ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ದೋಣಿಮನೆ’ಯಲ್ಲಿ ಹಿತಕರ ಪಯಣ

Last Updated 28 ಆಗಸ್ಟ್ 2019, 19:30 IST
ಅಕ್ಷರ ಗಾತ್ರ

ಸಮುದ್ರದ ದಂಡೆಗೆ ಬೌಂಡರಿ ಗೆರೆಗಳಂತೆ ಕಾಣುವ ಕಬ್ಬಿಣದ ರೈಲು ಹಳಿಗಳು. ಅದರ ಮೇಲೆ ಎಡೆಬಿಡದೆ ಅತ್ತಿಂದಿತ್ತ ಓಡಾಡುವ ಕೊಂಕಣ ರೈಲುಗಳು. ಆ ಹಳಿಯ ದಾರಿಯಲ್ಲೊಂದು ಅಲೆಪ್ಪಿ ಎಂಬ ಕುಟ್ಟ ನಾಡು. ರೈಲಿನಲ್ಲಿ ಪಯಣಿಸುವಾಗ ಒಂದು ದಿಕ್ಕಿನಲ್ಲಿ ಮೀನು ಹಿಡಿಯುವ ಬೋಟ್‌ಗಳು ಕಂಡರೆ, ಇನ್ನೊಂದು ದಿಕ್ಕಿನಲ್ಲಿ ವೈಭವದ ಹವಾನಿಯಂತ್ರಿತ ನಯನ ಮನೋಹರ ಹೌಸ್‌ಬೋಟ್‌ಗಳ ಸಾಲು. ನನ್ನ ಮೊದಲ ನೋಟಕ್ಕೆ ಕೇರಳದ ‘ಹೌಸ್‌ಬೋಟ್‌ ಪ್ರವಾಸಿ ತಾಣ’ ಅಲೆಪ್ಪಿ ಕಂಡಿದ್ದು ಹೀಗೆ..

ಅಲೆಪ್ಪಿಯ ಹೌಸ್‌ಬೋಟ್‌ನಲ್ಲಿ ವಿಹರಿಸಬೇಕೆಂದು ನಿರ್ಧರಿಸಿದ ದಿನವೇ, ಆನ್‌ಲೈನ್‌ ಮೂಲಕವೇ ಹೌಸ್‌ಬೋಟ್‌ ಕಂಪನಿಗಳಿಗಾಗಿ ಹುಡುಕಾಡಿದೆ. ಆಗ ಸಿಕ್ಕಿದ್ದೇ ಟ್ರಿಪ್‌ಅಡ್ವೈಸರ್ ಮತ್ತು ಮೇಕ್‌ಮೈ ಟ್ರಿಪ್ ವಿಮರ್ಶೆಯಲ್ಲಿ ಮೊದಲ ಸ್ಥಾನದಲ್ಲಿದ್ದ ಪೂರ್ಣಿಮಾ ಹೌಸ್‌ಬೋಟ್‌. ಥಟ್‌ ಎಂದು ಬುಕ್‌ ಮಾಡಿದೆ. ನಂತರ ಹೆಂಡತಿ, ಮಗಳೊಂದಿಗೆ ಹುಬ್ಬಳ್ಳಿಯಿಂದ ಕುಮಟಾ, ಅಲ್ಲಿಂದ ರೈಲು ಮೂಲಕ ಕೇರಳದ ಅಲೆಪ್ಪಿ ತಲುಪಿದೆವು.

ಹೋದ ದಿನ ರೈಲ್ವೆ ನಿಲ್ದಾಣದ ರೇವ್‌ವೀಲ್‌ ಎಂಬ ಹೋಟೆಲ್‌ನಲ್ಲಿ ಉಳಿದೆವು. ಇದು ಕಡಿಮೆ ವೆಚ್ಚದ ಹೋಟೆಲ್‌. ಮಾರನೆಯ ದಿನ ಬೆಳಿಗ್ಗೆ ನೇರವಾಗಿ ಮೊದಲೇ ಬುಕ್‌ ಮಾಡಿದ್ದ ಪೌರ್ಣಮಿ ಹೌಸ್‌ಬೋಟ್‌ ತಲುಪಿದೆವು. ಆ ಬೋಟ್‌ ಸಿಬ್ಬಂದಿ ವೆಲ್‌ಕಮ್‌ ಡ್ರಿಂಕ್‌ ಕೊಟ್ಟು ನಮ್ಮನ್ನು ಪ್ರೀತಿಯಿಂದ ಸ್ವಾಗತಿಸಿದರು. ಮೂವರು ಸಿಬ್ಬಂದಿ, ಹೌಸ್‌ಬೋಟ್‌ ಸುಪರ್ದಿಗೆ ಪಡೆದು, ಪ್ರಯಾಣ ಆರಂಭಿಸಿದರು. ಆರಂಭದ ಅರ್ಧ ಗಂಟೆ ಒಂದೇ ಸಮನೆ ಹೌಸ್‌ಬೋಟ್ ನೀರಿನಲ್ಲಿ ತೇಲುತ್ತಾ ಸಾಗಿತ್ತು.

‘ರೀ, ಸಂಜೆ ತನಕ ಸುಮ್ಮನೆ ನೀರಿನಲ್ಲಿ ತೇಲುವ ಹೌಸ್‌ಬೋಟ್‌ಗೆ ‌₹15 ಸಾವಿರ ಕೊಡೋದು ಭಾಳ ಆಯ್ತು ರೀ’ ಎಂದಳು ಹೆಂಡತಿ. ಅದಕ್ಕೆ ನಾನು ‘ಮೇಡಂ ಅವರೇ, ಈ ಊರಿಗೆ ಪೂರ್ವ ವೆನೀಸ್‌ (Venice of the east) ಎಂದು ಕರೆಯುತ್ತಾರೆ. ಆ ನಗರ ಇರುವುದು ಯೂರೋಪ್‌ನಲ್ಲಿ. ಅದನ್ನು ನೋಡುತ್ತೇವೆಯೋ ಇಲ್ಲವೋ ಗೊತ್ತಿಲ್ಲ. ಆದರೆ, ವಿದೇಶಿಯರನ್ನು ಆಕರ್ಷಿಸುವ ಈ ತಾಣ ಯುರೋಪ್‌ಗಿಂತಲೂ ನನಗೆ ಅತ್ಯದ್ಭುತ ಎನ್ನಿಸುತ್ತದೆ. ನನಗೆ ವಿಶ್ವಾಸವಿದೆ, ನಾಳೆಗೆ ನಿಮ್ಮ ಪ್ರತಿಕ್ರಿಯೆ ಬೇರೇನೇ ಆಗಿರುತ್ತೆ’ ಎಂದೆ.

ಅಷ್ಟರಲ್ಲಿ ಅಡಿಗೆಯವ ಅನಾನಸ್ ಹಣ್ಣನ್ನು ವಿಧವಿಧವಾಗಿ ತುಂಡರಿಸಿ ತಂದ. ರುಚಿಯಾಗಿತ್ತು. ಇಷ್ಟಪಟ್ಟು ತಿಂದೆವು. ಮಧ್ಯಾಹ್ನವಾಯಿತು. ಊಟಕ್ಕೆಂದು ಒಂದು ಕಡೆ ಬೋಟ್‌ ಲಂಗರು ಹಾಕಿದರು. ಅಲೆಪ್ಪಿಯ ವಿಶೇಷ ಮತ್ಸ್ಯ ಖಾದ್ಯ ಕರಿಮೀನು ಫ್ರೈ ಪೂರೈಸಿದರು. ಈ ಸಲ ನಾಲ್ಕು ಕರಿಮೀನುಗಳನ್ನು ಡೈನಿಂಗ್ ಟೇಬಲ್ ಮೇಲೆ ಇಟ್ಟಾಗ ನನಗೆ ನಗು ಬಂತು, ಮುಜುಗರ
ವಾಯಿತು. ನನ್ನ ಹೆಂಡತಿ ಹಾಗೂ ಮಗಳು ಸಸ್ಯಾಹಾರಿಗಳು. ಆ ವಿಷಯವನ್ನು ಮೊದಲೇ ತಿಳಿಸಿದ್ದರೂ ನಾಲ್ಕು ಕರಿಮೀನು ಫ್ರೈ ಇಟ್ಟಿದ್ದನ್ನು ನೋಡಿದ್ರೆ ‘ನನ್ನನ್ನು ತಿಂದು ತೇಗಿ ಹೋಗು’ ಎಂದು ಕರಿಮೀನುಗಳು ಹೇಳಿದಂತಿತ್ತು.

ಊಟವಾದ ಮೇಲೆ ಬೋಟ್ ನಾವಿಕನು ಸನ್ನೆಯಿಂದ ನನ್ನನ್ನು ಕರೆದು, ‘ಸರ್, ಟಾಡಿ ಬೇಕಾ. ತೆಂಗಿನಮರದಿಂದ ನೇರ ಭಟ್ಟಿ ಇಳಿಸಿದ್ದು. ನಿಮ್ಮ ಕಡೆ ನೀರಾ ಅನ್ನುತ್ತಾರಲ್ಲ, ಅದೇ ಇದು’ ಎಂದು ಹೇಳಿದ. ‘ನಮಗೆ ಬೇಡ, ಸ್ವಲ್ಪ ಮಜ್ಜಿಗೆ ಕೊಡಿ ಸಾಕು’ ಎಂದೆ.

ನಿಧಾನವಾಗಿ ಬಿಸಿಲೇರುತ್ತಿತ್ತು. ನಾನು ನಾವಿಕನ ಜಾಗದಲ್ಲಿ ಕುಳಿತು ಬೋಟ್ ನಡೆಸಿದೆ. ದೂರದಲ್ಲಿ ಚಿಕ್ಕ ಬೋಟ್‌ನಲ್ಲಿ ಐಸ್‌ಕ್ರೀಂ ಮಾರುವವ ಪೋಂ ಪೋಂ ಅಂತ ತುತ್ತೂರಿ ಊದುತ್ತಿದ್ದ. ಮಗಳು ಆತನಿಗೆ ಕೈಸನ್ನೇ ಮಾಡಿ ಕರೆದಳು. ಅಷ್ಟೇ ವೇಗದಲ್ಲಿ ಬಂದು, ತನ್ನ ಬೋಟ್‌ ಅನ್ನು ಚಲಿಸುತ್ತಿದ್ದ ನಮ್ಮ ಹೌಸ್‌ಬೋಟ್‌ಗೆ ಹಗ್ಗ ಹಾಕಿ ಕಟ್ಟಿದ. ಮಗಳಿಗೆ ಐಸ್‌ಕ್ರೀಂ ಕೊಟ್ಟ. ಆ ವೇಳೆ ನಮ್ಮ ಎರಡೂ ಬೋಟ್‌ಗಳು ಚಲಿಸುತ್ತಿದ್ದವು. ನಾನು ಹಣ ಕೊಟ್ಟ ನಂತರ, ಹೌಸ್‌ಬೋಟ್‌ಗೆ ಕಟ್ಟಿದ್ದ ಹಗ್ಗ ಬಿಚ್ಚಿಕೊಂಡು, ಕಣ್ಣು ಮಿಟುಕಿವಷ್ಟರಲ್ಲಿ ಆತ ಕಾಣೆಯಾದ.

ಬಿಸಿಲಿಳಿಯಿತು. ಸಂಜೆಯಾಯಿತು. ಹೌಸ್ ಬೋಟ್‌ ಲಂಗರು ಹಾಕುವ ಸಮಯ ಬಂತು. ಕಾಲುವೆಯ ದಂಡೆಯಲ್ಲಿದ್ದ ಒಂದು ತೋಟದ ಮನೆಯ ಹತ್ತಿರ ಲಂಗರು ಹಾಕಿದರು. ಆ ತೋಟದ ಮನೆಯಿಂದ ವಿದ್ಯುತ್ ಸಂಪರ್ಕ ಪಡೆದುಕೊಂಡು, ಇಡೀ ಬೋಟ್ ಅನ್ನು ಹವಾನಿಯಂತ್ರಿತವಾಗಿಸಿದರು. ಲಿವಿಂಗ್ ಏರಿಯಾಕ್ಕೆ ಸೊಳ್ಳೆ ಪರದೆ ಹಾಕಿದರು. ಅಡುಗೆಯವರು ರಾತ್ರಿ ಊಟ ಬಡಿಸಿದರು. ಬೋಟ್‌ ತೇಲುತ್ತಿತ್ತು. ಹೊಳೆಯಲ್ಲಿನ ನೀರು ಜುಳು ಜುಳು ಶಬ್ದ ಜೋಗುಳದಂತೆ ಕೇಳಿಸುತ್ತಿತ್ತು. ಹವಾನಿಯಂತ್ರಿತ ಬೆಡ್‌ರೂಮ್‌ನಲ್ಲಿ ಸುಖದ ನಿದ್ರೆ.

ಇರುಳು ಸರಿದು, ಬೆಳಕು ಹರಿಯಿತು. ಹೌಸ್‌ಬೋಟ್ ಸುತ್ತ ಎತ್ತ ನೋಡಿದರೂ ನೀರೋ ನೀರು. ಬೆಳಿಗ್ಗೆ 7 ಗಂಟೆಗೆ ನಾವಿಕ ಬೋಟ್‌ ಚಾಲನೆ ಮಾಡುತ್ತಾ ಹೊರಟ. ಅಡುಗೆ ಸಿಬ್ಬಂದಿ ಲಿವಿಂಗ್ ಏರಿಯಾದ ಡೈನಿಂಗ್ ಟೇಬಲ್ ಮೇಲೆ ಬಿಸಿಬಿಸಿ ಕಾಫಿ ತಂದಿಟ್ಟರು. ಕಾಫಿ ಹೀರುತ್ತಾ, ಸುತ್ತಲಿನ ವಾತಾವರಣವನ್ನು ಸವಿಯುತ್ತಿದ್ದೆವು. ನಂತರ ಸ್ನಾನ, ಆಮೇಲೆ ಇಡ್ಲಿ‌, ವಡಾ, ಸಾಂಬಾರ್‌ ಉಪಹಾರವಾಯಿತು. ಬೆಳಿಗ್ಗೆ 9 ಗಂಟೆ ಹೊತ್ತಿಗೆ ಬೋಟ್‌, ಹಿಂದಿನ ದಿನ ಪಯಣ ಆರಂಭಿಸಿದ್ದ ಜಾಗಕ್ಕೆ ಅಂದರೆ ನೆಹರು ಟ್ರೋಫಿ ಫಿನಿಶಿಂಗ್ ಪಾಯಿಂಟ್‌ ಹೌಸ್ ಬೋಟ್ ತಲುಪಿತು.

ಸಿಬ್ಬಂದಿ ನೀಡಿದ ಫೀಡ್‌ಬ್ಯಾಕ್ ಫಾರ್ಮ್‌ನಲ್ಲಿ ನಮ್ಮ ಒಂದು ದಿನದ ಸುಂದರ ಪಯಣದ ಅನುಭವವನ್ನು ದಾಖಲಿಸಿದೆವು. ಬೋಟ್‌ ಸಿಬ್ಬಂದಿಯೊಂದಿಗೆ ಮಾತನಾಡುತ್ತಾ, ಖುಷಿಯಿಂದ ನಿರ್ಗಮಿಸಿದೆವು.

ಹೋಗುವುದು ಹೇಗೆ ?

ಬೆಂಗಳೂರಿನಿಂದ ವಿಮಾನದಲ್ಲಿ ಕೊಚ್ಚಿ ತಲುಪಬಹುದು. ಅಲ್ಲಿಂದ ಟ್ಯಾಕ್ಸಿ ಮೂಲಕ ಅಲೆಪ್ಪಿಯ ಹೌಸ್‌ಬೋಟ್‌ ನಿಲ್ಲುವ ನೆಹರು ಟ್ರೋಫಿ ಫಿನಿಷಿಂಗ್‌ ಪಾಯಿಂಟ್ ಸೇರಬಹುದು. ವೋಲ್ವೊ ಬಸ್ ಸೌಲಭ್ಯವಿದೆ. ಬೆಂಗಳೂರು–ಎರ್ನಾಕುಲಂ ರೈಲುಗಳಿವೆ. ಅಲ್ಲಿಂದ ಅಲೆಪ್ಪಿಗೆ ರೈಲು ಹಾಗೂ ಬಸ್‌ ಸೇವೆ ಇದೆ.

ಅಲೆಪ್ಪಿ ರೈಲು ನಿಲ್ದಾಣದಿಂದ ಒಂದು ಕಿ.ಮೀ ದೂರವಿದೆ ಈ ಹೌಸ್‌ಬೋಟ್‌ ಪಾಯಿಂಟ್.

ನಾವು ಹುಬ್ಬಳ್ಳಿಯಿಂದ ಕುಮಟಾವರೆಗೆ ಬಸ್‌ನಲ್ಲಿ ಹೋದೆವು. ಅಲ್ಲಿಂದ ಮಧ್ಯಾರಾತ್ರಿ 12.30ಗೆ ನೇತ್ರಾವತಿ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಹೊರಟು, ಮಾರನೆಯ ದಿನ ಮಧ್ಯಾಹ್ನ 3.30ಕ್ಕೆ ಅಲೆಪ್ಪಿ ತಲುಪಿದೆವು. ಕಾರವಾರದಿಂದ ರಾಜಧಾನಿ ಎಕ್ಸ್‌ಪ್ರೆಸ್ ರೈಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT