ಮಂಗಳವಾರ, ಮಾರ್ಚ್ 9, 2021
18 °C

ಬೇಡಿಕೆ ಈಡೇರಿಕೆಗಾಗಿ ಆಶಾ ಕಾರ್ಯಕರ್ತೆಯರ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ಕನಿಷ್ಠ ಗೌರವಧನ ನಿಗದಿ ಮಾಡುವುದು ಹಾಗೂ ಆಶಾ ಸಾಫ್ಟ್‌ ಅಥವಾ ಆರ್‌ಸಿಪಿಎಚ್‌ ಪೋರ್ಟಲ್‌ಗೆ ಆಶಾ ಪೋತ್ಸಾಹಧನದ ಜೋಡಣೆ ರದ್ದುಪಡಿಸಬೇಕು ಎನ್ನುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಆಲ್ ಇಂಡಿಯಾ ಯುನೈಟೆಡ್‌ ಟ್ರೇಡ್‌ ಯೂನಿಯನ್‌ ಸೆಂಟರ್‌ (ಎಐಯುಟಿಯುಸಿ) ಹಾಗೂ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘ ಜಿಲ್ಲಾ ಘಟಕದಿಂದ ಸೋಮವಾರ ನಗರದಲ್ಲಿ ಪ್ರತಿಭಟನಾ ಜಾಥಾ ನಡೆಯಿತು.

ಚಾಮರಾಜೇಶ್ವರಸ್ವಾಮಿ ದೇವಸ್ಥಾನದಿಂದ ಮೆರವಣಿಗೆ ಆರಂಭಿಸಿದ ಆಶಾ ಕಾರ್ಯಕರ್ತೆಯರು ಭುವನೇಶ್ವರಿ ವೃತ್ತ, ಬಿ.ರಾಚಯ್ಯ ಜೋಡಿರಸ್ತೆ ಮಾರ್ಗವಾಗಿ ಜಿಲ್ಲಾಡಳಿತ ಭವನಕ್ಕೆ ತೆರಳಿ ಧರಣಿ ನಡೆಸಿದರು.

‘ಆಶಾ ಕಾರ್ಯಕರ್ತೆಯರಿಗೆ ಕನಿಷ್ಠ ಗೌರವಧನ ₹ 12 ಸಾವಿರ ನಿಗದಿ ಮಾಡಬೇಕು. ಆಶಾ ಸಾಫ್ಟ್‌ ಅಥವಾ ಆರ್‌ಸಿಪಿಎಚ್‌ ಪೋರ್ಟ್‌ಲ್‌ಗೆ ಆಶಾ ಪೋತ್ಸಾಹಧನದ ಜೋಡಣೆ ರದ್ದುಪಡಿಸಬೇಕು. ಬಾಕಿ ಉಳಿಸಿಕೊಂಡಿರುವ ಗೌರವಧನ ಹಾಗೂ ಪ್ರೋತ್ಸಾಹಧನವನ್ನು ಕೂಡಲೇ ನೀಡಬೇಕು’ ಎಂದು ಒತ್ತಾಯಿಸಿದರು. 

ಗೌರವಧನ ಪಾವತಿ ವಿಳಂಬ: ‘ರಾಜ್ಯ ಸರ್ಕಾರದ ನೂತನ ವೇತನ ಪಾವತಿ ವಿಧಾನದಂತೆ ಖಜಾನೆ– 2ರಿಂದ ತಿಂಗಳಿಗೆ ₹ 3,500 ಗೌರವಧನ ನೀಡುವುದನ್ನು 10 ತಿಂಗಳು ವಿಳಂಬ ಮಾಡಲಾಗಿದೆ. ಈಗಲೂ ಕೆಲವೆಡೆ 4-5 ತಿಂಗಳ ಹಣ  ಬಾಕಿ ಇದೆ. 3-4 ವರ್ಷಗಳಿಂದ ಹೊಸ ರೀತಿಯ ವೇತನ ವಿಧಾನವನ್ನು ಪದೇ ಪದೇ ಬದಲಾವಣೆ ಮಾಡಲಾಗುತ್ತಿದೆ. ಬಡ ಆಶಾ ಕಾರ್ಯಕರ್ತೆಯರ ಮೇಲೆ ಈ ರೀತಿಯ ಪ್ರಯೋಗ ಮಾಡುವುದು ಸರಿಯಲ್ಲ. ಕೂಡಲೇ ಅಗತ್ಯಕ್ರಮ ಕೈಗೊಳ್ಳಬೇಕು’ ಎಂದು ಮನವಿ ಮಾಡಿದರು.

‘ಆಶಾ ಕಾರ್ಯಕರ್ತೆಯು ಪ್ರತಿ ತಿಂಗಳು ಎಂಸಿಟಿಎಸ್‌ ಸೇವೆಗಳನ್ನು ಮಾಡಿದಷ್ಟು ಹಣ ಸಂಪೂರ್ಣವಾಗಿ ನೀಡಬೇಕು. ಇದಕ್ಕಾಗಿ ಮ್ಯಾನುವಲ್‌ ವರದಿ ಸಂಗ್ರಹಿಸಿ ವೇತನ ಪಾವತಿ ಮಾಡಬೇಕು ಅಥವಾ ಜನಸಂಖ್ಯೆಗೆ ಅನುಗುಣವಾಗಿ ಕಾರ್ಯನಿರ್ವಹಿಸುವ ಪ್ರತಿಯೊಬ್ಬ ಆಶಾಗೆ ಮಾಸಿಕ ₹ 3,000 ನೀಡಬೇಕು ಜೊತೆಗೆ ಜನಸಂಖ್ಯೆಗೆ ಅನುಗುಣವಾಗಿ ವೇತನ ಹೆಚ್ಚಿಸಬೇಕು’ ಎಂದು ಆಗ್ರಹಿಸಿದರು.

ಪ್ರತಿಭಟನಾಕಾರರು ನಂತರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಎಂ.ಸಿ.ರವಿ ಅವರನ್ನು ಭೇಟಿ ಮಾಡಿ, ಮನವಿ ಸಲ್ಲಿಸಿದರು.

ಕೇಂದ್ರ ಕಾರ್ಮಿಕ ಸಂಘಟನೆಯ ಸದಸ್ಯ ಪುಟ್ಟರಾಜು, ಎಐಯುಟಿಯುಸಿ ಜಿಲ್ಲಾ ಅಧ್ಯಕ್ಷೆ ಕವಿತಾ, ಜಿಲ್ಲಾ ಸಲಹೆಗಾರ ಚಂದ್ರಶೇಖರ ಮೇಟಿ, ತಾಲ್ಲೂಕು ಅಧ್ಯಕ್ಷೆ ರಾಣಿ, ಸುಲೋಚನಾ, ಜ್ಯೋತಿಕಲಾ, ಸರೋಜಾ, ಕಮಲಾಕ್ಷಿ, ಚೆನ್ನಂಜಮ್ಮ, ಲೀಲಾವತಿ ಪಾಲ್ಗೊಂಡಿದ್ದರು.

ಹಕ್ಕೋತ್ತಾಯಗಳು

* ಕನಿಷ್ಠ ಮಾಸಿಕ ಗೌರವಧನ ನಿಗದಿ ಮಾಡಬೇಕು

* ಆರ್‌ಸಿಎಚ್‌ ಪೋರ್ಟಲ್‌ಗೆ ಆಶಾ ಪ್ರೋತ್ಸಾಹಧನ ಜೋಡನೆ ರದ್ದು ಪಡಿಸುವುದು

* ಬಾಕಿ ಇರುವ ಪ್ರೋತ್ಸಾಹಧನವನ್ನು ಕೂಡಲೇ ಒಂದೇ ಬಾರಿಗೆ ಪಾವತಿ ಮಾಡಬೇಕು ಹಾಗೂ ಜನಸಂಖ್ಯೆಗೆ ಅನುಗುಣವಾಗಿ ಹೆಚ್ಚಳ ಮಾಡಬೇಕು.

* ಆಶಾ ಕ್ಷೇಮಾಭಿವೃದ್ಧಿ ಸ್ಥಾಪಿಸಿ ಕಾರ್ಪಸ್‌ ಫಂಡ್‌ ಮೀಸಲಿಟ್ಟು ಪರಿಹಾರ ನೀಡುವ ಬಗ್ಗೆ ಸೂಕ್ತಕ್ರಮ ಕೈಗೊಳ್ಳಬೇಕು

* ಆಶಾ ಕಾರ್ಯಕರ್ತೆಯರಿಗೆ ಹೆರಿಗೆ ರಜೆ ನೀಡಿ, ಮಾಸಿಕ ಗೌರವಧನ ನೀಡಬೇಕು. ನಿವೃತ್ತಿ ಹೊಂದಿದ ಆಶಾ ಕಾರ್ಯಕರ್ತೆಯರಿಗೆ ಪಿಂಚಣಿ ವ್ಯವಸ್ಥೆ ಕಲ್ಪಿಸಬೇಕು

* ಆಶಾ ಕಾರ್ಯಕರ್ತೆಯರನ್ನು ಸಾಮಾಜಿಕ ಸುರಕ್ಷಾ ಯೋಜನೆ ವ್ಯಾಪ್ತಿಗೆ ಕೇಂದ್ರದ ಸವಲತ್ತುಗಳನ್ನು ನೀಡಬೇಕು. ಪ್ರಧಾನ ಮಂತ್ರಿ ಜೀವನಜ್ಯೋತಿ ಯೋಜನೆ ಮತ್ತು ಪ್ರಧಾನ ಮಂತ್ರಿ ಸುರಕ್ಷಾ ಭೀಮಾ ಯೋಜನೆಯನ್ನು ಕೂಡಲೇ ಜಾರಿಗೊಳಿಸಿ ಸಂಪೂರ್ಣ ವಿಮೆ ಕಂತನ್ನು ಸರ್ಕಾರವೇ ಭರಿಸಬೇಕು

* ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ ಜನಸಂಖ್ಯೆಗೆ ಅನುಗುಣವಾಗಿ ಕೆಲಸ ನಿರ್ವಹಿಸಲು ಕ್ರಮಕೈಗೊಳ್ಳಬೇಕು

* ಆಯುಕ್ತರು, ಎಂಡಿ, ಎನ್‌ಎಚ್‌ಎಂ ಇವರುಗಳ ಸಮ್ಮುಖದಲ್ಲಿ ಸಂಘದೊಂದಿಗೆ ನೆದಿರುವ ಸಭೆಗಳ ನಿರ್ಣಯಗಳನ್ನು ಜಾರಿ ಮಾಡಬೇಕು

* ಪ್ರತಿ ಮೂರು ತಿಂಗಳಿಗೊಮ್ಮೆ ಆಶಾ ಕಾರ್ಯಕರ್ತೆಯರ ಕುಂದು ಕೊರತೆ ನಿವಾರಣಾ ಸಭೆ ಕರೆದು ಪದಾಧಿಕಾರಿಗಳೊಂದಿಗೆ ಚರ್ಚಿಸಿ ಸಮಸ್ಯೆ ಬಗೆಹರಿಸಲು ಮುಂದಾಗಬೇಕು 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು