ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಾರಾಷ್ಟ್ರದ ಬೌದ್ಧ ಗುಹೆಗಳಲ್ಲಿ ಲೇಣ್ಯಾದ್ರಿ ಗಣಪತಿ

Last Updated 11 ಸೆಪ್ಟೆಂಬರ್ 2019, 19:30 IST
ಅಕ್ಷರ ಗಾತ್ರ

ಅಂದು ನಾವು ಹೊರಟಿದ್ದು ಪುಣೆಯ ಪುಣ್ಯಕ್ಷೇತ್ರ ಜ್ಯೋತಿರ್ಲಿಂಗ ಭೀಮಾಶಂಕರ ವೀಕ್ಷಿಸಲು. ಮುಂಬೈಯಿಂದ ಬೆಳಿಗ್ಗೆ ಹೊರಟವರು ಮಧ್ಯಾಹ್ನದ ಹೊತ್ತಿಗೆ ಜುನ್ನರ್ ಎಂಬಲ್ಲಿಗೆ ತಲುಪಿದ್ದೆವು. ‌

ಅಲ್ಲಿ ಇಳಿದದ್ದು ಮಧ್ಯಾಹ್ನದ ಭೋಜನಕ್ಕೆ. ಆದರೆ ಊಟಕ್ಕೆ ಇನ್ನೂ ಸಮಯ ವಿತ್ತು. ಅಲ್ಲೇ ಸಮೀಪದ ಅಷ್ಟವಿನಾಯಕ ಮಂದಿರಗಳಲ್ಲಿ ಒಂದಾದ ಲೇಣ್ಯಾದ್ರಿ ಗಣಪತಿಯನ್ನು ವೀಕ್ಷಿಸುವವರು ಹೋಗಬಹುದೆಂಬ ಸೂಚನೆ ಸಿಕ್ಕಿತು.

ನಮ್ಮ ಯು.ಎಸ್.ಕಾರಂತರು ಜೊತೆಗಿದ್ದರೆ ಕೇಳಬೇಕೆ? ಇಂತಹ ಅವಕಾಶಗಳನ್ನು ಅವರು ಬಳಸಿಕೊಳ್ಳುತ್ತಾರೆ. ಅವರ ಜೊತೆಗಿದ್ದಾಗ ನಾನು ತಪ್ಪದೇ ಬಳಸಿಕೊಳ್ಳುತ್ತಾ ಬಂದಿದ್ದೇನೆ. ಸರಿ, ಎಲ್ಲರೂ ಸೇರಿ ಉತ್ಸಾಹದಿಂದ ಗಣಪತಿ ನೋಡಲು ಹೊರಟೆವು. ಆದರೆ ನಮ್ಮ ಉತ್ಸಾಹಕ್ಕೆ ಸವಾಲಾಗಿದ್ದು, 283 ಮೆಟ್ಟಿಲುಗಳನ್ನು ಏರಬೇಕೆಂಬ ಸಂಗತಿ. ಅದೂ ಮಧ್ಯಾಹ್ನದ ಬಿಸಿಲು. ಆ ಬಿಸಿಲಿಗೆ ಅಷ್ಟು ಮೆಟ್ಟಿಲುಗಳನ್ನು ಏರಲು ಸಾಧ್ಯವೇ? ಹೀಗೆಂದು ನಾವೇನೋ ಯೋಚಿಸುತ್ತಿದ್ದೆವು. ಆದರೂ ಕಾರಂತರು ಬಿಡಬೇಕಲ್ಲ. ಅವರು ಏರುತ್ತಾರೆ ಎಂದರೆ ಮತ್ತೆ ಕೇಳಬೇಕೆ. ನಾವೆಲ್ಲ ಏರಲು ಆರಂಭ ಮಾಡಿದೆವು.

ಪುಣೆ ಜಿಲ್ಲೆಯ ಜುನ್ನರ್(ತಾಲ್ಲೂಕು ಕೇಂದ್ರ)ನಿಂದ ಸುಮಾರು ನಾಲ್ಕೈದು ಕಿಲೋಮೀಟರ್ ದೂರದಲ್ಲಿದೆ ಲೇಣ್ಯಾದ್ರಿ ಗುಹೆಗಳು. ಮಹಾರಾಷ್ಟ್ರದ 20 ಪ್ರಮುಖ ಗುಹೆಗಳಲ್ಲಿ ಲೇಣ್ಯಾದ್ರಿ ಗುಹೆಗಳ ಸಮೂಹವೂ ಒಂದು.

ಇಲ್ಲಿ ಸಾಲಾಗಿ 30 ಗುಹೆಗಳಿವೆ. ಇವೆಲ್ಲ ಬೌದ್ಧ ಧರ್ಮದ ಹೀನಾಯಾನ ಪಂಥಕ್ಕೆ ಸೇರಿದಂತಹವು. ಇದರಲ್ಲಿ ಏಳನೇ ಗುಹೆಯಲ್ಲಿ ಅಷ್ಟವಿನಾಯಕನ ಗಣಪತಿ ಮೂರ್ತಿ ಇದೆ. ಇದನ್ನು ಗಣೇಶನ ಜನ್ಮಸ್ಥಳವೆಂದೂ ಭಕ್ತರ ನಂಬಿಕೆ. ಇಲ್ಲಿನ ಗಣಪತಿ ಮೂರ್ತಿಯನ್ನು ಏಕಶಿಲೆಯಲ್ಲಿ (ಒಂದೇ ಬಂಡೆಕಲ್ಲಿನಲ್ಲಿ) ನಿರ್ಮಿಸಲಾಗಿದೆ.

ಮಹಾರಾಷ್ಟ್ರದ ಪ್ರಸಿದ್ಧ ಅಷ್ಟವಿನಾಯಕಗಳಲ್ಲಿ ಇಲ್ಲಿನ ಗಣಪತಿಗೆ ಆರನೆಯ ಸ್ಥಾನ. ಇದು ಸದಾ ಅಷ್ಟವಿನಾಯಕ ದರ್ಶನ ಮಾಡುವ ಭಕ್ತರಿಂದ ತುಂಬಿರುತ್ತದೆ.

ಗಣಪತಿ ಮೂರ್ತಿಯ ಗುಹೆಯಲ್ಲಿ ಕಿರು ಗರ್ಭಗುಡಿ ಇದೆ. ಅದರ ಎದುರುಗಡೆ ವಿಶಾಲ ಸಭಾ ಮಂಟಪವಿದೆ. ಇದರಲ್ಲಿ ಒಂದೂ ಕಂಬವಿಲ್ಲ. ಇದು 57 ಅಡಿ, 51 ಅಡಿ ಅಗಲವಿದೆ. ಅದೇ ರೀತಿ 11.1 ಅಡಿ ಎತ್ತರವಿದೆ. ಎರಡು ಕಿಟಕಿಗಳಿವೆ. ಗಣೇಶ ಚತುರ್ಥಿ ಮತ್ತು ಗಣೇಶ ಜಯಂತಿ ಇಲ್ಲಿನ ವಿಶೇಷ ಪರ್ವ. ಮಾಘ ಶುದ್ಧ ಚತುರ್ಥಿ ಸಮಯ ಏಳುದಿನಗಳ ಅಖಂಡ ಹರಿನಾಮ ಸಪ್ತಾಹ ನಡೆಯುತ್ತದೆ. ಪಂಚಾಮೃತ ಅಭಿಷೇಕ ನಡೆಯುತ್ತದೆ. ಈ ಮಂದಿರದ ಹೊರಗಡೆ ನಿಂತರೆ ವಿಶಾಲ ಪ್ರಕೃತಿ ಸೌಂದರ್ಯವನ್ನು ಸವಿಯಬಹುದು‌. ಕುಕ್ ಡಿ ನದಿ ಕಣಿವೆಯ ಸುಂದರ ದೃಶ್ಯ ಮನಸೆಳೆಯುತ್ತದೆ.

ಗಣೇಶನನ್ನು ತಲುಪಬೇಕಾದರೆ 283 ಮೆಟ್ಟಿಲು ಏರಬೇಕು. ಮೆಟ್ಟಿಲು ಗಳನ್ನು ಏರಲು ಅಶಕ್ತರಿಗೆ, ಹಿರಿಯ ನಾಗರಿಕರಿಗೆ ಡೋಲಿಯ ವ್ಯವಸ್ಥೆಯಿದೆ. ಮೆಟ್ಟಿಲು ಏರುವವರಿಗೆ ದಾರಿಯಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಇದೆ.

ಈ ಕ್ಷೇತ್ರವನ್ನು ಗಣೇಶ ಲೇನ್, ಗಣೇಶ ಪಹರ್ ಅಥವಾ ಸುಲೇಮಾನ್ ಗುಹೆ ಹೀಗೆಲ್ಲ ಕರೆಯುತ್ತಾರೆ. ಮರಾಠಿಯಲ್ಲಿ ‘ಲೇನ’ ಎಂದರೆ ಕನ್ನಡದಲ್ಲಿ ಗುಹೆ ಎಂದು ಅರ್ಥ. ಬಂಡೆಗಲ್ಲುಗಳನ್ನು ಕೊರೆದು ಈ ಗುಹಾ ಮಂದಿರಗಳನ್ನು ನಿರ್ಮಿಸಲಾಗಿದೆ. ಇವು ಪೂರ್ವದಿಂದ ಪಶ್ಚಿಮಕ್ಕೆ ಹರಡಿಕೊಂಡಿವೆ.

ಬೌದ್ಧರ ಗುಹೆಗಳ ನಡುವಿರುವ ಲೇಣ್ಯಾದ್ರಿ ಗಣಪತಿಯ ಗುಹೆಯೂ ಬೌದ್ಧ ಕಾಲದ್ದೇ. ಇದು ಮೊದಲನೇ ಶತಮಾನದಲ್ಲಿ ನಿರ್ಮಾಣವಾಗಿದೆ ಎನ್ನಲಾಗಿದೆ. ಆದರೆ, ಈ ಗುಹೆಗೆ ಯಾವಾಗಿನಿಂದ ಗಣಪತಿ ಮಂದಿರ ಎಂದು ಕರೆಯುತ್ತಿದ್ದಾರೆ ಎಂಬ ಬಗ್ಗೆ ನಿಖರವಾದ ಮಾಹಿತಿ ಲಭ್ಯವಾಗಲಿಲ್ಲ. ಲೇಣ್ಯಾದ್ರಿಯಲ್ಲಿ ವಾನರಗಳು ಬಹಳ ಸಂಖ್ಯೆಯಲ್ಲಿವೆ. ಹಾಗಾಗಿ ಇದನ್ನು ಕಪಿ ಚಿತ್ತ ಅಂತಲೂ ಕರೆಯುತ್ತಾರೆ.

ಇಲ್ಲಿನ ಗುಹೆ ಸಂಖ್ಯೆ ಆರು ಮತ್ತು 14 ಚೈತ್ಯ ಗೃಹಗಳು. ಇವೆಲ್ಲ ಒಂದು ಮತ್ತು ಮೂರನೇ ಶತಮಾನದಲ್ಲಿ ನಿರ್ಮಾಣಗಿವೆ. ಸದ್ಯ ಪುರಾತತ್ವ ಇಲಾಖೆ ಇವುಗಳ ನಿರ್ವಹಣೆ ಮಾಡುತ್ತಿದೆ. ಗಣಪತಿ ಗುಹೆಯ ನಿರ್ವಹಣೆಯನ್ನು ಶ್ರೀಲೇಣ್ಯಾದ್ರಿ ಗಣಪತಿ ದೇವಸ್ಥಾನ ಟ್ರಸ್ಟ್‌ ನೋಡಿ ಕೊಳ್ಳುತ್ತಿದೆ.

ಎಲ್ಲ ನೋಡಿಕೊಂಡು ಬಿಸಿಲಿನಲ್ಲಿ ನಿಧಾನವಾಗಿ ಕೆಳಗಿಳಿಯುತ್ತಿದ್ದಂತೆ ಹೊಟ್ಟೆ ಹಸಿಯುತ್ತಿತ್ತು. ನೇರವಾಗಿ ಹೊಟೇಲ್ ಕಡೆ ಹೆಜ್ಜೆ ಇಟ್ಟೆವು. ಆದರೆ, ಗುಹೆಯಲ್ಲಿ ತೀವ್ರವಾದ ಕತ್ತಲಿದ್ದ ಕಾರಣ , ಅಷ್ಟವಿನಾಯಕ ಮೂರ್ತಿಯ ಫೋಟೊ ತೆಗೆಯಲು ಸಾಧ್ಯವಾಗಲಿಲ್ಲ. ಆ ನಿರಾಸೆ ಮನದಲ್ಲಿ ಉಳಿಯಿತು.

ಹೋಗುವುದು ಹೇಗೆ?

ಬೆಂಗಳೂರಿನಿಂದ ಮುಂಬೈ ಮತ್ತು ಪುಣೆಗೆ ರೈಲು ಮತ್ತು ಬಸ್‌ಗಳು ಸಾಕಷ್ಟಿವೆ. ನೇರ ವಿಮಾನ ಸಂಪರ್ಕವಿದೆ. ಮುಂಬೈ ನಿಂದ ಜುನ್ನರ್‌ಗೆ ಸುಮಾರು 198.8 ಕಿ.ಮೀ.ದೂರ. ಪುಣೆಯಿಂದ ಜುನ್ನರ್‌ಗೆ ಸುಮಾರು 162.3 ಕಿ.ಮೀ.ದೂರ ಇದೆ.

ಜುನ್ನರ್‌ ಪರಿಸರದಲ್ಲಿ ಲೇಣ್ಯಾದ್ರಿ ಗಣಪತಿ ಬೆಟ್ಟದ ಜತೆಗೆ, ಶಿವನೇರಿ ಕೇವ್ಸ್, ಮನ್ಮೊಡಿ ಕೇವ್ಸ್, ತುಳಜಾ ಕೇವ್ಸ್.....ಇತ್ಯಾದಿಗಳಿವೆ. ಆಸಕ್ತರು ಸಮಯ ಹೊಂದಿಸಿಕೊಂಡು ಇವನ್ನೆಲ್ಲ ನೋಡಿಬರಬಹುದು.

ಪುಣೆ -ನಾಸಿಕ್ ಮಹಾಮಾರ್ಗದಲ್ಲಿ ಪುಣೆಯಿಂದ ರಾಜ್‌ಗುರು ನಗರದಿಂದ ಜುನ್ನರ್‌ಗೆ ಬಂದರೂ ಈ ಮಂದಿರ ವೀಕ್ಷಿಸಬಹುದು.

ಲೇಣ್ಯಾದ್ರಿ ಗುಹೆಯ ಕೆಳಭಾಗದಲ್ಲಿ ಊಟ–ಉಪಹಾರಕ್ಕೆ ಹೋಟೆಲ್‌ಗಳಿವೆ.

ಚಿತ್ರಗಳು: ಲೇಖಕರವು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT