ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲವ್ ಯು ಟೊಕಿಯೊ

Last Updated 25 ಸೆಪ್ಟೆಂಬರ್ 2019, 19:31 IST
ಅಕ್ಷರ ಗಾತ್ರ

ಜಪಾನಿನ ರಾಜಧಾನಿ ಟೋಕಿಯೊ ನಗರ, ಎಲ್ಲಕ್ಕೂ ಸೈ ಅನ್ನುವಂತಿದೆ. ಅಂದರೆ ಇಲ್ಲಿ ಹಳತಿದೆ, ಹೊಸತಿದೆ, ಧರ್ಮಕ್ಕೆ ಜಾಗವಿದೆ, ಧರ್ಮ ಬೇಡ ಎಂದೂ ಹೇಳುತ್ತದೆ. ಬುದ್ಧನನ್ನು ಕ್ಷಣಕ್ಷಣಕ್ಕೂ ನೆನೆಸುತ್ತದೆ. ಪಾಶ್ಚಿಮಾತ್ಯದ ಗಾಳಿಗೆ ಒಡ್ಡಿಕೊಂಡು ಸ್ವಚ್ಛಂದವಾಗಿದೆ. ಮೌಲ್ಯಗಳ ನೆರಳಲ್ಲಿ ಬದುಕುತ್ತಿದೆ. ಅದನ್ನು ಮರೆತ ಬಿಂದಾಸ್ ಬದುಕೂ ಇದೆ. ರಾಜನಿದ್ದಾನೆ. ಪ್ರಜಾಪ್ರಭುತ್ವವಿದೆ. ಆಧುನಿಕ ಗಾಳಿಗೆ ಎದುರಾದ ಎಲ್ಲ ಮಹಾನಗರಗಳ ಪಲ್ಲಟದಂತೆಯೇ ಟೋಕಿಯೊ ಕೂಡ ಈ ಎಲ್ಲ ಬಗೆಯ ಜನರನ್ನು, ಬದುಕನ್ನು ತನ್ನ ಒಡಲಿನಲ್ಲಿಟ್ಟುಕೊಂಡಿದೆ.

ಜೊತೆಗೆ, ಮನುಷ್ಯನಿರ್ಮಿತ ಅದ್ಭುತ ತಂತ್ರಜ್ಞಾನದ ಸೌಕರ್ಯ ಇಲ್ಲಿದೆ. ಮುಗಿಬಿದ್ದ ನಿಸರ್ಗ ರಮ್ಯತೆಯಿದೆ. ನಿಸರ್ಗ ಅತಿ ಸುಂದರವಿದ್ದರೂ ಒಂದಿಷ್ಟು ನಿರ್ದಯಿಯಾಗಿದೆ. ಭೂಕಂಪ, ಸುನಾಮಿಯಂತಹ ಪ್ರಕೃತಿ ವಿಕೋಪದ ಅಟ್ಟಹಾಸ ಜಪಾನ್‌ ಅನ್ನು ಆಗಾಗ್ಗೆ ಹೆದರಿಸುತ್ತಲೇ ಇರುತ್ತದೆ. ಅದಕ್ಕೆ ಏನೋ ಅವರು ಪ್ರಕೃತಿಗೇ ಸೆಡ್ಡು ಹೊಡೆದು ಬಹಳ ಗಟ್ಟಿಯಾಗಿದ್ದಾರೆ. ಕ್ಷಣಕ್ಷಣಕ್ಕೂ ಹೋರಾಟ ಮಾಡಿ ಬಿದ್ದವರು ಏಳುತ್ತಾರೆ, ಎದ್ದು ಗೆಲ್ಲುತ್ತಲೇ ಇದ್ದಾರೆ. ಈ ವಿಷಯದಲ್ಲಿ ಜಪಾನಿಯರನ್ನು ಮೆಚ್ಚಲೇಬೇಕು.

ಇಷ್ಟಾದರೂ ಈ ಮಹಾನಗರದ ಜೀವ ಯಾವುದರಲ್ಲಿದೆ? ಚಂದದ ರಸ್ತೆಗಳಲ್ಲಿದೆಯಾ. ಗಗನಚುಂಬಿಗಳಲ್ಲಿ, ಶಿಸ್ತು ಸಂಯಮದಲ್ಲಿ, ತಂತ್ರಜ್ಞಾನದಲ್ಲಾ, ಸೂರೆಯಾದ ನಿಸರ್ಗಸಿರಿಯಲ್ಲಾ..? ಇದು ಎರಡು ದಿನಗಳಲ್ಲಿ ನನ್ನ ಬೊಗಸೆಗೆ ಬೀಳದ ಗುಟ್ಟು. ಇಂಥ ಮಹಾನಗರಗಳನ್ನು ಅಳೆಯಲು, ಅರಿಯಲು ಕಾಲ ಬೇಕು. ಕಣ್ಣು ತಂಪಾಗಿಸಿದ ಒಂದಷ್ಟು ಸಂಗತಿಗಳ ಅನಾವರಣ ಮಾತ್ರ ಸಾಧ್ಯ...!

ಟೋಕಿಯೊದಲ್ಲಿ ಏನಿದೆ?

ವಾಸಸ್ಥಳಕ್ಕಿಂತ ಬೆಟ್ಟ, ಗುಡ್ಡ, ಪರ್ವತ, ಸಮುದ್ರದಿಂದ ಆವೃತವಾದ ಜಪಾನಿನಲ್ಲಿ ವಾಸಕ್ಕೆ ಯೋಗ್ಯವಾದ ಭೂಮಿ ನಾಲ್ಕು ದ್ವೀಪಗಳಲ್ಲಿ ಹಂಚಿಕೆಯಾಗಿದೆ. ಇದರಲ್ಲಿ ‘ಹೊನ್‍ಷು’ ಎಂಬ ದ್ವೀಪಭಾಗದಲ್ಲಿ ಈ ಟೋಕಿಯೊ ನಗರವಿದೆ.

ಟೋಕಿಯೊ ಮೆಟ್ರೊಪಾಲಿಟನ್ ಸಿಟಿ ಆದ್ದರಿಂದ ಇದರ ವ್ಯಾಪ್ತಿ ಹಿರಿದು. ಹತ್ತಕ್ಕೂ ಹೆಚ್ಚು ಉಪನಗರಗಳಿವೆ. ಮುಖ್ಯವಾದ ಭಾಗಗಳಿಗೆ ಅಲ್ಲಿಯ ಜನಪ್ರಿಯತೆ ಹಾಗೂ ಅಲ್ಲಿಯ ವಸ್ತುಸ್ಥಿತಿಗನುಗುಣವಾಗಿ ಹೆಸರಿಟ್ಟಿದ್ದಾರೆ. ಯುವಜನತೆ ಹೆಚ್ಚಾಗಿ ಇಷ್ಟಪಡುವ ಅತ್ಯಾಧುನಿಕ, ಝಗಮಗ ಭಾಗಕ್ಕೆ ‘ಶಿಬುಯಾ’ ಎನ್ನುತ್ತಾರೆ. ನಿಲ್ಲದ ಚಟುವಟಿಕೆಯ ಬ್ಯುಸಿ ಪ್ರದೇಶವನ್ನು ‘ಶಿಂಜುಕಾ’ ಎನ್ನುತ್ತಾರೆ. ಟೀನೇಜರ್ಸ್ ಬಯಸುವ ಜಾಗವನ್ನು ‘ಹರಾಜುಕ’ ಎನ್ನುತ್ತಾರೆ.

ಇಡೀ ಸಿಟಿ ಅತ್ಯಂತ ವ್ಯವಸ್ಥಿತವಾಗಿ ನಿರ್ಮಾಣವಾಗಿದ್ದರೂ ಇಲ್ಲಿಯ ಜನಸಂಖ್ಯೆ ಹೆಚ್ಚಿರುವುದರಿಂದ ವಾಹನದಟ್ಟಣೆ ವಿಪರೀತ. ಎಲ್ಲರೂ ಕಾರುಗಳನ್ನು ಹೊಂದಿರುವುದು ಸಾಮಾನ್ಯ. ಹಾಗಾಗಿ ಜನ ಕಾರುಗಳನ್ನು ರಸ್ತೆಗೆ ತಂದು ಟ್ರಾಫಿಕ್‍ಜಾಮ್ ಆಗುವುದನ್ನು ತಪ್ಪಿಸಲು ಸರ್ಕಾರ, ಪಾರ್ಕಿಂಗ್‌ ಶುಲ್ಕ ದುಬಾರಿಯಾಗಿಸಿದೆ. ಹೀಗಾಗಿ ಜನ ಉಳಿತಾಯದ ದೃಷ್ಟಿಯಿಂದ ಸಾರ್ವಜನಿಕ ಸಾರಿಗೆ ಅವಲಂಬಿಸುತ್ತಾರಂತೆ. ಇದಕ್ಕೆಂದೇ ಇಲ್ಲಿ ಪಬ್ಲಿಕ್‍ ಟ್ರಾನ್ಸ್‌ಪೋರ್ಟ್‌ ಬಹಳ ವ್ಯವಸ್ಥಿತವಾಗಿದೆ. ಹೇರಳವಾಗಿದೆ. ಅಪರಾಧ ಚಟುವಟಿಕೆಗಳೂ ವಿರಳವಂತೆ. ಹಾಗಾಗಿ ಹೆಣ್ಣುಮಕ್ಕಳೂ ನಿರ್ಭಯವಾಗಿ ರಾತ್ರಿ ಒಂದು, ಎರಡು ಗಂಟೆಯಲ್ಲೂ ಬಸ್, ಮೆಟ್ರೊಗಳಲ್ಲಿ ಪಯಣಿಸುವರೆಂದು ನಮ್ಮ ಗೈಡ್ ‘ಹೋಮಿ’ ಹೇಳಿದಳು.

ಟೋಕಿಯೊದಲ್ಲಿ ವಿಶ್ವದ ದೊಡ್ಡ ದೊಡ್ಡ ಆಟೊಮೊಬೈಲ್ ಕಂಪನಿಗಳಿವೆ. ಮ್ಯೂಸಿಯಂ, ಪ್ರಾಣಿ ಸಂಗ್ರಹಾಲಯಗಳಿವೆ. ಡಿಸ್ನಿವರ್ಲ್ಡ್‌, ಥೀಮ್ ಪಾರ್ಕ್, ದೇಗುಲಗಳೂ ಇವೆ. ಇಲ್ಲಿ ಬೌದ್ಧ ಧರ್ಮ ಬರುವ ಮುನ್ನ ‘ಸಿಂಟೋ ಶ್ರೈನ್’ ಎಂಬ ಧರ್ಮವಿತ್ತು. ಇಂದು ಜಪಾನ್ ಆಧುನಿಕವಾಗಿ ಜನ ಧರ್ಮವನ್ನು ನಂಬದಿದ್ದರೂ ಮೊದಲಿಂದಲೂ ಆಚರಿಸಿಕೊಂಡು ಬಂದವರ ಸಂತತಿಯೂ ಇರುವುದರಿಂದ ಈ ಎರಡು ಧರ್ಮಗಳು ಇಂದೂ ಆಚರಣೆಯಲ್ಲಿವೆ. ಇಲ್ಲಿಯ ಜನ ಸಂತೋಷ ಸಮಾರಂಭಗಳಲ್ಲಿ ಸಿಂಟೋಶ್ರೈನ್‌ಗೆ ಹೋಗುತ್ತಾರೆ. ಅದೇ ರೀತಿ, ಮರಣಿಸಿದಾಗ ಬುದ್ಧದೇಗುಲಕ್ಕೆ ಹೋಗುತ್ತಾರೆ. ಕಾರಣ, ನಮ್ಮಂತೆ ಅವರಿಗೂ ಪುನರ್ಜನ್ಮದಲ್ಲಿ ನಂಬಿಕೆ ಇದೆ. ಇಲ್ಲಿ ನಾವು ಕಂಡ ‘ಅಸಾಕುಸ ಕ್ಯಾನನ್ ಟೆಂಪಲ್’ ಅತೀ ವಿಶಿಷ್ಟವಾಗಿದೆ.

ಅಸಾಕುಸ ಟೆಂಪಲ್

ಈ ಬುದ್ಧದೇಗುಲದ ಮುಖ್ಯಭಾಗ ‘ಸೆನ್ಸೋಜಿ ಟೆಂಪಲ್’ ಎಂಬ ಶ್ರೈನ್ ಇದೆ. ಇದು 7ನೇ ಶತಮಾನದ್ದು. ನಂಬಿಕೆಗಳು ಹೇರಳವಾಗಿರುವ ಇಲ್ಲಿ, ಟೆಂಪಲ್ ಪ್ರವೇಶದಲ್ಲೇ ವಿಗ್ರಹವೊಂದರ ಕೆಳಭಾಗದಲ್ಲಿ ಬೀಳುವ ನೀರಿನಿಂದ ಕಾಲು ತೊಳೆದು ಒಳ ಪ್ರವೇಶಿಸಬೇಕು. ಪ್ರಾಕಾರದ ದೊಡ್ಡಕರಂಡದಲ್ಲಿ ಊದುಬತ್ತಿ ಹತ್ತಿಸಿ, ಜ್ಯೋತಿಯನ್ನು ಕಣ್ಣಿಗೊತ್ತಿಕೊಂಡು ಸಿಗಿಸುತ್ತಾರೆ. ಚಿನ್ನದ ಬಣ್ಣ, ಚಿನ್ನದ ಗರ್ಭಗುಡಿಯನ್ನು ಹೊಂದಿರುವ ಈ ಕಲಾತ್ಮಕ ದೇಗುಲ ಪಗೋಡ ಶೈಲಿಯಲ್ಲಿದ್ದು ಅತ್ಯಂತ ಸುಂದರವಾಗಿದೆ. ಒಳಗಡೆ ಮರದ ಪೆಟ್ಟಿಗೆಯಂಥ ದೊಡ್ಡದಾದ ಡಬ್ಬದಲ್ಲಿ ಜನರು ಭಕ್ತಿಯಿಂದ ಕಾಣಿಕೆ ಅರ್ಪಿಸುತ್ತಾರೆ. ಗಂಟೆಯ ತರಹದ ವಾದ್ಯವೊಂದನ್ನು ನುಡಿಸುತ್ತಾರೆ. ಈ ದೇಗುಲದ ಪ್ರಾಂಗಣ, ಸಂಕೀರ್ಣ ವಿಶಾಲವಾಗಿದ್ದು ಬೇರೆಬೇರೆ ವಿಭಾಗಗಳು, ಉದ್ಯಾನವನ್ನೂ ಹೊಂದಿದೆ. ಸುತ್ತಲಿನ ಸೌಂದರ್ಯದೊಂದಿಗೆ ಆಧ್ಯಾತ್ಮಿಕ ವಾತಾವರಣವೂ ಮಿಳಿತವಾಗಿ ಪ್ರವಾಸಿಗರೆಲ್ಲರಿಗೂ ಅಪ್ಯಾಯವೆನ್ನಿಸುವ ದೇಗುಲವಾಗಿದೆ.

ಟೋಕಿಯೊ ಸ್ಕೈಟ್ರೀ

ಗಗನಚುಂಬಿಯಿಲ್ಲದೆ ಮಹಾನಗರದ ಅಸ್ತಿತ್ವವೆಲ್ಲಿ. ಅದಕ್ಕೇ ಇಂತಹ ಕಟ್ಟಡಗಳು. ಆಧುನಿಕ ವಿನ್ಯಾಸದ್ದಾಗಿದ್ದು, ವೀಕ್ಷಣಾ ಡೆಕ್‍ನಿಂದ ಇಡೀ ಟೋಕಿಯೊ ಅತ್ಯಂತ ಮನೋಹರವಾಗಿ ಕಾಣಿಸುತ್ತದೆ. ಜಪಾನೀಯರ ಧಾರ್ಮಿಕ ನಂಬುಗೆಯ ‘ಮೌಂಟ್ ಫ್ಯೂಜಿ’ ಪರ್ವತವೂ ಕಾಣಿಸುತ್ತದೆ. ಏಷ್ಯಾ ರಾಷ್ಟ್ರಗಳೆಲ್ಲ ಹೆಚ್ಚು ಕಮ್ಮಿ ಒಂದೇ ರೀತಿಯ ನಂಬಿಕೆಗಳ ಸೂತ್ರದಲ್ಲಿ ಹೆಣಿಗೆಯಾಗಿವೆ. ನಾವು ಬದುಕಿನಲ್ಲೊಮ್ಮೆ ಕೈಲಾಸಪರ್ವತ ಕಾಣಬೇಕೆಂದು ಬಯಸುತ್ತೀವಿ, ಅದೇ ರೀತಿ ಜಪಾನೀಯರು ಈ ಮೌಂಟ್ ಫ್ಯೂಜಿ ಪರ್ವತವನ್ನು ಕಂಡು, ಹತ್ತಿಳಿಯಬೇಕೆಂಬ ಭಕ್ತಿ ಹೊಂದಿದ್ದಾರೆ. ಈ ತಾಣ ಟೋಕಿಯೊದಿಂದ ಕೇವಲ ಎರಡುಗಂಟೆಗಳ ಪಯಣದ ಅಂತರದಲ್ಲಿದೆ. ‌

ಸುಮೇಧಾ ನದಿ

ಟೋಕಿಯೊ ಈ ಸುಮೇಧಾನದಿ ಹಾಗೂ ಪೆಸಿಫಿಕ್ ಸಾಗರಕೊಲ್ಲಿಯ ದಡದಲ್ಲಿದೆ. ಅಂದಮೇಲೆ ನೌಕಾಯಾನ ಇರಲೇಬೇಕಲ್ಲ, ಇದೆ. ಈ ಯಾನ ಟೋಕಿಯೊದ ಸೌಂದರ್ಯ ತೆರೆದು ತೋರಿಸುವ ಪರಿಯೇ ಅನನ್ಯ. ಇದು ಒಂದು ದಿನದಲ್ಲಿ ಕೈಗೊಳ್ಳಬಹುದಾದ ಯಾನ. ಈ ಪ್ರಯಾಣದಲ್ಲಿ ನಿಕ್ಕೊ, ಕಮಾಕುರ, ಫ್ಯೂಜಿ, ಹಕೋನೆದ್ವೀಪ, ಯೋಕೋಹಾಮದಂತಹ ತಾಣಗಳನ್ನು ನೋಡಬಹುದು. ಇದು ಪ್ರವಾಸಿ ಹಸಿವಿಗೆ ರಸದೌತಣ. ಇಲ್ಲಿಗೆ ಹೋಗುವ ಹಾದಿಗಳಂತೂ ವಾವ್‌...ಎನ್ನುವಂಥದ್ದು.

ಹೂವು ಅರಳುವ ಹಬ್ಬ..

ಹೌದು, ಇದೂ ಹಬ್ಬವೇ ಇಲ್ಲಿನವರಿಗೆ. ನಮ್ಮಲ್ಲಿ ವಸಂತವನ್ನು ಪ್ರಕೃತಿಹಬ್ಬ ಎನ್ನುತ್ತೇವಲ್ಲ ಹಾಗೆ. ಈ ಟೋಕಿಯೊದ ಜನಕ್ಕೆ ಮೇ ತಿಂಗಳಲ್ಲಿ ಬರುವ ‘ಚೆರ್ರಿಬ್ಲಾಸಂ’ ಎನ್ನುವ ಋತುವಿನಾಟ ತರುವ ಸಂಭ್ರಮ ಅಷ್ಟಿಷ್ಟಲ್ಲ. ಎಲ್ಲೆಲ್ಲಿ ನೋಡಲಿ ಈ ಚಂದದ ಹೂ ಸೂರೆಸೂರೆಯಾಗಿ ಇಡೀ ಟೋಕಿಯೊ ನಗರ ನಗುವುದಂತೆ. ಹಾಗೇ ‘ಆಟಂನಲ್ಲಿ’ ಅಂದರೆ ನವೆಂಬರ್-ಡಿಸೆಂಬರ್ ತಿಂಗಳಲ್ಲಿ ಎಲೆಗಳು ಹಣ್ಣಾಗಿ ಉದುರಲು ಸಜ್ಜಾಗುತ್ತವೆ. ಆದರೆ, ಅವು ಉದುರುವುದು ಒಣಕಲು ರೂಪದಲ್ಲಲ್ಲ. ಇಲ್ಲಿಯ ವಿಶಿಷ್ಟ ಮೇಪಲ್ ಮರಗಳು ರಕ್ತವರ್ಣ, ಕಂದುಬಣ್ಣ, ಕಿತ್ತಳೆ, ಗುಲಾಬಿ ಬಣ್ಣವನ್ನು ಹೊದ್ದು ನಳನಳಿಸಿದರೆ, ಗಿಂಕೋ ಜಾತಿಯ ಮರಗಳ ಎಲೆಗಳು ಹಳದಿ ವರ್ಣದಲ್ಲಿ ಬಿರಿಬಿರಿದು ಬೀಗುತ್ತವೆ. ಇವು ಉದುರಲು ಸಿದ್ಧವಾದ ಹಣ್ಣೆಲೆಗಳು ಎಂದು ಯಾರಿಂದಲೂ ಹೇಳಲು ಸಾಧ್ಯವಿಲ್ಲ.

ಅರಳಿ ನಗುವ ಹೂಗಳಂತೆ ಕಾಣುತ್ತವೆ. ಇವುಗಳಲ್ಲಿ ಅಷ್ಟು ಬಣ್ಣ, ತಾಜಾತನ. ಈ ವರ್ಣಮೇಳಕ್ಕೆ ‘ಕೋಯೊ’ ಎನ್ನುತ್ತಾರೆ. ಈ ಎರಡು ಸಂಭ್ರಮಾಚರಣೆಗಳ ಕಂಡು ಆನಂದಿಸಲು ಪ್ರಪಂಚದ ಮೂಲೆ ಮೂಲೆಯ ಪ್ರವಾಸಿಗರು ಬರುವರಂತೆ. ನಾವಂತೂ ಈ ‘ಕೋಯೊ’ ವೈಭವವನ್ನು ಕಣ್ಣಾರೆ ಕಂಡೆವು. ಇದು ವರ್ಣನಾತೀತ ಸೌಂದರ್ಯ.

ಒಟ್ಟಾರೆ ಈ ಅತ್ಯಾಧುನಿಕ ನಗರ ಪ್ರವಾಸಕ್ಕೆ ಪ್ರಶಸ್ತವಾದ ತಾಣ. ಆದರೆ, ಇಲ್ಲಿ ಭಾಷೆ ಸಮಸ್ಯೆಯಿದೆ. ಇಂಗ್ಲಿಷ್ ಹೆಚ್ಚಿನವರಿಗೆ ತಿಳಿಯದು. ಆಹಾರವೂ ಒಂದಿಷ್ಟು ಸಮಸ್ಯೆಯೇ. ಅನ್ನ, ರುಚಿಯಾದ ಮೊಸರು, ತರಕಾರಿ ಲಭ್ಯ.

ಹಾಂಕಾಂಗ್ ಮೂಲಕ ಟೋಕಿಯೊಗೆ ವಿಮಾನವಿದೆ. ಸ್ವಂತ ವ್ಯವಸ್ಥೆಯಲ್ಲಿ ಪ್ರವಾಸ ಹೋದರೆ ಅತಿ ದುಬಾರಿ. ಹಾಗಾಗಿ ಪ್ರವಾಸಿ ಕಂಪನಿಗಳ ಸಹಯೋಗದಲ್ಲಿ ಹೋದರೆ ಪೂರ್ಣವಾಗಿಯಲ್ಲದಿದ್ದರೂ ಟೋಕಿಯೊದ ಒಂದು ಚಂದದ ಪರಿಚಯ ನಮ್ಮದಾಗುತ್ತದೆ.

ಚಿತ್ರಗಳು: ಲೇಖಕರವು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT