ಮಂಗಳವಾರ, ಆಗಸ್ಟ್ 20, 2019
22 °C

ಬ್ಲೂ ಬೆರ‍್ರಿ ತೋಟದಲ್ಲಿ..

Published:
Updated:
Prajavani

ಅಮೆರಿಕಕ್ಕೆ ಪ್ರವಾಸ ಹೋಗಿದ್ದಾಗ ಮೆಸಚುಸೆಟ್ಸ್‌ ರಾಜಧಾನಿ ಬಾಸ್ಟನ್ ಬಳಿಯಿರುವ ವಾಲ್ತಾಮ್ ಹಯ್ಯಾತ್‌ ಹೌಸ್‌ನಲ್ಲಿ ಮಗನೊಂದಿಗೆ ವಾಸ್ತವ್ಯ ಮಾಡಿದ್ದೆ. ಸುತ್ತಲಿನ ಪ್ರವಾಸಿ ತಾಣಗಳನ್ನು ನೋಡಿ ಬಂದ ಮೇಲೆ, ಮುಂದಿನವಾರ ‘ಟಿಂಗ್ಸ್ ಬೋರೊ’ನಲ್ಲಿರುವ ‘ಪಾರ್ಲಿ ಫಾರ್ಮ್‌’ಗೆ ಹೋಗೋಣ ಎಂದ ಮಗ.

ಪಾರ್ಲಿಫಾರಂ – ಬ್ಲೂಬೆರ‍್ರಿ ಹಣ್ಣಿನ ತೋಟ. ಅಲ್ಲಿ ಗ್ರಾಹಕರೇ ಹಣ ಪಾವತಿಸಿ, ಮರಗಳಿಂದ ಹಣ್ಣುಗಳನ್ನು ಕಿತ್ತು ತರಬಹುದು. ‘ಅಲ್ಲಿಗೆ ಹೋದರೆ, ನಮ್ಮಲ್ಲಿ ಅಪರೂಪವಾಗಿರುವ ಈ ಹಣ್ಣನ್ನು ನೋಡಿದಂತಾಗುತ್ತದೆ, ಹಣ್ಣಿನ ರುಚಿಯನ್ನೂ ಸವಿಯಬಹುದು’ ಎಂದು ತೀರ್ಮಾನಿಸಿ ತೋಟ ನೋಡಲು ಹೊರಟೆವು.

ವಾಲ್ತಾಮ್‌ನಿಂದ ಟಿಂಗ್ಸ್‌ಬೋರೊ ಸುಮಾರು 45 ಕಿ.ಮೀ ದೂರದಲ್ಲಿದೆ. ಅಂದು ಬೆಳಿಗ್ಗೆ ಹಯಾತ್ ಹೌಸ್‌ನಿಂದ ನಾನು ಹಾಗೂ ನನ್ನ ಮಗ ರಾಜೇಂದ್ರ, ಕಾರಿನಲ್ಲಿ ಪಾರ್ಲಿ ಫಾರ್ಮ್ ಕಡೆ ಹೊರಟೆವು. ಫಾರ್ಮ್‌ಗೆ ಹೋಗುವ ದಾರಿಯ ಇಕ್ಕೆಲಗಳಲ್ಲೇ ವೈವಿಧ್ಯಮಯ ಜಾತಿಯ ಮರಗಳು ಕಂಡವು. ಅಲ್ಲಲ್ಲೇ ಸಿಗುತ್ತಿದ್ದ ಹಳ್ಳಿಗಳನ್ನು ಗಮನಿಸುತ್ತಿದ್ದೆ. ಎಲ್ಲರ ಮನೆ ಮುಂದೂ ಕಿರು ಉದ್ಯಾನವಿತ್ತು. ಹುಲ್ಲು ಹಾಸಿತ್ತು. ಆಮೇಲೆ ಗೊತ್ತಾಗಿದ್ದು, ಅಮೆರಿಕದಲ್ಲಿ ಅದು ನಿಯಮವಂತೆ. ಹಾಗಾಗಿ ಮನೆಗಳು ಸೂಕ್ತ ನಿರ್ವಹಣೆಯಿಂದ ಹೊಸ ಮನೆಗಳಂತೆ ಕಾಣುತ್ತಿದ್ದವು.

‌ಪಾರ್ಲಿ ಫಾರ್ಮ್‌ ತಲುಪಿದಾಗ ಬೆಳಿಗ್ಗೆ 10 ಗಂಟೆ. ಶುಭ್ರ ಪರಿಸರದ ನಡುವಿರುವ ಪುಟ್ಟ ಹಳ್ಳಿಯಲ್ಲಿ ಈ ಫಾರ್ಮ್‌ ಇದೆ. ನಾವು ಹೋಗುವ ವೇಳೆಗೆ ಆ ತೋಟದ ಪಾರ್ಕಿಂಗ್‌ ಲಾಟ್‌ನಲ್ಲಿ ನೂರಾರು ಕಾರುಗಳು ನಿಂತಿದ್ದವು. ನಮ್ಮಂತೆ ಅವರು ಹಣ್ಣಿನ ತೋಟ ನೋಡಲು ಬಂದಿದ್ದರು. ಕಾರನ್ನು ಪಾರ್ಕ್ ಮಾಡಿ ಫಾರ್ಮ್ ಕಡೆ ಹೊರಟೆವು.

ಅಮೆರಿಕದ ಮತ್ತೊಂದು ವಿಶೇಷತೆಯೆಂದರೆ, ಹೋಟೆಲ್ ಇರುವ ಪ್ರದೇಶದಲ್ಲಿ ರೆಸ್ಟ್ ರೂಂ ಸಹ ಇರುತ್ತದೆ. ಸೇವೆ ಉಚಿತ. ಇಲ್ಲಿಯೂ ಹಾಗೆ ಇತ್ತು. ಫಾರ್ಮ್ ಸಿಬ್ಬಂದಿ ಗ್ರಾಹಕರಿಗೆ ಗುಡ್ ಮಾರ್ನಿಂಗ್ ಹೇಳಿ ಸ್ವಾಗತಿಸಿದರು. ನಮ್ಮ ಕೈಗೆ ಎರಡು ಕೆ.ಜಿಯಷ್ಟು ಹಣ್ಣು ಹಿಡಿಯುವಂತಹ ಬಕೆಟ್‌ಗಳನ್ನು ನೀಡಿದರು. ಫಾರ್ಮ್ ಒಳಗೆ ಹೋಗಲು ದಾರಿ ತೋರಿಸಿದರು. ಬಹುಶಃ ಅದು ಬ್ಲೂಬೆರ‍್ರಿ ಹಣ್ಣಿನ ಸೀಸನ್‌ ಇರಬೇಕು. ಹಾಗಾಗಿ ಗ್ರಾಹಕರ ಸಂಖ್ಯೆ ತುಸು ಹೆಚ್ಚಾಗಿತ್ತು.  ಮಕ್ಕಳು, ದೊಡ್ಡವರೆನ್ನದೇ ಸಾಲುಗಟ್ಟಿ ಫಾರ್ಮ್‌ನೊಳಗೆ ಹೋಗುತ್ತಿದ್ದರು. ನಾವೂ ಅವರನ್ನು ಹಿಂಬಾಲಿಸಿದೆವು.

 

ಬ್ಲೂಬೆರ‍್ರಿ ಹುಡುಕಿ ಹೊರಟಾಗ, ಫಾರ್ಮ್‌ ದಾರಿಯಲ್ಲಿ ಸಿಕ್ಕ ಒಂದು ಹೊಲದಲ್ಲಿ ಕುಂಬಳಕಾಯಿ ಸಸಿಗಳನ್ನು ನೆಟ್ಟಿದ್ದರು. ಅವು ಸೆಪ್ಟೆಂಬರ್ ತಿಂಗಳಲ್ಲಿ ಕೊಯ್ಲಿಗೆ ಬರುತ್ತವೆಂದು ಅದನ್ನು ಉಸ್ತುವಾರಿ ನೋಡಿಕೊಳ್ಳುತ್ತಿದ್ದವ ವಿವರಿಸಿದ.

ಸ್ವಲ್ಪ ದೂರ ನಡೆಯುವಷ್ಟರಲ್ಲೇ ಬ್ಲೂಬೆರ‍್ರಿ ತೋಟ ಕಂಡಿತು. ಗಿಡಗಳ ತುಂಬಾ ಕಡು ನೀಲಿ ಬಣ್ಣದ ಹಣ್ಣುಗಳಿಂದ ತುಂಬಿ ತುಳುಕುತ್ತಿದ್ದವು. ಹೋಟೆಲ್‌ನಲ್ಲಿದ್ದಾಗಲೇ ಈ ಹಣ್ಣುಗಳ ರುಚಿ ನೋಡಿದ್ದರಿಂದ ಅವನ್ನು ತಿನ್ನಬೇಕೆನ್ನುವ ಮನಸ್ಸಿತ್ತು. ನಾಲಿಗೆ ರುಚಿಗೆ ಕರೆಯುತ್ತಿತ್ತು, ಹಣ್ಣುಗಳ ಗೊಂಚಲುಗಳನ್ನು ನೋಡಿದ ತಕ್ಷಣ ಅಚ್ಚರಿಗೊಂಡೆವು. ದ್ರಾಕ್ಷಿಯ ಗೊಂಚಲುಗಳಂತೆ ಒತ್ತಾಗಿ ಬೆಳೆದಿದ್ದವು. ನಮ್ಮೊಂದಿಗೆ ಬಂದಿದ್ದ ಸಿಬ್ಬಂದಿ ಚೆನ್ನಾಗಿ ಬೆಳೆದ ರುಚಿಕರವಾದ ಹಣ್ಣುಗಳ ಲಕ್ಷಣಗಳ ಬಗ್ಗೆ ಹೇಳಿದರು. ‘ನಿಮಗೆ ಬೇಕಾದಷ್ಟು ಕಿತ್ತು ಬಕೆಟ್‌ಗೆ ತುಂಬಿಸಿಕೊಳ್ಳಿ’ ಎಂದರು.

ತೋಟದಲ್ಲಿ ಅಲ್ಲಲ್ಲೇ ಹಣ್ಣುಗಳ ಬಗ್ಗೆ ಮಾಹಿತಿ ನೀಡುವ ಫಲಕಗಳೂ ಇದ್ದವು. ತೋಟವಿಡೀ ಅಡ್ಡಾಡಿ, ನಮಗೆ ಬೇಕಾದಷ್ಟು ಬ್ಲೂಬೆರ‍್ರಿ ಹಣ್ಣುಗಳನ್ನು ಕೊಯ್ದು ಬಕೆಟ್‌ಗೆ ಹಾಕಿಕೊಂಡೆವು. ಅಮೆರಿಕವಲ್ಲದೇ, ಇತರೆ ದೇಶಗಳ ಗ್ರಾಹಕರೂ ಈ ಹಣ್ಣುಗಳನ್ನು ಖರೀದಿಸಲು ಬಂದಿದ್ದರು. ತೋಟದಲ್ಲಿ ಕಂಡು ಬಂದ ನವವಿವಾಹಿತ ಜೋಡಿಯೊಂದನ್ನು ನಾನು ಮಾತನಾಡಿಸಿದೆ. ಅವರು ‘ನಮಗೆ ಬೇಕಾದ ಹಣ್ಣುಗಳನ್ನು ನಾವೇ ಕಿತ್ತು ತಿನ್ನುತ್ತಿರುವುದು ತುಂಬಾ ಖುಷಿಕೊಡುವ ವಿಷಯ’ ಎಂದರು. ಕೊಯ್ಲಾದ ಹಣ್ಣುಗಳ ಬಕೆಟ್‌ ಹಿಡಿದು, ಫಾರ್ಮ್ ಬಳಿ ಹರಿಯುತ್ತಿದ್ದ ‘ಮೇರಿ ಮ್ಯಾಕ್’ ನದಿಯ ದಂಡೆಯಲ್ಲಿ ಕುಳಿತು ವಿರಮಿಸಿಕೊಂಡೆವು. ನಂತರ ಹಣ್ಣುಗಳನ್ನು ತೂಕ ಮಾಡಿಸಿ, ಹಣ ನೀಡಿ ಫಾರ್ಮ್‌ನಿಂದ ಹೊರ ಬಂದೆವು.

 

93 ಎಕರೆಯ ಫಾರ್ಮ್‌

ಮೇರಿ ಮ್ಯಾಕ್ ನದಿಯ ಇಕ್ಕೆಲಗಳಲ್ಲಿರುವ ಪಾರ್ಲಿ ಫಾರ್ಮ್ ಸುಮಾರು 93 ಎಕರೆ ವಿಸ್ತೀರ್ಣದಲ್ಲಿದೆ. 1987 ರಲ್ಲಿ ಮಾರ್ಕ್ ಮತ್ತು ಎಲ್ಲೆನ್ ಪಾರ್ಲಿ ದಂಪತಿ ಇಲ್ಲಿ ಕೃಷಿ ಪ್ರಾರಂಭಿಸಿದರು. ನಂತರದ ದಿನಗಳಲ್ಲಿ ಅಭಿವೃದ್ಧಿಪಡಿಸಿದ ನಂತರ ಈಗ ಇಡೀ ಕುಟುಂಬ ಕೃಷಿಯಲ್ಲಿ ತೊಡಗಿಕೊಂಡಿದೆ. ಹಲವರಿಗೆ ಉದ್ಯೋಗವನ್ನೂ ಕಲ್ಪಿಸಿದೆ.

ಇಲ್ಲಿ ಬೆಳೆಯುವ ಹಣ್ಣು, ತರಕಾರಿ ಹಾಗೂ ಹೂವುಗಳನ್ನು ನೇರವಾಗಿ ಗ್ರಾಹಕರೇ ಆರಿಸಿ ಖರೀದಿಸುತ್ತಾರೆ. ಉಳಿದ ಉತ್ಪನ್ನವನ್ನು ಮಾಲ್‌ಗಳಿಗೆ ಸರಬರಾಜು ಮಾಡುತ್ತಾರೆ. ಕೆಮಿಕಲ್ ಎಂಜಿನಿಯರಿಂಗ್ ಪದವೀಧರ ಮಾರ್ಕ್, ರೋಗ, ಕೀಟನಾಶಕಗಳ ಬಗ್ಗೆ ಅಪಾರ ಜ್ಞಾನ ಹೊಂದಿದ್ದಾರೆ. ಅವುಗಳ ಅಪಾಯದ ಬಗ್ಗೆ ಅರಿತಿದ್ದಾರೆ. ಹಾಗಾಗಿಯೇ ಫಾರ್ಮ್‌ನಲ್ಲಿರುವ ಗಿಡಗಳನ್ನು ಸಾವಯವ ಪದ್ಧತಿಯಲ್ಲಿ ಬೆಳೆಸುತ್ತಾರೆ. ಜತೆಗೆ ರೋಗ–ಕೀಟಬಾಧೆಯಿಂದ ರಕ್ಷಿಸುವುದಕ್ಕಾಗಿ ನೈಸರ್ಗಿಕ ಮೂಲದ ಔಷಧಗಳನ್ನೇ ಬಳಸುತ್ತಾರಂತೆ.

ತೋಟದಲ್ಲಿ ಆಟ–ಮನರಂಜನೆ

ತೋಟಕ್ಕೆ ಭೇಟಿ ನೀಡುವವರು ಹಣ್ಣುಗಳನ್ನು ಖರೀದಿಸುವ ಜತೆಗೆ, ಬೇರೆ ಬೇರೆ ಕೃಷಿ ಚಟುವಟಿಕೆಗಳನ್ನೂ ಅರಿಯಬಹುದು. ಇದಕ್ಕಾಗಿ ‘ಅನ್ನೀಸ್ ಅನಿಮಲ್ ಬಾರ್ನ್‌’ ಎಂಬ ಜಾಗವಿದೆ. ಇಲ್ಲಿ ಆಕಳು, ಕುರಿ ಸೇರಿದಂತೆ ಬೇರೆ ಬೇರೆ ಪ್ರಾಣಿಗಳನ್ನು ಸಾಕಿದ್ದಾರೆ. ಅವುಗಳಿಗೆ ಪ್ರವಾಸಿಗರೇ ಮೇವು ತಿನ್ನಿಸಬಹುದು. ಹುಲ್ಲು ಸಾಗಿಸುವ ವಾಹನಗಳಲ್ಲಿ ಕುಳಿತು ಫಾರ್ಮ್ ಇಡೀ ಸುತ್ತಬಹುದು.

ಫಾರ್ಮ್‌ನಲ್ಲಿ ‘ಮೇರೀಸ್ ಕಂಟ್ರಿ ಕಿಚನ್ ಮತ್ತು ಬೇಕರಿ’ ಇದೆ. ಹಣ್ಣು ತರಕಾರಿಗಳ ಮಾರಾಟ ಮಳಿಗೆಯ ಜತೆಗೆ ಐಸ್ ಕ್ರೀಂ ಅಂಗಡಿ ಕೂಡ ಇದೆ.

ಒಂದು ಫಾರ್ಮ್‌ನಲ್ಲಿ ಇಷ್ಟೆಲ್ಲಾ ಸೌಲಭ್ಯಗಳಿರುವುದು ನಮಗೆ ಅಚ್ಚರಿ ಮೂಡಿಸಿತು. ಫಾರ್ಮ್‌ನಲ್ಲಿ ಅರ್ಧ ದಿನ ಕಳೆದ ನಮಗೆ ಅಮೆರಿಕದ ಕೃಷಿ ಚಟುವಟಿಕೆಗಳ ಬಗ್ಗೆ ತಿಳಿದುಕೊಳ್ಳುವಂತಾಯ್ತು. ಸುಮಾರು 3 ಗಂಟೆಗೆ ನಾವು ವಾಲ್ತಾಮ್‌ಗೆ ಮರಳಿದೆವು. ಅಮೇರಿಕ ಪ್ರವಾಸದಲ್ಲಿ ‘ಪಾರ್ಲಿ ಫಾರಂ’ ಹಾಗೂ ಫಾರ್ಮ್‌ ಪರಿಸರ ನಮ್ಮ ಮನಸ್ಸಿನಲ್ಲಿ ಅಚ್ಚಳಿಯದಂತಿದೆ.

ಬ್ಲೂ ಬೆರ‍್ರಿ ಅಷ್ಟೇ ಅಲ್ಲ...

ಪಾರ್ಲಿ ಫಾರ್ಮ್‌ನಲ್ಲಿ ಬ್ಲೂ ಬೆರ‍್ರಿ ಹಣ್ಣು ಮಾತ್ರವಲ್ಲ ಇನ್ನೂ ವೈವಿಧ್ಯಮಯ ಹಣ್ಣುಗಳನ್ನು ಬೆಳೆಯುತ್ತಾರೆ. ಈ ಫಾರ್ಮ್‌ನ ವಿಶೇಷವೆಂದರೆ, ಒಂದೊಂದು ತಿಂಗಳಲ್ಲಿ ಒಂದೊಂದು ರೀತಿಯ ಹಣ್ಣು ಬೆಳೆಯುತ್ತಾರೆ. ಸೆಪ್ಟೆಂಬರ್‌ನಲ್ಲಿ ಸ್ಟ್ರಾಬೆರ‍್ರಿ, ಜೂನ್‌ –ಜುಲೈ ತಿಂಗಳಲ್ಲಿ ಚೆರ‍್ರಿ, ಜುಲೈ–ಆಗಸ್ಟ್‌ನಲ್ಲಿ ಬ್ಲೂ ಬೆರ‍್ರಿ, ಆಗಸ್ಟ್‌–ಸೆಪ್ಟೆಂಬರ್‌ನಲ್ಲಿ ಪೀಚ್‌, ಆಗಸ್ಟ್‌–ಅಕ್ಟೋಬರ್‌ ನಡುವೆ ಆ್ಯಪಲ್‌, ಸೆಪ್ಟೆಂಬರ್- ಅಕ್ಟೋಬರ್ ನಡುವೆ ಕುಂಬಳ ಕಾಯಿ.. ಹೀಗೆ ಒಂದೊಂದು ತಿಂಗಳು ಒಂದೊಂದು ಹಣ್ಣು ಮತ್ತು ತರಕಾರಿ ಕೊಯ್ಲಿಗೆ ತಯಾರಾಗಿರುತ್ತವೆ. ಆಯಾ ತಿಂಗಳುಗಳಲ್ಲಿ ಗ್ರಾಹಕರೇ ನೇರವಾಗಿ ತೋಟಕ್ಕೆ ಬಂದು ತಮಗೆ ಬೇಕಾದ ಹಣ್ಣುಗಳನ್ನು ಕಿತ್ತು, ಹಣ ಪಾವತಿಸಿ ಖರೀದಿ ಮಾಡುತ್ತಾರೆ. ಇಲ್ಲಿಗೆ ಸ್ಥಳೀಯ ಗ್ರಾಹಕರ ಜತೆಗೆ, ಹೆಚ್ಚು ಪ್ರವಾಸಿಗರೂ ಇರುತ್ತಾರೆ. ನಮ್ಮ ದೇಶ ಅಥವಾ ರಾಜ್ಯದಲ್ಲೂ ಸಾವಯವ ಹಣ್ಣಿನ ತೋಟಗಳನ್ನೂ ಹೀಗೆ ಪ್ರವಾಸಿ ತಾಣವಾಗಿ ಮಾಡಬಹುದು.

Post Comments (+)