ಮಾಹಿತಿ ಅಡಗಿಸಿಡಬೇಡಿ: ನ್ಯಾಯಮೂರ್ತಿ ಕಿವಿಮಾತು

7

ಮಾಹಿತಿ ಅಡಗಿಸಿಡಬೇಡಿ: ನ್ಯಾಯಮೂರ್ತಿ ಕಿವಿಮಾತು

Published:
Updated:
Prajavani

ಬೆಂಗಳೂರು: ಸಮಾನತೆ ಹಾಗೂ ಸ್ವಾತಂತ್ರ್ಯ ಪ್ರಜಾಪ್ರಭುತ್ವದ ಮೂಲ ಸಿದ್ಧಾಂತಗಳಾಗಿದ್ದು, ಜವಾಬ್ದಾರಿಯುತ ಸರ್ಕಾರ ಯಾವುದೇ ವಿಷಯವನ್ನು ಪ್ರಜೆಗಳಿಂದ ಅಡಗಿಸಿಡಬಾರದು ಎಂದು ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿ ಅಬ್ದುಲ್ ನಜೀರ್ ಹೇಳಿದರು.

ಕರ್ನಾಟಕ ಮಾಹಿತಿ ಆಯೋಗ ವಿಧಾನಸೌಧದಲ್ಲಿ ಶನಿವಾರ ಆಯೋಜಿಸಿದ್ದ ‘ಮಾಹಿತಿ ಹಕ್ಕು ನಿಯಮದಡಿ ನ್ಯಾಯಿಕ ವಿಧಾನಗಳು’ ಕುರಿತ ವಿಶೇಷ ವಿಚಾರಗೋಷ್ಠಿ ಉದ್ಘಾಟಿಸಿ ಅವರು ಮಾತನಾಡಿದರು.

‘ರಾಜ್ಯ ಮಾಹಿತಿ ಆಯೋಗ 2017ರಲ್ಲಿ 2.74 ಲಕ್ಷ ಪ್ರಕರಣಗಳ ಪೈಕಿ 2.14 ಲಕ್ಷ ಪ್ರಕರಣಗಳನ್ನು ಇತ್ಯರ್ಥಗೊಳಿಸಿರುವುದು ಒಳ್ಳೆಯ ಬೆಳವಣಿಗೆ.‌ ಕರ್ನಾಟಕ ಮಾಹಿತಿ ಆಯೋಗವು ದೇಶಕ್ಕೆ ಮಾದರಿಯಾಗಬೇಕು. ಪ್ರಜಾಪ್ರಭುತ್ವ ವ್ಯವಸ್ಥೆ ಪಾರದರ್ಶಕವಾಗಿರಬೇಕು’ ಎಂದು ಅವರು ತಿಳಿಸಿದರು.

ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿ ದಿನೇಶ್‌ ಮಾಹೇಶ್ವರಿ, ‘ಬೆಂಗಳೂರಿನಲ್ಲಿ ಫ್ಲೆಕ್ಸ್ ಬ್ಯಾನರ್ ತೆರವುಗೊಳಿಸಿರುವ ಸಹಜ ಪ್ರಕ್ರಿಯೆಯನ್ನು ನ್ಯಾಯಾಲಯ ಮಾಡಿದೆ. ಎಲ್ಲರ ಜೊತೆ ಜೊತೆಗೆ ಕೈಜೋಡಿಸಿ ಕೆಲಸ ಮಾಡುವುದು ಮುಖ್ಯ. ಯಾವುದೇ ಕೆಲಸವನ್ನು ಒತ್ತಾಯಕ್ಕಾಗಿಯೋ ಅಥವಾ ಸಂಕಟಕ್ಕೋ ಮಾಡಬಾರದು. ಅದು ಹಕ್ಕು ಎಂದು ನಾಗರಿಕರಲ್ಲಿ ಸ್ವಯಂ ಜಾಗೃತಿ ಮೂಡಿಸಬೇಕಿದೆ’ ಎಂದರು.

ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಆಯುಕ್ತ ಕೆ.ವಿ. ತ್ರಿಲೋಕಚಂದ್ರ, ‘ನಮ್ಮ ಇಲಾಖೆ ರಾಜಸ್ವ ಸಂಗ್ರಹದಲ್ಲಿ ಮೂರನೇ ಸ್ಥಾನದಲ್ಲಿದೆ. ಪ್ರಸಕ್ತ ಸಾಲಿನಲ್ಲಿ ₹10,400 ಕೋಟಿ ರಾಜಸ್ವ ಸಂಗ್ರಹದ ಗುರಿ ಇರಿಸಿಕೊಳ್ಳಲಾಗಿದೆ. ಯಾವುದೇ ವಕೀಲರ ಬಳಿಗೆ ಹೋಗದೇ ಮೊಬೈಲ್ ಆ್ಯಪ್ ಮೂಲಕ ಕುಳಿತಲ್ಲಿಯೇ ಮಾಹಿತಿ ಪಡೆಯಬಹುದು. 2017-18ನೇ ಸಾಲಿನಲ್ಲಿ 451 ಅರ್ಜಿಗಳು ವಿಲೇವಾರಿಯಾಗಿವೆ‌’ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !