ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಫಜಲಪೂರದ ಅಂದದ ಮಹಲ್‌

Last Updated 25 ನವೆಂಬರ್ 2019, 19:30 IST
ಅಕ್ಷರ ಗಾತ್ರ

ಕಲಬುರ್ಗಿ ಜಿಲ್ಲಾ ಕೇಂದ್ರದಿಂದ 58 ಕಿ.ಮೀ ದೂರದಲ್ಲಿರುವ ಪಟ್ಟಣ ಅಫಜಲಪೂರ. ಇಲ್ಲಿ 16ನೇ ಶತಮಾನದಲ್ಲಿ ಅಫಜಲಖಾನ್ ಎಂಬ ರಾಜ ಅಂದದ ಮಹಲ್ (ಅರಮನೆ) ನಿರ್ಮಿಸಿದ್ದ. ಈಗ ಅರಮನೆ ನಾಶವಾಗಿದ್ದರೂ, ಅವನ ಪರಿವಾರದ ಸಮಾಧಿ ಸ್ಥಳಗಳು, ಮಸೀದಿಗಳು ಇನ್ನೂ ಸುಸ್ಥಿತಿಯಲ್ಲಿವೆ.

ಈ ಎಲ್ಲ ಸ್ಮಾರಕದಂತಿರುವ ಮಸೀದಿಗಳು ಇಂಡೋ-ಇಸ್ಲಾಮಿಕ್ ಶೈಲಿಯಲ್ಲಿ ನಿರ್ಮಾಣವಾಗಿವೆ. ಪ್ರಸ್ತುತ ಅಫಜಲಖಾನ್ ಮೆಮೋರಿಯಲ್ ಟ್ರಸ್ಟ್‌ನ ಸಂರಕ್ಷಣೆಯಲ್ಲಿ ಸುರಕ್ಷಿತವಾಗಿವೆ.

ಅಫಜಲಖಾನ್‌ನ ವಂಶಸ್ಥರಾದ ಮಕ್ಸೂದ್ ಅಫಜಲ ಜಾಗೀರದಾರ್‌ ಇವುಗಳ ಸಂರಕ್ಷಣೆ ಜವಾಬ್ದಾರಿ ಹೊತ್ತಿದ್ದಾರೆ. ವೃತ್ತಿಯಿಂದ ವಕೀಲರಾಗಿರುವ ಮಕ್ಸೂದ್‌, ಮಹಲ್‍ನ ಏಳಿಗೆಗಾಗಿ, ಸಂರಕ್ಷಣೆಗಾಗಿ ತಮ್ಮ ಜೀವಮಾನದ ದುಡಿಮೆಯನ್ನು ವಿನಿಯೋಗಿಸಿದ್ದಾರೆ.

1652 ರಲ್ಲಿ ಭೀಮಾನದಿ ತೀರದಲ್ಲಿ ಈ ಮಹಲ್‍ ನಿರ್ಮಾಣವಾಗಿದೆ. ಆದಿಲ್ ಶಾಹಿ ಸಾಮ್ರಾಜ್ಯದಲ್ಲಿ ಮಹಾ ದಂಡನಾಯಕನಾಗಿದ್ದ ಅಫಜಲಖಾನ್‌ ಇದರ ನಿರ್ಮಾತೃ. ಕರಿಕಲ್ಲಿನಲ್ಲಿ ನಿರ್ಮಾಣವಾಗಿರುವ ಈ ಅರಮನೆಗೆ ನಾಲ್ಕು ಮಿನಾರುಗಳಿವೆ. ಆ ಕಂಬಗಳ ಮೇಲೆ ಕಮಲ ಹೂವಿನ ಕೆತ್ತನೆ, ಹೂಬಳ್ಳಿ ರಚನೆ ಮತ್ತು ಒಳಗೋಡೆಗಳನ್ನು ಸೂಕ್ಷ್ಮವಾಗಿ ಅಚ್ಚು ಗಾರೆಗಳಿಂದ ನಿರ್ಮಿಸಲಾಗಿದೆ.

ಅಫಜಲ್ ಖಾನ್
ಅಫಜಲ್ ಖಾನ್

ಈ ಮಹಲ್ ನಿರ್ಮಾಣಕ್ಕೆ ಪರ್ಷಿಯನ್ ಶಿಲ್ಪಕಲಾವಿದರ ಜೊತೆ ಸ್ಥಳೀಯ ಶಿಲ್ಪಕಲಾವಿದರನ್ನು ಬಳಸಿಕೊಂಡಿದ್ದಾರೆ. ಅರಮನೆಯ ವಾಸ್ತು ಮತ್ತು ಕುಸುರಿ ಕೆಲಸಗಳೇ ಸ್ಥಳೀಯ ಕಲಾವಿದರ ಬಳಸಿರುವುದನ್ನೂ ಸಾಕ್ಷೀಕರಿಸುತ್ತವೆ.

ಈ ಮಹಲಿನ ಉತ್ತರ ಆವರಣ ಪ್ರವೇಶಿಸುತ್ತಿದ್ದಂತೆ ಎದುರಿಗೆ ಕಟ್ಟೆಯೊಂದು ಕಾಣುತ್ತದೆ. ಇದಕ್ಕೆ ‘ಕಟ್ಟಾ’ ಎನ್ನುತ್ತಾರೆ. ಮಹಲ್‍ನ ಮುಂದಿನ ಭಾಗದಲ್ಲಿ ಸುಂದರ ಚಿಕ್ಕ ಕಾರಂಜಿ ಕಾಣಿಸುತ್ತದೆ.

ಮಸೀದಿಯ ಹಿಂಭಾಗದಲ್ಲಿ ಕರಿಕಲ್ಲಿನ ಮೇಲೆ ಓಡುತ್ತಿರುವ ಕುದುರೆಯ ಕೆತ್ತನೆಯಿದೆ. ಈ ಕುದುರೆಯನ್ನು ಅಭಿವೃದ್ಧಿಯ ಪ್ರತೀಕವಾಗಿ ಕೆತ್ತಿದ್ದಾರೆ. ಬಹುಮನಿ, ಆದಿಲ್ ಶಾಹಿ, ಬರೀದ್ ಶಾಹಿ ಇವರ ಆಳ್ವಿಕೆಯಲ್ಲಿ ಈ ಭಾಗದ ಕಲೆ ಮತ್ತು ವಾಸ್ತುಶಿಲ್ಪಕ್ಕೆ ವಿಶೇಷ ಪ್ರೋತ್ಸಾಹ ನೀಡಿ ನಿರ್ಮಿಸಿದ ಅನೇಕ ಸ್ಮಾರಕಗಳು ಇವತ್ತಿಗೂ ಇತಿಹಾಸಕ್ಕೆ ಪೂರಕವಾಗಿ ನಿಂತಿವೆ.

ಅಫಜಲಖಾನ್‌ ನೀರಾವರಿ ವ್ಯವಸ್ಥೆ ಕಲ್ಪಿಸಲು ಬೇಗಂ ಕೆರೆ, ಅಫಜಲ ಸರೋವರ ಮತ್ತು ಮಹಮದ್ ಸರೋವರದಂತಹ ಜಲಸಂಗ್ರಹಾಗಾರಗಳನ್ನು ನಿರ್ಮಾಣ ಮಾಡಿದ್ದ. ಅಫಜಲಪೂರ ಮತ್ತಿತರ ಕಡೆಗಳಲ್ಲಿ ನೀರಾವರಿ ಯೋಜನೆ ಮತ್ತು ಸಾರ್ವಜನಿಕ ಕುಡಿಯುವ ನೀರಿನ ವ್ಯವಸ್ಥೆಗಾಗಿ ಅಲ್ಲಲ್ಲಿ ತೆರೆದ ಬಾವಿಗಳನ್ನು ನಿರ್ಮಿಸಿದ್ದ. ಪಟ್ಟಣಕ್ಕೆ ಕೆರೆಯಿಂದ ನೀರು ಪೂರೈಕೆಗೂ ವ್ಯವಸ್ಥೆ ಮಾಡಿದ್ದ.

ಬಿಜಾಪುರ ಸಂಸ್ಥಾನದ ಅಫಜಲಪುರ ತಕಿಯಾ ಎಂಬ ಊರಲ್ಲಿ ಹುಟ್ಟಿದ ಅಫಜಲಖಾನ್, 1601 ರಲ್ಲಿ ಆದಿಲ್ ಶಾಹಿಗಳ ನೂರಾ ಐವತ್ತು ಸೇನಾಧಿಪತಿಗಳಿಗೆ ಮಹಾ ದಂಡನಾಯಕನಾಗಿ ಕಾರ್ಯ ನಿರ್ವಹಿಸುತ್ತಿದ್ದ. ಈತನ ಆಳ್ವಿಕೆಯಲ್ಲಿ ಗೋಗಿ, ಶಹಾಪುರ, ಯಾದಗಿರಿ, ಕಡೇಚೂರ, ರಾಯಚೂರು ಅಫಜಲಪುರ ತಕಿಯಾ ವಿಜಾಪುರ, ಅಫಜಲಪೂರ ಪೇಟ್ ಸೇರಿದಂತೆ ಅನೇಕ ಕಡೆಗಳಲ್ಲಿ ಇಂಥ ಸ್ಮಾರಕಗಳು ನಿರ್ಮಾಣವಾಗಿವೆ. ಅದೇ ರೀತಿ ರಹಿಮತಪುರ, ಕರಾಡ ಜಿಲ್ಲೆಯ ಮಹಾರಾಷ್ಟ್ರದಲ್ಲಿ ಕೂಡಾ ಈ ಸ್ಮಾರಕಗಳಿವೆ. ಈ ಮಾಹಿತಿಯನ್ನು ಫ್ರೆಂಚ್‌ ಪ್ರವಾಸಿ, ಅಬ್ಬೆ ಕರೇಜ್ ಅವರು 1671ರಲ್ಲೇ ದಾಖಲಿಸಿದ್ದಾರೆ.

ಮಕ್ಸೂದ್ ಅಫಜಲ ಜಾಗಿರದಾರರು ಅನೇಕ ರಾಷ್ಟ್ರೀಯ ವಿಚಾರ ಗೋಷ್ಟಿಗಳಲ್ಲಿ ಅಫಜಲಖಾನ್‌ಗೆ ವಾಸ್ತುಶಿಲ್ಪಗಳ ಬಗೆಗಿದ್ದ ಪ್ರೀತಿ ಕುರಿತು ಮಾತನಾಡಿದ್ದಾರೆ. ಅವನ ಬಗ್ಗೆ ಡಾಕ್ಯುಮೆಂಟರಿ ಹಾಗೂ ಪುಸ್ತಕವೊಂದನ್ನು ಪ್ರಕಟಿಸುವ ಹಂತದಲ್ಲಿದ್ದಾರೆ.

2012 ಮತ್ತು 2015ರಲ್ಲಿ, ಖ್ಯಾತ ಇತಿಹಾಸಕಾರ ಡಾ. ಅಬ್ದುಲ್ ಗನಿ ಇಮಾರುತವಾಲಾ ಅವರು ಫ್ರಾನ್ಸ್‌ನ ಕ್ಲಾಸ್ ರೊಯಿಟ್ಸರ್ ಮತ್ತು ನೆದರ್‌ಲ್ಯಾಂಡ್‌ ಪೀಟರ್ ಕ್ಲಸ್ಟರ್ ಅವರ ಜೊತೆ ಈ ಸ್ಮಾರಕಗಳಿಗೆ ಭೇಟಿ ನೀಡಿದ್ದರು. ಇವುಗಳ ನಿರ್ವಹಣೆ ಹಾಗೂ ಸಂರಕ್ಷಣೆ ಕುರಿತು ಚರ್ಚೆ ಮಾಡಿದ್ದರು. ಬೆಂಗಳೂರು ರಾಷ್ಟ್ರೀಯ ಸಂರಕ್ಷಣಾ ಪರಂಪರೆ ನೆಟ್‌ವರ್ಕ್‌ ಪ್ರಧಾನ ಸಲಹೆಗಾರರಾದ ಪ್ರಸಾದ್ ಅವರು ಮಹಲ್ ಕಟ್ಟಡದ ಗೋಡೆಯ ದುರಸ್ತಿ ಮತ್ತು ನವೀಕರಣಕ್ಕಾಗಿ ವೈಯಕ್ತಿಕವಾಗಿ ಹಣವನ್ನು ಖರ್ಚು ಮಾಡಿದ್ದರಂತೆ. ಈ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಾರೆ ಮಕ್ಸೂದ್‌.

ಚಿತ್ರಗಳು: ಮಹಮದ್‌ ಅಯೋಜೋದ್ದಿನ್‌ ಪಟೇಲ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT