ಗುರುವಾರ , ಫೆಬ್ರವರಿ 25, 2021
29 °C
‘ನಮ್ಮ ನಗರ, ನಮ್ಮ ಧ್ವನಿ’ ಅಂಕಣದಲ್ಲಿ ಸಮಸ್ಯೆ ಬಗ್ಗೆ ಗಮನ ಸೆಳೆದಿದ್ದ ‘ಪ್ರಜಾವಾಣಿ’

ಎರಡು ಶೌಚಾಲಯಗಳು ಬಳಕೆಗೆ ಮುಕ್ತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ನಗರದ ಉಪ್ಪಾರ ಬೀದಿಯಲ್ಲಿರುವ ಪುಟ್ಟಮ್ಮಣ್ಣಿ ಉದ್ಯಾನದ ಬಳಿ ನಿರ್ಮಿಸಲಾಗಿರುವ ಸಮುದಾಯ ಶೌಚಾಲಯ ಹಾಗೂ ದೊಡ್ಡ ಅಂಗಡಿ ಬೀದಿ ಬಳಿ (ಹಳೆ ಮಾರ್ಕೆಟ್‌ ವೃತ್ತ) ನಿರ್ಮಿಸಿರುವ ಸಾರ್ವಜನಿಕ ಶೌಚಾಲಯವನ್ನು ಜಿಲ್ಲಾ ಉಸ್ತುವಾರಿ ಸಚಿವ ಸಿ.ಪುಟ್ಟರಂಗಶೆಟ್ಟಿ ಅವರು ಉದ್ಘಾಟಿಸಿದರು. 

ಈ ಎರಡೂ ಶೌಚಾಲಯಗಳ ಕಾಮಗಾರಿ ಪೂರ್ಣಗೊಂಡು ಹಲವು ವಾರಗಳು ಕಳೆದಿದ್ದರೂ, ಸಾರ್ವಜನಿಕರ ಬಳಕೆಗೆ ಮುಕ್ತವಾಗಿರಲಿಲ್ಲ. 

ನಗರದಲ್ಲಿ ಸಾರ್ವಜನಿಕ ಹಾಗೂ ಸಮುದಾಯ ಶೌಚಾಲಯಗಳ ಕೊರತೆಯಿಂದಾಗಿ ಜನರು ಬಹಿರ್ದೆಸೆಗಾಗಿ ಬಯಲನ್ನು ಆಶ್ರಯಿಸಿರುವ ಬಗ್ಗೆ ‘ಪ್ರಜಾವಾಣಿ’ಯ ಜುಲೈ 1ರ ಸಂಚಿಕೆಯ ‘ನಮ್ಮ ನಗರ, ನಮ್ಮ ಧ್ವನಿ’ ಅಂಕಣದಲ್ಲಿ ವಿವರವಾಗಿ ಪ್ರಸ್ತಾಪಿಸಲಾಗಿತ್ತು. ಈಗ ಉದ್ಘಾಟನೆಗೊಂಡಿರುವ ಶೌಚಾಲಯಗಳು ಜನರ ಬಳಕೆಗೆ ಲಭ್ಯವಿಲ್ಲದಿರುವ ಬಗ್ಗೆಯೂ ಉಲ್ಲೇಖಿಸಲಾಗಿತ್ತು. 

ಉಪ್ಪಾರ ಬೀದಿಯ ಸಮುದಾಯ ಶೌಚಾಲಯವನ್ನು ಸ್ವಚ್ಛ ಭಾರತ ಯೋಜನೆ ಅಡಿಯಲ್ಲಿ ₹6 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾಗಿದೆ. ಹಳೇ ಮಾರ್ಕೆಟ್‌ ಬಳಿಯ ಶೌಚಾಲಯವನ್ನು 14ನೇ ಹಣಕಾಸು ಯೋಜನೆಯ ಅಡಿಯಲ್ಲಿ ₹12.5 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾಗಿದೆ. 

ಸ್ವಚ್ಛತೆ ಕಾಪಾಡಿ: ಶೌಚಾಲಯಗಳನ್ನು ಉದ್ಘಾಟಿಸಿದ ನಂತರ ಮಾತನಾಡಿದ ಪುಟ್ಟರಂಗಶೆಟ್ಟಿ ಅವರು, ‘ಶೌಚಾಲಯಗಳನ್ನು ಸಮರ್ಪಕವಾಗಿ ಬಳಸಿದರೆ ಸುತ್ತಲಿನ ಪರಿಸರ ಸ್ವಚ್ಚವಾಗಿರುವುದರ ಜೊತೆಗೆ ವೈಯಕ್ತಿಕ ಆರೊಗ್ಯವನ್ನೂ ಕಾಪಾಡಬಹುದು’ ಎಂದು ಹೇಳಿದರು.

‘ಜನರ ಸಂಚಾರ ಹೆಚ್ಚಾಗಿರುವ ಈ ಭಾಗದಲ್ಲಿ ಶೌಚಾಲಯಗಳ ಅಗತ್ಯ ಇತ್ತು. ಹಳೆ ಮಾರ್ಕೆಟ್‌ ವೃತ್ತದಲ್ಲಿ‌ರುವ ಶೌಚಾಲಯದಿಂದಾಗಿ ಸಾರ್ವಜನಿಕರು, ಮಹಿಳೆಯರು, ವ್ಯಾಪಾರಸ್ಥರಿಗೆ ಅನುಕೂಲವಾಗಲಿದೆ’ ಎಂದರು. 

ಇದೇ ವೇಳೆ, ಉಪ್ಪಾರ ಬೀದಿಯ ಗರಡಿ ಮನೆ ಬಳಿ ಸಾರ್ವಜನಿಕ ಶೌಚಾಲಯ ನಿರ್ಮಿಸುವ ಸಂಬಂಧ ಸ್ಥಳಕ್ಕೆ ಭೇಟಿ ನೀಡಿ ಅಲ್ಲಿನ ಮುಖಂಡರೊಂದಿಗೆ ಚರ್ಚಿಸಿದರು.‌

ನಗರಸಭಾ ಸದಸ್ಯರಾದ ಸಿ.ಜಿ.ಚಂದ್ರಶೇಖರ್, ಬಸವಣ್ಣ, ಅಬ್ರಾರ್ ಅಹಮದ್‌, ಮುಖಂಡರಾದ ಮಹಮದ್ ಅಸ್ಗರ್ ಮುನ್ನಾ, ಮುಖಂಡ ಮಾರ್ಕೆಟ್‌ ಗಿರೀಶ್, ನಗರಸಭೆ ಆಯುಕ್ತ ರಾಜಣ್ಣ, ಎಇಇ ಸತ್ಯಮೂರ್ತಿ ಇದ್ದರು.

‘ಅಗತ್ಯವಿರುವ ಕಡೆ ಶೌಚಾಲಯ’

‘ಬಯಲು ಬಹಿರ್ದೆಸೆಯಿಂದ ಅನೇಕ ಕಾಯಿಲೆಗಳು ಉಂಟಾಗುತ್ತವೆ. ಹೀಗಾಗಿ, ಜನರ ಸಂಚಾರ ಹೆಚ್ಚು ಇರುವ ಕಡೆಗಳಲ್ಲಿ ಸಾರ್ವಜನಿಕ ಶೌಚಾಲಯಗಳನ್ನು ನಿರ್ಮಿಸಲಾಗುತ್ತಿದೆ. ಅವಶ್ಯಕತೆ ಇದ್ದಲ್ಲಿ ಮತ್ತಷ್ಟು ನಿರ್ಮಿಸಲಾಗುವುದು. ನಗರದ ಎಲ್ಲ 31 ವಾರ್ಡ್‌ಗಳಲ್ಲೂ ಹಂತ-ಹಂತವಾಗಿ ಶೌಚಾಲಯಗಳನ್ನು ನಿರ್ಮಿಸಲಾಗುವುದು’ ಎಂದು ಪುಟ್ಟರಂಗಶೆಟ್ಟಿ ಹೇಳಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು