ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಡ್ನಿಯಲ್ಲಿ ತ್ರೀ ಸಿಸ್ಟರ್ಸ್

Last Updated 21 ಆಗಸ್ಟ್ 2019, 19:30 IST
ಅಕ್ಷರ ಗಾತ್ರ

ಆಸ್ಟ್ರೇಲಿಯಾದ ಅತೀ ದೊಡ್ಡ ನಗರ ಸಿಡ್ನಿ. ಆಸ್ಟ್ರೇಲಿಯಾಗೆ ಪ್ರವಾಸ ಹೋದವರು ಸಿಡ್ನಿಗೆ ಹೋಗದೇ ಬರುವುದುಂಟೇ? ಹಾಗೆ ಸಿಡ್ನಿಗೆ ಹೋದವರು ಒಪೆರಾ ಹೌಸ್, ಬೊಂಡಿ ಬೀಚ್, ತ್ರೀ ಸಿಸ್ಟರ್ಸ್ ಪರ್ವತಗಳನ್ನು ನೋಡದೆ ಬಂದರೆ ಪ್ರವಾಸ ಅಪೂರ್ಣವಾದಂತೆ.

ಸಿಡ್ನಿಯ ಪಶ್ಚಿಮ ದಿಕ್ಕಿನಲ್ಲಿದೆ ನೀಲ ಪರ್ವತಗಳ ಶ್ರೇಣಿ. ಇಲ್ಲಿಗೆ ಸಿಡ್ನಿ ಸಿಟಿಯಿಂದ ಎರಡು ಗಂಟೆಗಳ ಪ್ರಯಾಣ. ಈ ನೀಲ ಪರ್ವತಗಳ ಶ್ರೇಣಿಯಲ್ಲೇ ಒಂದಕ್ಕೊಂದು ಅಂಟಿಕೊಂಡಂತಿರುವ ಮೂರು ಪರ್ವತಗಳಿರುವ ಪ್ರಸಿದ್ಧ ತಾಣವೇ ‘ತ್ರೀ ಸಿಸ್ಟರ್ಸ್’. ಸೂರ್ಯ ಚಲಿಸಿದಂತೆ ಈ ಪರ್ವತಗಳ ನೆರಳಿನಾಟ ಮತ್ತು ಬಣ್ಣ ಬದಲಾಯಿಸುವ ಉಸಾಬರಿ ನೋಡುವುದೇ ಚೆಂದ. ತ್ರೀ ಸಿಸ್ಟರ್ಸ್‌ನ ಸೌಂದರ್ಯ ಸವಿಯಲು ಕಟೊಂಬಾದ ‘ಎಕೊ ಪಾಯಿಂಟ್’ನಲ್ಲಿ ನಿಂತು ನೋಡಬೇಕು. ಆ ದೃಶ್ಯಗಳನ್ನು ಕ್ಯಾಮೆರಾದಲ್ಲಿ ಸೆರೆ ಹಿಡಿಯಬೇಕು. ಈ ತಾಣದ ಪಕ್ಕದಲ್ಲಿಯೇ ರಾಷ್ಟ್ರೀಯ ಉದ್ಯಾನವನವೂ ಇದೆ. ವರ್ಷದ ಯಾವುದೇ ಕಾಲದಲ್ಲೂ ಇಲ್ಲಿಗೆ ಪ್ರವಾಸ ಬರಬಹುದು.

ನೀಲಿಯಲ್ಲದ ನೀಲ ಪರ್ವತ

ನೀಲ ಪರ್ವತ ನೀಲಿಯಾಗಿಲ್ಲ, ಆದರೂ ನೀಲಪರ್ವತವೆಂದೇ ಕರೆಯುತ್ತಾರೆ. ಈ ಪರ್ವತಗಳ ಶ್ರೇಣಿಯಲ್ಲಿ ನೀಲಗಿರಿ (ಯುಕಲಿಪ್ಟಸ್) ಮರಗಳು ಅಧಿಕ. ಬೇಸಿಗೆಯಲ್ಲಿ ನೀಲಗಿರಿ ಎಲೆಗಳು ಸಣ್ಣದಾಗಿ ತುಂತುರು ಸೂಸುತ್ತದೆ. ಇದರಿಂದ ಸುತ್ತಮುತ್ತಲೂ ನೀಲಗಿರಿ ಎಣ್ಣೆಯ ಪರಿಮಳ ಬರುತ್ತದೆ. ಮಾತ್ರ ಅಲ್ಲ ಈ ತುಂತುರು ಸೂರ್ಯನ ಬೆಳಕಿಗೆ ಪ್ರತಿಫಲಿಸಿ ನೋಡುಗರಿಗೆ ಕೆಲವೊಮ್ಮೆ ದೂರದಿಂದ ಬೆಟ್ಟವು ತಿಳಿ ನೀಲಿ ಬಣ್ಣವಾಗಿ ಕಾಣಿಸುತ್ತದೆ. ಅದಕ್ಕಾಗಿ ನೀಲಪರ್ವತವೆಂಬ ಹೆಸರು.

ನೀಲ ಪರ್ವತಗಳಲ್ಲಿ ಜಲಪಾತ, ಕಣಿವೆ ಪ್ರದೇಶ, ನದಿ, ಮಳೆಕಾಡುಗಳು, ಕಲ್ಲು ಬಂಡೆಗಳು, ಸೂರ್ಯನ ಕಿರಣಗಳು ಬಿದ್ದಾಗ ಚಿನ್ನದ ಮೆರುಗನ್ನು ಹೊಂದುವ ಚೂಪಾದ ತುದಿ ಭಾಗಗಳೂ ಇವೆ. ನೀಲಗಿರಿ ಮರಗಳಿಂದ ಸಣ್ಣಗೆ ಪರಿಮಳವೂ ಬರುತ್ತಿದ್ದು ಇಡೀ ಜಾಗ ಅತ್ತರ್‌ ಪೂಸಿಕೊಂಡಿವೆಯೋ ಎಂಬಂತೆ ಭಾಸವಾಗುತ್ತದೆ. ಇವುಗಳನ್ನು ಹತ್ತಿರದಿಂದ ನೋಡಲು ಹಲವು ವ್ಯವಸ್ಥೆಗಳನ್ನು ಮಾಡಿದ್ದಾರೆ. ಎಕೊ ಪಾಯಿಂಟ್‌ನಿಂದ ಬೆಟ್ಟದ ಸುತ್ತಮುತ್ತಲೂ 140 ಕಿ.ಮೀ ನಡಿಗೆಯ ದಾರಿಯಿದೆ. ಅಷ್ಟು ದೂರ ನಡೆಯಲಾಗದಿದ್ದರೆ ಒಂದೆರಡು ಕಿ.ಮೀ ಆದರೂ ನಡೆಯಬಹುದು.

ಇಲ್ಲಿ ಪ್ರವಾಸ ಬಂದವರ ಮನರಂಜಿಸಲು ಮತ್ತು ನಿಸರ್ಗ ಸೌಂದರ್ಯ ಸವಿಯಲು ಹಲವು ವ್ಯವಸ್ಥೆಗಳಿವೆ. ಇವುಗಳಲ್ಲಿ ರೈಲಿನ ಸಂಚಾರವೇ ಅದ್ಭುತ. ಬೆಟ್ಟದ ಮಧ್ಯಭಾಗದಿಂದ ಜೆಮಿಸನ್ ಕಣಿವೆ ಪ್ರದೇಶದತ್ತ ಚಲಿಸುವ ಈ ರೈಲು ಸಾಮಾನ್ಯ ರೈಲಲ್ಲ. ಇದು 52 ಡಿಗ್ರಿ ಇಳಿಜಾರಾಗಿ ವಾಲಿಕೊಂಡಿರುವ ಹಳಿಗಳ ಮೇಲೆ ಚಲಿಸುತ್ತದೆ. ಸುರಂಗದ ಮಧ್ಯದಲ್ಲೂ ಇದರ ಹಾದಿ ಇದೆ. ರೈಲಿನಲ್ಲಿ ಗಾಜಿನ ಮುಚ್ಚಳ, ಸೇಫ್ಟಿಬೆಲ್ಟ್ ಅಂತೂ ಇದೆ. ರೈಲು ಹತ್ತಿದಾಗ ಹೆದರಿಕೆ ಶುರುವಾಗುತ್ತದೆ. ರೈಲಿನಲ್ಲಿ ಕೂತು ಸೀಟಿನ ಬೆಲ್ಟ್‌ ಬಿಗಿಯುತ್ತಿದ್ದಂತೆ, ಟಪ್, ಟಪ್ ಎನ್ನುತ್ತಾ ಗಾಜಿನ ಬಾಗಿಲು ಮುಚ್ಚಿವುದೇ ತಡ ಗಡ ಗಡ ಎನ್ನುತ್ತಾ ನಿಧಾನವಾಗಿ ಶುರುವಾಗುವ ರೈಲು ರಭಸವನ್ನು ಹೆಚ್ಚಿಸುತ್ತಾ ಬೆಟ್ಟ, ಕಾಡು ಭೇದಿಸುವಂತೆ ನೇರವಾಗಿ ಕೆಳಗೆ ಜಿಗಿಯು ತ್ತದೆ. ಆಗ ಪ್ರವಾಸಿಗರ ಚೀರಾಟ ಕೇಳುತ್ತದೆ. ಕೆಳಕ್ಕೆ ಹೋದ ರೈಲು ಸ್ವಲ್ಪ ಹೊತ್ತು ನಿಂತು ಮತ್ತೆ ಮೇಲಕ್ಕೆ ಜಿಗಿದು ಬರುತ್ತದೆ.

ಕೇಬಲ್‌ ಕಾರ್‌ ಆಕರ್ಷಣೆ

ಇಲ್ಲಿನ ಮತ್ತೊಂದು ಆಕರ್ಷಣೆ ಕೇಬಲ್ ಕಾರು. ಜೆಮಿಸನ್ ಕಣಿವೆಯತ್ತ ಸಾಗುವ ಕೇಬಲ್ ಕಾರು ತ್ರೀ ಸಿಸ್ಟರ್ಸ್, ದಟ್ಟವಾದ ಮಳೆಕಾಡು, ಕಟೊಂಬಾ ಜಲಪಾತದ ದರ್ಶನ ಮಾಡಿಸುತ್ತದೆ. ಕಾಡಿನಲ್ಲಿರುವ ಮರಗಳು ರಾಕ್ಷಸಾಕಾರದಲ್ಲಿವೆ. ಹುಟ್ಟಿ ಎಷ್ಟು ವರ್ಷಗಳಾಗಿವೆಯೋ. ಕೇಬಲ್ ಕಾರಿನಿಂದ ಇಳಿದವರು ಜುರಾಸಿಕ್ ಮಳೆಕಾಡಿನಲ್ಲಿ ಸುತ್ತಾಡಬಹುದು.

ಸುತ್ತಮುತ್ತಲಿನ ಜಾಗದ ಪೂರ್ಣ ಪರಿಚಯವಾಗಲು ಮತ್ತು ನಿಸರ್ಗ ಸೌಂದರ್ಯವನ್ನು ಸವಿಯಲು ಗಾಜಿನ ಆಕಾಶ ನಡಿಗೆಯ (ಸ್ಕೈ ವಾಕ್) ಪ್ರವಾಸ ಮಾಡಬೇಕು. ಕೇಬಲ್‌ನಿಂದ ಚಲಿಸುವ ಈ ಗಾಜಿನ ಗಾಡಿ ಸಾಗಿದಂತೆ ಎಲ್ಲಾ ದಿಕ್ಕಿನಲ್ಲೂ ಪ್ರಕೃತಿ ಸೌಂದರ್ಯದ ದರ್ಶನವಾಗುತ್ತದೆ. ಅಲ್ಲದೇ ನಮ್ಮ ಕಾಲ ಕೆಳಗೆ ಭೋರ್ಗರೆಯುವ ಜಲಪಾತ, ಜಲಪಾತದ ನೀರಿನಿಂದ ಒದ್ದೆಯಾದ ಕಣಿವೆ ಪ್ರದೇಶ, ತೆಳ್ಳಗೆ ಪುಟ್ಟ ಪುಟ್ಟ ಕಲ್ಲುಗಳ ಮಧ್ಯೆ ಬಳಕುವಂತೆ ಹರಿಯುವ ನದಿ, ಹಸಿರು ಉಡುಗೆಯುಟ್ಟ ಮಳೆಕಾಡುಗಳು, ಎಲ್ಲವನ್ನೂ ಉಸಿರು ಬಿಗಿಹಿಡಿದು ನೋಡುವಂತೆ ಮಾಡುತ್ತದೆ.

ಪರ್ವತ ಶ್ರೇಣಿಯಲ್ಲಿ ನಡಿಗೆಯ ಅನುಭವ ಪಡೆಯಬಹುದು. ಜುರಾಸಿಕ್ ಮಳೆಕಾಡಿನ ಮಧ್ಯದಲ್ಲಿ ಸಾಗುವ ನಡಿಗೆ, ಹತ್ತು ನಿಮಿಷದ್ದು ಬೇಕೋ, ಒಂದು ಗಂಟೆಯದ್ದಾಗಿರಬೇಕೋ ಎಂಬ ಆಯ್ಕೆ ನಮ್ಮದು. ಮರದ ಕಾಲುದಾರಿಯಲ್ಲಿ ಸಾಗಿದಂತೆ ಇಲ್ಲಿನ ಕಾಡು ಹೂವುಗಳ ಪರಿಚಯವಾಗುತ್ತದೆ. ಪಕ್ಷಿಗಳ ಚಿಲಿಪಿಲಿಯೂ ಕೇಳಿಬರುತ್ತದೆ. ಅಲ್ಲಲ್ಲಿ ಬೆಟ್ಟಗಳಿಂದ ಹರಿದು ಬರುವ ನೀರಿನ ರುಚಿಯನ್ನೂ ಸವಿಯಬಹುದು. ನಡೆಯುತ್ತಾ ಮರದ ಕಾಲುದಾರಿ ಮುಂದೆ ಕಿರಿದಾಗುತ್ತದೆ. ಇನ್ನು ಕೆಲವು ಕಡೆ ಮರದ ತೂಗು ಸೇತುವೆಗಳೂ ಇವೆ. ಕೆಲವೆಡೆ ಇಡೀ ದಾರಿಯೇ ಅಲುಗಾಡಿದ ಅನುಭವವಾಗುತ್ತದೆ. ನಡೆದು ದಣಿದರೆ ವಿರಮಿಸಿಕೊಳ್ಳಲು ಆಸನಗಳಿವೆ. ಒಟ್ಟಾರೆ ಇಲ್ಲಿ ಕಾಲು ನಡಿಗೆ ರೋಮಾಂಚನವನ್ನಂತೂ ಕೊಡುತ್ತದೆ.

ಮಳೆಗಾಲದಲ್ಲಿ ಈ ಜಾಗಕ್ಕೆ ಬಂದರೆ ದೂರದಲ್ಲಿ ಭೋರ್ಗರೆಯುವ ಜಲಪಾತದ ಶಬ್ದ, ಕಪ್ಪೆಗಳ ಗುಟುರು, ಎಲೆಗಳ ಮೇಲೆ ನೀರು ಬೀಳುವ ಶಬ್ದದೊಂದಿಗೆ ಹಕ್ಕಿಗಳು ಧ್ವನಿಯೂ ದೊಡ್ಡದಾಗಿ ಕೇಳಿಬರುತ್ತದೆ. ಇಲ್ಲೊಂದು ಆದಿವಾಸಿಗಳ ಕೇಂದ್ರವಿದೆ. ಇಲ್ಲಿನ ಆದಿವಾಸಿಗಳು ಮೂರು ಜನ ಅಕ್ಕ ತಂಗಿಯರು ಮೂರು ಬೆಟ್ಟಗಳಾದ ಕಥೆಯನ್ನು ಹಾಡು ಮತ್ತು ನೃತ್ಯದ ಮೂಲಕ ತೋರಿಸುತ್ತಾರೆ. ಇದರೊಟ್ಟಿಗೆ ಆಸ್ಟ್ರೇಲಿಯದ ಮೂಲ ಸಂಸ್ಕೃತಿಯನ್ನೂ ಪರಿಚಯಿಸುತ್ತಾರೆ. ಆದಿವಾಸಿಗಳ ಕಲೆ, ಕಾಡು ಹೂವುಗಳ ಪ್ರದರ್ಶನವೂ ಇದೆ.

ಆದಿವಾಸಿಗಳು ಹೇಳುವ ಕಥೆ

ಜೆಮಿಸನ್ ಕಣಿವೆ ಪ್ರದೇಶದಲ್ಲಿರುವ ಕಟೊಂಬಾದಲ್ಲಿ ಮೂವರು ಅಕ್ಕ ತಂಗಿಯರಿದ್ದರು. ಅವರ ಹೆಸರು ಮಿಹ್ನಿ, ವಿಮ್ಲ ಮತ್ತು ಗುನ್ನೆಡೊ. ಮೂವರು ಸುಂದರಿಯರು. ಅಕ್ಕ ತಂಗಿಯರು ಪ್ರಾಯಕ್ಕೆ ಬಂದಾಗ ಅವರನ್ನು ಅನ್ಯ ಪಂಗಡದ ಮೂರು ಜನ ಸಹೋದರರು ಪ್ರೀತಿಸಿದರು. ಆದರೆ ಊರಿನ ಕಾನೂನು ಅನ್ಯ ಪಂಗಡದವರನ್ನು ಮದುವೆಯಾಗಲು ಸಮ್ಮತಿಸಲಿಲ್ಲ. ಅಣ್ಣ ತಮ್ಮಂದಿರು ಅಕ್ಕ ತಂಗಿ ಯರನ್ನು ಹೊತ್ತೊಯ್ದು ಮದುವೆಯಾಗಲು ಪ್ರಯತ್ನಿಸಿದರು. ಆಗ ಎರಡೂ ಪಂಗಡದವರಿಗೂ ದೊಡ್ಡ ಯುದ್ಧವೇ ನಡೆಯಿತು. ರಕ್ತಪಾತವಾಯಿತು. ಆಗ ಮಾಟಗಾರನೊಬ್ಬ ಅಕ್ಕ ತಂಗಿಯರನ್ನು ಕಾಪಾಡಲು ಅವರನ್ನು ಬೆಟ್ಟವನ್ನಾಗಿಸಿದ. ಯುದ್ಧದಲ್ಲಿ ಮಾಟಗಾರನೂ ಮಡಿದು, ಬೆಟ್ಟವಾಗಿದ್ದ ಅಕ್ಕ ತಂಗಿಯರನ್ನು ವಾಪಸ್ಸು ಮನುಷ್ಯರನ್ನಾಗಿಸಲು ಸಾಧ್ಯವಾಗಲಿಲ್ಲ. ಹಾಗೇ ಅಕ್ಕ ತಂಗಿಯರು ಬೆಟ್ಟವಾಗಿಯೇ ಶತಮಾನಗಳಿಂದ ನಿಂತಿದ್ದಾರೆ. ಆಧುನಿಕ ಯುಗದಲ್ಲಿ ಇದು ಕಟ್ಟು ಕಥೆ ಎನಿಸಿದರೂ ಒಂದು ಕ್ಷಣ ಕಥೆ ನಮ್ಮ ಮನದ ಕದ ತಟ್ಟುವುದು ಸುಳ್ಳಲ್ಲ.

ಈ ತಾಣದ ಸಮೀಪದಲ್ಲಿರುವ ಕಟೊಂಬಾದಲ್ಲಿ ಕೆಫಿಟೇರಿಯಾವಿದೆ. ಅಲ್ಲದೆ ಚಿಕ್ಕ ಪುಟ್ಟ ಅಂಗಡಿಗಳೂ ಇವೆ. ಅಲ್ಲಿ ನೆನಪಿನ ಕಾಣಿಕೆ, ಕಾಡು ಜೇನು, ಜಾಮು, ಒಣ ಹಣ್ಣುಗಳು, ನೀಲಗಿರಿ ಎಣ್ಣೆ, ನೀಲಗಿರಿ ಎಣ್ಣೆಯಿಂದ ಮಾಡಿದ ಚಾಕಲೇಟು, ಪೆಪ್ಪರಮಿಂಟುಗಳು, ಸಾಬೂನು ಮಾರಾಟಕ್ಕಿವೆ. ಸ್ಥಳಕ್ಕೆ ಭೇಟಿ ನೀಡಿದ ನೆನಪಿಗಾಗಿ ಖರೀದಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT