ಮಂಗಳವಾರ, ಜುಲೈ 27, 2021
26 °C

ಪ್ರವಾಸ | ನುಬ್ರ ಕಣಿವೆಯ ಜಾತ್ರಾ ಸೊಬಗು

ಡಾ.ಎಂ.ವೆಂಕಟಸ್ವಾಮಿ Updated:

ಅಕ್ಷರ ಗಾತ್ರ : | |

Prajavani

ನುಬ್ರ ಪಟ್ಟಣ ಸಣ್ಣ ತಾಲ್ಲೂಕು. ಲೆಹ್‌ ಪಟ್ಟಣದ ಮೂಲಕ ಇಲ್ಲಿಗೆ ಹೋಗಬೇಕು.ಜೂನ್ 22 ಮತ್ತು 23ರಂದು ಇಲ್ಲಿ ನಡೆಯುವ ಜಾತ್ರೆಗೆ ದೇಶ– ವಿದೇಶಗಳಿಂದ ನೂರಾರು ಜನರು ಆಗಮಿಸುತ್ತಾರೆ.

**

ಪ್ರಸ್ತುತ ಲೆಹ್- ಲಡಾಖ್‌ ಕೇಂದ್ರಾಡಳಿತ ಪ್ರದೇಶವಾಗಿದ್ದು, ಪಾಕಿಸ್ತಾನ ಮತ್ತು ಚೀನಾ ದೇಶಗಳಿಂದ ಸುತ್ತುವರಿದಿದೆ. ನುಬ್ರ ಲಡಾಖ್‍ನ ಒಂದು ಸಣ್ಣ ತಾಲ್ಲೂಕು. ಇದು ಶ್ಯೋಕ್ ನದಿ ಸೇರುವ ನಡುವಿನ ಬೆಳ್ಳಿಬಣ್ಣದ ಮರಳು ದಿಬ್ಬಗಳ ಪ್ರದೇಶ. ಇದಕ್ಕೆ ಟಿಬೆಟ್ ಭಾಷೆಯಲ್ಲಿ ಹೂವಿನ ಕಣಿವೆ ಎಂದರ್ಥ.

ನುಬ್ರದ ಜಿಲ್ಲಾಡಳಿತ ಕೇಂದ್ರ ದಿಸ್ಕಿಟ್ ಇಲ್ಲಿಂದ 150 ಕಿ.ಮೀ. ದೂರದಲ್ಲಿದೆ. ಶ್ಯೋಕ್ ನದಿ ಸಿಂಧೂ ನದಿಯ ಉಪನದಿ. ನುಬ್ರ ತಲುಪಬೇಕಾದರೆ ಲೆಹ್ ಪಟ್ಟಣದ ಮೂಲಕ ದುರ್ಗಮ ಖರ್ದುಂಗ್ ಪಾಸ್ ಹತ್ತಿ ಇಳಿಯಬೇಕು. ಇಲ್ಲಿಗೆ ಹೋಗಲು ಭಾರತೀಯರು ಇನ್ನರ್‌ಲೈನ್ ಪರ್ಮಿಟ್ ಮತ್ತು ವಿದೇಶಿಯರು ಸಂರಕ್ಷಿತ ಪ್ರದೇಶ ಪರವಾನಗಿ ಪಡೆದುಕೊಳ್ಳುವುದು ಕಡ್ಡಾಯ. ಇಲ್ಲಿನ ಬಹುತೇಕ ಜನರು ನುಬ್ರ ಉಪ ಭಾಷೆ ಮಾತನಾಡುತ್ತಾರೆ. ಎಲ್ಲರೂ ಬೌದ್ಧ ಧರ್ಮಕ್ಕೆ ಸೇರಿದವರು.

ನುಬ್ರ ಸುತ್ತಮುತ್ತಲಿನ ಕಣಿವೆ ತಪ್ಪಲುಗಳ ನೋಟ ರಮಣೀಯವಾದುದು. 1998ರಲ್ಲಿ ಪರ್ವತ ಸಮುದಾಯಗಳ ಆಧಾರಿತ ಹಿಮಾಲಯನ್ ಕಲ್ಚರಲ್ ಹೆರಿಟೇಜ್ ಫೌಂಡೇಶನ್ (ಎಚ್‍ಸಿಎಚ್‍ಎಫ್) ಸ್ಥಾಪಿಸಲಾಯಿತು. ಎಚ್‍ಸಿಎಚ್‍ಎಫ್‌ನಡಿ ಸ್ಥಳೀಯ ಸಮುದಾಯಗಳ ಸಾಂಪ್ರದಾಯಿಕ ಹಾಡು, ಸಂಗೀತ, ನೃತ್ಯ ಮತ್ತು ಜಾನಪದ ಕಥೆಗಳು ಸೇರಿದಂತೆ ಲಡಾಖ್‍ನ ಅಮೂರ್ತ ಪರಂಪರೆಯನ್ನು ದಾಖಲಿಸುವ ಕೆಲಸ ಕೈಗೊಳ್ಳಲಾಗಿದೆ. ಜೊತೆಗೆ ನಶಿಸಿಹೋಗುತ್ತಿರುವ ಸನ್ಯಾಸಿಗಳ ಕಲೆ, ಕರಕುಶಲ ವಸ್ತುಗಳು, ಆಚರಣೆಗಳು ಮತ್ತು ಗ್ರಾಮೋದ್ಯೋಗವನ್ನು ಪುನರುಜ್ಜೀವನಗೊಳಿಸಲು ಈ ಸಂಸ್ಥೆಯು ವ್ಯಾಪಕವಾಗಿ ಕಾರ್ಯಕ್ರಮ ರೂಪಿಸಿದೆ. ಜೊತೆಗೆ, ನುಬ್ರ ಜಾತ್ರೆಯನ್ನೂ ಪ್ರಾರಂಭಿಸಲಾಗಿದೆ.


ನುಬ್ರ ಕಣಿವೆ

ಉತ್ತರದಲ್ಲಿ ಕರಕೋರಂ ಪರ್ವತಗಳು ಮತ್ತು ದಕ್ಷಿಣದಲ್ಲಿ ಲಡಾಖ್ ಪರ್ವತಗಳ ಮಧ್ಯೆ ನುಬ್ರ ನದಿ ಕಣಿವೆ ಸಿಕ್ಕಿಕೊಂಡಿದೆ. ಈ ಕಣಿವೆ ಲೆಹ್-ಲಡಾಖ್‍ನ ಶ್ರೀಮಂತ ಸಾಂಸ್ಕೃತಿಕ ಪರಂಪರೆ ಹೊಂದಿದೆ. ಸುತ್ತಲೂ ಬೆಳ್ಳಿಬಣ್ಣದ ಮರಳುದಿಬ್ಬಗಳು, ಭವ್ಯವಾದ ಪರ್ವತ ಶ್ರೇಣಿಗಳು ಮತ್ತು ವಿಶಾಲ ನದಿಗಳ ಜಲಾನಯನ ಪ್ರದೇಶ ಹೊಂದಿದೆ. ಈ ಪ್ರದೇಶ ಸುಂದರವಾದ ಹಸಿರು ಕಾಡಿನ ಬೆರ‍್ರಿ ಹಣ್ಣುಗಳ ಪೊದೆಗಳಿಂದ (ಸೀಬಕ್ಥಾರ್ನ್ ಪೊದೆಗಳು) ಕೂಡಿದೆ. ಹತ್ತಿರದಲ್ಲಿ ದಿಸ್ಕಿಟ್ ಮತ್ತು ಸ್ಯಾಮ್ ಸ್ಟಾನ್ಲಿಂಗ್ ಬೌದ್ಧ ಆಶ್ರಮಗಳಿವೆ. ದಿಸ್ಕಿಟ್‍ನಲ್ಲಿ ಸುಂದರವಾದ ಮೈತ್ರೇಯ ಬುದ್ಧನ 32 ಮೀಟರ್ ಎತ್ತರದ ವಿಗ್ರಹವಿದೆ. ಜೊತೆಗೆ, ಹಲವು ಐತಿಹಾಸಿಕ ಮತ್ತು ಧಾರ್ಮಿಕ ಸ್ಮಾರಕಗಳು ಸುತ್ತುವರಿದಿವೆ.

ವಿದೇಶಿಗರ ಆಗಮನ
ಜೂನ್ 22 ಮತ್ತು 23ರಂದು ನುಬ್ರದಲ್ಲಿ ನಡೆಯುವ ಜಾತ್ರೆಗೆ ದೇಶ– ವಿದೇಶಗಳಿಂದ ಜನರು ಆಗಮಿಸುತ್ತಾರೆ. ಈ ಸಮಯದಲ್ಲಿ ಜಾತ್ರೆ ಹಲವು ಚಟುವಟಿಕೆಗಳಿಂದ ಕೂಡಿರುತ್ತದೆ. ಇಲ್ಲಿನ ಮರಳು ದಿಬ್ಬಗಳಲ್ಲಿ ಡಬಲ್ ಹಂಪ್ ಒಂಟೆ ಸಫಾರಿ, ಸ್ಥಳೀಯ ಹಳ್ಳಿಗಳಿಗೆ ಸೈಕ್ಲಿಂಗ್, ಪರ್ವತಗಳ ಚಾರಣ, ಸಿಯಾಚಿನ್ ಹಿಮಾಚ್ಛಾದಿತ ಕಣಿವೆಗಳ ಕಡೆಗೆ ಪ್ರಯಾಣದಂತಹ ಚಟುವಟಿಕೆಗಳು ಈ ಜಾತ್ರೆಯ ವಿಶೇಷವಾಗಿವೆ. ಇದನ್ನು ರೇಷ್ಮೆ ರಸ್ತೆಯ ಹಬ್ಬ ಎಂದು ನಾಮಕರಣ ಮಾಡಲಾಗಿದೆ. ಈ ಹಬ್ಬದಲ್ಲಿ ಪಾಲ್ಗೊಳ್ಳುವ ಅನುಭವಗಳು ಜೀವಮಾನದಲ್ಲಿ ಮರೆಯಲಾಗದು.

ಈ ರೇಷ್ಮೆ ರಸ್ತೆ ಕ್ರಿಸ್ತಪೂರ್ವ 2ನೇ ಶತಮಾನದಿಂದ 18ನೇ ಶತಮಾನದವರೆಗೂ ಪೂರ್ವ ಮತ್ತು ಪಶ್ಚಿಮ ಜಗತ್ತಿನ ಸಂಪರ್ಕದ ಕೊಂಡಿಯಾಗಿತ್ತಂತೆ. ಜೊತೆಗೆ ಚೀನಾ, ಭಾರತ ಮತ್ತು ಮಧ್ಯ ಏಷ್ಯಾದ ನಡುವಿನ ಮುಖ್ಯ ಸಂಪರ್ಕವಾಗಿತ್ತು. ನುಬ್ರ ಪಟ್ಟಣ ಈ ರಸ್ತೆಯ ಮುಖ್ಯಕೇಂದ್ರವಾಗಿತ್ತು.


ನುಬ್ರ ಕಣಿವೆಯ ನೋಟ

ಸೀಬಕ್ಥಾರ್ನ್ ಪೊದೆಗಳು ಒಂದು ಕಾಲದಲ್ಲಿ ಬ್ಯಾಕ್ಟ್ರೀಯನ್ ಒಂಟೆಗಳ ಸಂತಾನೋತ್ಪತ್ತಿಯ ನೆಲೆಯಾಗಿತ್ತು. ಇವುಗಳನ್ನು ಟರ್ಕಿಸ್‍ನಿಂದ ಇಲ್ಲಿಗೆ ತರಲಾಗಿದೆ. ಪುರಾತನ ಜಗತ್ತಿನ ರೇಷ್ಮೆ ರಸ್ತೆ ಹಾದುಹೋಗುವ ಈ ಹಿಮಾಚ್ಛಾದಿತ ದುರ್ಗಮ ಹಿಮಾಲಯವು ಉತ್ತರ ಮತ್ತು ದಕ್ಷಿಣ ಜಗತ್ತಿನ ಮಧ್ಯೆ ಪಡಸಾಲೆಯಾಗಿತ್ತು. ಜೊತೆಗೆ ಈ ರಸ್ತೆಯಲ್ಲಿ ನಡೆಯುತ್ತಿದ್ದ ಆರ್ಥಿಕ, ಸಾಂಸ್ಕೃತಿಕ, ರಾಜಕೀಯ ಮತ್ತು ಧಾರ್ಮಿಕ ವಿನಿಮಯಗಳನ್ನು ಮತ್ತೊಮ್ಮೆ ಸ್ಥಾಪಿಸುವುದು ಈ ಜಾತ್ರೆಯ ಮುಖ್ಯ ಗುರಿಯಾಗಿದೆ. ಅಂದಿನ ರೇಷ್ಮೆ ರಸ್ತೆ ಮೂಲಕ ಇಂದಿನ ಆಧುನಿಕ ಜಗತ್ತು ತನ್ನ ಇತಿಹಾಸ, ಸಂಸ್ಕೃತಿ ಮತ್ತು ಧಾರ್ಮಿಕ ಪರಂಪರೆಯನ್ನು ಕಂಡುಕೊಳ್ಳಲು ಹೊರಟಿದೆ. 

ಪ್ರಸ್ತುತ ಲೆಹ್-ಲಡಾಖ್ ಪ್ರದೇಶಕ್ಕೆ ವರ್ಷದಲ್ಲಿ ಒಂದು ಲಕ್ಷಕ್ಕಿಂತ ಹೆಚ್ಚು ಪ್ರವಾಸಿಗರು ಭೇಟಿ ನೀಡುತ್ತಾರೆ. ಈ ಪ್ರದೇಶ ಶೀತಲ ಮರಳುಗಾಡು, ಹಿಮಾಚ್ಛಾದಿತ ಪರ್ವತ ಶ್ರೇಣಿ, ಕಣಿವೆ-ತಪ್ಪಲು ಮತ್ತು ರಭಸವಾಗಿ ಹರಿಯುವ ನದಿಗಳಿಂದ ಕೂಡಿದೆ. ಈ ಎತ್ತರದ ಪ್ರದೇಶದಲ್ಲಿ ಮಳೆರಾಯನ ಆಗಮನವೇ ಅಪರೂಪ.

ಹಿಂಗಾರು, ಮುಂಗಾರು ಮೋಡಗಳನ್ನು ಎತ್ತರದ ಹಿಮಾಲಯಗಳು ದಕ್ಷಿಣದಲ್ಲಿ ತಡೆದು ನಿಲ್ಲಿಸಿ ಲೆಹ್-ಲಡಾಖ್‍ ಅನ್ನು ‘ರೈನ್ ಶಾಡೊ’ ವಲಯವನ್ನಾಗಿಸಿವೆ. ಬೇಸಿಗೆ ಕಾಲದಲ್ಲಿ ಪರ್ವತಗಳ ಮೇಲಿಂದ ಕರಗಿ ಹರಿಯುವ ಹಿಮ ಮತ್ತು ಚಳಿಗಾಲದಲ್ಲಿ ಬೀಳುವ ಹಿಮ ಕರಗಿ ಹರಿದು ಬರುವ ನೀರೇ ಇಲ್ಲಿನ ಜನರಿಗೆ ಜೀವನಾಡಿ. ಮುಖ್ಯವಾದ ಬೆಳೆಗಳೆಂದರೆ ಗೋದಿ, ಬಾರ್ಲಿ, ಬಟಾಣಿ, ಸಾಸಿವೆ, ಕೆಂಪು ಸೇಬು, ವಾಲ್ನೆಟ್, ಏಪ್ರಿಕಾಟ್, ಬಾದಾಮಿ.

ನವೆಂಬರ್‌ನಿಂದ ಏಪ್ರಿಲ್‍ವರೆಗೂ ಲೆಹ್-ಲಡಾಖ್ ಪ್ರದೇಶಕ್ಕೆ ಹೋಗುವ ದಾರಿಗಳೆಲ್ಲ ಹಿಮಾವೃತದಿಂದ ಮುಚ್ಚಿಕೊಂಡು ಜಗತ್ತಿನ ಸಂಪರ್ಕ ಕಡಿದುಕೊಳ್ಳುತ್ತವೆ. ಈ ವೇಳೆ ಇಲ್ಲಿನ ಉಷ್ಣಾಂಶ -15ರಿಂದ -35ರವರೆಗೆ ಇಳಿದುಬಿಡುತ್ತದೆ. ಚಳಿಗಾಲದಲ್ಲಿ ಜನರೆಲ್ಲ ಹೆಚ್ಚಾಗಿ ಮನೆಗಳ ಒಳಗೆಯೇ ಇರಬೇಕಾಗುತ್ತದೆ. ಚಳಿಯಲ್ಲಿ ಯಾರಾದರೂ ಹೊರಗೆ ಬಂದರೆ ದಾರಿಯಲ್ಲಿ ಎಲ್ಲಿಯೂ ನಿಲ್ಲದೆ ನಡೆಯುತ್ತ ತಾವು ಸೇರಬೇಕಾದ ಸ್ಥಳ ಸೇರಿಕೊಳ್ಳಬೇಕು. ಹೆಚ್ಚು ಕಡಿಮೆಯಾಗಿ ಆಯಾಸದಿಂದ ಕುಳಿತುಬಿಟ್ಟರೆ ಅಲ್ಲೇ ಮರಗಟ್ಟಿ ಸತ್ತು ಹೋಗುತ್ತಾರೆ.

ಲೆಹ್-ಲಡಾಖ್ ಪ್ರದೇಶ ನೋಡಲು ಹೋಗುವ ಜನರು ಆರೋಗ್ಯವಾಗಿರುವುದು ಲೇಸು. ಇಲ್ಲಿನ ವಾತಾವರಣದಲ್ಲಿ ಮನುಷ್ಯರಿಗೆ ಬೇಕಾದ 50ರಷ್ಟು ಆಮ್ಲಜನಕ ಮಾತ್ರ ಇದ್ದು ಉಸಿರಾಟಕ್ಕೆ ತೊಂದರೆಯಾಗುತ್ತದೆ. ಹೊಸದಾಗಿ ಇಲ್ಲಿಗೆ ಹೋಗುವವರು ಒಂದೆರಡು ದಿನ ವಿಶ್ರಾಂತಿ ಪಡೆದು ವಾತಾವರಣಕ್ಕೆ ಒಗ್ಗಿಕೊಂಡ ಮೇಲೆಯೇ ಸುತ್ತಮುತ್ತಲಿನ ಪ್ರದೇಶಗಳನ್ನು ನೋಡಲು ಹೋಗುತ್ತಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು