ಶುಕ್ರವಾರ, ಜೂನ್ 18, 2021
27 °C
ಹೊಸತನ ಮೈಗೂಡಿಸಿಕೊಳ್ಳಲಿದೆ ಸ್ಮಾರ್ಟ್‌ಫೋನ್‌....

ಸ್ಮಾರ್ಟ್‌ಫೋನ್‌: ಈಗೇನು ಹೊಸತು

ವಿಶ್ವನಾಥ ಶರ್ಮಾ Updated:

ಅಕ್ಷರ ಗಾತ್ರ : | |

Prajavani

ಸ್ಮಾರ್ಟ್‌ಫೋನ್‌ ಜಗತ್ತು ಅಚ್ಚರಿ ಬದಲಾವಣೆಗಳಿಗೆ ತೆರೆದುಕೊಳ್ಳುತ್ತಿದೆ. ಹೊಸ ತಂತ್ರಜ್ಞಾನಗಳ ಅಳವಡಿಕೆಯಿಂದ ನಿತ್ಯದ ಕೆಲಸಗಳು ಇನ್ನಷ್ಟು ಸರಳಗೊಳ್ಳುತ್ತಿವೆ. ಕೇವಲ ಕರೆ ಮಾಡಲು, ಸ್ವೀಕರಿಸಲು ಬಳಕೆಯಾಗುತ್ತಿದ್ದ ಮೊಬೈಲ್‌ ಇಂದು ಆಪ್ತ ಸಂಗಾತಿಯಾಗಿ ಮನರಂಜನೆ, ಶಿಕ್ಷಣ, ಬ್ಯಾಂಕಿಂಗ್‌ ಹೀಗೆ ಇನ್ನೂ ಹತ್ತು ಹಲವು ಕೆಲಸಗಳಿಗೆ ಉಪಯುಕ್ತವಾಗಿದೆ. 2019ರಲ್ಲಿ ಸ್ಮಾರ್ಟ್‌ಫೋನ್‌ ಮೈಗೂಡಿಸಿಕೊಳ್ಳಲಿರುವ ಹೊಸತನಗಳ ಮಾಹಿತಿ ಇಲ್ಲಿದೆ.

ಹೋಲ್‌ ಪಂಚ್‌ ಕ್ಯಾಮೆರಾ

ಬಹುತೇಕ ಸ್ಮಾರ್ಟ್‌ ಫೋನ್‌ಗಳ ಪರದೆಯಲ್ಲಿ notch ಅಂದರೆ ಪರದೆ ಮತ್ತು ಮೊಬೈಲ್‌ ದೇಹದ ಗಾತ್ರಗಳ ಮಧ್ಯೆ ಜಾಗ ಇರುತ್ತದೆ. ಅದರಲ್ಲಿಯೂ ಪರದೆಯ ಮೇಲ್ಭಾಗದಲ್ಲಿ ಸೆಲ್ಫಿ ಕ್ಯಾಮೆರಾ, ಸ್ಪೀಕರ್‌ಗಾಗಿ ಒಂದಿಷ್ಟು ಜಾಗ ಬಿಡಲಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಬರುತ್ತಿರುವ ಫೋನ್‌ಗಳಲ್ಲಿ ಪರದೆಯನ್ನು ಪೂರ್ತಿಯಾಗಿ ಬಳಸಿಕೊಳ್ಳಲಾಗುತ್ತಿದೆ. ಇದಕ್ಕೆ ವಿವೊ ನೆಕ್ಸ್‌ ಉತ್ತಮ ಉದಾಹರಣೆ. ಇದರಲ್ಲಿ ಸೆಲ್ಫಿ ಕ್ಯಾಮೆರಾ ಪಾಪ್‌ಅಪ್ ರೀತಿಯಲ್ಲಿ ಕೆಲಸ ಮಾಡುತ್ತದೆ. ಸೆಲ್ಫಿ ತೆಗೆಯಬೇಕು ಎಂದಾಗ ಸ್ಕ್ರೀನ್‌ ಮೇಲ್ಭಾಗದಲ್ಲಿ ಕ್ಯಾಮೆರಾ ಕಾಣಿಸಿಕೊಳ್ಳುತ್ತದೆ.

ನಾಚ್‌ ಫೋನಿನ ಅಂದವನ್ನೇ ಹಾಳು ಮಾಡುತ್ತಿದೆ ಎನ್ನುವುದರ ಜತೆಗೆ ಪರದೆಯ ಜಾಗವನ್ನೂ ತಿನ್ನುತ್ತಿದೆ ಎನ್ನುವುದಕ್ಕೆ ತಯಾರಿಕಾ ಕಂಪನಿಗಳ ಅಭಿಮತವೂ ಇದೆ. ಸ್ವತಃ ಆ್ಯಪಲ್‌ ಕಂಪನಿಯೂ ಇದನ್ನು ಒಪ್ಪಿಕೊಂಡಿದೆ, ಸೆಲ್ಫಿ ಕ್ಯಾಮೆರಾ ಮುಂಭಾಗದಲ್ಲಿ ಇರಲೇಬೇಕು. ಆದರೆ ಅದು ಪರದೆಯ ಹೆಚ್ಚು ಜಾಗವನ್ನು ಆಕ್ರಮಿಸಬಾರದು ಎಂದು ಐಫೋನ್‌ ಹೇಳಿದೆ.‌

ಈ ನಿಟ್ಟಿನಲ್ಲಿ ಹುವಾವೆ ಕಂಪನಿ ಒಂದು ಹೆಜ್ಜೆ ಮುಂದಿಟ್ಟಿದೆ. ಹುವಾವೆ ನೋವಾ 4 ಎಂಬ ಸ್ಮಾರ್ಟ್‌ಫೋನ್‌ ತಯಾರಿಸಿದೆ. ಇದರಲ್ಲಿ ಪರದೆಯ ಮೇಲ್ಭಾಗದ ಎಡತುದಿಯಲ್ಲಿ ಒಂದು ಸಣ್ಣ ರಂಧ್ರದಂತೆ ವಿನ್ಯಾಸ ಮಾಡಿದ್ದು ಅಲ್ಲಿ ಸೆಲ್ಫಿ ಕ್ಯಾಮೆರಾ ಅಳವಡಿಸಲಾಗಿದೆ.

ಈ ರೀತಿಯ ಇನ್ನೂ ಎರಡು ಪೋನ್‌ಗಳನ್ನು ಬಿಡುಗಡೆ ಮಾಡುವುದಾಗಿಯೂ ಕಂಪನಿ ಘೋಷಿಸಿದೆ. ಸ್ಯಾಮ್‌ಸಂಗ್‌ ತನ್ನ ಗೆಲಾಕ್ಸಿ ಎ8ಎಸ್‌ನಲ್ಲಿ ಇದೇ ವಿಧಾನ ಅಳವಡಿಸಿಕೊಂಡಿದೆ.

ಫಿಂಗರ್‌ಪ್ರಿಂಟ್‌ ಸ್ಕ್ಯಾನರ್‌

2018ರ ಅಂತ್ಯದ ಹೊತ್ತಿಗೆ ಒನ್‌ಪ್ಲಸ್‌ 6ಟಿ, ಹುವಾವೆ ಮೇಟ್ 20 ಪ್ರೊ ಪೋನ್‌ಗಳಲ್ಲಿ ಪರದೆಯ ಕೆಳಭಾಗದಲ್ಲಿ ಫಿಂಗರ್‌ ಪ್ರಿಂಟ್‌ ಅಳವಡಿಕೆ ಸಾಧ್ಯವಾಗಿದೆ. 2019ರಲ್ಲಿ ಈ ರೀತಿಯ ಫೋನ್‌ಗಳ ಸಂಖ್ಯೆಯೇ ಹೆಚ್ಚಿರಲಿದ್ದು, ಆಪ್ಟಿಕಲ್‌ ಸೆನ್ಸರ್‌ ಬದಲಿಗೆ ಸುಧಾರಿತ ಅಲ್ಟ್ರಾಸಾನಿಕ್‌ ಸೆನ್ಸರ್ ಬಳಕೆಯಾಗಲಿದೆ.

ವಿನ್ಯಾಸದಲ್ಲಿ ಏಕರೂಪತೆ: ಎಲ್ಲಾ ಕಂಪನಿಗಳೂ ಫಿಂಗರ್‌ಪ್ರಿಂಟ್‌, ನೋಚ್‌ ಮತ್ತು ಕ್ಯಾಮೆರಾಕ್ಕೆ ಸಂಬಂಧಿಸಿದಂತೆ ಒಂದೇ ರೀತಿಯ ಬದಲಾವಣೆಗಳನ್ನು ಮಾಡುತ್ತಿವೆ. ಹೀಗಾಗಿ ಮುಂದಿನ ದಿನಗಳಲ್ಲಿ ವಿನ್ಯಾಸದ ದೃಷ್ಟಿಯಿಂದ ಫೋನ್‌ಗಳ ಮಧ್ಯೆ ಹೆಚ್ಚಿನ ವ್ಯತ್ಯಾಸವೇನೂ ಕಾಣಸಿಗುವುದಿಲ್ಲ.

ಆಯತಾಕಾರದ ಟಚ್‌ಸ್ಕ್ರೀನ್‌ ಸದ್ಯ ಅತಿ ಹೆಚ್ಚು ಬಳಕೆಯಾಗುತ್ತಿದೆ. ಇದರಲ್ಲಿ ಸ್ವಲ್ಪ ಮಟ್ಟಿನ ಬದಲಾವಣೆಯನ್ನು ನಿರೀಕ್ಷಿಸಬಹುದು. ಆದರೆ 2019ರಲ್ಲಿ ಫೋನ್‌ ವಿನ್ಯಾಸದಲ್ಲಿ ಭಾರಿ ಬದಲಾವಣೆ ಆಗಲಿದೆ ಎಂದು ಅಂದುಕೊಂಡರೆ ಅದು ನಿಮ್ಮ ತಪ್ಪು ಎಂದು ತಜ್ಞರು ಹೇಳಿದ್ದಾರೆ.

ಕ್ಯಾಮೆರಾ

ಇಂದು ಯಾವುದೇ ಸಭೆ ಸಮಾರಂಭಗಳಲ್ಲಿ ಫೋಟೊಗ್ರಾಫರ್‌ ಇದ್ದರೂ ಸ್ಮಾರ್ಟ್‌ಫೋನ್‌ನಲ್ಲಿ ಫೋಟೊ ಕ್ಲಿಕ್ಕಿಸುವವರ ಸಂಖ್ಯೆಯೇನೂ ಕಡಿಮೆ ಇರುವುದಿಲ್ಲ. ಕೆಲವರು ಉತ್ತಮ ಗುಣಮಟ್ಟದ ಫೋಟೊಗಳನ್ನು ಕ್ಲಿಕ್ಕಿಸಲೆಂದೇ ಒಳ್ಳೆಯ ಕ್ಯಾಮೆರಾ ಇರುವ ಸ್ಮಾರ್ಟ್‌ಫೋನ್‌ಗಳನ್ನು ಆಯ್ಕೆ ಮಾಡುತ್ತಾರೆ. ಕ್ಯಾಮೆರಾವನ್ನು ಜತೆಯಲ್ಲಿ ಕೊಂಡೊಯ್ಯಲು, ಅದನ್ನು ಕಾಪಾಡಿಕೊಳ್ಳಲು ಕಷ್ಟ. ಮೊಬೈಲ್‌ ಆದರೆ ಯಾವಾಗಲೂ ಜತೆಯಲ್ಲೇ ಇರುತ್ತದೆ ಎನ್ನುವ ಮಾತನ್ನೂ ಕೆಲವರು ಹೇಳುತ್ತಾರೆ. ಹೀಗಾಗಿ ಪ್ರತಿ ಬಾರಿ ಹೊಸ ಫೊನ್‌ ತಯಾರಿಸುವಾಗಲೂ ಕಂಪನಿಗಳು ಕ್ಯಾಮೆರಾ ಗುಣಮಟ್ಟ ಸುಧಾರಿಸುವ ಕಡೆಗೂ ಹೆಚ್ಚು ಗಮನ ನೀಡುತ್ತಿವೆ.

ಬೇಸಿಕ್‌ ಫೋನ್‌ನಲ್ಲಿದ್ದ ಕ್ಯಾಮೆರಾಕ್ಕೂ ಪ್ರೀಮಿಯಂ ಫೋನ್‌ನಲ್ಲಿರುವ ಕ್ಯಾಮೆರಾಕ್ಕೂ ಹಲವು ವ್ಯತ್ಯಾಸಗಳಿವೆ. ಮಂದಬೆಳಕಿನಲ್ಲಿಯೂ ಉತ್ತಮ ಚಿತ್ರಗಳನ್ನು ಸೆರೆಹಿಡಿಯುವ ಆಯ್ಕೆಗಳೂ ಇವೆ. ಇದೀಗ ಹೊಸ ವರ್ಷದಲ್ಲಿ ಮೊಬೈಲ್ ಕ್ಯಾಮೆರಾ ಮತ್ತಷ್ಟು ಬದಲಾವಣೆಗಳಿಗೆ ಒಳಗಾಗಲಿದೆ.

ಆರಂಭದಲ್ಲಿ ಮೊಬೈಲ್‌ನಲ್ಲಿ ಇದ್ದಿದ್ದು ಒಂದೇ ಒಂದು ಕ್ಯಾಮೆರಾ. ನಂತರ ಸೆಲ್ಫಿ ಕ್ಯಾಮೆರಾ ಸೇರಿಕೊಂಡಿತು. ಆ ಬಳಿಕ ಹಿಂಬದಿಯಲ್ಲಿ ಎರಡು ಕ್ಯಾಮೆರಾ, ಮುಂಬದಿಯಲ್ಲಿ ಸೆಲ್ಫಿ ಕ್ಯಾಮೆರಾ. ಇಷ್ಟು ಸಾಲದೆಂಬಂತೆ ಕೆಲವು ಫೋನ್‌ಗಳ ಹಿಂಬದಿಯಲ್ಲಿ ಮೂರು ಕ್ಯಾಮೆರಾಗಳಿವೆ. ಇದೀಗ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ನಾಲ್ಕು ಕ್ಯಾಮೆರಾಗಳು ಬರಲಿವೆಯಂತೆ! ಕೆಲವು ಕ್ಯಾಮೆರಾಗಳು 10x ಜೂಮ್‌ ಸಾಮರ್ಥ್ಯವನ್ನೂ ಹೊಂದಲಿವೆಯಂತೆ. ಪೋರ್ಟ್ರೇಟ್‌ ಮೋಡ್‌ನಲ್ಲಿ ಇನ್ನಷ್ಟು ಸುಧಾರಣೆಯಾಗಲಿದೆ.

5ಜಿ ಫೋನ್‌

ಸೂಪರ್‌ಫಾಸ್ಟ್‌ ಮೊಬೈಲ್‌ ನೆಟ್‌ವರ್ಕ್‌ ಎಂಬ ಘೋಷಣೆಯೊಂದಿಗೆ 5ಜಿ ಮಾರುಕಟ್ಟೆಗೆ ಬರುತ್ತಿದೆ. ಇದರಲ್ಲಿ ಅತ್ಯಾಧುನಿಕ ನಿಸ್ತಂತು ತಂತ್ರಜ್ಞಾನ ಅಂದರೆ ಮಿಲಿಮೀಟರ್‌ ವೇವ್‌ ಬ್ಯಾಂಡ್‌ ತಂತ್ರಜ್ಞಾನ ಬಳಸಲಾಗಿದೆ. ಅಂದರೆ ವೈ–ಫೈ ಸಂಪರ್ಕದಲ್ಲಿ ಪ್ರತಿ ಸೆಕೆಂಡ್‌ಗೆ ಗರಿಷ್ಠ 10 ಜಿಬಿವರೆಗೆ ಇಂಟರ್‌ನೆಟ್‌ ವೇಗ ಲಭಿಸುವ ಸಾಧ್ಯತೆ ಇದೆ. ಈ ತಂತ್ರಜ್ಞಾನ ಅಳವಡಿಕೆಯಿಂದ ನಗರ ಪ್ರದೇಶಗಳಲ್ಲಿ ಪ್ರತಿ ಸೆಕೆಂಡ್‌ಗೆ 10 ಸಾವಿರ ಎಂಬಿ ಹಾಗೂ ಗ್ರಾಮೀಣ ಭಾಗಗಳಲ್ಲಿ ಸೆಕೆಂಡ್‌ಗೆ ಕನಿಷ್ಠ 1 ಸಾವಿರ ಎಂಬಿ ವೇಗದ ಅಂತರ್ಜಾಲ ಸೌಲಭ್ಯ ಒದಗಿಸುವ ಗುರಿ ಹೊಂದಿದೆ.

***

ಮಡಚುವ ಡಿಸ್‌ಪ್ಲೇ (ಫೋಲ್ಡೆಬಲ್‌ ಡಿಸ್‌ಪ್ಲೆ)

ಮಡಚುವ ಡಿಸ್‌ಪ್ಲೇ ಇರುವ ಫೋನ್‌ ಬಗ್ಗೆ 2013ರಿಂದಲೂ ಜನರು ಮಾತನಾಡುತ್ತಿದ್ದಾರೆ. 2019ರಲ್ಲಿ ಅದು ಸಾಕಾರವಾಗಲಿದೆ. ಹುವಾವೆ ಮತ್ತು ಸ್ಯಾಮ್‌ಸಂಗ್‌ ಕಂಪನಿಗಳು ಫೋಲ್ಡೆಬಲ್‌ ಫೋನ್‌ ಬಿಡುಗಡೆ ಮಾಡುವುದಾಗಿ ಈಗಾಗಲೇ ಘೋಷಿಸಿವೆ.

ಹುವಾವೆ ಫೋನ್‌ ಮಡಚಿ ಇಟ್ಟಾಗ 4 ಇಂಚು ಇರಲಿದೆ, ಬಿಚ್ಚಿದರೆ 8 ಇಂಚುಗಳವರೆಗೆ ಹಿಗ್ಗಲಿದೆ. ಇದು ಪರ್ಸನಲ್ ಕಂಪ್ಯೂಟರ್‌ನಂತೆ (ಪಿಸಿ) ಕಲಸ ಮಾಡಲು ಇಷ್ಟಿದ್ದರೆ ಸಾಕು ಎನ್ನುವುದು ಸಿಇಒ ಅಭಿಮತ. ಸ್ಯಾಮ್‌ಸಂಗ್‌ನ 7.3 ಇಂಚ್‌ ಸ್ಕ್ರೀನ್‌ ಇರುವ ಪೋನ್‌ನಲ್ಲಿ ಏಕಕಾಲಕ್ಕೆ ಮೂರು ಆ್ಯಪ್‌ಗಳನ್ನು ಸಕ್ರಿಯಗೊಳಿಸಬಹುದಂತೆ!

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು