ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀದರ್‌ನಲ್ಲಿ ಗುರುದ್ವಾರ

Last Updated 25 ಸೆಪ್ಟೆಂಬರ್ 2019, 19:31 IST
ಅಕ್ಷರ ಗಾತ್ರ

ಕಲ್ಯಾಣ ಕರ್ನಾಟಕದ ಪ್ರಮುಖ ನಗರ ಬೀದರ್. ಇದು ಸರ್ವಧರ್ಮಗಳ ಶಾಂತಿಯ ಬೀಡು. ಒಂದು ಕಾಲದಲ್ಲಿ ಬುದ್ಧ, ವೇದೋಪನಿಷತ್ ಹಾಗೂ ಜೈನತತ್ವಗಳು ಚಾಲನೆಯಲ್ಲಿದ್ದ ರಾಜ್ಯದ ತುತ್ತ ತುದಿಯ ಈ ಪ್ರದೇಶದಲ್ಲಿ 12 ಹಾಗೂ 13ನೆಯ ಶತಮಾನಗಳಿಂದೀಚಿಗೆ ಶರಣ, ಇಸ್ಲಾಂ ಹಾಗೂ ಸೂಫಿ ತತ್ವಗಳು ಪ್ರವರ್ಧಮಾನಕ್ಕೆ ಬಂದವು. ಬೀದರ್‌ಗೆ ಕ್ರಿ.ಶ 1512 ರಲ್ಲಿ ಗುರುನಾನಕರು ಭೇಟಿ ನೀಡಿದರು. ಆಗಿನಿಂದ ಸಿಖ್ ಧರ್ಮವು ಈ ನಗರದಲ್ಲಿ ಪರಿಚಯವಾಯಿತು.

ದುರುಳತನ, ಹಿಂಸೆ, ಶೋಷಣೆಗಳ ವಿರುದ್ಧ ಹೋರಾಡುತ್ತಾ, ಪರಿಸ್ಥಿತಿಯನ್ನು ತಿಳಿಗೊಳಿಸುವುದಕ್ಕಾಗಿ ಗುರುನಾನಕರು ಸಿಖ್ ಪಂಥವನ್ನು ಹುಟ್ಟು ಹಾಕಿದರು. ನಾನಕರು ಜನರ ಮನಸ್ಸಿನಲ್ಲಿ ಏಕದೇವೊಪಾಸನೆ, ಸಮಾನತೆ, ಭ್ರಾತೃತ್ವ, ವಿಶ್ವಮಾನವತೆ ಹಾಗೂ ಸದ್ಗುಣಭರಿತ ಸಾಮಾಜಿಕ ,ರಾಜಕೀಯ ವಿಚಾರಧಾರೆಗಳನ್ನು ತುಂಬಿ ಅವರನ್ನು ಮೇಲಕ್ಕೆತ್ತಲು ಪ್ರಯತ್ನಿಸಿದರು.

ಝೀರಾಸಾಹೀಬ್

ಕನ್ನಡದಲ್ಲಿರುವ ಶರಣರ ವಚನಗಳಂತೆ ಮಾನವನ ಸರ್ವತೋಮುಖ ಬೆಳವಣಿಗೆಗಾಗಿ ಗುರುನಾನಕರು ಕಾವ್ಯಾತ್ಮಕವಾದ 974 ಸ್ತೋತ್ರಗಳನ್ನು ರಚಿಸಿದ್ದಾರೆ. ಈ ಸ್ತೋತ್ರಗಳ ಸಮಗ್ರ ಗುಚ್ಛವನ್ನು ‘ಗುರು ಗ್ರಂಥ ಸಾಹೀಬ್’ ಎನ್ನುತ್ತಾರೆ. ನಾನಕರು ವಿಶ್ವದಲ್ಲಿ ಶಾಂತಿ ಹಾಗೂ ಸಹೋದರತೆಗಳನ್ನು ಬೆಳೆಸಲು ಒಟ್ಟು ನಾಲ್ಕು ಬಾರಿ ಲೋಕಸಂಚಾರ ಕೈಗೊಂಡರು. ಕ್ರಿ.ಶ 1510 ರಿಂದ 1515ರವರೆಗೆ ಕೈಗೊಂಡ ಎರಡನೆಯ ಸಂಚಾರವು ಕನ್ನಡ ನಾಡನ್ನು ಹಾದು ಹೋಗಿತ್ತು. ನಾನಕರು ಈ ಯಾತ್ರೆ ಕೈಗೊಂಡಾಗ ಬೀದರ್‌ಗೆ ಕೊಟ್ಟ ಭೇಟಿ ನಮ್ಮ ನಾಡಿಗೆ ಹಾಗೂ ಸಿಖ್ ಧರ್ಮಿಯರಿಗೆ ಅತ್ಯಂತ ಮಹತ್ವದ ಐತಿಹಾಸಿಕ ಘಟನೆಯಾಗಿದೆ.

ಗುರುನಾನಕರು ಬೀದರ್ ಬೆಟ್ಟಗಳಲ್ಲಿ ತಂಗಿದ್ದಾಗ ಸ್ಥಳೀಯ ಸೂಫಿ ಸಂತರಾದ ಫಕೀರ ಜಲಾಲುದ್ದೀನ ಹಾಗೂ ಯಾಕುಬ್ ಅಲಿ ಅವರನ್ನು ಆದರಿಸಿ, ಸತ್ಕರಿಸಿದರು. ಅವರ ಸಮ್ಮುಖದಲ್ಲಿ ಸತ್ಸಂಗವನ್ನು ಏರ್ಪಡಿಸಿದರು. ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ನಾಗರಿಕರು ಕುಡಿಯುವ ನೀರಿಗಾಗಿ ಜಲಮೂಲ ಶೋಧಿಸುವ ಮನವಿಯನ್ನು ಗುರಗಳ ಎದುರು ಇಟ್ಟರು. ನಾನಕರು ಈ ಮನವಿಗೆ ಸಮ್ಮಿತಿಸಿ ಬೆಟ್ಟದ ಒಂದು ಕಲ್ಲನ್ನು ತಮ್ಮ ಪಾದಗಳಿಂದ ಸರಿಸಿದಾಗ ಅಲ್ಲಿ ಸಿಹಿ ನೀರಿನ ಕಾರಂಜಿ ಚಿಮ್ಮಿತಂತೆ. ಈ ಕಾರಂಜಿಯನ್ನೇ ‘ನಾನಕ ಝೀರಾ ಸಾಹೀಬ್’ ಎಂದು ಕರೆಯಲಾಗುತ್ತದೆ. ಬಿಸಿಲಿನ ನಾಡು ಎಂದು ಅಪಖ್ಯಾತಿಗೆ ಒಳಗಾಗಿದ್ದ ಬೀದರ್‌ನಲ್ಲಿ ತಿಳಿ ನೀರಿನ ಚಿಲುಮೆ ಇಂದೂ ಅಮೃತದಂತೆ ಜಿನುಗುತ್ತಿದೆ.

ಗುರುನಾನಕರು ಭೇಟಿಯಿತ್ತ ವಿಶಿಷ್ಠ ಸ್ಥಳಗಳ ಪಟ್ಟಿಯಲ್ಲಿ ಬೀದರ್ ಸೇರಿತು. ಅಷ್ಟೇ ಅಲ್ಲ, ತ್ಯಾಗ, ಸಮರ್ಪಣೆಗೆ ಮಹತ್ವ ಕೊಟ್ಟ ಸಿಖ್ ಧರ್ಮಿಯರಲ್ಲಿಯ ‘ಖಾಲ್ಸಾ’ ಸಂಪ್ರದಾಯದ ದೀಕ್ಷೆ ಪಡೆದ ಪ್ರಥಮ ಐದು(ಪಂಚ್ ಪ್ಯಾರೆ) ಶಿಷ್ಯರಲ್ಲಿ ಬೀದರ್ ಪಟ್ಟಣದ ಭಾಯಿ ಸಾಹೀಬ್ ಸಿಂಗ್ ಕೂಡ ಒಬ್ಬರು. ಈ ಸಂಗತಿಗಳು ಬೀದರ್ ಪಟ್ಟಣದ ಖ್ಯಾತಿಯನ್ನು ಎಲ್ಲೆಡೆ ಪಸರಿಸಿದವು. ಈ ಸ್ಥಳ ಮುಂದೆ ಸಿಖ್ ಮತದ ಪ್ರಮುಖ ತೀರ್ಥ ಕ್ಷೇತ್ರವಾಗಿ ಹೊರಹೊಮ್ಮಿತು.

ಗುರುದ್ವಾರ ನಿರ್ಮಾಣ

ಇದಾದ ನಂತರ 1948ರಲ್ಲಿ ನಾನಕ ಝಿರಾ ಸಾಹೀಬ್ ಸುತ್ತಲೂ ವಿಶಾಲವಾದ ಗುರುದ್ವಾರವನ್ನು ನಿರ್ಮಿಸಲಾಗಿದೆ. ಅಮೃತಕುಂಡವೆಂದೂ ಕರೆಯಲಾಗುವ ತಿಳಿ ನೀರಿನ ಬುಗ್ಗೆಯ ಪಕ್ಕದಲ್ಲಿ ನಾನಕರು ತಂಗಿದ್ದ ಸ್ಥಳದಲ್ಲಿ ಅತ್ಯಾಕರ್ಷಕ ದರ್ಬಾರ ಸಾಹೀಬ್ (ಪ್ರಾರ್ಥನಾ ಗೃಹ) ಇದೆ. ಇಲ್ಲಿ ಪ್ರತಿನಿತ್ಯ ಗುರು ಗ್ರಂಥ ಸಾಹೀಬ್ ಪಠಣ ಮಾಡಲಾಗುತ್ತದೆ.

ಶಾಂತ ಹಾಗೂ ನಿರ್ಮಲ ವಾತಾವರಣವಿರುವ ಈ ಗುರುದ್ವಾರದಲ್ಲಿ ಯಾತ್ರಾರ್ಥಿಗಳಿಗಾಗಿ ವಸತಿ ಸೌಲಭ್ಯವಿದೆ. ಇಲ್ಲಿರುವ ವಸ್ತು ಸಂಗ್ರಾಹಾಲಯದಲ್ಲಿ ಸಿಖ್ ಧರ್ಮಕ್ಕೆ ಸಂಬಂಧಿಸಿದ ಅಮೂಲ್ಯ ವಸ್ತುಗಳನ್ನು ನೋಡಬಹುದು.

ಎಡಬಿಡದೆ ನಡೆಯುವ ಲಂಗರ್ (ಅನ್ನ ದಾಸೋಹ) ಸೇವೆಯಲ್ಲಿ ಸಾಧಕರು ಹಾಗೂ ಯಾತ್ರಿಗಳು ಪ್ರಸಾದ ಸ್ವೀಕರಿಸಬಹುದು. ವಾರ್ಷಿಕ ಸರಾಸರಿ 5 ಲಕ್ಷ ಭಕ್ತಾದಿಗಳು ಸಂದರ್ಶಿಸುವ ಗುರುದ್ವಾರದಲ್ಲಿ, ಇದೇ ನವೆಂಬರ್ 10 ರಿಂದ 12 ವರೆಗೆ (ಕಾರ್ತಿಕ ಹುಣ್ಣಿಮೆ) ಗುರುನಾನಕರ 550ನೇಯ ಜನ್ಮೋತ್ಸವದ ಕಾರ್ಯಕ್ರಮಗಳು ಜರುಗಲಿವೆ.

ಚಿತ್ರ: ಲೇಖಕರದ್ದು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT