ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಓಹ್‌..! ಉಫಾ

ಬಶ್ಕೋರ್ತೋಸ್ಥಾನದ ರಾಜಧಾನಿ
Last Updated 27 ನವೆಂಬರ್ 2019, 19:30 IST
ಅಕ್ಷರ ಗಾತ್ರ

ರಷ್ಯಾದಲ್ಲಿರುವ ಉಫಾ ಎಂಬ ಶಹರದ ಹೆಸರನ್ನು ಕೇಳಿರುವವರು ಬಹಳ ವಿರಳ ಎನ್ನಿಸುತ್ತದೆ. ಆದರೆ ಹಲವಾರು ಭಾರತೀಯ ವಿಧ್ಯಾರ್ಥಿಗಳಿಗೆ ಈ ಪಟ್ಟಣದ ಹೆಸರು ಚೆನ್ನಾಗಿ ಗೊತ್ತಿದೆ. ಏಕೆಂದರೆ ಭಾರತದ ಅನೇಕ ವಿದ್ಯಾರ್ಥಿಗಳು ವೈದ್ಯಕೀಯ ಕ್ಷೇತ್ರದ ತರಬೇತಿಗಾಗಿ ಇಲ್ಲಿನ ವಿಶ್ವವಿದ್ಯಾಲಯಗಳಿಗೆ ಸೇರಿದ್ದಾರೆ. ಕಾರಣ, ನಮ್ಮ ದೇಶದಲ್ಲಿದ್ದಂತೆ ಇಲ್ಲಿ ಶಿಕ್ಷಣಕ್ಕಾಗಿ ಲಕ್ಷಗಟ್ಟಲೇ ಹಣ ತೆರಬೇಕಾಗಿಲ್ಲ. ಅಷ್ಟೇ ಅಲ್ಲ, ಶಿಕ್ಷಣದ ಗುಣಮಟ್ಟವೂ ಉತ್ತಮವಾಗಿರುತ್ತದೆ.

ಉರಾಲ್ ಪರ್ವತಶ್ರೇಣಿಯ ಹಸಿರು ವನಸಿರಿಯ ಸೊಬಗಿನಲ್ಲಿ ಮಿಂದು ಬೇಲಾಯಾ ನದಿಯ ದಡದಲ್ಲಿರುವ ಉಫಾ, ಬಶ್ಕೋರ್ತೋಸ್ಥಾನ ಗಣರಾಜ್ಯದ (Republic of Bashkortostan) ರಾಜಧಾನಿ. ಟರ್ಕಿ ಮೂಲದ ಸುನ್ನಿ ಮುಸ್ಲಿಂ ಧರ್ಮದ ಬಶ್ಕೀರ ಜನಾಂಗದವರು ಹೆಚ್ಚಿನ ಸಂಖ್ಯೆಯಲ್ಲಿರುವ ಈ ಪಟ್ಟಣ ಅವರ ಸಾಂಸ್ಕೃತಿಕ ಕೇಂದ್ರವೂ ಹೌದು. ತಮ್ಮದೇ ಭಾಷೆ ಮತ್ತು ಜನಜೀವನವನ್ನು ಪಾಲಿಸಿಕೊಂಡು ಬರುತ್ತಿರುವ ಬಶ್ಕೀರ ಜನರಿಗೆ ಉಫಾ ಅಸ್ಮಿಯತೆಯ ತಾಣ. ನೋಡಲು ರಷ್ಯನ್‌ರಿಗಿಂತ ಭಿನ್ನವಾಗಿರುವ ಬಶ್ಕೀರ ಜನಾಂಗದವರನ್ನು ನಾವು ಸ್ಪಷ್ಟವಾಗಿ ಗುರುತಿಸಲು ಸಾಧ್ಯವಿದೆ. ಏಕೆಂದರೆ, ಅವರು ನೋಡುವುದಕ್ಕೆ ಸ್ವಲ್ಪ ಮಂಗೋಲಿಯನ್ನರಂತೆ ಕಾಣುತ್ತಾರೆ.

ಮುಸ್ಲಿಂ ಮತ್ತು ಕ್ರಿಶ್ಚಿಯನ್‌ ಧರ್ಮವನ್ನು ಪಾಲಿಸುವ ಜನರು ಇಲ್ಲಿದ್ದಾರೆ. ಎರಡೂ ಧರ್ಮದವರು ಸೌಹಾರ್ದವಾಗಿ ಜೀವನ ನಡೆಸುತ್ತಿರುವುದನ್ನು ನೋಡಬಹುದು.‌ ರಷ್ಯಾದಲ್ಲಿ ವಾಸಿಸುವ ಮುಸ್ಲಿಂ ಜನಾಂಗದ ಆಧ್ಯಾತ್ಮಿಕ ಪೀಠವೂ ಉಫಾದಲ್ಲಿದೆ. ಅಷ್ಟೇ ಅಲ್ಲ, ಮುಸ್ಲಿಂ ಧಾರ್ಮಿಕ ವಿಶ್ವವಿದ್ಯಾಲಯವೂ ಇದೆ.

ರಷ್ಯಾದ ನಾಲ್ಕನೆಯ ದೊಡ್ಡ ಪಟ್ಟಣವಾಗಿರುವ ಉಫಾದಲ್ಲಿನ ಆಧುನಿಕ ಮತ್ತು ಪುರಾತನ ವಾಸ್ತುಶಿಲ್ಪದ ಹಲವಾರು ಕಟ್ಟಡಗಳು ಪ್ರವಾಸಿಗರನ್ನು ಸೆಳೆಯುತ್ತವೆ. 18ನೆಯ ಶತಮಾನದಲ್ಲಿ ಕಟ್ಟಿಗೆಯಲ್ಲಿ ನಿರ್ಮಾಣ ಮಾಡಿದ ಸುಂದರ ಕಟ್ಟಡಗಳ ಜೊತೆಯಲ್ಲಿ ಕೆಂಪು ಇಟ್ಟಿಗೆಯಲ್ಲಿ ಕಟ್ಟಿದ ಮಸೀದಿಗಳನ್ನು ನೋಡಬಹುದು. ಆಧುನಿಕರಣದ ಭರಾಟೆಯ ನಡುವೆಯೂ ಕೆಲವೊಂದು ಪುರಾತನ ಕಟ್ಟಡಗಳನ್ನು ಸಂರಕ್ಷಿಸಲಾಗಿದೆ. ಈ ಕಟ್ಟಡಗಳು, ಪ್ರವಾಸಿಗರಿಗೆ ಹಿಂದೆ ಈ ಪಟ್ಟಣ ಹೇಗಿತ್ತು ಎಂಬುದರ ಕಲ್ಪನೆಯನ್ನು ಕಟ್ಟಿಕೊಡುತ್ತವೆ.

ನಾನು ಈ ಪುರಾತನ ಕಟ್ಟಡಗಳ ಸೊಬಗನ್ನು ಸವಿಯುತ್ತಾ, ಪಟ್ಟಣದ ಲಾಂಛನವನ್ನು ನೋಡಿ ಬೆರಗಾದೆ. ಏಕೆಂದರೆ, ಸುಂದರವಾದ ಜೇನು ನೊಣವೇ ಉಫಾದ ಲಾಂಛನ! ಉದ್ಯಾವನದ ಮಧ್ಯದಲ್ಲಿ ವಿವಿಧ ಬಣ್ಣಗಳ ಹೂವು, ಗಿಡಗಳಿಂದ ಮಾಡಿದ ಜೇನುನೊಣದ ಕಲಾಕೃತಿ ಆಕರ್ಷಕವಾಗಿತ್ತು.

ಈ ಬಶ್ಕೀರ್ ನಾಡಿನ ಕಾಡಿನಲ್ಲಿರುವ ವಿಶಿಷ್ಟವಾದ ಜೇನು ಸಂತತಿಯಿಂದ ಪಡೆಯುವ ಜೇನುತುಪ್ಪ ವಿಶ್ವದಲ್ಲಿ ‘ಬಶ್ಕೀರ್ ಹನಿ’ ಎಂದು ಹೆಸರುವಾಸಿಯಾಗಿದೆ. ಈ ಜೇನುತುಪ್ಪದಲ್ಲಿರುವ ರುಚಿ ಮತ್ತು ಪೋಷಕಾಂಶಗಳು ಉತ್ಕೃಷ್ಟವಾಗಿದ್ದು ಅದನ್ನು ಗಗನಯಾತ್ರಿಗಳಿಗೆ ಮತ್ತು ಒಲಿಂಪಿಕ್ಸ್‌ನಲ್ಲಿ ಭಾಗವಹಿಸುವ ಕ್ರೀಡಾಪಟುಗಳಿಗೆ ಅಹಾರವನ್ನಾಗಿ ನೀಡಲಾಗುತ್ತದೆ. ನಮ್ಮ ಕಾನನದಲ್ಲಿರುವ ಹೆಜ್ಜೇನಿನಿಂದ ಜೇನುತುಪ್ಪ ಸಂಗ್ರಹಿಸುವ ಹಾಗೆ ಉಫಾದಲ್ಲೂ ಕಾಡಿನಿಂದ ಜೇನುತುಪ್ಪ ಸಂಗ್ರಹಿಸುತ್ತಾರೆ. ವಿಶ್ವವಿಖ್ಯಾತ ಜೇನುತುಪ್ಪ ಬಶ್ಕೀರ ಸಂಸ್ಕೃತಿಯ ಅವಿಭಾಜ್ಯ ಅಂಗವಾಗಿರುವ ಕಾರಣ ಉಫಾ ತನ್ನ ಪಟ್ಟಣದ ಲಾಂಛನವನ್ನು ಜೇನುನೊಣವನ್ನಾಗಿ ಆಯ್ಕೆ ಮಾಡಿಕೊಂಡಿದೆ.

ಇಲ್ಲಿನ ಬೆಲಾಯಾ ನದಿಯ ಸ್ವಚ್ಛ ನೀರಿನ ಹರಿವನ್ನು ನೋಡಿದರೆ ಖುಷಿಯಾಗುತ್ತದೆ. ಈ ನದಿ ರಷ್ಯಾದ ಗಂಗೆಯಂತಿರುವ ವೋಲ್ಗಾ ನದಿಯಲ್ಲಿ ಲೀನವಾಗಿ ಕೊನೆಗೆ ಇರಾನ್ ದೇಶದ ಕ್ಯಾಸ್ಪಿಯನ್ ಸಮುದ್ರವನ್ನು ಸೇರುತ್ತದೆ.

ಪಟ್ಟಣದ ಎತ್ತರದ ಸ್ಥಳದಲ್ಲಿ ಬಶ್ಕೀರ್ ರಾಷ್ಟ್ರೀಯತೆಯ ಹೋರಾಟಗಾರ ಸಲಾವತ್ ಯುಲಾವೇವ್ ಪ್ರತಿಮೆಯನ್ನು ಸ್ಥಾಪಿಸಲಾಗಿದೆ. ಒಂದೆಡೆ ಸಮೃದ್ಧ ಹಸಿರು ವನಸಿರಿಯ ಮಧ್ಯೆ ಹರಿಯುವ ಬೆಲಾಯಾ ನದಿ, ಸುಂದರವಾದ ಉದ್ಯಾವನ, ಎಲ್ಲೆಡೆ ಸ್ವಚ್ಛ ಪರಿಸರ. ಇಲ್ಲಿ ಪ್ಲಾಸ್ಟಿಕ್ ಮಾಲಿನ್ಯ ಕಾಣುವುದಿಲ್ಲ.

ಪ್ರವಾಸಿಗರಿಗಿಂತ ವಿದ್ಯಾರ್ಥಿಗಳೇ ಹೆಚ್ಚಾಗಿರುವ ಈ ಪಟ್ಟಣದಲ್ಲಿ ವಿವಿಧ ವಿಷಯಗಳ ಹತ್ತು ವಿಶ್ವವಿದ್ಯಾಲಯಗಳಿವೆ. ರಷ್ಯಾದ ಯುದ್ಧವಿಮಾನ ತಯಾ ರಿಸುವ ಘಟಕವಿರುವುದರಿಂದ, ವಿದ್ಯಾರ್ಥಿಗಳು ವಿಮಾನಯಾನದಲ್ಲಿ ಪರಿಣತಿ ಪಡೆಯಬಹುದು. ಜತೆಗೆ ಸಂಗೀತಕ್ಕೆ ಸಂಬಂಧಿಸಿದ ವಿಶ್ವವಿದ್ಯಾಲಯವೂ ಇದೆ!

ಬಹುಶಃ ಒಂದೇ ಶಹರದಲ್ಲಿ ಇಷ್ಟು ವಿಧದ ಶಿಕ್ಷಣ ನೀಡುವ ಸೌಲಭ್ಯವನ್ನು ಬೇರೆ ಕಡೆ ಕಾಣುವುದು ವಿರಳ. ಹೀಗಾಗಿ ಜಗತ್ತಿನ ಬೇರೆ ಬೇರೆ ದೇಶಗಳಿಂದ ವಿದ್ಯಾರ್ಥಿಗಳು ಉಫಾವನ್ನು ಹುಡುಕಿಕೊಂಡು ಬರುತ್ತಾರೆ. ಇಲ್ಲಿನ ಸುಂದರ ಪರಿಸರ ವಿದ್ಯಾರ್ಜನೆಗೆ ಅನುಕೂಲ ವಾತಾವರಣವನ್ನು ಒದಗಿಸಿಕೊಡುತ್ತದೆ.

ನನಗೆ ಉಫಾದಲ್ಲಿ ಭಾರತೀಯ ವಿದ್ಯಾರ್ಥಿಗಳಲ್ಲದೇ ಆಫ್ರಿಕಾ ಮತ್ತು ಇರಾನ್‌ನಿಂದ ಬಂದ ವಿದ್ಯಾರ್ಥಿಗಳನ್ನು ಭೇಟಿ ಮಾಡಲು ಅವಕಾಶ ಸಿಕ್ಕಿತು. ದೂರದ ಬೆಂಗಳೂರಿನಿಂದ ಪ್ರವಾಸಿಗನಾಗಿ ಹೋಗಿದ್ದ ನನ್ನ ಬಗ್ಗೆ ಅವರಿಗೆಲ್ಲ ಬಹಳ ಕುತೂಹಲ.

ಉಫಾದ ವಿವಿಗಳನ್ನು ನೋಡುವಾಗ ನಮ್ಮ ಮಲೆನಾಡಿನ ಅಂಚಿನಲ್ಲಿರುವ ಧಾರವಾಡವೂ ತನ್ನ ಹಸಿರಿನಿಂದ, ರಾಜ್ಯದ ಸಾಂಸೃತಿಕ ಮತ್ತು ಶಿಕ್ಷಣದ ಕೇಂದ್ರವಾಗಿ ರೂಪುಗೊಂಡಿರುವುದು ನೆನಪಿಗೆ ಬಂತು. ಆದರೆ ಇಂದು ಧಾರವಾಡದ ಹಸಿರು, ಮಾವಿನತೋಪು ಮಾಯವಾಗಿ ಕಾಂಕ್ರಿಟ್‌ ನಾಡಾಗಿದೆ. ಪಕ್ಕದಲ್ಲಿ ಹರಿಯುವ ಶಾಲ್ಮಲೆ ಕುಲಷಿತವಾಗಿದೆ. ಮಲೆನಾಡಿನ ಹಾಗೆ ಉರಾಲ್ ಪರ್ವತಶ್ರೇಣಿಯ ಹಸಿರು ಮಾಯವಾಗಿ ಉಫಾದ ಬೇಲಾಯ ನದಿಗೊ ಮುಂದೊಮ್ಮೆ ಇದೇ ಗತಿ ಒದಗಬಹುದೇ?

ಹಾಗಾಗುವುದಕ್ಕಿಂತ ಮುಂಚೆ ಒಮ್ಮೆ ಉಫಾವನ್ನು ನೋಡಬೇಕು. ಖಂಡಿತಾ ನೀವು ‘ಓಹ್‌’.. ಎಂದು ಉದ್ಘರಿಸುತ್ತೀರಿ. ಪ್ರವಾಸಿಗರೇ ಇಲ್ಲದ ಈ ಪಟ್ಟಣದಲ್ಲಿ ಸ್ವಚ್ಛಂದವಾಗಿ ನಡೆಯುತ್ತಲೇ ಎಲ್ಲ ಸ್ಥಳಗಳನ್ನು ನೋಡಬಹುದು. ರಷ್ಯಾ ಮತ್ತು ಅದರ ಒಡಲಿನಲ್ಲಿರುವ ಬಶ್ಕೀರ್ ಸಂಸ್ಕೃತಿಯನ್ನು ಅರಿಯಲು ಉಫಾ ಅವಕಾಶ ನೀಡುತ್ತದೆ. ವಿಶಾಲವಾಗಿರುವ ರಷ್ಯಾ ದೇಶವನ್ನು ನೋಡಲು ಬರುವ ಪ್ರವಾಸಿಗರು ಕೇವಲ ಮಾಸ್ಕೊ, ಸೇಂಟ್‌ಪೀಟರ್ಸ್‌ಬರ್ಗ್‌ಗಷ್ಟೇ ಭೇಟಿ ನೀಡುತ್ತಾರೆ. ಆದರೆ ಉಫಾದಂತಹ ಸುಂದರ ಪಟ್ಟಣದ ಹೆಸರನ್ನೇ ಕೇಳದಿರುವಾಗ ಅದಕ್ಕೆ ಭೇಟಿ ನೀಡುವುದು ದೂರದ ಮಾತಾಯಿತು.

ಉಫಾ ತಲುಪುವುದು ಹೇಗೆ?

ಉಫಾದಲ್ಲಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವಿದೆ. ಕೊಲ್ಲಿ ದೇಶಗಳಿಂದ, ನೆರೆಯ ಕಜಕಿಸ್ತಾನದಿಂದ ನೇರವಾಗಿ ವಿಮಾನಯಾನ ಸೌಲಭ್ಯವಿದೆ. ದೆಹಲಿಯಿಂದ ಏರ್‌ ಆಸ್ಥಾನಾ ಏರ್‌ಲೈನ್ಸ್‌ ಇದೆ. ಈ ವಿಮಾನ, ಕಜಕಿಸ್ತಾನದ ಮಾರ್ಗವಾಗಿ ಉಫಾ ತಲುಪುತ್ತದೆ.ಮಾಸ್ಕೋಗೆ ಬಂದವರು, ರೈಲು ಅಥವಾ ಬಸ್‌ ಮೂಲಕ ಉಫಾ ತಲುಪಬಹುದು.

ಊಟ – ವಸತಿ

ಇಲ್ಲಿ ವಸತಿಗೆ ಹಲವಾರು ಹೋಟೆಲ್‍ಗಳಿವೆ. ಅಷ್ಟೇ ಅಲ್ಲ, ಕಡಿಮೆ ದರದಲ್ಲಿ ಉತ್ತಮ ಹಾಸ್ಟೆಲ್‍ಗಳೂ ಸಿಗುತ್ತವೆ. ನಮ್ಮ ದೇಶಕ್ಕಿಂತ ವಸತಿ ಸೌಲಭ್ಯ ಇಲ್ಲಿ ಉತ್ತಮವಾಗಿದೆ. ಪ್ರವಾಸಿ ಸ್ನೇಹಿ ವಸತಿ ವ್ಯವಸ್ಥೆ ಇದೆ. ಹೆಚ್ಚಿನ ಜನರು ಕೇವಲ ರಷ್ಯನ್‌ ಭಾಷೆಯನ್ನು ಮಾತ್ರ ಮಾತನಾಡುವುದರಿಂದ ಭಾಷಾಂತರ ಮಾಡುವ ಮೊಬೈಲ್‌ ಅಪ್ಲಿಕೇಷನ್‌ ಬಳಸುವುದು ಅನಿವಾರ್ಯ.ಉಟ-ಉಪಹಾರಕ್ಕೆ ರಷ್ಯಾದ ಅಡುಗೆ ಮಾತ್ರ ಲಭ್ಯ. ಭಾರತೀಯ ಅಡುಗೆ, ಶಾಖಾಹಾರಿ ಊಟವನ್ನು ನೀಡುವ ರೆಸ್ಟೊರೆಂಟ್ ಇಲ್ಲ.

ಚಿತ್ರಗಳು: ಲೇಖಕರವು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT