ಶುಕ್ರವಾರ, ಮಾರ್ಚ್ 5, 2021
30 °C
ವಿವಾದಾಸ್ಪದ ವಿಷಯಗಳ ಚರ್ಚೆಗೆ ಸೈನ್ಸ್‌ ಕಾಂಗ್ರೆಸ್‌ ವೇದಿಕೆಯಾಗಿಯೇ ಇಲ್ಲ

ಸೈನ್ಸ್ ಕಾಂಗ್ರೆಸ್: ಬದಿಗಿಟ್ಟ ಚರ್ಚೆಗಳು

ಟಿ.ಆರ್. ಅನಂತರಾಮು Updated:

ಅಕ್ಷರ ಗಾತ್ರ : | |

Deccan Herald

‘ಲೌಲಿ ಪ್ರೊಫೆಷನಲ್ ಯುನಿವರ್ಸಿಟಿ’ಯ ಹೆಸರು ಕೇಳಿದೊಡನೆ ತಬ್ಬಿಬ್ಬಾಗಬಹುದು. ಏಷ್ಯ, ಯುರೋಪ್‌ ಅಥವಾ ಅಮೆರಿಕ... ಯಾವ ಪ್ರಾಂತ್ಯದಲ್ಲಿದೆ ಎಂಬ ಪ್ರಶ್ನೆ ಮನಸ್ಸಿನಲ್ಲಿ ಏಳುತ್ತದೆ. ಅಷ್ಟೊಂದು ತಲೆ ತುರಿಸಿಕೊಳ್ಳುವುದು ಬೇಡ. ಪಂಜಾಬಿನ ಜಲಂಧರ್ ನಗರದ ಪ್ರವೇಶದಲ್ಲೇ ಕಣ್ಣುಕುಕ್ಕುವಂತೆ 600 ಎಕರೆ ಜಾಗದಲ್ಲಿ ತಲೆ ಎತ್ತಿರುವ ಹೈಟೆಕ್ ಬಿಲ್ಡಿಂಗ್‍ಗಳೇ ಈ ವಿಶ್ವವಿದ್ಯಾಲಯದ ಲಾಂಛನವಾಗಿ ಕಾಣುತ್ತವೆ.

ಜಗತ್ತಿನ ಎಲ್ಲ ವಿಜ್ಞಾನ- ತಂತ್ರಜ್ಞಾನಗಳ ಶಿಕ್ಷಣವನ್ನು ಬಾಚಿ ಒಂದೇ ಉಸಿರಿಗೆ ಈ ಸಂಸ್ಥೆ ತಬ್ಬಿಕೊಂಡಂತಿದೆ. ಭಾರತದ ಖಾಸಗಿ ವಿಶ್ವವಿದ್ಯಾಲಯಗಳಲ್ಲಿ ಇದರದು ದೊಡ್ಡ ಹೆಸರು. ‘ಲೌಲಿ ಸ್ವೀಟ್ ಷಾಪ್’ ಎಂಬ ಸಿಹಿತಿನಿಸು ಅಂಗಡಿ ಆರಂಭಿಸಲು 500 ರೂಪಾಯಿ ಸಾಲ ಪಡೆದು ಮಿಥೆಲ್ ಕುಟುಂಬದ ಬಲದೇವ ರಾಜ್ ಹಂತಹಂತವಾಗಿ ಬೆಳೆಸಿ, ಅವನ ಮುಂದಿನ ತಲೆಮಾರಿನವರು ಕೋಟ್ಯಧೀಶರಾಗಿ, ಅದೇ ಹೆಸರನ್ನು ಸ್ವಲ್ಪವಾಗಿ ಬದಲಾಯಿಸಿ ‘ಲೌಲಿ ಪ್ರೊಫೆಷನಲ್ ಯುನಿವರ್ಸಿಟಿ’ ಎಂದು 2005ರಲ್ಲಿ ವಿಶ್ವವಿದ್ಯಾಲಯವನ್ನೇ ತೆರೆದರು. ಇದೇ ಒಂದು ಯಶಸ್ವೀ ಸಾಹಸಗಾಥೆ.

ಇದು ಈಗ ಸುದ್ದಿಯಾಗಿದೆ. ಏಕೆಂದರೆ ಬರುವ ಜನವರಿ 3ರಿಂದ 7ರವರೆಗೆ ಐದು ದಿನಗಳ ಕಾಲ ಇಂಡಿಯನ್ ಸೈನ್ಸ್ ಕಾಂಗ್ರೆಸ್‍ನ 106ನೇ ಅಧಿವೇಶನ ನಡೆಯುವುದು ಈ ವಿಶ್ವವಿದ್ಯಾಲಯದಲ್ಲೇ. ಪ್ರತಿ ವರ್ಷವೂ ಇಂಡಿಯನ್ ಸೈನ್ಸ್ ಕಾಂಗ್ರೆಸ್ ಅಧಿವೇಶನ ಸುದ್ದಿ ಮಾಡುತ್ತದೆ; ಸದ್ದನ್ನೂ ಮಾಡುತ್ತದೆ. ಉದ್ಘಾಟನೆ ಪ್ರಧಾನಿ ನರೇಂದ್ರ ಮೋದಿಯವರಿಂದ. ಭರ್ಜರಿ ಗೋಷ್ಠಿಗಳು, ಕಣ್ಣು ಸೆಳೆಯುವ ಪೋಸ್ಟರ್‌ಗಳು. ಮಕ್ಕಳಿಗಾಗಿ ಪ್ರತ್ಯೇಕ ವಿಜ್ಞಾನ ಗೋಷ್ಠಿ, ಮಹಿಳಾ ವಿಜ್ಞಾನ ಗೋಷ್ಠಿ, ವಿವಿಧ ಪ್ರಶಸ್ತಿಗಳ ಪ್ರದಾನ... ಇವುಗಳ ಜೊತೆಗೆ ಈ ಬಾರಿ ವಿಜ್ಞಾನ ತಂತ್ರಜ್ಞಾನ ಸಂವಹನಕ್ಕೂ ಒಂದು ಗೋಷ್ಠಿ ಏರ್ಪಾಡಾಗಿದೆ. ಇಂದಿನ ಪತ್ರಿಕೋದ್ಯಮಕ್ಕಂತೂ ಇದು ಅವಶ್ಯಕವೇ. ಬಿಸಿಬಿಸಿ ವಿಜ್ಞಾನದ ಸುದ್ದಿಗಳನ್ನು ಅಷ್ಟೇ ತ್ವರಿತವಾಗಿ ಪ್ರಾಂತೀಯ ಭಾಷೆಗಳಿಗೆ ಭಾಷಾಂತರಿಸಿ ಪ್ರಕಟಿಸುವ ಚತುರ ಲೇಖಕರ ಪಡೆಯೇ ಬೇಕು; ಸ್ವಾಗತಿಸಬೇಕಾದ್ದೇ.

ಸೈನ್ಸ್‌ ಕಾಂಗ್ರೆಸ್‌ಗೆ ಪ್ರತಿವರ್ಷವೂ ಒಂದು ಥೀಮ್ ಇರಲೇಬೇಕು. ಈ ಬಾರಿಯದು, ‘ಭವಿಷ್ಯದ ಭಾರತದಲ್ಲಿ ವಿಜ್ಞಾನ ತಂತ್ರಜ್ಞಾನದ ಪಾತ್ರ’. ಹೌದು, ಭವಿಷ್ಯದ ಚಿಂತನೆ ಇಲ್ಲದೆ ಯಾವ ಕ್ಷೇತ್ರವನ್ನೂ ಅಭಿವೃದ್ಧಿಪಡಿಸಲು ಸಾಧ್ಯವಿಲ್ಲ. ಸವಾಲನ್ನು ಎದುರಿಸಬಲ್ಲ, ಸಂಪನ್ಮೂಲವನ್ನು ನಿರ್ವಹಿಸಬಲ್ಲ ತಂತ್ರಜ್ಞಾನ ಈಗಂತೂ ಎಂದಿಗಿಂತ ಮುಖ್ಯವಾಗಿದೆ. ತಂತ್ರಜ್ಞಾನವೆಂದರೆ ಒಂದೇ ವರ್ಷದಲ್ಲಿ ಕಬ್ಬಿ
ಣದ ಅದುರಿನ ಬೆಟ್ಟವನ್ನು ನೆಲಸಮಮಾಡುವ ಜೆಸಿಬಿಗಳ ತಯಾರಿಕೆಯಲ್ಲ. ಕೃಷಿಯಿಂದ ತೊಡಗಿ ಬಾಹ್ಯಾಕಾಶದವರೆಗೂ ಸುಸ್ಥಿರ ಅಭಿವೃದ್ಧಿ ಎಂಬ ಮಾತು ವಿಜ್ಞಾನದಲ್ಲೂ ಸವಕಲಾಗಿಬಿಟ್ಟಿದೆ. ಸೈನ್ಸ್ ಕಾಂಗ್ರೆಸ್‍ನ ಯಾವುದೇ ಸಮಾವೇಶಗಳಲ್ಲಿ ಕೃಷಿ, ಎಂಜಿನಿಯರಿಂಗ್, ವಿಜ್ಞಾನ, ತಂತ್ರಜ್ಞಾನಕ್ಕೆ ಸಂಬಂಧಿಸಿದ ಹದಿನಾಲ್ಕು ವಿಭಾಗಗಳಲ್ಲಿ ಸಮಕಾಲೀನ ವೈಜ್ಞಾನಿಕ ಬೆಳವಣಿಗೆಯನ್ನು ಆಧರಿಸಿ ಹೊಸ ಹೊಸ ವಿಷಯಗಳು ಗೋಷ್ಠಿಗೆ ಸೇರ್ಪಡೆಯಾಗುತ್ತವೆ.

ಈ ಸಲವೂ ಸಮಾವೇಶಕ್ಕೆ ಅಬ್ಬರದ ಪ್ರಚಾರವೂ ಸಿಕ್ಕಿದೆ. ನೊಬೆಲ್ ಪ್ರಶಸ್ತಿ ವಿಜೇತರು, ವಿಜ್ಞಾನ ನೀತಿ ರೂಪಿಸುವ
ವರು, ವಿಜ್ಞಾನಿಗಳು, ಮಕ್ಕಳು ಮತ್ತು ಮಹಿಳೆಯರು ಸೇರಿದಂತೆ 15,000 ಮಂದಿಯಿಂದ ಸಭಾಂಗಣವು ತುಳುಕುತ್ತದೆ. ಜೊತೆಗೆ ಅಮೆರಿಕ, ಆಸ್ಟ್ರೇಲಿಯ, ಜರ್ಮನಿ, ಸ್ವೀಡನ್‍ಗಳಿಂದ ಅತ್ಯಾಧುನಿಕ ವಿಜ್ಞಾನ ತಂತ್ರಜ್ಞಾನದ ಸಾಧನ, ಸಲಕರಣೆ, ಉಪಕರಣಗಳು ಪ್ರದರ್ಶನವಾಗುತ್ತವೆ. ಜೊತೆಗೆ ರಕ್ಷಣಾ ಸಂಶೋಧನಾ ವಿಭಾಗ, ವಿಜ್ಞಾನ ತಂತ್ರಜ್ಞಾನ ವಿಭಾಗಗಳು ಪ್ರದರ್ಶನಕ್ಕೆ ಇಳಿದಿವೆ. 1923ರಲ್ಲಿ ಲಕ್ನೊದಲ್ಲಿ ನಡೆದ 10ನೇ ವಿಜ್ಞಾನ ಕಾಂಗ್ರೆಸ್ ಅಧಿವೇಶನದಲ್ಲಿ ‘ಭಾರತ ಕಟ್ಟಲು ವೈಜ್ಞಾನಿಕ ಸಂಸ್ಥೆಗಳು ಮತ್ತು ವಿಜ್ಞಾನಿಗಳು’ ಎಂಬ ಘೋಷವಾಕ್ಯದಡಿ, ಸರ್ ಎಂ. ವಿಶ್ವೇಶ್ವರಯ್ಯನವರ ಅಧ್ಯಕ್ಷತೆಯಲ್ಲಿ ದೊಡ್ಡ ಮಟ್ಟದ ಚರ್ಚೆಗಳು ನಡೆದಿದ್ದವು.

ಭವಿಷ್ಯದ ಬಗ್ಗೆ ಚರ್ಚೆ ಮಾಡುವಾಗ ವರ್ತಮಾನದಲ್ಲಿ ಏನಾಗುತ್ತಿದೆ ಎಂಬುದರ ಚರ್ಚೆ ಮುನ್ನೆಲೆಗೆ ಬರಬೇಕು. ‘ಕೃಷಿಯಲ್ಲಿ ವಿಜ್ಞಾನ ತಂದಿರುವ ಹೊಸ ಬದಲಾವಣೆ’ಗಳನ್ನು ಕುರಿತು ಒಂದು ಗೋಷ್ಠಿ ಇದೆ. ಇಲ್ಲಿ, ಭಾರತದಲ್ಲಿ ನನೆಗುದಿಗೆ ಬಿದ್ದಿರುವ 900ಲಕ್ಷ ಹೆಕ್ಟೇರ್‌ ಬಂಜರು ಭೂಮಿಯ ಅಭಿವೃದ್ಧಿಯ ಬಗ್ಗೆ ಚರ್ಚೆಯೇ ಇಲ್ಲ. ‘ಆರೋಗ್ಯ ಕ್ಷೇತ್ರದ ಬೆಳವಣಿಗೆಯಲ್ಲಿ ಸಮಕಾಲೀನ ಸಂಶೋಧನೆಯ ಪಾತ್ರ’ ಎಂಬ ವಿಷಯವನ್ನು ವೈದ್ಯಕೀಯ ಗೋಷ್ಠಿಯಲ್ಲಿ ಸೇರಿಸಿದೆ. ವಿಷಾದವೆಂದರೆ ಈಗಲೂ ಜನಸಾಮಾನ್ಯರಿಗೆ ಬ್ರಾಂಡೆಡ್ ಔಷಧಿಗಳು ಮತ್ತು ಜೆನೆರಿಕ್ ಔಷಧಿಗಳ ಬಗ್ಗೆ ಪ್ರಾಥಮಿಕ ತಿಳಿವಳಿಕೆಯೂ ಇಲ್ಲ. ‘ಮನುಷ್ಯನ ಆರೋಗ್ಯಕ್ಕೆ ಸಸ್ಯೋತ್ಪನ್ನಗಳು’ ಎಂಬ ಗೋಷ್ಠಿ
ಯನ್ನು ಇಂಡಿಯನ್‌ ಬಟಾನಿಕಲ್ ಸೊಸೈಟಿಯ ಮುಖ್ಯಸ್ಥರೇ ಅಧ್ಯಕ್ಷರಾಗಿ ನಡೆಸಿಕೊಡುತ್ತಾರೆ. ನಮ್ಮ ಔಷಧೀಯ ಸಸ್ಯಗಳನ್ನು ಉಳಿಸಿಕೊಳ್ಳುವ ಬಗೆ ಹೇಗೆ ಎಂಬ ಗಂಭೀರ ಸಮಸ್ಯೆಯ ಚರ್ಚೆಗೆ ಇದು ವೇದಿಕೆಯಾಗಬೇಕಾಗಿತ್ತು.

‘ಉಜ್ವಲ ಭವಿಷ್ಯ ಭಾರತದಲ್ಲಿ ಮಾನವ ಶಾಸ್ತ್ರದ ಮರುವ್ಯಾಖ್ಯಾನ’ ಎಂಬುದು ಇಲ್ಲಿ ಚರ್ಚೆಯಾಗಲಿರುವ ವಿಷಯಗಳಲ್ಲೊಂದು. ಗುಡ್ಡಗಾಡು ಜನರನ್ನು ಇರುವ ನೆಲೆಯಲ್ಲೇ ಬಿಡಬೇಕೇ ಅಥವಾ ಸಮಾಜದ ಮುಖ್ಯವಾಹಿನಿಗೆ ತರಬೇಕೇ ಎಂಬ ವಿಚಾರದಲ್ಲಿ ಗಟ್ಟಿ ದನಿಯಲ್ಲಿ ಸರ್ಕಾರವನ್ನು ಎಚ್ಚರಿಸುವ ಸಮಾಜ ವಿಜ್ಞಾನಿಗಳು ಎಲ್ಲಿ ಹೋಗಿದ್ದಾರೆ ಎಂದು ಕೇಳುವ ಪರಿಸ್ಥಿತಿ ನಮ್ಮದು. ‘ಭವಿಷ್ಯದಲ್ಲಿ ರಾಸಾಯನಿಕ ವಿಜ್ಞಾನ ಶಿಕ್ಷಣ ಹೇಗಿರಬೇಕು’ ಎಂಬ ಗೋಷ್ಠಿಯನ್ನು ಏರ್ಪಡಿಸುವ ಮೊದಲು ಗಬ್ಬೆದ್ದುಹೋಗಿರುವ ನಮ್ಮ ಸುಮಾರು 250 ನದಿಗಳ ಶುದ್ಧೀಕರಣದಲ್ಲಿ ಜನಸಮುದಾಯವನ್ನು ಹೇಗೆ ಬಳಸಿಕೊಳ್ಳಬೇಕು ಎಂಬುದರತ್ತ ಯೋಚಿಸುವುದು ಸದ್ಯದ ಅವಶ್ಯಕತೆ. ಜನಸಾಮಾನ್ಯರನ್ನು ಒಳಗೊಳ್ಳದಿದ್ದರೆ ಇವೆಲ್ಲ ಲ್ಯಾಬ್‍ನಲ್ಲೇ ಹುಟ್ಟಿ, ಲ್ಯಾಬ್‍ನಲ್ಲೇ ಸಾಯುವ ಮಹಾ ಯೋಜನೆಗಳಾಗುತ್ತವೆ. ಭೂವಿಜ್ಞಾನದಲ್ಲೂ ಬದಲಾವಣೆಗಳು ಬೇಕಾಗುತ್ತವೆ. ನಗರಗಳಲ್ಲಿ ಉತ್ಪತ್ತಿಯಾಗುತ್ತಿರುವ ಸಹಸ್ರಾರು ಟನ್‌ ಗಟ್ಟಿ ಕಸವನ್ನು ಎಲ್ಲಿ ಹೂತರೆ ಅಂತರ್ಜಲ ಕಲುಷಿತವಾಗುವುದಿಲ್ಲ ಎಂದು ವಿವೇಚಿಸುವ ತಜ್ಞರು ಬೇಕು. ಸಮಾಜಕ್ಕೆ ಒದಗಿಬರದ ವಿಜ್ಞಾನ- ತಂತ್ರಜ್ಞಾನ ಇದ್ದರೇನು- ಇಲ್ಲದಿದ್ದರೇನು!

1914ರಲ್ಲಿ ಸ್ಥಾಪನೆಯಾಗಿ, ಬೆಳ್ಳಿಹಬ್ಬ, ಚಿನ್ನದಹಬ್ಬ, ವಜ್ರಮಹೋತ್ಸವ, ಪ್ಲಾಟಿನಂ ಮಹೋತ್ಸವ, ಶತಮಾನೋತ್ಸವ ಆಚರಿಸಿ ಪ್ರತಿವರ್ಷವೂ ಸಂಭ್ರಮಿಸುತ್ತಿರುವ ಇಂಡಿಯನ್ ಸೈನ್ಸ್ ಕಾಂಗ್ರೆಸ್, ಲಾಗಾಯ್ತಿನಿಂದ ಬಿಂಬಿಸಿರುವ ಚರ್ಚೆಯ ವಿಚಾರಗಳನ್ನು ನೋಡಿದರೆ, ವಿವಾದಾಸ್ಪದ ವಿಷಯಗಳ ಚರ್ಚೆಗೆ ಅದು ವೇದಿಕೆಯಾಗಿಯೇ ಇಲ್ಲ ಎಂಬುದು ಸ್ಪಷ್ಟವಾಗುತ್ತದೆ. ಕುಲಾಂತರಿ ಬೆಳೆಗಳನ್ನು ಕುರಿತು ವಿಜ್ಞಾನಿಗಳಲ್ಲೇ ಒಮ್ಮತವಿಲ್ಲ. ಇಂಥ ಚರ್ಚೆಗಳು ಗೋಷ್ಠಿಗಳಲ್ಲಿ ತಪ್ಪಿಯೂ ನುಸುಳುವುದಿಲ್ಲ. ಇಂಡಿಯನ್ ಸೈನ್ಸ್ ಕಾಂಗ್ರೆಸ್‍ನ ಕಾರ್ಯಕ್ರಮಗಳನ್ನು ಬಿಂಬಿಸುವಾಗ ಒಂದೆಡೆ, ‘ಪ್ರತಿವರ್ಷ 38 ಲಕ್ಷ ಕಾರುಗಳನ್ನು ತಯಾರಿಸಿ ಭಾರತವು ಯಂತ್ರೋಪಕರಣಗಳ ಕ್ಷೇತ್ರದಲ್ಲಿ ತ್ರಿಮಿಕ್ರಮ ಹೆಜ್ಜೆ ಇಟ್ಟಿದೆ’ ಎಂಬುದನ್ನು ಸಾಧನೆ ಎಂಬುವಂತೆ ಬಿಂಬಿಸಲಾಗಿದೆ.

ಭಾರತದಲ್ಲಿ ಇದು ಪ್ರಗತಿಯ ಮಾನದಂಡವಾಗಬೇಕೇ? ಭಾರತದ ಆಂತರಿಕ ನಿವ್ವಳ ಉತ್ಪನ್ನಕ್ಕೆ ಯಂತ್ರೋಪಕರಣಗಳ ಕೊಡುಗೆ ಶೇ 17 ಮಾತ್ರ ಎಂಬುದು ಬಲ್ಲ ಸತ್ಯ. ವಿಜ್ಞಾನ ಕ್ಷೇತ್ರಕ್ಕೆ ಸರ್ಕಾರ ಕೊಡುತ್ತಿರುವ ಆರ್ಥಿಕ ಪ್ರೋತ್ಸಾಹ ಏನೇನೂ ಸಾಲದು ಎಂದು ಭಾರತರತ್ನ ಪ್ರೊ. ಸಿ.ಎನ್.ಆರ್. ರಾವ್ ಅವಕಾಶ ಸಿಕ್ಕಿದಾಗಲೆಲ್ಲ ನೆನಪಿಸುತ್ತಲೇ ಇದ್ದಾರೆ. ಈ ಸತ್ಯವನ್ನು ಇಂಥ ಸಮಾವೇಶದಲ್ಲಿ ಎದೆಗಾರಿಕೆಯಿಂದ ಪ್ರತಿಪಾದಿಸುವುದು ಭಾರತದ ವಿಜ್ಞಾನದ ಭವಿಷ್ಯದ ಒಂದು ಭಾಗವೇ. 1930ರ ನಂತರ ಭಾರತೀಯ ವಿಜ್ಞಾನಿಗಳಿಗೆ ನೊಬೆಲ್ ಪ್ರಶಸ್ತಿ ಏಕೆ ಲಭಿಸಿಲ್ಲ ಎಂಬ ಪ್ರಶ್ನೆಯನ್ನು ಆನಂತರ ಕೇಳೋಣ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು