ಶುಕ್ರವಾರ, ಜೂನ್ 25, 2021
20 °C

ಸೂಫಿ ಸಂಸ್ಕೃತಿಯ ಕಲಾಕೃತಿ

ಗೌರಿ ಚಂದ್ರಕೇಸರಿ Updated:

ಅಕ್ಷರ ಗಾತ್ರ : | |

ಗುಜರಾತ್ ತನ್ನ ಮಡಿಲಿನಲ್ಲಿ ಹಲವಾರು ರೋಜಾ (ಮಸೀದಿ)ಗಳನ್ನು ಹೊಂದಿರುವಂತಹ ರಾಜ್ಯ. ಅಹಮದಾಬಾದ್‍ನಲ್ಲಿರುವ ಪುರಾತನ ಮಸೀದಿಗಳು ತಮ್ಮ ವಾಸ್ತುಶಿಲ್ಪ, ಐತಿಹ್ಯಗಳಿಂದ ಶ್ರೀಮಂತವಾಗಿವೆ. ಅಂದಿನ ಸೂಫಿ ಸಂಸ್ಕೃತಿ ಬಿಟ್ಟು ಹೋದ ಕಲಾಕೃತಿಗಳನ್ನು ಕಂಡಾಗ ಅವರು ಧರ್ಮ ಮತ್ತು ಕಲೆಗಾಗಿ ತಮ್ಮ ತನು-ಮನ, ಧನವನ್ನು ಸಮರ್ಪಿಸಿರುವುದು ಕಂಡು ಬರುತ್ತದೆ.

ಅಹಮದಾಬಾದ್ ನಗರದಿಂದ ಏಳು ಕಿ.ಮೀ ದೂರದಲ್ಲಿರುವ ಮಕರ್‍ಬಾ ಎಂಬ ಗ್ರಾಮದಲ್ಲಿರುವ ಸರ್ಕೇಜ್ ರೋಜಾ ಒಂದು ಸುಪ್ರಸಿದ್ಧ ಮುಸ್ಲಿಮರ ಪವಿತ್ರ ಸ್ಥಳ. ಇದು ದರ್ಗಾ, ರಾಜ-ರಾಣಿಯರ, ಸಂತರ ಗೋರಿಗಳನ್ನು ಹೊಂದಿದ ಒಂದು ಸಂಕೀರ್ಣವಾಗಿದೆ. ಸೂಫಿ ಸಂಸ್ಕೃತಿಯ ಅತ್ಯಂತ ಶ್ರೇಷ್ಠವಾದ ದರ್ಗಾ ಅಂತಲೂ ಪ್ರಸಿದ್ಧವಾಗಿದೆ. ಇಂಡೋ ಸಾರ್ಸೆನಿಕ್ (ಹಿಂದೂ, ಜೈನ ಹಾಗೂ ಇಸ್ಲಾಮಿಕ್ ಮೂರೂ ಶೈಲಿಯನ್ನು ಒಳಗೊಂಡ ಕಲೆ) ಶೈಲಿಯಲ್ಲಿರುವ ಈ ಸಮುಚ್ಛಯ ಮೊದಲು 74 ಎಕರೆಯಷ್ಟು ವಿಸ್ತಾರವಿತ್ತು. ಆದರೆ ಗ್ರಾಮದ ಜನ ವಸತಿ ಹೆಚ್ಚಾದಂತೆ ಸುತ್ತ ಮುತ್ತಲಿನ ಜಾಗ ಕರಗಿ ಇದೀಗ 34 ಎಕರೆಗೆ ಇಳಿದಿದೆ.

ಮಕರ್‍ಬಾ ಎಂಬ ಹಳ್ಳಿಯ ನಡುವೆ ದೊಡ್ಡದಾದ ಕಮಾನನ್ನು ಹೊಂದಿದ ದ್ವಾರದ ಮೂಲಕ ಒಳ ಪ್ರವೇಶಿಸುತ್ತಿದ್ದಂತೆಯೇ ಒಂದು ಎಕರೆಯಷ್ಟು ವಿಸ್ತೀರ್ಣದ ಕಲ್ಲು ಹಾಸಿನ ಆವರಣವಿದೆ. ಬಲಗಡೆಗೆ ಸ್ವಲ್ಪ ಎತ್ತರವಾದ ಪ್ರದೇಶದಲ್ಲಿ ಕಲ್ಲಿನಿಂದ ಕೂಡಿದ ಬೃಹತ್ ಕಟ್ಟಡವೊಂದಿದ್ದು, ಇದನ್ನು ಜಾಮಾ ಮಸೀದಿ ಎಂದು ಕರೆಯುತ್ತಾರೆ. ಇದು ವಿಶಿಷ್ಟವಾದ ವಾಸ್ತುಶಿಲ್ಪವನ್ನು ಹೊಂದಿದ್ದು ನೋಡುಗರನ್ನು ಮಂತ್ರ ಮುಗ್ಧಗೊಳಿಸುತ್ತದೆ. ಇದರ ಒಳ ಭಾಗದಲ್ಲಿ ಶೇಖ್ ಅಹ್ಮದ್ ಖಟ್ಟು ಭಕ್ಷ್‌ನ ಗೋರಿ ಇದೆ. 14ನೇ ಶತಮಾನದಲ್ಲಿ ಆಳ್ವಿಕೆ ನಡೆಸುತ್ತಿದ್ದ ಸುಲ್ತಾನ್ ಅಹ್ಮದ್ ಷಾನ ಸ್ನೇಹಿತ ಹಾಗೂ ಸಲಹೆಗಾರನಾಗಿದ್ದ ಶೇಖ್ ಅಹ್ಮದ್ ಖಟ್ಟು 1445ರಲ್ಲಿ ಮರಣ ಹೊಂದುತ್ತಾನೆ. ಆತನ ನೆನಪಿಗಾಗಿ 1451ರಲ್ಲಿ ಸರ್ಕೇಜಾ ರೋಜಾವನ್ನು ನಿರ್ಮಿಸಲಾಗುತ್ತದೆ. ಪರ್ಷಿಯಾದ ಆಜಮ್ ಮತ್ತು ಮೌಜಮ್ ಎಂಬ ಸಹೋದರರು ಇದರ ರೂವಾರಿಗಳು. ಈ ಕಟ್ಟಡ ಸುಂದರವಾದ ಲೋಹದ ಜಾಲಂದ್ರಗಳಿಂದ ಕೂಡಿದೆ. ಯಥೇಚ್ಛವಾದ ಗಾಳಿ, ಬೆಳಕು ಬರಲೆಂಬ ಉದ್ದೇಶದಿಂದ ಜಾಲಂದ್ರಗಳನ್ನು ಅಳವಡಿಸಲಾಗಿದೆ.

ರೋಜಾದ ಎಡ ಪಾರ್ಶ್ವದಲ್ಲಿ ಇನ್ನೊಂದು ಶಿಲಾ ಕಟ್ಟಡವಿದ್ದು ಇದರಲ್ಲಿ ಮಹಮೂದ್ ಬೇಗ್ ಹಾಗೂ ಆತನ ಮಗನಾದ ಎರಡನೇ ಮುಜಫರ್‌ನ ಗೋರಿಗಳಿವೆ. ಈ ಕಟ್ಟಡದ ಪಕ್ಕಕ್ಕೆ ತಾಗಿದಂತೆ ಸುಂದರವಾದ ಸರೋವರವಿದೆ. 1584ರಲ್ಲಿ ಸುಲ್ತಾನ ಮಹಮೂದ್ ಬೇಗ್ ಇದನ್ನು ನಿರ್ಮಿಸಿದ್ದಾನೆ. 17 ಎಕರೆಯಷ್ಟು ಜಾಗದಲ್ಲಿ ಹರಡಿಕೊಂಡಿರುವ ಸರೋವರವು ಸುತ್ತಲೂ ಕಲ್ಲಿನ ಮೆಟ್ಟಿಲುಗಳಿಂದ ಕೂಡಿದ್ದು, ದರ್ಗಾದ ಸೌಂದರ್ಯವನ್ನು ಹೆಚ್ಚಿಸಿದೆ. ಪ್ರವೇಶ ದ್ವಾರದಿಂದ ಪಶ್ಚಿಮ ದಿಕ್ಕಿನಲ್ಲಿ ಮುಜಫರ್‌ನ ರಾಣಿಯಾದ ರಾಜಾಬಾಯಿಯ ಗೋರಿ ಇದೆ.

ಇದನ್ನೂ ಓದಿ: ಕ್ರಿಮ್ಚಿ ದೇಗುಲಗಳು: ಉಧಾಂಪುರದ ಪ್ರವಾಸ

ಸರ್ಕೇಜ್ ರೋಜಾ ಸಮುಚ್ಛಯವು ಆಕ್ರೊ ಪೊಲೀಸ್ ಆಫ್ ಅಹಮದಾಬಾದ್ ಎಂದು ಪ್ರಸಿದ್ಧವಾಗಿದೆ. ಹಿಂದೂ ಧರ್ಮದ ತಾಂತ್ರಿಕತೆ ಹಾಗೂ ಮುಸ್ಲಿಂ ಧರ್ಮದ ಕಲೆಯನ್ನು ಹೊಂದಿದ ಈ ಕಲಾಕೃತಿಯನ್ನು ಮತ್ತೆ ಮತ್ತೆ ನೋಡಬೇಕೆನ್ನಿಸುತ್ತದೆ. ಈ ಸ್ಥಳವು ನೇಕಾರಿಕೆ ಹಾಗೂ ಬಟ್ಟೆಗೆ ಬಣ್ಣ ಹಾಕುವ ಕಾಯಕಕ್ಕೆ ಹೆಸರುವಾಸಿಯಾಗಿತ್ತು. 1620ರಲ್ಲಿ ಡಚ್ಚರು ಇಲ್ಲಿ ಬಂದು ಕಂಪನಿಯನ್ನು ಸ್ಥಾಪಿಸುತ್ತಿದ್ದಂತೆಯೇ ದರ್ಗಾ ತನ್ನ ಪ್ರಾಮುಖ್ಯವನ್ನು ಕಳೆದುಕೊಂಡಿತು. ದರ್ಗಾಕ್ಕೆ ಕಿರೀಟಪ್ರಾಯವಾಗಿರುವ ಸರೋವರವು ಸೂಕ್ತ ನಿರ್ವಹಣೆ ಇಲ್ಲದೇ ಕಸ ಕಡ್ಡಿಗಳಿಂದ ಕೂಡಿ ಮಲಿನವಾಗಿದೆ. ವಿಸ್ತಾರದಲ್ಲಿಯೂ, ವಾಸ್ತುಶಿಲ್ಪದಲ್ಲಿಯೂ ಹೆಸರುವಾಸಿಯಾದ ಸುಂದರ ಸರ್ಕೇಜ್ ರೋಜಾದ ಬಗ್ಗೆ ಕಾಳಜಿವಹಿಸಬೇಕಾದ ಅವಶ್ಯಕತೆ ಇದೆ.

ಚಿತ್ರಗಳು: ಲೇಖಕರವು

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು