ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

PV Web Exclusive | ಅವನಿಗೂ ಮನಸಿದೆ, ಅವನವೇ ಸಂಕಟಗಳಿವೆ

ನಾಳೆ (ನ.19) ಅಂತರರಾಷ್ಟ್ರೀಯ ಪುರುಷರ ದಿನ
Last Updated 18 ನವೆಂಬರ್ 2020, 5:13 IST
ಅಕ್ಷರ ಗಾತ್ರ
ADVERTISEMENT
""

ನ. 19 ಅಂತರರಾಷ್ಟ್ರೀಯ ಪುರುಷರ ದಿನ. ಜಗತ್ತಿನಾದ್ಯಂತ ಪುರುಷರ ಆರೋಗ್ಯ, ಸಮಾನತೆ, ಸ್ಥಾನ–ಮಾನದ ಬಗ್ಗೆ ಜಾಗೃತಿ ಮೂಡಿಸಲು ಈ ದಿನವನ್ನು ಬಳಸಿಕೊಳ್ಳಲಾಗುತ್ತದೆ. ಅವನ ಭಾವಜಗತ್ತಿನ ಸುತ್ತ ಸಣ್ಣದೊಂದು ಕಳಕಳಿ...

***

ಅವನಿಗೆ ನೋವಾದಾಗ– ಹೇ ನೀನು ಗಂಡ್ಸು, ಅವನಿಗೆ ಸಂಕಟವಾದಾಗ– ಹೇ ನೀನು ಗಂಡ್ಸು, ಅವನಿಗೆ ಅವಮಾನವಾದಾಗ, ಅವನು ಸೋತಾಗ, ಕುಗ್ಗಿದಾಗ, ಕುಸಿದಾಗ... ಹೇಳುವುದು ಇದೊಂದೇ ಮಾತು…

ಗಂಡಸು ಅಳಬಾರದು, ಕುಸಿಯಬಾರದು, ಕಂಗಾಲಾಗಬಾರದು, ದಣಿಯಬಾರದು… ಗಂಡಸು ಕಲ್ಲಂತಿರಬೇಕು, ಆತ ಕಲ್ಲೇ ಆಗಬೇಕು ಅಂತಲ್ಲವೆ? ಅಥವಾ ತನ್ನನ್ನು ತಾನು ಕಲ್ಲಾಗಿ ಬಿಂಬಿಸಬೇಕು ಅಂತಾನಾ?

ಚಿಕ್ಕಂದಿನಿಂದಲೇ ಅವನೊಳಗೆ ಇಂಥದ್ದೊಂದು ಅಘೋಷಿತ ‘ಪುರುಷ ಲಕ್ಷಣ’ದ ಕಲ್ಪನೆಯನ್ನು ತುಂಬಲು ಹೋಗಿ ಎಂಥ ಸಂಕಟದಲ್ಲೂ ಆತ ಹನಿಗಣ್ಣಾಗದಂತೆ ಮಾಡಿಡುತ್ತೇವೆ. ಆತನೂ ಅದನ್ನೇ ನಂಬಿ, ಅದೇ ಸತ್ಯವೆಂದು ತಿಳಿಯುತ್ತಾನೇನೊ. ಅದಕ್ಕೇ ಇರಬೇಕು, ಸಂಕಟದ ಮೂಟೆ ಇದ್ದರೂ ಒಳಗೇ ಒತ್ತಿಟ್ಟು ಮೇಲೆ ಗಂಭೀರವದನನಾಗಿ ಕಾಣಲೆತ್ನಿಸುತ್ತಾನೆ.

ಆತ ಧೈರ್ಯಶಾಲಿಯಾಗಿರಬೇಕು, ಏನೇ ಬಂದರೂ ಎದೆಗೊಟ್ಟು ನಿಲ್ಲಬೇಕು ಎಂದು ಬಯಸುತ್ತ ಅವನ ಮೇಲೆ ಅವನದಲ್ಲದ ಜವಾಬ್ದಾರಿಗಳನ್ನೂ ಹೇರುತ್ತೇವೆ. ಕೆಲವೊಮ್ಮೆ ಅಂಥ ನಿರೀಕ್ಷೆಗಳಿಗೆ ಆಧಾರವೂ ಇರುವುದಿಲ್ಲ. ಸಣ್ಣದೊಂದು ಉದಾಹರಣೆ, ಮನೆಯಲ್ಲಿ ಇಲಿ, ಹಲ್ಲಿ ಕಂಡರೆ ಅವನೇ ಬಂದು ಓಡಿಸಬೇಕು, ಜಿರಳೆ ಬಂದರೆ ಅವನೇ ಹೊಡೆದು ಹೊರಹಾಕಬೇಕು. ಭಾರವಾದ ವಸ್ತುವನ್ನೆತ್ತಲು ಅವನೇ ಬೇಕು...ಯಾಕೆ? ಇಲಿ, ಹಲ್ಲಿ, ಜಿರಳೆಗಳ ಬಗ್ಗೆ ಅವನಿಗೂ ಹೇವರಿಕೆಗಳಿರಬಹುದು, ದೈಹಿಕವಾಗಿ ಕೃಶನಾಗಿದ್ದಲ್ಲಿ, ಅಂಥವನಿಗೆ ಭಾರ ಎತ್ತುವುದು ಆಗದಿರಬಹುದು... ಯಾಕೆ ಇದನ್ನೆಲ್ಲಾ ಯೋಚಿಸುವುದಿಲ್ಲ? ಅವನೂ ಸುಮ್ಮನೇ ಒಪ್ಪಿಕೊಳ್ಳುತ್ತಾನೆ. ತಾನು ಗಂಡಸು ಎನ್ನುವ ಹೇರಿಕೆಗೆ ತಲೆಬಾಗಿ...

ಹೌದು, ‘ಹೆಣ್ಣು ಹೀಗೇ ಇರಬೇಕು’ ಎಂದು ಕಟ್ಟಪ್ಪಣೆಗಳನ್ನು ವಿಧಿಸಿದಂತೆಯೇ ಗಂಡಿನ ಮೇಲೂ ಕೆಲವು ಇತಿಮಿತಿಗಳನ್ನು ಹೇರಲಾಗಿದೆ. ಆದರೆ ಆಧುನಿಕ ಸ್ತ್ರೀ ತನ್ನ ಸುತ್ತ ಕೊರೆದ ಗೆರೆಯನ್ನು ದಾಟಿ ಆಚೆ ಬಂದಿದ್ದಾಳೆ (ಬರುತ್ತಿದ್ದಾಳೆ). ಆದರೆ ಅವನು? ಅವನು ಮಾತ್ರ ಇನ್ನೂ ಆ ರೇಖೆಯನ್ನು ದಾಟಿಲ್ಲ ಅನ್ನಿಸುತ್ತದೆ.

ಈ ಮಾತು ಊಹೆಯಷ್ಟೇ ಅಲ್ಲ, ಸಮಾಜದಲ್ಲಿ, ಕುಟುಂಬದಲ್ಲಿ, ಕಚೇರಿಯಲ್ಲಿ ಸ್ತ್ರೀಗೆ ದೊರೆಯುವ ಕಾಳಜಿ, ಅನುಕಂಪ, ಕನಿಕರ, ಸಹಾನುಭೂತಿ ಯಾವುದೂ ಅವನಿಗೆ ದೊರೆಯುತ್ತಿಲ್ಲ. ಅಷ್ಟೇ ಯಾಕೆ, ಮಹಿಳೆಯ ಹಕ್ಕು–ಬಾಧ್ಯತೆಗಳ ಬಗ್ಗೆ ವಹಿಸುವ ಕಾಳಜಿ ಅವನ ಹಕ್ಕುಗಳ ಬಗ್ಗೆ ಇಲ್ಲ. ಮಹಿಳೆಯ ಮೇಲೆ ನಡೆಯುವ ಅನ್ಯಾಯ, ಅತ್ಯಾಚಾರ, ದೌರ್ಜನ್ಯಗಳನ್ನು ಎಷ್ಟು ಗಂಭೀರವಾಗಿ ತೆಗೆದುಕೊಳ್ಳಲಾಗುತ್ತದೆಯೊ ಅದೇ ಧೋರಣೆ ಅವನ ಮೇಲೆ ನಡೆಯುವ ದೌರ್ಜನ್ಯಗಳ ಬಗ್ಗೆ ಇಲ್ಲ. ಹೀಗಾಗೇ ಅವು ದಾಖಲಾಗುವುದೂ ಇಲ್ಲ. ಮಾತ್ರವಲ್ಲ, ಗಂಡಿನ ಮೇಲೆ ನಡೆಯುವ ದೌರ್ಜನ್ಯಗಳ ಸ್ಪಷ್ಟ ಲೆಕ್ಕಾಚಾರವೂ ಸಿಗುವುದಿಲ್ಲ.

ವಾಸ್ತವದಲ್ಲಿ ಅವನನ್ನು, ಅವನ ಸಮಸ್ಯೆಗಳನ್ನು ಒಳಗೊಳ್ಳದೆ, ಸಾಮಾಜಿಕ ಸವಾಲುಗಳನ್ನು ಜಯಿಸಲಾಗದು, ಒಟ್ಟು ಸಮಾಜದ ನೈಜ ಪ್ರಗತಿಯನ್ನು ಸಾಧಿಸಲಾಗದು ಎನ್ನುವುದು ಅನೇಕ ಸಲಹೆಗಾರರ, ಚಿಕಿತ್ಸಕರ ವಾದ.

ಒಂದು ಸಮಾಜ ಎಂದರೆ ಅಲ್ಲಿ ಸ್ತ್ರೀ–ಪುರುಷರನ್ನು ಸಮಾನವಾಗಿ ಕಾಣಬೇಕು, ಇಬ್ಬರನ್ನೂ ಸಮಾನ ಗೌರವದಿಂದ ಕಾಣಬೇಕು ಎನ್ನುವ ಆಶಯ ಹೊಂದಿರುವ ಸೇವ್ ಇಂಡಿಯನ್ ಫ್ಯಾಮಿಲಿ ಫೌಂಡೇಶನ್ (ಎಸ್‌ಐಎಫ್‌ಎಫ್) ಪುರುಷರ ಸಮಸ್ಯೆಗಳನ್ನು ಬೆಳಕಿಗೆ ತರುವ ಕೆಲಸ ಮಾಡುತ್ತಿದೆ.

ಕೌಟುಂಬಿಕ ದೌರ್ಜನ್ಯ

ಕೌಟುಂಬಿಕ ದೌರ್ಜನ್ಯದ ವಿಷಯ ಬಂದಾಗ ಮಹಿಳೆಯರನ್ನು ಮಾತ್ರ ಬಲಿಪಶುಗಳನ್ನಾಗಿ ಕಾಣುವ ಪರಿಪಾಠವಿದೆ. ನಿಜಾಂಶದಲ್ಲಿ ಪುರುಷನೇ ಬಲಿಪಶುವಾಗಿದ್ದರೂ ಅದು ಮುಚ್ಚಿ ಹೋಗುತ್ತದೆ.

ಭಾರತದಲ್ಲಿ ಕೌಟುಂಬಿಕ ದೌರ್ಜನ್ಯಕ್ಕೆ ಬಲಿಯಾಗುವ ಪುರುಷರ ಸಂಖ್ಯೆ ಅಂದಾಜು 3 ಕೋಟಿ ತಲುಪುತ್ತದೆ. ಪೊಲೀಸರಿಂದ ಅವರಿಗೆ ರಕ್ಷಣೆ ಅಥವಾ ಸಹಾಯ ಸಿಗುವುದೂ ದುರ್ಲಭ. ಸಹಾಯ ಕೋರಿ ಹೋದಾಗ ಅವರ ಮೇಲೆಯೇ ಅನುಮಾನ ಪಟ್ಟ, ಬೆದರಿಕೆ ಹಾಕಿದ, ಪ್ರಕರಣ ತಿರುಚಿದ ಉದಾಹರಣೆಗೂ ಸಾಕಷ್ಟಿವೆ. ಕೌಟುಂಬಿಕ ಹಿಂಸಾಚಾರಕ್ಕೆ ಬಲಿಯಾದ ಎಷ್ಟೋ ಪುರುಷರು ಮಾನಸಿಕ ಬೆಂಬಲ, ಕಾನೂನು ಸಹಾಯ ಸಿಗದೇ ಆಘಾತ ಮತ್ತು ಖಿನ್ನತೆಯಿಂದ ಬದುಕಿಗೆ ವಿದಾಯ ಹೇಳಿದ್ದೂ ಇದೆ. ವೈವಾಹಿಕ ಜೀವನದಲ್ಲಿ ಬಿರುಕು ಮೂಡಿದಾಗಲೂ ಅಷ್ಟೇ, ಶೇ 7ರಷ್ಟು ಪುರುಷರು ತಮ್ಮ ಮಕ್ಕಳನ್ನು ಮುದ್ದಾಡುವ ಅವಕಾಶಗಳಿಂದಲೂ ವಂಚಿತರಾಗುತ್ತಾರೆ ಎನ್ನುತ್ತದೆ ಅಧ್ಯಯನವೊಂದು.

‘ಆದರೆ ನಾವು ಉತ್ತಮ ಸಮಾಜವನ್ನು ಕಟ್ಟಬೇಕಾದರೆ, ನಿಜವಾದ ಅರ್ಥದಲ್ಲಿ ಕುಟುಂಬಗಳನ್ನು ಉಳಿಸಬೇಕಾದರೆ, ಪುರುಷರನ್ನೂ, ಅವರ ಸವಾಲುಗಳನ್ನೂ ಗಂಭೀರವಾಗಿ ಪರಿಗಣಿಸಬೇಕು’ ಎನ್ನುತ್ತಾರೆ ಸೇವ್‌ ಇಂಡಿಯನ್‌ ಫ್ಯಾಮಿಲಿ ಫೌಂಡೇಶನ್‌ನ ಸಹ–ಸಂಸ್ಥಾಪಕರಾದ ಅನಿಲ್‌ಕುಮಾರ್.

‘ನಮ್ಮ ಬಳಿ ಬರುವ ಪ್ರಕರಣಗಳನ್ನು ನಾವು ಹೆಣ್ಣಿನ ಪ್ರಕರಣ, ಗಂಡಿನ ಪ್ರಕರಣ ಎಂದು ಪ್ರತ್ಯೇಕವಾಗಿ ನೋಡುವುದಿಲ್ಲ. ಎಲ್ಲರೂ ಮನುಷ್ಯರೆ. ಅನ್ಯಾಯ ಯಾರಿಗೇ ಆದರೂ ಅದು ಅನ್ಯಾಯವೇ. ದೌರ್ಜನ್ಯ ಯಾರ ಮೇಲೆ ನಡೆದರೂ ಅದು ಖಂಡನಾರ್ಹವೇ. ಆದರೆ ನಮ್ಮೆದುರು ಬಂದ ಅದೆಷ್ಟೊ ಲೆಕ್ಕವಿಲ್ಲದಷ್ಟು ಪ್ರಕರಣಗಳಲ್ಲಿ ಮಹಿಳೆಯರಷ್ಟೇ ಪುರುಷರೂ ದೌರ್ಜನ್ಯಕ್ಕೆ ಗುರಿಯಾಗಿದ್ದಾರೆ. ಆದರೆ ದುರದೃಷ್ಟವಶಾತ್‌ ಸಮಾಜದಿಂದ, ಕುಟುಂಬದಿಂದ, ಬಂಧು–ಬಳಗದಿಂದ ಮಹಿಳೆಗೆ ಸಿಗುವ ಸಾಂತ್ವನ, ಬೆಂಬಲ, ಅನುಕಂಪ ಅವನಿಗೆ ಸಿಗುವುದಿಲ್ಲ. ಇದು 15 ವರ್ಷಗಳ ಅನುಭವದಲ್ಲಿ ನಾನು ಕಂಡ ಸತ್ಯ’ ಎನ್ನುತ್ತಾರೆ ಅವರು.

ಆಘಾತ–ಆತ್ಮಹತ್ಯೆ

ಪ್ರತಿ ವರ್ಷ, ಸುಮಾರು ಒಂದು ಲಕ್ಷಕ್ಕೂ ಅಧಿಕ (100,000) ಪುರುಷರು ಮತ್ತು ಯುವಕರು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ಇವರಲ್ಲಿ ಸುಮಾರು 65 ಸಾವಿರ ವಿವಾಹಿತ ಪುರುಷರೇ ಆಗಿರುತ್ತಾರೆ. ಕೌಟುಂಬಿಕ ಕಾರಣಗಳು ಮತ್ತು ಕೌಟುಂಬಿಕ ಹಿಂಸಾಚಾರಗಳಿಂದ ಭಾರತದಲ್ಲಿ ಪ್ರತಿವರ್ಷ ಸುಮಾರು 22 ಸಾವಿರ ಪುರುಷರ ಆತ್ಮಹತ್ಯೆಗೆ ಶರಣಾಗುತ್ತಾರೆ ಎನ್ನುವ ಆಘಾತಕಾರಿ ಸಂಗತಿಯನ್ನು ಸೇವ್‌ ಇಂಡಿಯನ್‌ ಫ್ಯಾಮಿಲಿ ಫೌಂಡೇಶನ್‌ ಹೊರಹಾಕಿದೆ.

ಆದರೆ ಈ ಆತ್ಮಹತ್ಯೆಗಳನ್ನು ತಡೆಯುವ ಪ್ರಯತ್ನಗಳು ಯಾಕೆ ವಿಫಲವಾಗುತ್ತಿವೆ? ಅಸಂಖ್ಯೆ ಸಲಹೆಗಾರರು, ಚಿಕಿತ್ಸಕರು, ಆತ್ಮಹತ್ಯೆ ತಡೆಗಟ್ಟುವ ಸಹಾಯವಾಣಿಗಳು ಇಂಥವರ ಜೀವಗಳನ್ನು ಉಳಿಸಲು ಯಾಕೆ ಸಾಧ್ಯವಾಗುತ್ತಿಲ್ಲ?

ಏಕೆಂದರೆ ಅವನು ತನ್ನ ನೋವು, ಸೋಲು, ಸಂಕಟಗಳನ್ನು ಹಂಚಿಕೊಳ್ಳುವುದು ಬಹಳೇ ಕಡಿಮೆ. ಚಿಕ್ಕಂದಿನಿಂದಲೇ ಅವನ ತಲೆಯಲ್ಲಿ ಬಿತ್ತಿದ ‘ನಾನು ಪುರುಷ’ ಎನ್ನುವ ಬೀಜ ಬೆಳೆದಂತೆ ಅವನನ್ನು ಅಂತರ್ಮುಖಿಯನ್ನಾಗಿ ಮಾಡುತ್ತದೆ. ‘ಪುರುಷ ಲಕ್ಷಣ‘ ಎನ್ನುವ ಸೂತ್ರ ತನ್ನ ಮೇಲೆ ನಡೆಯುತ್ತಿರುವ ದೌರ್ಜನ್ಯದ ಬಗ್ಗೆ ಮಾತನಾಡದಂತೆ, ಸಹಾಯ ಅಪೇಕ್ಷಿಸದಂತೆ ತಡೆಯುತ್ತದೆ. ಒಂದು ವೇಳೆ ಆತ ತನ್ನ ಮೇಲಿನ ದೌರ್ಜನ್ಯಗಳನ್ನು ಪ್ರಶ್ನಿಸಿದರೂ, ಅದರ ಕುರಿತು ತನ್ನವರೊಂದಿಗೆ ಹಂಚಿಕೊಂಡರೂ ಸಿಗುವ ಪರಿಹಾರವೂ ಕಡಿಮೆಯೇ. ಆದರೆ ಸಮಾಜದ ಪರಿಪೂರ್ಣ ಸ್ವಾಸ್ತ್ಯ ಎಂದರೆ ಅದರಲ್ಲಿ ಅವನೂ ಒಳಗೊಳ್ಳಬೇಕು. ಪುರುಷರ ಸಮಸ್ಯೆಗಳ ಬಗ್ಗೆ ಗಮನಹರಿಸಿದಲ್ಲಿ ಮಾತ್ರ ತಳಮಟ್ಟ ಅಭಿವೃದ್ಧಿ ಸಾಧ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT