ಮಂಗಳವಾರ, ಮಾರ್ಚ್ 2, 2021
31 °C
ವಾಹನಗಳು ಫುಟ್‌ಪಾತ್‌ ಮೇಲೆ ನುಗ್ಗದಂತೆ ತಡೆಯಲು ಸಾರಕ್ಕಿ ನಿವಾಸಿಗಳ ಹೋರಾಟ

‘ನಮ್ಮ ಮಾರ್ಗವನ್ನು ನಮಗೆ ಮರಳಿ ಕೊಡಿ’

ಭೀಮಣ್ಣ ಮಾದೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಕೆಲ ಸಮಯ ಇಲ್ಲಿಯ ಫುಟ್‌ಪಾತ್‌ಗಳು ವಾಹನ ನಿಲುಗಡೆ ತಾಣಗಳಾಗುತ್ತವೆ. ಇನ್ನೂ ಕೆಲ ಸಮಯ ರಸ್ತೆಯಾಗಿ ಮಾರ್ಪಡುತ್ತವೆ. ಆದ್ದರಿಂದ ನಿವಾಸಿಗಳು ತಡವರಿಸಿಕೊಂಡು ನಡೆಯುವುದು ಅನಿವಾರ್ಯವಾಗಿದೆ.

ನಗರದ ಕನಕಪುರ ರಸ್ತೆಯ ಸಾರಕ್ಕಿ ಸಿಗ್ನಲ್‌ ಸುತ್ತಮುತ್ತಲ ಪ್ರದೇಶದ ಕಥೆ ಇದು.

ಜೆ.ಪಿ.ನಗರ ಮೆಟ್ರೊ ನಿಲ್ದಾಣದ ಬಳಿ ಇರುವ ಸಾರಕ್ಕಿ ಸಿಗ್ನಲ್‌ನಿಂದ ಬಿಗ್ ಮಾರ್ಕೆಟ್‌ವರೆಗೂ ರಸ್ತೆಯ ಎರಡೂ ಬದಿಯ ಪಾದಚಾರಿ ಮಾರ್ಗಗಳ ಮೇಲೆ ವಾಹನಗಳನ್ನು ನಿಲ್ಲಿಸಲಾಗುತ್ತಿದೆ. ಕೆಲವರು ಪಾದಚಾರಿ ಮಾರ್ಗದ ಮೇಲೆ ವಾಹನಗಳನ್ನು ನುಗ್ಗಿಸಿ
ಕೊಂಡು ಹೋಗುತ್ತಾರೆ. ಫುಟ್‌ಪಾತ್‌ ಮಾರ್ಗಗಳನ್ನು ವ್ಯಾಪಾರಿಗಳು ಅತಿಕ್ರಮಣ ಮಾಡಿಕೊಂಡಿದ್ದಾರೆ. ಹೀಗಾಗಿ ಪಾದಚಾರಿಗಳಿಗೆ ನಡೆಯಲು ಸ್ಥಳವೇ ಇಲ್ಲ! 

ಇಲ್ಲಿನ ನಿವಾಸಿಗಳನ್ನು ಮಾತಿಗೆಳೆದಾಗ,‘ಅಗತ್ಯ ವಸ್ತುಗಳ ಖರೀದಿ ಅಥವಾ ಬೇರೆ ಕಾರಣಗಳಿಗೆ ಮನೆಯಿಂದ ಹೊರಗೆ ಹೋಗಬೇಕಾದರೆ, ವಾಹನಗಳ ನಡುವೆ ತಡವರಿಸಿಕೊಂಡು ನಡೆಯಬೇಕು. ಹೀಗೆ ಹೋಗುವಾಗ ಹಿರಿಯ ನಾಗರಿಕರು ಮತ್ತು ಮಕ್ಕಳು ಬಿದ್ದು ಗಾಯಗೊಂಡಿರುವ ಪ್ರಕರಣಗಳು ನಡೆದಿವೆ. ಆದರೂ ಸಂಚಾರಿ ಪೊಲೀಸರು ಇದನ್ನು ನೋಡಿಯೂ ನೋಡ
ದಂತೆ ಇರುತ್ತಾರೆ. ಪಾಲಿಕೆಯೂ ಗಮನಹರಿಸುತ್ತಿಲ್ಲ’ ಎಂದು ದೂರಿದರು.

ಅವರೆಲ್ಲರ ಆಗ್ರಹ ಒಂದೇ: ‘ಕಸಿದುಕೊಂಡಿರುವ ನಮ್ಮ ಮಾರ್ಗವನ್ನು ನಮಗೆ ವಾಪಸ್‌ ಕೊಡಿ’ ಎಂದು. 

ದುರಸ್ತಿ ಕಾಣದ ಮಾರ್ಗಗಳು: ಒಂದು ಕಡೆ ಪಾದಚಾರಿ ಮಾರ್ಗಗಳು ವಾಹನ ನಿಲುಗಡೆ ತಾಣಗಳಾಗಿದ್ದರೆ, ಮತ್ತೊಂದು ಕಡೆ ದುರಸ್ತಿ ಕಾಣದೇ ಬಾಯ್ದೆರದು ನಿಂತಿವೆ. ಪಾದಚಾರಿ ಮಾರ್ಗಗಳು ಕಿತ್ತು ಹೋಗಿದ್ದು, ಅದರ ಕಲ್ಲುಗಳು ಮೇಲೆದ್ದಿವೆ. ಅವು ವೇಗವಾಗಿ ಚಲಿಸುವ ವಾಹನಗಳ ಚಕ್ರಕ್ಕೆ ಸಿಲುಕಿ ಅನಾಹುತ ಉಂಟುಮಾಡಿದ ಪ್ರಸಂಗಗಳು ಸಹ ನಡೆದಿವೆ.  

ಕಸ ಕಸಿವಿಸಿ: ಕಸ ಇಲ್ಲಿನ ನಿವಾಸಿಗಳನ್ನು ಕಾಡುತ್ತಿರುವ ಮತ್ತೊಂದು ಮುಖ್ಯ ಸಮಸ್ಯೆ. ವಸತಿ ಸಂಕೀರ್ಣಗಳ ಮುಂದಿನ ರಸ್ತೆ ಬದಿ ಕೆಲವರು ಕಸ ಮತ್ತು ಕಟ್ಟಡ ತ್ಯಾಜ್ಯವನ್ನು ಸುರಿದು ಹೋಗುತ್ತಾರೆ. ಇದರಿಂದ ನಾಯಿ ಮತ್ತು ಬೀದಿ ದನಗಳ ಹಾವಳಿ ಹೆಚ್ಚಾಗಿದೆ. ಸೊಳ್ಳೆಗಳು ಸಂಖ್ಯೆಯೂ ಹೆಚ್ಚಾಗಿದೆ. 

ಮಾಸಿದ ಬಿಳಿ ಪಟ್ಟಿ: ಎಂಟು ರಸ್ತೆಗಳನ್ನು ಸಂಪರ್ಕಿಸುವ ಸಾರಕ್ಕಿ ಸಿಗ್ನಲ್‌ ಪಾದಚಾರಿಗಳಿಗೆ ಅಪಾಯಕಾರಿಯಾಗಿದೆ. ಇಲ್ಲಿ ಬಿಳಿ ಪಟ್ಟಿಗಳು (ಝೀಬ್ರಾ ಕ್ರಾಸಿಂಗ್‌) ಬಹುತೇಕ ಮಾಸಿ ಹೋಗಿವೆ. 10 ಸೆಕೆಂಡ್ ಮಾತ್ರ ಪಾದಚಾರಿ ಸಿಗ್ನಲ್‌ ಬೀಳುತ್ತದೆ. ರಸ್ತೆ ದಾಟಲು ಅಷ್ಟು ಸಮಯ ಸಾಕಾಗುತ್ತಿಲ್ಲ. ಮಕ್ಕಳು ಮತ್ತು ಹಿರಿಯ ನಾಗರಿಕರು ಜೀವ ಭಯದಿಂದ ರಸ್ತೆ ದಾಟುವ ಪರಿಸ್ಥಿತಿ ಇದೆ.

ಜ.19ರಂದು ಕನಕಪುರ ರೋಡ್‌ ಆಪಾರ್ಟ್‌ಮೆಂಟ್ಸ್‌ ಮೂವ್‌ಮೆಂಟ್ ಆಫ್‌ ಚೇಂಜ್‌ ಸಂಘಟನೆಯ ನೇತೃತ್ವದಲ್ಲಿ ಮಾನವ ಸರಪಳಿ ರಚಿಸಿ ಪ್ರತಿಭಟನೆ ನಡೆಸಿದ್ದಾರೆ. ಬಿಬಿಪಿಎಂಪಿ ಅಧಿಕಾರಿಗಳೊಂದಿಗೆ ಹಲವು ಬಾರಿ ಸಭೆ ನಡೆಸಿದ್ದಾರೆ. ಆದರೂ ಸಮಸ್ಯೆಗಳು ಸಮಸ್ಯೆಗಳಾಗಿಯೇ ಉಳಿದಿವೆ!

***

ಪಾದಚಾರಿ ಮಾರ್ಗದ ಮೇಲೆ ನಡೆಯುವುದೇ ಕಷ್ಟವಾಗಿದೆ. ಹಲವು ಬಾರಿ ಮನವಿ ಮಾಡಿದರೂ ಜನಪ್ರತಿನಿಧಿಗಳು ಸ್ಪಂದಿಸುತ್ತಿಲ್ಲ.
-ಅಲೀಮ್‌,ಕನಕಪುರ ರಸ್ತೆ ನಿವಾಸಿ

ರಸ್ತೆ ನಿಮ್ಮದು, ಪಾದಚಾರಿ ಮಾರ್ಗ ನಮ್ಮದು, ನಮ್ಮ ಪಾದಚಾರಿ ಮಾರ್ಗವನ್ನು ನಮಗೆ ಮರಳಿ ಕೊಡಿ.
-ಕೀರ್ತಿ, ಕನಕಪುರ ರಸ್ತೆ ವಸತಿ ಸಂಕೀರ್ಣವೊಂದರ ನಿವಾಸಿ

ಪಾದಚಾರಿ ಮಾರ್ಗದ ಮೇಲೆ ಸಂಚರಿಸುವುದನ್ನು ತಡೆಯಲಾಗಿದೆ. ಮಾರ್ಗದ ಸುತ್ತ ಗ್ರಿಲ್‌ ಅಳವಡಿಸುತ್ತಿದ್ದೇವೆ.
-ದಿಲೀಪ್‌ ಕುಮಾರ್‌, ಸಂಚಾರಿ ಪೊಲೀಸ್‌ ಇನ್ಸ್‌ಪೆಕ್ಟರ್‌ ಜಯನಗರ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.