ಶನಿವಾರ, ಡಿಸೆಂಬರ್ 7, 2019
25 °C

ಕಾಲೇಜುಗಳಿಗೆ ‘ಶ್ರೀ ರಾಮಾಯಣ ದರ್ಶನಂ’

Published:
Updated:

ರಾಷ್ಟ್ರಕವಿ ಕುವೆಂಪು ವಿರಚಿತ ‘ಶ್ರೀರಾಮಾಯಣ ದರ್ಶನಂ’ ಕೃತಿಗೆ ಪ್ರಥಮ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಂದ 50 ವರ್ಷಗಳ ಸವಿನೆನಪಿಗಾಗಿ ಕಾಲೇಜುಗಳಲ್ಲಿ ‘ಶ್ರೀರಾಮಾಯಣ ದರ್ಶನಂ’–ಓದು ಅಭಿಯಾನ ಆರಂಭಗೊಂಡಿದೆ.

ಕವಯತ್ರಿ ಎಚ್.ಆರ್. ಸುಜಾತ ಅವರ ಪರಿಕಲ್ಪನೆ ಮತ್ತು ನಿರ್ವಹಣೆಯಲ್ಲಿ ರೂಪಿತವಾಗಿರುವ ಈ ಅಭಿಯಾನ ಈಗಾಗಲೇ ಕಾಲೇಜು ವಿದ್ಯಾರ್ಥಿಗಳ ಮನಗೆದ್ದಿದ್ದು, ಬೆಂಗಳೂರು ನಗರವಷ್ಟೇ ಅಲ್ಲ ರಾಜ್ಯಾದ್ಯಂತ ಈ ಅಭಿಯಾನವನ್ನು ವಿಸ್ತರಿಸುವ ಆಲೋಚನೆ ಆಯೋಜಕರದ್ದು.

‘ನೀನಾಸಂ’ನ ರಂಗಕರ್ಮಿ ಎಂ. ಗಣೇಶ್ ಉಡುಪಿ ಅವರು ‘ಶ್ರೀರಾಮಾಯಣ ದರ್ಶನಂ’ ಕೃತಿಯನ್ನು ಓದುತ್ತಲೇ ವಾಚನಾಭಿನಯವನ್ನೂ ಮಾಡುವುದು ಈ ಅಭಿಯಾನದ ವಿಶೇಷ ಸಂಗತಿ.

‘ಕುಪ್ಪಳಿಯಲ್ಲಿ ಎಂ. ಗಣೇಶ್ ಅವರ ‘ಶ್ರೀರಾಮಾಯಣ ದರ್ಶನಂ’ನ ವಾಚನಾಭಿನಯ ನೋಡಿದ್ದೆ. ಅದು ಮನದಲ್ಲಿ ಅಚ್ಚೊತ್ತಿತ್ತು. ಕುಪ್ಪಳಿಯಿಂದ ಹಿಂತಿರುಗಿದ ಮೇಲೆ ಮತ್ತೆ  ದರ್ಶನಂ ಓದಲು ಶುರುಮಾಡಿದೆ. ಕುವೆಂಪು ಅವರ ಸರಳ ಭಾಷೆ ಅರ್ಥವಾಗುವಂತಿದ್ದು, ಅದನ್ನು ಕಾಲೇಜು ವಿದ್ಯಾರ್ಥಿಗಳಿಗೂ ತಲುಪಿಸಿದರೆ ಹೇಗೆ ಎಂಬ ಆಲೋಚನೆ ಮೂಡಿತು. ಗಣೇಶ್ ಅವರನ್ನು ಸಂಪರ್ಕಿಸಿ, ಅಭಿಯಾನದ ರೂಪರೇಷೆ ರೂಪಿಸಿದೆ’ ಎನ್ನುತ್ತಾರೆ ಎಚ್.ಆರ್. ಸುಜಾತ.

‘ಶ್ರೀರಾಮಾಯಣ ದರ್ಶನಂ’ ಕನ್ನಡಕ್ಕೆ ಪ್ರಥಮ ಜ್ಞಾನಪೀಠ ತಂದುಕೊಟ್ಟ ಕೃತಿ. ಪ್ರಶಸ್ತಿ ಸಂದು 50 ವರ್ಷವಾದ ಸವಿನೆನಪಿಗೆ ಈ ಅಭಿಯಾನ ರೂಪಿಸುವ ಮೂಲಕ ಕುವೆಂಪು ಅವರಿಗೆ ನಮನ ಸಲ್ಲಿಸುವ ಯತ್ನ ನನ್ನದು. ಇದಕ್ಕೆ ಸರ್ಕಾರದ ಸಹಾಯ ಪಡೆದಿಲ್ಲ. ನಾನೇ ವೈಯಕ್ತಿಕ ಆಸಕ್ತಿಯಿಂದಾಗಿ ಈ ಅಭಿಯಾನ ರೂಪಿಸಿದ್ದೇನೆ. ‘ದರ್ಶನಂ’ ಓದಿನ ಜತೆಗೆ ಹಳೆಯ ಮತ್ತು ಹೊಸ ಪೀಳಿಗೆಯ ಸಾಹಿತಿಗಳ ಸಂವಾದವೂ ಈ ಅಭಿಯಾನದಲ್ಲಿ ನಡೆಯಲಿರುವುದು ವಿಶೇಷ. ಸಂವಾದದಲ್ಲಿ ಕುವೆಂಪು ಅವರ ವ್ಯಕ್ತಿತ್ವ, ವೈಚಾರಿಕತೆ, ಸಾಹಿತ್ಯ, ಅಧ್ಯಾತ್ಮ ಕುರಿತ ಸಂಗತಿಗಳು ಚರ್ಚೆಯಾಗುತ್ತವೆ. ಇದರಿಂದ ವಿದ್ಯಾರ್ಥಿಗಳಲ್ಲಿ ಕನ್ನಡ ಸಾಹಿತ್ಯದ ಬಗ್ಗೆ ಅಭಿರುಚಿ ಮೂಡಿಸಿದಂತಾಗುತ್ತದೆ’ ಎನ್ನುತ್ತಾರೆ ಅವರು.

‘ದರ್ಶನಂ’ ಓದಿನ ಜತೆಗೆ ಆಂಗಿಕ ಅಭಿನಯವೂ ಇರುವುದರಿಂದ ಇದು ವಿದ್ಯಾರ್ಥಿಗಳಿಗೆ ಸುಲಭವಾಗಿ ಅರ್ಥವಾಗುತ್ತದೆ. ಕುವೆಂಪು ಅವರ ಭಾಷೆ ಸರಳವಾಗಿದ್ದು, ಎಲ್ಲರಿಗೂ ಅರ್ಥವಾಗುವಂತಿದೆ. ‘ವಾಲಿವಾಧೆ’ ನಾಟಕ ಮಾಡುವಾಗ ‘ದರ್ಶನಂ’ನ ಒಂದೊಂದು ಭಾಗ ಓದುತ್ತಿದ್ದೆ. ಅದು ಜನರ ಮೇಲೆ ಪ್ರಭಾವ ಬೀರಿತ್ತು. ಹಾಗಾಗಿ, ಓದಿನ ಜತೆಗೆ ಆಂಗಿಕ ಅಭಿನಯ ರೂಢಿಸಿಕೊಂಡು ಹಳಗನ್ನಡವನ್ನು ಇಂದಿನ ಯುವಜನರಿಗೆ ಮುಟ್ಟಿಸುವ ಕೆಲಸ ಆರಂಭಿಸಿದೆ. ಸುಜಾತ ಮೇಡಂ ಅವರು ಇದಕ್ಕೆ ಸೂಕ್ತ ರೂಪರೇಷೆ ರೂಪಿಸಿ, ನಿರ್ವಹಣೆಯ ಜವಾಬ್ದಾರಿ ಹೊತ್ತರು. ಕಾಲೇಜು ವಿದ್ಯಾರ್ಥಿಗಳಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ ಎನ್ನುತ್ತಾರೆ ‘ನೀನಾಸಂ’ನ ರಂಗಕರ್ಮಿ ಎಂ. ಗಣೇಶ್ ಉಡುಪಿ.

ಕುವೆಂಪು ಓದು ಇಂದಿನ ತುರ್ತು
ರಾಮನ ಕುರಿತು ರಾಜಕಾರಣ ನಡೆಯುತ್ತಿರುವ ಈ ದಿನಗಳಲ್ಲಿ ಕುವೆಂಪು ಬರೆದಿರುವ ‘ಶ್ರೀರಾಮಾಯಣ ದರ್ಶನಂ’ ಕೃತಿಯಲ್ಲಿ ರಾಮ–ರಾವಣ ಹೇಗಿದ್ದಾರೆ ಅನ್ನೋದು ತಿಳಿಯಲು ಈ ಅಭಿಯಾನ ಪೂರಕವಾಗಿದೆ. ವಿಚಾರ ಕ್ರಾಂತಿಗೆ ಕರೆ ನೀಡಿದ್ದ ಕುವೆಂಪು ಅವರ ಅಧ್ಯಾತ್ಮದ ನೆಲೆಗಳನ್ನು ಅರಿಯಲು ಇದು ಸಹಾಯಕವಾಗಲಿದೆ. ಸಾಮಾಜಿಕ ಸ್ವಾಸ್ಥ ಕಾಪಾಡಿಕೊಳ್ಳಲು ಕುವೆಂಪು ಸಾಹಿತ್ಯದ ಓದು ಇಂದಿನ ತುರ್ತು.
–ಮುರಳಿ ಮೋಹನ ಕಾಟಿ, ಪ್ರಾಂಶುಪಾಲ, ಬದುಕು ಕಮ್ಯುನಿಟಿ ಕಾಲೇಜು

‘ಶ್ರೀರಾಮಾಯಣ ದರ್ಶನಂ’ ಓದು: ಬೆಳಿಗ್ಗೆ 10.30ಕ್ಕೆ ಪರಿಕಲ್ಪನೆ ಮತ್ತು ನಿರ್ದೇಶನ–ಎಚ್.ಆರ್. ಸುಜಾತ. ವಾಚನಾಭಿನಯ–ಎಂ. ಗಣೇಶ್ ಉಡುಪಿ. ಉಪನ್ಯಾಸ–ಡಾ.ಎಂ.ಎಸ್. ಆಶಾದೇವಿ, ಅಧ್ಯಕ್ಷತೆ–ಡಾ.ಸಿ.ಎನ್. ಲೋಕಪ್ಪ ಗೌಡ. ಆಯೋಜನೆ, ಸ್ಥಳ–ರಾಣಿ ಚನ್ನಮ್ಮ ಸಭಾಂಗಣ, ಮಹಾರಾಣಿ ಮಹಿಳಾ ವಾಣಿಜ್ಯ ಮತ್ತು ನಿರ್ವಹಣೆ ಕಾಲೇಜು. ಮಧ್ಯಾಹ್ನ 2.30ಕ್ಕೆ ‘ಕುವೆಂಪು ನಾಟಕಗಳಲ್ಲಿ ಪರಿವರ್ತನೆಯ ಆಯಾಮಗಳು’–ಟಿ.ಎಚ್. ಲವಕುಮಾರ್, ಆಯೋಜನೆ, ಸ್ಥಳ–ಬದುಕು ಕಮ್ಯುನಿಟಿ ಕಾಲೇಜು, ಸಂವಾದ, ನಂ. 7, 2ನೇ ಕ್ರಾಸ್, ಸಿಟಿ ಸೆಂಟ್ರಲ್ ಲೈಬ್ರರಿ, ಜಯನಗರ 3ನೇ ಬ್ಲಾಕ್.

ಸಂಪರ್ಕ ಸಂಖ್ಯೆ: ಪುನೀತ್ 8553440706, 9066 64688.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು