ಶನಿವಾರ, ಜುಲೈ 2, 2022
25 °C
ಅರಾವಳಿ ಬೆಟ್ಟಗಳ ಅಳಲು ವಾಯುಮಾಲಿನ್ಯದ ಅಬ್ಬರದಲ್ಲಿ ಕೇಳಿಸುತ್ತಿದೆಯೇ?

ದೆಹಲಿಯ ರಮ್ಯ ಚಳಿ ಈಗ ನಂಜಾಯಿತೇ!

ರೇಣುಕಾ ನಿಡಗುಂದಿ Updated:

ಅಕ್ಷರ ಗಾತ್ರ : | |

ಇಡೀ ಉತ್ತರ ಭಾರತ ಈಗ ಮೂಳೆ ಕಟಕಟಿಸುವ ಚಳಿಗೆ ತತ್ತರಿಸುತ್ತಿದೆ. ಪ್ರತಿವರ್ಷ ಚಳಿಯ ಪ್ರಕೋಪದೊಡನೆ ದೆಹಲಿ ಮತ್ತು ಅದಕ್ಕೆ ಹೊಂದಿಕೊಂಡಿರುವ ಪ್ರದೇಶಗಳಲ್ಲಿ ಉಲ್ಬಣಿಸುವ ವಾಯುಮಾಲಿನ್ಯವೇ ರಾಷ್ಟ್ರೀಯ ಸುದ್ದಿಯಾಗುತ್ತದೆ. ದೆಹಲಿಯ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹೊಂಜಿನ ಕಾರ್ಮುಗಿಲು ದಿಗಿಲು ಹುಟ್ಟಿಸುತ್ತದೆ.

ಕಳೆದ ವರ್ಷ ಪಟಾಕಿ ಹೊಡೆಯುವುದನ್ನು ನಿಷೇಧಿಸಿದ್ದ ಸುಪ್ರೀಂ ಕೋರ್ಟ್‌, ಆನಂತರ ನಿಷೇಧವನ್ನು ಸ್ವಲ್ಪ ಸಡಿಲಿಸಿ ಎರಡು ಗಂಟೆಗಳ ಕಾಲ ಮಾತ್ರ ಪಟಾಕಿ ಸಿಡಿಸಲು ಅನುಮತಿ ನೀಡಿತ್ತು. ಜನರು ಅದನ್ನೂ ಉಲ್ಲಂಘಿಸಿ ಪಟಾಕಿ ಸಿಡಿಸಿದ್ದರು. ಇದಾದ ನಂತರ ದೆಹಲಿಯಲ್ಲಿ ಒಂದೆರಡು ದಿನ ಮಳೆ ಹನಿದರೂ ಮಾಲಿನ್ಯ ತಗ್ಗಲಿಲ್ಲ.

ಚಳಿಗಾಲವಿರುವುದೇ ಪ್ರೇಮಿಗಳಿಗೆ ಎಂಬಂತೆ, ಹಿಂದೆಲ್ಲ ದೆಹಲಿಯನ್ನು ರಮ್ಯವಾಗಿಸಿದ ಚಳಿಗಾಲವಿತ್ತು. ಜನರು ಮಾಗಿಯ ಮಂಜಿನ ಹೊದಿಕೆಯ ಬೆಳಗನ್ನು ಮೋಹಿಸುವ ದಿನಗಳಿದ್ದವು. ಆದರೆ ಈಗಿನ ಪರಿಸ್ಥಿತಿಯೇ ಬೇರೆ. ಈ ಮೂರು ದಶಕಗಳಲ್ಲಿ ಗಾಳಿ ಮಲಿನಗೊಳ್ಳುತ್ತಾ ಹೋಯಿತು. ಪಂಜಾಬಿನ ಹೊಲಗಳಲ್ಲಿ ‘ಪರಾಲಿ’ (ಒಣಹುಲ್ಲು- ದಂಟು) ಸುಡತೊಡಗಿ ದೆಹಲಿಯ ದವಾಖಾನೆಗಳಲ್ಲಿ ದಮ್ಮು, ಆಸ್ತಮಾ, ಶ್ವಾಸಕೋಶದ ರೋಗಿಗಳ ಸಂಖ್ಯೆ ಏರಿದಾಗ ಬರೆ ಎಳೆದಂತೆ ಜಗತ್ತು ಎಚ್ಚೆತ್ತುಕೊಳ್ಳುತ್ತದೆ.

ಇತ್ತೀಚಿನ ವರ್ಷಗಳಲ್ಲಿ ಪರಿಸರ ಮಾಲಿನ್ಯವು ಚಳಿಗಾಲದ ಹೊಂಜಿಗಷ್ಟೇ ಸೀಮಿತಗೊಳ್ಳದೆ ವರ್ಷಪೂರ್ತಿ ಹರಡಿರುತ್ತದೆ. ಕಳೆದ ಜೂನ್ ತಿಂಗಳಲ್ಲಿ ದೂಳಿನ ಪ್ರಚಂಡ ಮಾರುತವು ದೆಹಲಿ ಮತ್ತು ಸುತ್ತಲಿನ ಪ್ರದೇಶಗಳನ್ನು ಪತರಗುಟ್ಟುವಂತೆ ಮಾಡಿತು. ಭೂಮಂಡಲವು ದೂಳು, ಹೊಗೆಮಂಜಿನಿಂದ ತುಂಬಿಕೊಂಡು ಉಸಿರುಗಟ್ಟಿಸತೊಡಗಿದಾಗ ಸರ್ಕಾರ, ಹಸಿರುಪೀಠ, ನ್ಯಾಯಾಂಗ ಮತ್ತು ಶಾಸಕಾಂಗ ಚುರುಕಾಗುತ್ತವೆ. ವಾಯುಮಾಲಿನ್ಯ ತಗ್ಗಿಸಲು ಸಮ- ಬೆಸ ಸಂಖ್ಯೆಗಳ ವಾಹನ ಸಂಚಾರ ಸೂತ್ರದ ಜಾರಿಗಾಗಿ ಬಿಸಿ ಚರ್ಚೆಗಳಾಗುತ್ತವೆ.

ಹೊರವಲಯದಿಂದ ರಾಜಧಾನಿಗೆ ನುಗ್ಗುವ ಲಾರಿ, ಟ್ರಕ್ಕುಗಳ ಪ್ರವೇಶವನ್ನು ನಿಷೇಧಿಸಲಾಗುತ್ತದೆ, ನಗರದಲ್ಲಿ ಕಟ್ಟಡ ನಿರ್ಮಾಣ ಕಾಮಗಾರಿಯನ್ನು ಸ್ಥಗಿತಗೊಳಿಸಲಾಗುತ್ತದೆ. ಬದರ್ಪುರ್ ಉಷ್ಣ ವಿದ್ಯುತ್‌ ಸ್ಥಾವರವನ್ನು ಸ್ಥಗಿತಗೊಳಿಸಲಾಗುತ್ತದೆ. ಶಾಲೆಗಳಿಗೆ ರಜೆ ಘೋಷಿಸಲಾಗುತ್ತದೆ. ಕೃತಕ ಮಳೆಯನ್ನು ಸುರಿಸಲಾಗುತ್ತದೆ... ಇಷ್ಟಾದರೆ ಆಯಿತೇ? ಎಲ್ಲಾ ಕಸರತ್ತುಗಳು ತಾತ್ಕಾಲಿಕ ಪರಿಹಾರಗಳೇ ವಿನಾ ಶಾಶ್ವತ ಪರಿಹಾರಗಳಲ್ಲ. ಅದಕ್ಕೆ ಹೊಣೆಗಾರ ಮನುಷ್ಯನೇ ಹೊರತು ಪ್ರಕೃತಿಯಲ್ಲ.

‘ಒಂದು ಅಡವಿಯಲ್ಲಿ ಒಬ್ಬ ರಕ್ಕಸನಿದ್ದ. ಯಾರಾದರೂ ಮರ ಕಡಿಯಲು ಹೋದರೆ ತಿಂದುಬಿಡುತ್ತಿದ್ದ’. ಇಂಥ ಕಥೆಗಳನ್ನು ನಾವೆಲ್ಲ ಕೇಳಿಯೇ ದೊಡ್ದವರಾಗಿದ್ದೇವೆ. ಗುಡ್ಡ– ಬೆಟ್ಟ- ಅರಣ್ಯಗಳಿರುವುದು ನಾಶಗೊಳಿಸಲಿಕ್ಕಲ್ಲ ಎಂಬ ಮನೋಭಾವವನ್ನು ಹಿರಿಯರು ಬಾಲ್ಯದಲ್ಲಿಯೇ ಕಥೆಗಳ ಮೂಲಕ ಬಿತ್ತುತ್ತಿದ್ದರು. ಅಡವಿಯ ಎಲೆಗಳನ್ನು ಮುಟ್ಟಿದರೆ ಅಡವಿದೇವತೆ ಸಿಟ್ಟಾಗುತ್ತಾಳೆಂಬ ಕಥೆಗಳು ಉತ್ತರ ಭಾರತದಲ್ಲೂ ಇವೆ. ಆದರೂ ಮನುಷ್ಯನ ಹೊಟ್ಟೆಬಾಕತನಕ್ಕೆ ಯಾವುದೂ ಉಳಿಯುತ್ತಿಲ್ಲ. ರಾಜಸ್ಥಾನದ ಬಿರುಬಿಸಿಲಿನ ಸುಡುಗಾಳಿ, ಮರುಭೂಮಿಯ ಮರಳು ಮಾರುತ, ದೂಳಿನ ಸುಳಿಗಾಳಿಯಿಂದ ದೆಹಲಿಯನ್ನು ರಕ್ಷಿಸುತ್ತಿದ್ದ ಅರಾವಳಿ ಗುಡ್ದ ಶ್ರೇಣಿಗಳು ಕಳೆದ ಮೂವತ್ತು ವರ್ಷಗಳಲ್ಲಿ ನಿರ್ನಾಮಗೊಂಡಿವೆ.

ನೈರುತ್ಯದಲ್ಲಿ 692 ಕಿ.ಮೀ. ವ್ಯಾಪ್ತಿಯಲ್ಲಿ ಹರಡಿರುವ ಅರಾವಳಿ ಶ್ರೇಣಿಯು ದೆಹಲಿ, ಹರಿಯಾಣ ಮತ್ತು ರಾಜಸ್ಥಾನ ರಾಜ್ಯಗಳನ್ನು ಬಳಸಿಕೊಂಡು ಗುಜರಾತ್‌ನಲ್ಲಿ ಕೊನೆಗೊಳ್ಳುತ್ತದೆ. ಉತ್ತರ ಭಾರತದಲ್ಲಿನ ಸಿಂಧು- ಗಂಗಾ ಬಯಲು ಪ್ರದೇಶದ ಸಮತೋಲನದಲ್ಲಿ ಅರಾವಳಿ ಬೆಟ್ಟಗಳು ಪ್ರಮುಖ ಪಾತ್ರ ವಹಿಸುತ್ತಿವೆ. ಮಳೆ ಮತ್ತು ಮಣ್ಣಿನ ಸಂರಕ್ಷಣೆಯಂತಹ ಪರಿಸರದ ಅನೇಕ ಅಂಶಗಳು ಈ ಪುರಾತನ ಪರ್ವತ ಶ್ರೇಣಿಯ ಮೇಲೆ ಅವಲಂಬಿತವಾಗಿದ್ದು ಈ ಬೆಟ್ಟಗಳು ಇಂದು ಭಾರತದ ಅತ್ಯಂತ ದುಃಸ್ಥಿತಿಯಲ್ಲಿರುವ ಬೆಟ್ಟಗಳಾಗಿರುವುದು ನಮ್ಮ ದುರಂತ.

ರಾಜಸ್ಥಾನ ಮತ್ತು ಹರಿಯಾಣದಲ್ಲಿನ ಅರಾವಳಿ ಬೆಟ್ಟಗಳ ಕೆಲವು ಸೂಕ್ಷ್ಮಪ್ರದೇಶಗಳನ್ನು ಅಕ್ರಮ ಗಣಿಗಾರಿಕೆಯಿಂದ 1992ರಲ್ಲಿ ರಕ್ಷಿಸಲಾಗಿತ್ತು. ಕೇಂದ್ರ ಸರ್ಕಾರವು 2003ರಲ್ಲಿ ಈ ಪ್ರದೇಶಗಳಲ್ಲಿ ಗಣಿಗಾರಿಕೆ ಕಾರ್ಯಾಚರಣೆಗಳನ್ನು ನಿಷೇಧಿಸಿತು. 2009ರ ಮೇ ತಿಂಗಳಲ್ಲಿ ಹರಿಯಾಣದ ಫರೀದಾಬಾದ್, ಗುಡಗಾಂವ್‌ (ಈಗ ಗುರುಗ್ರಾಮ) ಮತ್ತು ಮೆವಾತ್ ಜಿಲ್ಲೆಗಳಾದ್ಯಂತ 448 ಕಿ.ಮೀ. ವ್ಯಾಪ್ತಿಯ ಅರಾವಳಿ ಶ್ರೇಣಿಯನ್ನು ಒಳಗೊಂಡ ಪ್ರದೇಶಕ್ಕೆ ಗಣಿಗಾರಿಕೆಯ ಮೇಲಿನ ನಿಷೇಧವನ್ನು ಕೋರ್ಟ್ ವಿಸ್ತರಿಸಿತು. ಅರಾವಳಿ ಪ್ರದೇಶದ 31 ಬೆಟ್ಟಗಳು ಕಣ್ಮರೆಯಾದದ್ದನ್ನು ಕಂಡ ಸುಪ್ರೀಂ ಕೋರ್ಟ್, ಕಳೆದ ವರ್ಷದ ಅಕ್ಟೋಬರ್ ತಿಂಗಳಲ್ಲಿ ಆಘಾತ ವ್ಯಕ್ತಪಡಿಸಿದ್ದಲ್ಲದೇ 48 ಗಂಟೆಗಳೊಳಗೆ 115 ಹೆಕ್ಟೇರ್ ಪ್ರದೇಶದಲ್ಲಿನ ಅಕ್ರಮ ಗಣಿಗಾರಿಕೆ ನಿಲ್ಲಿಸಲು ರಾಜ್ಯ ಸರ್ಕಾರಕ್ಕೆ ಸೂಚಿಸಿತ್ತು.

ಅರಾವಳಿ ಶ್ರೇಣಿಯಲ್ಲಿ ಗಣಿಗಾರಿಕೆ ಚಟುವಟಿಕೆಗಳಿಂದ ಸುಮಾರು ₹ 5 ಸಾವಿರ ಕೋಟಿ ರಾಯಧನವನ್ನು ರಾಜಸ್ಥಾನ ಗಳಿಸುತ್ತದಂತೆ. ‘ನಿಮ್ಮ ರಾಯಧನಕ್ಕಾಗಿ ದೆಹಲಿಯ ಲಕ್ಷಾಂತರ ಜನರ ಜೀವನವನ್ನು ಬಲಿಕೊಡಲಾಗದು’ ಎಂದು ಸುಪ್ರೀಂ ಕೋರ್ಟ್‌ ಎಚ್ಚರಿಸುತ್ತಲೇ
ಇದೆ. ಬೆಟ್ಟಗಳ ಕಣ್ಮರೆಯು ಪರಿಸರ ಮಾಲಿನ್ಯಕ್ಕೆ ಬಲುದೊಡ್ದ ಕಾರಣವಾಗಿದೆ. ದೆಹಲಿ ಹಾಗೂ ಅದರ ಸುತ್ತಲಿನ ಜನಜೀವನವೇ ನರಕವಾಗುತ್ತಿದೆ.

ಇಂದಿನ ಜೆಎನ್‌ಯು ಕ್ಯಾಂಪಸ್, ರಂಗಪುರಿ ಪಹಾಡಿ, ವಸಂತಕುಂಜ್, ರಾಷ್ಟ್ರಪತಿಭವನದ ರೈಸಿನಾ ಹಿಲ್ ಸುತ್ತಲಿನ ಪ್ರದೇಶ ಅರಾವಳಿಯ ಭಾಗವೇ ಆಗಿವೆ. ನಾನು ಮುನಿರ್ಕಾದಲ್ಲಿದ್ದಾಗ ವಸಂತಕುಂಜ್‌ಗೆ ಹೋಗಲು ಕಿರಿದಾದ ಮಾರ್ಗವಿತ್ತು. ಜನವಸತಿಯೂ ವಿರಳವಿತ್ತು. ಈಗದು ನೆಲ್ಸನ್ ಮಂಡೇಲಾ ಮಾರ್ಗವಾಗಿದೆ. ಯೋಜಿತವಲ್ಲದ ನಗರೀಕರಣದಿಂದ ಆಗಿರುವ ಪರಿಸರ ಹಾನಿ, ಗಣಿಗಾರಿಕೆ, ಅಸಮರ್ಪಕ ತ್ಯಾಜ್ಯ ವಿಲೇವಾರಿ, ಮಾಲಿನ್ಯ, ನೈಸರ್ಗಿಕ ಸಂಪನ್ಮೂಲಗಳ ಅತಿಯಾದ ಬಳಕೆ... ಅರಾವಳಿ ಪ್ರದೇಶವನ್ನು ವಿನಾಶದ ಸ್ಥಿತಿಗೆ ತಂದಿಟ್ಟಿದೆ. ಕೆಲ ವನ್ಯಜೀವಿಗಳ ಸಂತತಿಯೇ ಅಳಿದಿದೆ.

ಮೊಘಲರ ಕಾಲದಲ್ಲಿ ಅರಾವಳಿ ಬೆಟ್ಟದ ತಪ್ಪಲಿನಲ್ಲಿ ವಾಸಿಸುತ್ತಿದ್ದ ಗುಜ್ಜರರು ಬೇಸಾಯ ಮಾಡಿಕೊಂಡು, ಅರಣ್ಯವನ್ನು ಭಯ ಭಕ್ತಿಯಿಂದ ಪೋಷಿಸಿಕೊಂಡು ಬಂದಿದ್ದರು. ಕಾಲ ಬದಲಾದಂತೆ ಹಣಕ್ಕಾಗಿ ಅರಾವಳಿ ತಪ್ಪಲು ಪ್ರದೇಶವನ್ನು ಮಾರಿಕೊಂಡು ಗುಜ್ಜರರು ದೆಹಲಿಯ ಧನಿಕರಾದರು. ರಿಯಲ್ ಎಸ್ಟೇಟ್, ಅಕ್ರಮಗಣಿಗಾರಿಕೆಯ ಖಳನಾಯಕರು ಅರಾವಳಿಯ ಮತ್ತೊಂದಿಷ್ಟು ಬೆಟ್ಟಗಳನ್ನು ನೆಲಸಮಗೊಳಿಸಿದರು. ಆಗಲೂ ಮನುಷ್ಯನಿಗೆ ತಾನು ಮಾಡುತ್ತಿರುವ ವಿನಾಶದ ಅರಿವು ಮೂಡಲೇ ಇಲ್ಲ. ಯಾವ ಸರ್ಕಾರವೂ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಲಿಲ್ಲ.

ರೈತರು, ಬೆಳೆಯ ತ್ಯಾಜ್ಯ ಸುಡುವುದನ್ನು ತಡೆಯಲು ಸರ್ಕಾರ ಯಾವ ಕ್ರಮ ತೆಗೆದುಕೊಂಡಿದೆ? ರೈತರ ಮನವೊಲಿಸಿ, ಅವರಿಗೆ ಒಂದಷ್ಟು ಪ್ರೋತ್ಸಾಹಧನ ಕೊಟ್ಟಿದ್ದರೆ ಅವರು ಈ ರೀತಿಯಾಗಿ ಕೃಷಿ ತ್ಯಾಜ್ಯವನ್ನು ಸುಡುತ್ತಿರಲಿಲ್ಲ ಎಂದು ತಜ್ಞರು ಹೇಳುತ್ತಾರೆ. ಸರ್ಕಾರ ಅಷ್ಟನ್ನೂ ಮಾಡಿಲ್ಲ. ಅರಾವಳಿ ಶ್ರೇಣಿಯ ಅವನತಿಯು ಮಾಲಿನ್ಯ ಮಟ್ಟವನ್ನು ಮಾತ್ರ ಹೆಚ್ಚಿಸುತ್ತಿಲ್ಲ, ಮಳೆಯ ಪ್ರಮಾಣವನ್ನೂ ತಗ್ಗಿಸಿದೆ. ಮಾಲಿನ್ಯಕಾರಕ ಕಣಗಳ ಪ್ರಮಾಣ ದಾಖಲೆ ಮಟ್ಟದಲ್ಲಿ ಏರಿರುವ ಸುದ್ದಿ ಮತ್ತು ವರದಿಗಳನ್ನು ಟಿ.ವಿ.ಯಲ್ಲಿ ನೋಡುತ್ತ- ‘ಇದ್ದುದೆಲ್ಲ ಹೋಗಿ, ಇತ್ತೊ ಇಲ್ಲೊ ಆಗಿ ಕುರುಹುಗೆಟ್ಟುದಕೆ ಹೆಸರೇನಿಟ್ಟಿ?’ ಎನ್ನುವುದನ್ನು ಬಿಟ್ಟರೆ ಸದ್ಯಕ್ಕೆ ಏನೂ ತೋಚುತ್ತಿಲ್ಲ!

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು