

* ಕುಟುಂಬ ರಾಜಕಾರಣದ ಬಗ್ಗೆ...

– ಮುಗು ಹುಟ್ಟಿದಾಗಲೇ ಇದು ಮುಂದಿನ ಪ್ರಧಾನಿ, ಮುಖ್ಯಮಂತ್ರಿ ಅಂತ ಘೋಷಿಸುವ ಮನಃಸ್ಥಿತಿ ಯಾರಲ್ಲೂ ಇರಬಾರದು. ವಂಶಾಡಳಿತ ಸರಿಯಲ್ಲ. ಹಾಗೆಂದು ಸ್ವಾರ್ಥ ಇಲ್ಲದ ಮನುಷ್ಯ ಇರುವುದೇ ಇಲ್ಲ. ಅದಕ್ಕೆ ಯಾರೂ ಹೊರತಲ್ಲ. ಆದರೆ ಅದು ಅತಿಯಾಗಬಾರದು.

* ಶೋಭಾ ಕರಂದ್ಲಾಜೆಗೆ ಟಿಕೆಟ್ ನೀಡಿದ ಬಗ್ಗೆ ಚರ್ಚೆಯಾಗುತ್ತಿದೆಯಲ್ಲ?

– ಚರ್ಚೆಗಳು ಸಾಮಾನ್ಯ. ಆದರೆ ಚರ್ಚೆಯ ನಂತರ ಉತ್ತಮ ಅಭ್ಯರ್ಥಿಯನ್ನು ಆಯ್ಕೆ ಮಾಡುತ್ತಾರೆ. ಕೋರ್ ಕಮಿಟಿಗೆ ಶೋಭಾ ಗೆಲ್ಲುವ ಅಭ್ಯರ್ಥಿ ಅನ್ನಿಸಿತು. ಹೀಗಾಗಿ ಕೊಟ್ಟರು.

* ನಿಮಗೆ ಸಾಂಖ್ಯಿಕ ಖಾತೆ ನೀಡಿದ್ದು ಹಿನ್ನಡೆ ಅನಿಸಿತ್ತೇ?

– ಸಾಂಖ್ಯಿಕ ಖಾತೆ ಕಡಿಮೆ ಅಂತ ನನಗೆ ಯಾವತ್ತೂ ಅನ್ನಿಸಿಲ್ಲ. ದೇಶದ ಎಲ್ಲ ಕುಟುಂಬಗಳೂ ತಮ್ಮ ವಾರ್ಷಿಕ ಆದಾಯದ ಶೇ 15ರಿಂದ 30ರಷ್ಟನ್ನು ಆರೋಗ್ಯಕ್ಕೆ ಖರ್ಚು ಮಾಡುತ್ತಿರುವುದು ಸಮೀಕ್ಷೆಯಿಂದ ತಿಳಿದುಬಂದಿತ್ತು. ಆಯುಷ್ಮಾನ್ ಭಾರತ ಪ್ರಧಾನಿ ಘೋಷಿಸಿದ ಯೋಜನೆಯೇ ಆದರೂ ಅದಕ್ಕೆ ಬೆನ್ನೆಲುಬಾಗಿ ನಿಂತಿದ್ದು ನನ್ನ ಇಲಾಖೆ.

* ನಿಮ್ಮ ವಿರುದ್ಧದ ಷಡ್ಯಂತ್ರ ಮಾಡಿದವರನ್ನು ದೇಶದ್ರೋಹಿಗಳು ಅಂದಿದ್ದೀರಿ…

– ನನ್ನ ವಿರುದ್ಧದ ಸುದ್ದಿ ಹರಡುವವರು ದೇಶದ್ರೋಹಿಗಳು ಅನ್ನಲಿಲ್ಲ. ಸುಳ್ಳು ಸುದ್ದಿ ಹರಡುವವರು ದೇಶದ್ರೋಹಿ ಅಂತ ಮಹಾತ್ಮಾ ಗಾಂಧಿ ಹೇಳಿದ್ದಾರೆ ಆಂದಿದ್ದೆ ಅಷ್ಟೇ.

ಮಂಡ್ಯದಲ್ಲಿ ನಮ್ಮ ಶಕ್ತಿ ಕಡಿಮೆ. ಅಲ್ಲಿ ಜೆಡಿಎಸ್‌ ಈ ಸಲ ಸೋಲಲಿದೆ. ನಂತರ ಬಿಜೆಪಿ ಬರಲಿದೆ. ದೇವೇಗೌಡರು ಪ್ರಧಾನಿ– ಸದಾನಂದಗೌಡ ಮುಖ್ಯಮಂತ್ರಿ ಆಗುತ್ತಾರೆ ಅಂತ ಅಂದು ಯಾರೂ ಯೋಚಿಸಿರಲಿಲ್ಲ.

ರಾಜಕೀಯ ಜೀವನದ ಬಗ್ಗೆ ತೃಪ್ತಿ ಇದೆ

ಬಿಜೆಪಿ ಮೊದಲು ಅಧಿಕಾರಕ್ಕೆ ಬಂದಿದ್ದು ಸದಾನಂದಗೌಡರು ಬಿಜೆಪಿ ರಾಜ್ಯ ಅಧ್ಯಕ್ಷರಾಗಿದ್ದಾಗ ಅನ್ನುವ ಬಗ್ಗೆ ನನಗೆ ಹೆಮ್ಮೆಯಿದೆ. ನಾನು ಅತ್ಯಂತ ಸಂತೃಪ್ತ ರಾಜಕಾರಿಣಿ. ಕೇಂದ್ರಕ್ಕೆ ಹೋದಮೇಲೆ ಮತ್ತೆ ರಾಜ್ಯಕ್ಕೆ ಬರುವ ಆಲೋಚನೆ ಇಲ್ಲ. ಆದರೆ ಪಕ್ಷ ಹೇಳಿದರೆ ಯಾವುದೇ ಕೆಲಸ ಮಾಡಲು ಸಿದ್ಧ ಎಂದು ಸದಾನಂದ ಗೌಡರು ಹೇಳಿದರು.

ಗೆದ್ದರೆ ಬಿಜೆಪಿ ಸೇರಲಿದ್ದಾರೆ ಸುಮಲತಾ

ಮಂಡ್ಯ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಸುಮಲತಾ ಅವರು ಗೆದ್ದರೆ ನಂತರ ಬಿಜೆಪಿ ಸೇರುತ್ತಾರೆ. ಶೇ 99ರಷ್ಟು ನನ್ನ ಈ ಮಾತು ನಿಜವಾಗಲಿದೆ ಎಂದು ಅವರು ಅಭಿಪ್ರಾಯಪಟ್ಟರು.

ಪ್ರಾಮಾಣಿಕವಾಗಿ ಆಸ್ತಿ ಮಾಡಿದರೆ ತಪ್ಪಲ್ಲ

‘ನನ್ನ ಸಾಲ ಮತ್ತು ಆಸ್ತಿಯನ್ನು ಗಮನಿಸಿ. ನನ್ನ ನಂತರ ಮಕ್ಕಳು ಬದುಕಬೇಕು ಅಂತ ಆಸೆಪಡುವುದು ಸ್ವಾಭಾವಿಕ. ಮುಂದಿನ ಪೀಳಿಗೆ ನ್ಯಾಯಯುತವಾಗಿ ಬದುಕಬೇಕು ಅನ್ನೋ ಆಸೆಯೇ ತಪ್ಪೇ? ರಾಜಕಾರಿಣಿಗಳು ಆಸೆಯೇ ಪಡಬಾರದು, ಆಸ್ತಿ ಮಾಡಬಾರದು ಅನ್ನೋದು ತಪ್ಪು. ನಾವು ಕಷ್ಟಪಟ್ಟು ದುಡಿದಿದ್ದೀವೆ. ಬ್ಯಾಂಕ್‌ನಿಂದ ಸಾಲ ತಗೊಂಡಿದ್ದೇನೆ’; ರಾಜಕಾರಣಿಗಳು ಆಸ್ತಿ ಮಾಡುತ್ತಾರೆ ಎಂಬ ಆರೋಪಕ್ಕೆ ಸದಾನಂದ ಗೌಡ ಅವರು ಈ ರೀತಿ ಉತ್ತರ ನೀಡಿದರು.

ಬರಹ ಇಷ್ಟವಾಯಿತೆ?

 • 9

  Happy
 • 2

  Amused
 • 1

  Sad
 • 0

  Frustrated
 • 3

  Angry

Comments:

0 comments

Write the first review for this !