ಶನಿವಾರ, ಜೂನ್ 19, 2021
23 °C

ಬೆಳಗಿನಿಂದ ಬೈಗಿನವರೆಗೆ ಭೈರಪ್ಪ ಜತೆ

ಶೈಲಜಾ ಹೂಗಾರ Updated:

ಅಕ್ಷರ ಗಾತ್ರ : | |

Prajavani

ಸಂಗೀತದ ಸೃಜನಶೀಲತೆಯ ಮರ್ಮ ಗಾಯಕನಿಗೆ ಗೊತ್ತು; ಸಂಗೀತದ ಮೇಷ್ಟ್ರಿಗಲ್ಲ. ಮ್ಯೂಸಿಷಿಯನ್‌ ಮತ್ತು ಮ್ಯೂಸಿಕಾಲಜಿಸ್ಟ್‌ಗೂ ಇರುವ ವ್ಯತ್ಯಾಸ ಇದು. ಈ ದೃಷ್ಟಿಯಿಂದ ಸಾಹಿತ್ಯದ ಮೇಷ್ಟ್ರಿಗಿಂತಲೂ ಸೃಜನಶೀಲ ಲೇಖಕನಿಂದ ಬರವಣಿಗೆಯ ತಂತ್ರಗಳನ್ನು ಕೇಳುವುದು ಹೆಚ್ಚು ಪ್ರಯೋಜನಕಾರಿ ಎಂದರು ಸಂತೇಶಿವರ ಲಿಂಗಣ್ಣಯ್ಯ ಭೈರಪ್ಪ.

ಅವರು ಕಳೆದ ಭಾನುವಾರ (ಡಿಸೆಂಬರ್ 23) ತಮ್ಮ ಹುಟ್ಟೂರಾದ ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲ್ಲೂಕು ಸಂತೇಶಿವರದಲ್ಲಿ ಬೆಳಗಿನಿಂದ ಸಂಜೆಯವರೆಗೂ ಯುವ ಬರಹಗಾರರ ಜೊತೆ ಇದ್ದುಬಿಟ್ಟರು. ಗೌರಮ್ಮ ಸ್ಮಾರಕ ಟ್ರಸ್ಟ್‌ ಆಯೋಜಿಸಿದ ಕಾರ್ಯಕ್ರಮ ಅದಾಗಿತ್ತು.

ಬೆಳಗ್ಗೆ ಒಂಬತ್ತರಿಂದ ತಿಂಡಿ– ಕಾಫಿ, ಸಣ್ಣದೊಂದು ಟೀ ಬ್ರೇಕ್, ಮಧ್ಯಾಹ್ನದ ಊಟ– ಸಂಜೆಯ ಕಾಫಿಯ ನಡುವೆ ಕಾದಂಬರಿ ಬರೆಯುವುದು ಹೇಗೆ ಎಂಬ ಕುರಿತಾದ ಪ್ರಶ್ನೆಗಳಿಗೆ ಉತ್ತರಿಸುತ್ತ ತಮ್ಮ ಅನುಭವವನ್ನೇ ಉದಾಹರಿಸುತ್ತ ಕಳೆದರು. ಗದಗ, ಹುಬ್ಬಳ್ಳಿ, ಮೈಸೂರು, ಬೆಂಗಳೂರು ಮುಂತಾದ ಕಡೆಗಳಿಂದ ಬಂದಿದ್ದ 150 ಜನ ಸಂಜೆ ಗ್ರಾಮದೊಳಗೊಂದು ಸುತ್ತು ಹಾಕಿ ತಮ್ಮೂರ ಕಡೆ ನಡೆದರು.

ಕತೆ ಬರೆಯಬೇಕು, ಕಾದಂಬರಿ ಹೇಗೆ ಬರೆಯುವುದು ಅದರಲ್ಲೂ ಜನರ ಮನಸ್ಸಿಗೆ ಹಿಡಿಸುವ ಕಾದಂಬರಿ ಬರೆಯುವುದು ಹೇಗೆ ಎಂಬೆಲ್ಲ ಆಲೋಚನೆ ಯುವ ಕವಿಗಳು, ಬರಹಗಾರರಿಗೆ ಸಹಜ. ಈಗಾಗಲೇ ಪ್ರಸಿದ್ಧ ಕಾದಂಬರಿಗಳನ್ನು ಬರೆದವರು ಅದು ಹೇಗೆ ಯಶಸ್ವಿಯಾದರು ಇದರಲ್ಲಿ ಎಂದು ತಿಳಿಯುವ ಕುತೂಹಲ. ಇಂಥ ಜಿಜ್ಞಾಸೆ, ಹಲವು ಪ್ರಶ್ನೆಗಳಿಗೆ ತಾಳ್ಮೆಯಿಂದ ಅನಾಯಾಸವಾಗಿ ಉತ್ತರಿಸಿದರು ಭೈರಪ್ಪ. ಇಂಥದೇ ಇದೇ ವಿಧಾನ ಅನುಕರಿಸಬೇಕಂತಿಲ್ಲ. ಅವರವರ ಮನೋಧರ್ಮಕ್ಕೆ ಹೊಂದುವಂತೆ ಬರವಣಿಗೆ ಇರಬೇಕು ಎಂದು ಮೊದಲೇ ಹೇಳುವುದನ್ನು ಮರೆಯಲಿಲ್ಲ.

ಲೇಖಕ ಇತರರಿಗಿಂತ ಹೇಗೆ ಭಿನ್ನ, ಹೇಗೆ ಭಿನ್ನವಲ್ಲ ಅಂತೆಲ್ಲ ವರ್ಗೀಕರಿಸಿ ಹೇಳಲಾಗುವುದಿಲ್ಲ. ಜೀವನಾನುಭವವನ್ನು ಶೋಧಿಸಿ, ಅರ್ಥೈಸಿ ಕಾಣುವ ರೀತಿ ಭಿನ್ನ. ಆದರೆ ಅನುಭವವನ್ನು  ನೋಡಲು ಅಧ್ಯಯನ ಬಹಳ ಮುಖ್ಯ. ಬೇರೆ ಬೇರೆ ವಿಷಯಗಳ ಅಧ್ಯಯನ ವೈವಿಧ್ಯಮಯ ಪಾತ್ರ ಸೃಷ್ಟಿಗೆ ಅಗತ್ಯ. ಇಲ್ಲವಾದರೆ ಹೊಸ ಹೊಸ ವಿಷಯ ಹೊಳೆಯುವುದು ಹೇಗೆ? ಆ ವಿಷಯ ತಜ್ಞರಷ್ಟು ಅಲ್ಲದಿದ್ದರೂ ತುಸು ಆಳವಾಗಿ ಮಾನವ ಅನುಭವಕ್ಕೆ ದಕ್ಕುವಷ್ಟಾದರೂ ಅರಿತಿರಬೇಕಾಗುತ್ತದೆ. ಆ್ಯಸ್ಟ್ರೋಫಿಸಿಕ್ಸ್‌ನಲ್ಲಿ ಆಸಕ್ತಿ ಇತ್ತು. ಹಾಗಾಗಿ ‘ಯಾನ’ ಬರೆಯಲು ಸಾಧ್ಯವಾಯಿತು. ಒಂದು ಕೃತಿಯ ಸಾಫಲ್ಯ ಅಂದರೆ ಕಲಾತ್ಮಕವಾಗಿರುವುದು. ಅದು ಬಿಟ್ಟು ಬೇರೆ ಇಲ್ಲ.

ಜೀವನದಲ್ಲಿ ಯಾವ ಸನ್ನಿವೇಶದಲ್ಲಿಯೂ ಮೌಲ್ಯದ ಪ್ರಶ್ನೆ ಬಂದೇ ಬರುತ್ತೆ. ಸಾಹಿತ್ಯದಲ್ಲಿ ಮೌಲ್ಯದ ವಿಶ್ಲೇಷಣೆ ತೋರದಿದ್ದರೆ ಹೇಗೆ? ಪ್ರತಿ ಸಂಭಾಷಣೆಯಲ್ಲೂ ಮೌಲ್ಯ ಅಥವಾ ಅಪಮೌಲ್ಯ ಇದ್ದೇ ಇರುತ್ತೆ. ಇಲ್ಲವಾದರೆ ಅದು ಗಟ್ಟಿ ಸಾಹಿತ್ಯ ಆಗುವುದೇ ಇಲ್ಲ. ರಘುವಂಶದಲ್ಲಿ ಬರುವ ಒಂದೊಂದು ಶ್ಲೋಕದಲ್ಲೂ ಎಂತೆಂಥ ಮೌಲ್ಯವಿದೆ! ಪಾತ್ರಗಳಲ್ಲಿ ಮೌಲ್ಯದ ಪರಿಣಾಮ ಇದ್ದರೆ ತೂಕದ ಸಾಹಿತ್ಯ ಆಗುತ್ತದೆ.

ವಿಶ್ವವಿದ್ಯಾಲಯಗಳಲ್ಲಿ ಸಾಹಿತ್ಯ ಬೋಧಿಸುವ ಮೇಷ್ಟ್ರೇ ತಾವೂ ಆಗಿ ಬರೆಯಲು ಆರಂಭಿಸಿದ ಬರಹಗಾರರೂ ಇದ್ದಾರೆ. ಮೇಷ್ಟ್ರು ಹೇಳಿದಂತೆಯೇ ಇವರೂ ಅದಲ್ಲ, ಇದು ಸಾಹಿತ್ಯ ಅನ್ನುತ್ತಾರೆ. ಈ ತರಹದ ಎಷ್ಟೋ ಪ್ರಭಾವಗಳು ಲೇಖಕನ ಮೇಲೆ ಆಗುತ್ತವೆ. ಇತರರ ಕೃತಿಗಳ ಓದಿನಿಂದ ಪ್ರಭಾವ ಆಗುತ್ತದೆ. ಬಿಡಿಸಿಕೊಳ್ಳಬೇಕು. ಓದುವ ಸಾಹಿತಿ ವಿಶ್ವವಿದ್ಯಾಲಯದ ಪ್ರೊಫೆಸರ್ ಆದರಂತೂ ಮೀಸೆ, ಡ್ರೆಸ್ ಸಹ ಎಷ್ಟೋ ಸಲ ಅನುಕರಣೆಯಾಗಿದ್ದಿದೆ. ಆದರೆ ನಿಮ್ಮ ಶೈಲಿ, ತಂತ್ರ ನಿಮ್ಮದು ಆಗಿರಬೇಕು.

ಲೇಖಕ ತನ್ನ ಬರವಣಿಗೆಯಂತೆಯೇ ಆದರ್ಶ ಆಗಿರಬೇಕೆ? ಎಂಬ ಪ್ರಶ್ನೆಗೆ ಅವನ ಕೃತಿಗಳನ್ನು ಓದಿ, ಅವನು, ಋಷಿ, ಉದಾರಿ ಅಂತೆಲ್ಲ ಭಾವಿಸಬೇಕಿಲ್ಲ. ನಿಜ ಜೀವನದಲ್ಲಿ ಅವನೂ ಒಬ್ಬ ಮನುಷ್ಯ ಅಷ್ಟೆ. ಜೀವನವನ್ನು ನೋಡುವ ರೀತಿಯಲ್ಲಿ, ಮೌಲ್ಯಗಳ ಒಳನೋಟ ಅವನಿಗೆ ಇರುತ್ತದೆ ಅಷ್ಟೆ. ನೋಡುವ ಆ ಶಕ್ತಿ ಅವನಿಗೆ ಸಿದ್ಧಿಸಿರುತ್ತದೆ. 

ಕೃತಿ ಸ್ವೀಕೃತವಾದಂತೆಲ್ಲ ಜನರ ಗೌರವ, ಆದರ ನಿರೀಕ್ಷೆ ಬೆಳೆಯುತ್ತೆ. ಹಿಂದಿನ ಕೃತಿಗಿಂತ ಮುಂದಿನ ಕೃತಿ ಯಾವ ಲೆಕ್ಕದಲ್ಲೂ ಕಡಿಮೆ ಇರಬಾರದು. ಕುಸುರಿ, ಬರವಣಿಗೆ ಮಟ್ಟ ಕಡಿಮೆ ಇರಬಾರದು. ಇದು ಲೇಖಕನ ಕರ್ತವ್ಯವೂ ಹೌದು.

ಪಾತ್ರಕ್ಕನುಗುಣವಾದ ಜೀವನದೃಷ್ಟಿ ಇರಬೇಕು. ಲೇಖಕನ ಜೀವನದೃಷ್ಟಿ ಅನ್ನುವ ಹೇಳಿಕೆಗೆ ಅಂಟಿಕೊಳ್ಳಬಾರದು. ಶೇಕ್ಸ್‌ಪಿಯರ್‌ನ ಜೀವನದೃಷ್ಟಿ ಯಾವುದು ಅಂತ ಅವನ ಕೃತಿಗಳ ಮೂಲಕ ಗುರುತಿಸಲು ಆಗದು. ಆ ಹದ ನೀವು ಮುಟ್ಟಬೇಕು. ಸಂದೇಶ ಕೊಡಲೆಂದೇ ಬರೆಯಬಾರದು. ಓದುಗರಿಗೆ ಬಿಟ್ಟುಬಿಡಬೇಕು. ಕಾದಂಬರಿಯಲ್ಲೂ ಕತೆ ಇರುತ್ತದೆ. ಎಷ್ಟೋ ಪಾತ್ರಗಳಿರುತ್ತವೆ. ಪಾತ್ರ ಕಟ್ಟುವಾಗ ಮುಂದೆ ಅದು ವರ್ತಿಸುವ ರೀತಿಗೆ ಪೂರಕವಾಗಿರಬೇಕು. ಕಥೆಗೊಂದು ಆದಿ– ಮಧ್ಯ– ಅಂತ್ಯ ಅಂತ ಇರಬೇಕು. ಪರಕಾಯ ಪ್ರವೇಶ ಎಲ್ಲ ಪಾತ್ರಗಳಿಗೂ ಸಾಧ್ಯವಿಲ್ಲ, ಅದು ಹೇಳುವ ರೂಪಕ ಅಷ್ಟೇನೆ. ಪಾತ್ರ ಸಹಜವಾದ ಬೆಳವಣಿಗೆ ಇರುತ್ತೆ ಕತೆಯಲ್ಲಿ. ಕೆಲವು ಕಾದಂಬರಿಗಳಲ್ಲಿ ಯಾವುದೊ ಪಾತ್ರ ಒಂದು ಕಡೆ ಬಂದು ನಂತರ ಪೂರ್ತಿ ಓದಿದ ಮೇಲೂ ಅದೇನಾಯಿತೊ ಅಂತ ಅನಿಸುತ್ತದೆ ಎಷ್ಟೋ ಸಲ. ಪಾತ್ರ ಎಲ್ಲಿ ಮುಕ್ತಾಯ ಆಗಬೇಕು ಅಂತ ಗೊತ್ತಿರಬೇಕು. ಓದುಗರಲ್ಲಿ ಪ್ರಶ್ನೆ ಉಳೀಬಾರದು.

ಕಾದಂಬರಿಗೆ ಒಂದು ಚೌಕಟ್ಟು ಅಂತ ಇರುತ್ತಲ್ಲ, ಹಾಗಂತ ಒಂದು ಥೀಮ್‌ ಸಿದ್ಧ ಮಾಡಿಕೊಂಡು ಇರಲು ಆಗುವುದೇ ಇಲ್ಲ. ಯಾವುದೊ ಘಟನೆ, ಪಾತ್ರ, ಸಮಸ್ಯೆ ಹೊಳೆಯುತ್ತೆ. ಸನ್ನಿವೇಶಗಳ ಮೂಲಕವೇ ಕತೆ ಬೆಳೆಯುತ್ತೆ. ಇಂಟರ‍್ಯಾಕ್ಷನ್ ಕೂಡ ಸನ್ನಿವೇಶಗಳ ಮೂಲಕವೇ. ಒಂದು ಪಾತ್ರ ಅದು ಒಳ್ಳೆಯದೊ ಕೆಟ್ಟದ್ದೊ ಅಂತ ಹೇಗೆ ತೋರಿಸ್ತೀರಿ? ಗುಣಾವಗುಣ ತೋರುವ ಸನ್ನಿವೇಶ ಎದುರಾಗಬೇಕಲ್ಲ? ನಿಜಜೀವನದಲ್ಲೂ ಹಾಗೇ ತಾನೆ? ಒಬ್ಬ ವ್ಯಕ್ತಿ ಉತ್ತಮ ನೌಕರ ಅಂತ ತಿಳಿಯುವುದು ಯಾವುದೊ ಘಟನೆಯಲ್ಲಿ ಅವನು ವರ್ತಿಸುವ ರೀತಿಯಿಂದಲೇ ಅಲ್ಲವೆ? ಅಲ್ಲಿಯವರೆಗೂ ಅವನು ಎಲ್ಲರಂತೆ ಬಂದು ಕೆಲಸ ಮಾಡಿ ಹೋಗುವುದು ಮಾತ್ರ ಕಾಣುತ್ತದೆ.

ಕಲ್ಪನೆಯ ಮೂಲಕ ಹುಟ್ಟಿದರೆ ಮಾತ್ರ ಅದು ಕಲೆ. ‘ಗೃಹಭಂಗ’ ಕಾದಂಬರಿ ನನ್ನದೇ ಅನುಭವ ಅಂತ ‘ಭಿತ್ತಿ’ ಓದಿದರೆ ತಿಳಿಯುತ್ತದೆ. ನನಗೆ ಭಾಷೆಯ ಹಿಡಿತ ಇತ್ತು. ಬರವಣಿಗೆ ಗೊತ್ತಿತ್ತು. ವಿಷಯ, ವಿವರ ಇದ್ದರೂ ಕಾದಂಬರಿ ಬರೆಯಲು ಸ್ವಲ್ಪ ಕಾಲದ ಅಂತರದಲ್ಲಿ ಎರಡು ಬಾರಿ ಪ್ರಯತ್ನಪಟ್ಟು ಕೈಬಿಟ್ಟಿದ್ದೆ. ನಂತರ ಕಲ್ಪನೆ ಬೆರೆಸಿ ಬರೆದಾಗ ಕಾದಂಬರಿ ಆಯಿತು. ಅಲ್ಲಿ ಸ್ವರೂಪ ಕಲ್ಪನೆಯದು, ವಿಷಯ ವಾಸ್ತವದ್ದು. ಕವಿತೆಗಳಿಗಿಂತ ಕಾದಂಬರಿಯಲ್ಲಿ ವಾಸ್ತವ ಪ್ರಜ್ಞೆ ಹೆಚ್ಚು. ‘ವಂಶವೃಕ್ಷ’ವಂತೂ ಕಲ್ಪನೆಯ ಮೂಲಕವೇ ಸೃಷ್ಟಿಯಾದದ್ದು. ಹಾಗಾಗೇ ಅದು ದೊಡ್ಡಮಟ್ಟದಲ್ಲಿ ಯಶಸ್ಸು ಕಂಡಿದ್ದು.

ದೊಡ್ಡ ದೊಡ್ಡ ಪುಸ್ತಕ ಓದುವ ಹವ್ಯಾಸ ಮೊದಲು ಬೆಳೆಸಿಕೊಳ್ಳಬೇಕು. ನಂತರ ಬರೆಯಲು ಪ್ರಯತ್ನಿಸಬಹುದು. ಚಿಕ್ಕವಯಸ್ಸಿನಲ್ಲೇ ದೊಡ್ಡ ಪುಸ್ತಕಗಳನ್ನು ಬೇಸರವಿಲ್ಲದೆ ಓದುವ ಅಭ್ಯಾಸ ಇತ್ತು, ಆ ಧಾರಣ ಶಕ್ತಿ, ತಾಳ್ಮೆ ಇರುವುದರಿಂದಲೆ ಇಷ್ಟೆಲ್ಲ ಕೃತಿ ರಚನೆ ಸಾಧ್ಯ ಆದದ್ದು. ಮನೋಧರ್ಮ ಹೇಗೆ ಬೆಳೆಸಿಕೊಳ್ಳುತ್ತೀರೊ ಹಾಗೆ, ಅದು ಇದ್ದಕ್ಕಿದ್ದಂತೆ ಬರುವುದಿಲ್ಲ. ತತ್ವಶಾಸ್ತ್ರವನ್ನು ಕ್ರಮವಾಗಿ ಅಧ್ಯಯನ ಮಾಡಿರಬೇಕು. ಸ್ವಾತಂತ್ರ್ಯಾನಂತರದ ಅಂಬೇಡ್ಕರ್, ಲೋಹಿಯಾ ಫಿಲಾಸಫಿಗಳನ್ನಷ್ಟೇ ಅಲ್ಲ. ಸ್ವಾತಂತ್ರ್ಯದ ನಂತರ ಕಮ್ಯುನಿಸ್ಟರು ಬಂದರು, ಪ್ರಗತಿಶೀಲ, ರಷ್ಯನ್‌ ಸಾಹಿತ್ಯ, ಇಂಗ್ಲಿಷ್‌ ಪ್ರಭಾವವೂ ಇತ್ತು. ನವ್ಯರು ಇಂಗ್ಲಿಷಿನಿಂದ ಕಲಿತರು,ಅಲ್ಲಿನ ಛಂದಸ್ಸು ತಂದರು. ನಮ್ಮ ಪರಂಪರೆ ಕಂಡುಕೊಳ್ಳುವ ಮಾರ್ಗವಾಗಿ ನವೋದಯ ಸಾಹಿತ್ಯ ಬಂತು. ಆದರೆ ಮೂಲ ಭಾರತೀಯ ಮನೋಧರ್ಮವೇ. ತತ್ವದ ಅಧ್ಯಯನ ಇದ್ದಾಗ ಕೃತಿಗೊಂದು ಆಳ ಒದಗುತ್ತದೆ. ಪುತಿನ, ಬೇಂದ್ರೆ ಅವರ ಕೃತಿಗಳಿಗೆ depth ಬಂದುದು ಹಾಗೆಯೇ. ಸಾಮಾಜಿಕ ಸಮಸ್ಯೆಗಳನ್ನು ಬಿಡಬೇಕು ಅಂತಲ್ಲ. ಅನುಭವವೆಲ್ಲ ರಸವಲ್ಲ. ರಸ ಅನುಭವಿಸಿದಾಗ ಹದ ಇರುತ್ತೆ. ಕೃತಿ ಕಲೆ ಆದಾಗಲೇ ರಸದ ಹದ ಮುಟ್ಟುವುದು. ವಿದ್ವತ್ತು ಒಂದು ಗಾಂಭೀರ್ಯ ಕೊಡುತ್ತದೆ. ದುರಾದೃಷ್ಟ ಎಂದರೆ ಈಗ ದೇಶದಲ್ಲಿ ವಿದ್ವತ್ತು ಬಹಳ ಕಡಿಮೆ ಆಗಿ ಒಂದು ರೀತಿಯ ಉಡಾಫೆ ಬಂದುಬಿಟ್ಟಿದೆ. ಸಾಹಿತ್ಯದ ನಿಕಷ ಎಂದರೆ ರಸ ಧ್ವನಿ ಔಚಿತ್ಯ. ಅದೇ ನಮ್ಮತನ. ಬರೆವ ವಿಧಾನದಲ್ಲಿ ಧ್ವನಿ ಇರಬೇಕು. ಕಚ್ಚಾ ವಿವರಗಳು ಇರಬಾರದು. ಕಲೆಗೆ ಅನುಗುಣವಾಗಿ ಕುಸುರಿ ಇರಬೇಕು. ಈ ತತ್ವ ಕೈಬಿಟ್ಟರೆ ನಿಜ ಕಲೆ ಸಾಧಿಸಲು ಆಗದು. ಶುದ್ಧ ಕಲೆಯ ಹದಕ್ಕೆ ಬರದಿದ್ದರೆ ಬರವಣಿಗೆ ಬರೀ ಪ್ರೊಪಗಾಂಡಾ ಆಗಿಬಿಡುತ್ತೆ. ವಿಮರ್ಶಕನ ಕೆಲಸವೇ ರಸಾಸ್ವಾದ ಗುರುತಿಸುವುದು, ಕೃತಿಯ ಮೂಲಕ ರಸಾಸ್ವಾದ ಮಾಡಿಸುವುದು ಲೇಖಕನ ಪ್ರಯತ್ನವೂ ಆಗಿರಬೇಕು.

ಕೊನೆಯ ಪ್ಯಾರಾ ಅದರಲ್ಲೂ ಕೊನೆಯ ವಾಕ್ಯ ಬರೆಯುವುದು ಕಷ್ಟ. ಇಡೀ ಕಾದಂಬರಿಯ ಟೋನ್‌ಅನ್ನು ಅದು ಹಿಡಿದುಬಿಡಬೇಕು. ನಾನು ಕೃತಿಯ ಅಂತ್ಯ ಮೊದಲೇ ತೀರ್ಮಾನ ಮಾಡುವುದಿಲ್ಲ. ತಾನೇ ಅಂತ್ಯವೂ ಬೆಳೆದುಕೊಂಡು ಬರಬೇಕು.

ಯಾವ ಭಾಷೆಯಲ್ಲಿ..?

‘ಕಾಗುಣಿತ, ಪ್ರತಿ ಶಬ್ದದಲ್ಲಿರುವ ಸ್ಪಷ್ಟ ಅರ್ಥ, ಭಾವ ಬರುತ್ಯೆ? ಇದೆಲ್ಲ ಗೊತ್ತಿರಬೇಕು ಎಂದ ಅವರು ‘ಲೇಖಕರಲ್ಲಿ ಒಂದು ರೀತಿಯ ಚಳವಳಿಯೇ ನಡೀತಿದೆ. ತನ್ನ ಪ್ರದೇಶದ ಭಾಷೆಯಲ್ಲೇ ಅದರಲ್ಲೂ ತನ್ನ ಜಾತಿಯಲ್ಲೆ ಬರೆಯಬೇಕು ಉಳಿದದ್ದೆಲ್ಲ ಕೃತಕ ಅಂತ ಎಂಬ ಥಿಯರಿ. ಆದರೆ ಓದುವವರಿಗೆ ಅರ್ಥವಾಗಬೇಕಲ್ಲ? ಯಾರಿಗಾಗಿ ಬರೀತೀರಿ ನೀವು? ಪ್ರಾದೇಶಿಕ ಛಾಯೆ ಇದ್ದೇ ಇರುತ್ತೆ, ತೆಗೆದುಹಾಕಲಾಗದು. ಮೈಸೂರಿನಲ್ಲಿ ನೆಲೆಸಿದ್ದೆ ಎಂದು ಅಲ್ಲಿನ ಪಾತ್ರ ಕಟ್ಟಬಹುದು, ಆದರೆ ಅಲ್ಲಿನ ಹಳ್ಳಿಯೊಂದರ ಪಾತ್ರ ಬರೆಯಲಾರೆ. ಬೇರೆ ಯಾಕೆ? ನಮ್ಮದೇ ಊರಿನ ಬೇರೆ ಜಾತಿಯ ಒಳಹೊಕ್ಕು ಬರೆಯಲಾಗದು’ ಎಂದು ಲೇಖಕನ ಮಿತಿಯನ್ನು ಹೇಳಿದರು. ‘ಮಂದ್ರ’ ಕಾದಂಬರಿಗಾಗಿ ಸಂಗೀತ್‌ ಹೆಸರಿನ ಜರ್ನಲ್‌ಗಳನ್ನು ಹಿಂದಿ ಭಾಷೆಯಲ್ಲೇ ಓದಿದವರು ಅವರು. ಧಾರವಾಡದ ಹಿಂದೂಸ್ತಾನಿ ಸಂಗೀತಗಾರರು, ಶ್ರೋತೃಗಳು ಆಡುವ ಭಾಷೆ ಅದು. ಹಿಂದಿ, ಉರ್ದು, ಮರಾಠಿ ಮಿಶ್ರಿತ ಕನ್ನಡ ಅರಿಯಲು ಭಾಷಾ ದೃಷ್ಟಿಯಿಂದಲೇ ಓದಿಕೊಂಡಾಗ ಹಿಡಿತಕ್ಕೆ ಸಿಕ್ಕಿತಂತೆ. ಆದರೆ ಈಗ ಸಂಗೀತದ ಮೇಲೆ ಸಣ್ಣ ಕತೆ ಬರೆಯಲು ಹೊರಟರೂ ಆಗುವುದಿಲ್ಲ ಎಂದುಬಿಟ್ಟರು.

‘ಸಾರ್ಥ’ ಕಾದಂಬರಿಯದು ಎಂಟನೇ ಶತಮಾನದ ಭಾಷೆ. ಶಾಸ್ತ್ರೀಯ ಸಂಸ್ಕೃತ. ಬೇರೆ ಬೇರೆ ವಸ್ತು ಬೇರೆಯೇ ರೀತಿಯ ಭಾಷೆ ಬಯಸುತ್ತದೆ. ಕಲಿತ ಭಾಷೆಯಾದರೂ ಅದು ಭಾರತೀಯ ಭಾಷೆ ಆದರೆ ಬರೆಯಬಹುದು ಅಲ್ಲಿ ಸಂಸ್ಕೃತಿಯ ಪ್ರಶ್ನೆ ಬರುವುದಿಲ್ಲ. ಇನ್ನು ಇಂಗ್ಲಿಷ್‌ ನಮ್ಮದಲ್ಲದ ಭಾಷೆ. ಅದರಲ್ಲೂ ನಮಗೆ ಗೊತ್ತಿರುವುದು ವಿಕ್ಟೋರಿಯನ್‌ ಇಂಗ್ಲಿಷ್‌. ಈಗೆಲ್ಲ ಇಂಗ್ಲೆಂಡಿನ ಇಂಗ್ಲಿಷ್ ಕೂಡ ಬದಲಾಗಿದೆ, ಅಮೆರಿಕನ್‌ ಇಂಗ್ಲಿಷ್ ಅಂತೂ ಹೊಸದೇ. ಗ್ರೀಕ್‌ ಲ್ಯಾಟಿನ್, ಯುರೋಪಿಯನ್ ಸಂಸ್ಕೃತಿಯ ಪರಿಚಯ ಇದ್ದರೆ ಆ ಭಾಷೆಯ ಒಳಸುಳಿ ಹಿಡಿತಕ್ಕೆ ಸಿಗಬಹುದು. ಹಾಗಾಗಿ ಇಂಗ್ಲಿಷಿನಲ್ಲಿ ಬರವಣಿಗೆ ಕಷ್ಟ ಎಂದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು