ಸಾವನ್ನು ಸಂಭ್ರಮಿಸುವ ಮನಸುಗಳು: ಕಳವಳ

7
ಬಂಟರ ಸಂಘದಲ್ಲಿ ಮಧುಕರ ಶೆಟ್ಟಿಗೆ ನುಡಿನಮನ

ಸಾವನ್ನು ಸಂಭ್ರಮಿಸುವ ಮನಸುಗಳು: ಕಳವಳ

Published:
Updated:
Prajavani

ಬೆಂಗಳೂರು: ‘ಮಧುಕರ ಶೆಟ್ಟಿ ನಿಧನದಿಂದಾಗಿ ತಾವು ಪಾರಾದೆವು ಎಂದು ಖುಷಿಪಡುವವರು ರಾಜಕೀಯ ಮತ್ತು ಆಡಳಿತ ವ್ಯವಸ್ಥೆಯೊಳಗಿದ್ದಾರೆ’ ಎಂದು ಲೋಕಾಯುಕ್ತ ನಿವೃತ್ತ ನ್ಯಾಯಮೂರ್ತಿ ಎನ್‌.ಸಂತೋಷ ಹೆಗ್ಡೆ ಬೇಸರ ವ್ಯಕ್ತಪಡಿಸಿದರು. 

ವಿಜಯನಗರದ ಬಂಟರ ಸಂಘದಲ್ಲಿ ಭಾನುವಾರ ನಡೆದ ಮಧುಕರ ಶೆಟ್ಟಿ ನುಡಿನಮನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. 

‘ಸಾವನ್ನು ಸಂಭ್ರಮಿಸುವ ಮನಸ್ಸುಗಳು ಇರುವುದು ಕಳವಳಕಾರಿ. ಮಧುಕರ ಶೆಟ್ಟಿ ಅವರು ಪದೇ ಪದೇ ವರ್ಗಾವಣೆಗೆ ಒಳಗಾಗುತ್ತಿದ್ದರು. ಹಲವು ಒತ್ತಡಗಳ ನಡುವೆಯೂ ಅವರು ಪ್ರಾಮಾಣಿಕ ಸೇವೆ ಸಲ್ಲಿಸಿದ್ದಾರೆ’ ಎಂದರು.

‘ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಸಮೀಪದ ನಿವೇಶನ ಮಾಲೀಕರನ್ನು ಬೆದರಿಸಿ ಸಚಿವರೊಬ್ಬರು ಭೂಮಿ ಕಬಳಿಸಲು ಮುಂದಾಗಿದ್ದರು. ಈ ಬಗ್ಗೆ ಪ್ರಕರಣ ದಾಖಲಿಸಿದ ಶೆಟ್ಟಿ ಅವರು ಸಚಿವ ಹಾಗೂ ಅವರ ಪುತ್ರನನ್ನು ಜೈಲಿಗೆ ಕಳುಹಿಸಿದ್ದರು’ ಎಂದು ಸ್ಮರಿಸಿದರು. 

ಲೋಕಾಯುಕ್ತ ನ್ಯಾಯಮೂರ್ತಿ ಪಿ. ವಿಶ್ವನಾಥ ಶೆಟ್ಟಿ, ‘ನನ್ನ ಮಗಳ ಮದುವೆ ಸಂದರ್ಭ (2007) ಮಧುಕರ ಶೆಟ್ಟಿ ನಗರದಲ್ಲಿ ಡಿಸಿಪಿ ಆಗಿದ್ದರು. ಪೊಲೀಸ್‌ ಭದ್ರತೆಗಾಗಿ ಅವರನ್ನು ಸಂಪರ್ಕಿಸಿದ್ದೆ. ಒಪ್ಪಿದ ಅವರು, ಒಂದು ಮನವಿ ಹಾಗೂ ನಿರ್ದಿಷ್ಟ ಮೊತ್ತವನ್ನು ಇಲಾಖೆಗೆ ಪಾವತಿಸುವಂತೆ ಸೂಚಿಸಿದರು. ಅವರ ಪ್ರಾಮಾಣಿಕತೆ ಬಗ್ಗೆ ಹೆಮ್ಮೆ ಎನಿಸಿತು' ಎಂದು ಸ್ಮರಿಸಿದರು. 

ನಿವೃತ್ತ ಐಪಿಎಸ್‌ ಅಧಿಕಾರಿ ಡಾ.ಡಿ.ವಿ.ಗುರುಪ್ರಸಾದ್ ಮಾತನಾಡಿ, ‘ವೀರಪ್ಪನ್ ಕಾರ್ಯಾಚರಣೆ ಬಳಿಕ ನಿವೇಶನದ ಆಸೆಗಾಗಿ ಅನೇಕ ಐಪಿಎಸ್ ಅಧಿಕಾರಿಗಳು ನಾವು ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದೇವೆ ಎಂದು ಅರ್ಜಿಗಳನ್ನು ಹಾಕಿದ್ದರು. ಆದರೆ, ಮಧುಕರ್ ಶೆಟ್ಟಿ ಇದ್ಯಾವುದನ್ನೂ ಬಯಸದೇ ದೂರ ಇದ್ದರು. ನಕ್ಸಲರ ಮನಪರಿವರ್ತನೆಗೆ ಮುಂದಾಗಿದ್ದರು. ಅವರ ಕುರಿತು ಪುಸ್ತಕ ಬರೆದಿದ್ದರು. ಆದರೆ, ಅದು ಪ್ರಕಟವಾದಂತಿಲ್ಲ’ ಎಂದರು.

ಕೇಂದ್ರ ಅಪರಾಧ ವಿಭಾಗದ ಡಿಸಿಪಿ ಎಸ್.ಗಿರೀಶ್ ಮಾತನಾಡಿ, ‘ಮಧುಕರ್ ಶೆಟ್ಟಿ ಹೆಸರಿನಲ್ಲಿ ಸಂಶೋಧನಾ ಕೇಂದ್ರ ಹಾಗೂ ವಸ್ತು ಸಂಗ್ರಹಾಲಯ ತೆರೆಯಲು ಬಂಟರ ಸಂಘ ಮುಂದಾಗಬೇಕು’ ಎಂದು ಸಲಹೆ ಮಾಡಿದರು.

ಪ್ರಶಸ್ತಿ ಘೋಷಣೆ
ಬಂಟರ ಸಂಘದ ವತಿಯಿಂದ ಮಧುಕರ ಶೆಟ್ಟಿ ಹೆಸರಿನಲ್ಲಿ ಪ್ರಶಸ್ತಿ ಪ್ರದಾನ ಮಾಡಲು ನಿರ್ಧರಿಸಿದ್ದೇವೆ ಎಂದು ಸಂಘದ ಅಧ್ಯಕ್ಷ ಉಪೇಂದ್ರ ಶೆಟ್ಟಿ ಹೇಳಿದರು.

ಪ್ರಾಮಾಣಿಕ ಪೊಲೀಸ್‌ ಅಧಿಕಾರಿಗಳನ್ನು ಪ್ರತಿವರ್ಷ ಗುರುತಿಸಿ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದರು. 

ಬರಹ ಇಷ್ಟವಾಯಿತೆ?

 • 5

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !