ಶುಕ್ರವಾರ, ಏಪ್ರಿಲ್ 23, 2021
30 °C
ಎನ್‌ಜಿಒ ‘ಮಾರ್ಗದರ್ಶಿ’ಯ ಪರಿಕಲ್ಪನೆ, ಸಂಘ ಸಂಸ್ಥೆಗಳು, ವಿವಿಧ ಇಲಾಖೆಗಳ ಸಹಕಾರ

ಚಾಮರಾಜನಗರ | 7ರಂದು ಅಂಗವಿಕಲ ಮಕ್ಕಳಿಗಾಗಿ ವಿಶೇಷ ಜಾತ್ರೆ

ಸೂರ್ಯನಾರಾಯಣ ವಿ. Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ಮುಖ್ಯವಾಹಿನಿಯಿಂದ ದೂರ ಉಳಿದಿರುವ ಅಂಗವಿಕಲ ಮಕ್ಕಳಲ್ಲಿ ಹಾಗೂ ಅವರ ಪೋಷಕರಲ್ಲಿ ಸ್ಫೂರ್ತಿ ತುಂಬುವುದಕ್ಕಾಗಿ ಇದೇ 7ರಂದು ನಗರದಲ್ಲಿ ಅಂಗವಿಕಲ ಮಕ್ಕಳ ವಿಶೇಷ ಜಾತ್ರೆ ಏರ್ಪಾಟಾಗಿದೆ. 

ಸ್ವಯಂ ಸೇವಾ ಸಂಸ್ಥೆಯಾದ (ಎನ್‌ಜಿಒ) ‘ಮಾರ್ಗದರ್ಶಿ ಅಂಗವಿಕಲರ ಸೇವಾ ಸಂಸ್ಥೆ’ಯ ಪರಿಕಲ್ಪನೆಯಲ್ಲಿ ರೂಪುಗೊಂಡಿರುವ ಈ ವಿಶೇಷ ಜಾತ್ರೆಗೆ ಸಾರ್ವಜನಿಕ ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಅಂಗವಿಕಲರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ರೋಟರಿ ಸಂಸ್ಥೆ, ರೋಟರಿ ಸಿಲ್ಕ್‌ ಸಿಟಿ, ವಾಸವಿ ಟ್ರಸ್ಟ್‌, ಲಯನ್‌ ಸಂಸ್ಥೆ, ಜಿಲ್ಲಾ ವರ್ತಕರ ಸಂಘ, ಮಹಾಮನೆ, ಜಿಲ್ಲಾ ಅಂಗವಿಕಲರ ಮತ್ತು ಆರೈಕೆದಾರರ ಒಕ್ಕೂಟ ಸಹಕಾರ ನೀಡುತ್ತಿವೆ.

ದಕ್ಷಿಣ ಕನ್ನಡದ ಮಂಗಳೂರಿನಲ್ಲಿ ಪ್ರತಿ ವರ್ಷ ಕೆಲವು ಸಂಘಸಂಸ್ಥೆಗಳು ಸೇರಿ ಅಂಗವಿಕಲರಿಗಾಗಿ ಇಂತಹ ಜಾತ್ರೆ ನಡೆಸುತ್ತಿವೆ. ಅದರಿಂದ ಸ್ಫೂರ್ತಿ ಪಡೆದು ಮಾರ್ಗದರ್ಶಿ ಸಂಸ್ಥೆ ರಾಜ್ಯದಲ್ಲಿಯೇ ಮೊದಲ ಬಾರಿಗೆ ಜಿಲ್ಲಾಮಟ್ಟದಲ್ಲಿ ವಿಶೇಷ ಜಾತ್ರೆ ಸಂಘಟಿಸುತ್ತಿದೆ. ಚಾಮರಾಜನಗರದ ಪಿಡಬ್ಲುಡಿ ಕಾಲೊನಿಯಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಲಿರುವ ವಿಶೇಷ ಜಾತ್ರೆಯಲ್ಲಿ 3ರಿಂದ 16 ವರ್ಷದೊಳಗಿನ ಅಂಗವಿಕಲ ಮಕ್ಕಳು ಭಾಗವಹಿಸಲಿದ್ದಾರೆ. 

‘2016ರ ಮಾರ್ಚ್‌ನಲ್ಲಿ ಹನೂರಿನಲ್ಲಿ ಇದೇ ರೀತಿಯ ಜಾತ್ರೆಯಲ್ಲಿ ಊರವರ ಸಹಕಾರ ಪಡೆದು ಮಾರ್ಗದರ್ಶಿ ಹಮ್ಮಿಕೊಂಡಿತ್ತು. 262 ಅಂಗವಿಕಲ ಮಕ್ಕಳು ಭಾಗವಹಿಸಿದ್ದ ಆ ಜಾತ್ರೆಯು ಯಶಸ್ವಿಯಾಗಿತ್ತು. ಅದೇ ಮಾದರಿಯಲ್ಲಿ ಜಿಲ್ಲಾಮಟ್ಟದಲ್ಲಿ ಜಾತ್ರೆಯನ್ನು ಹಮ್ಮಿಕೊಳ್ಳಲಾಗುತ್ತಿದೆ. ಇದು ಯಶಸ್ವಿಯಾದರೆ, ಇತರ ಜಿಲ್ಲೆಗಳಿಗೂ ಇದನ್ನು ವಿಸ್ತರಿಸಲಾಗುವುದು’ ಎಂದು ಮಾರ್ಗದರ್ಶಿ ಸಂಸ್ಥೆಯ ಮಾರ್ಗದರ್ಶಕ, ಅಂಗವಿಕಲರ ಕಾಯ್ದೆಯ ಮಾಜಿ ಆಯುಕ್ತ ಕೆ.ವಿ.ರಾಜಣ್ಣ ಅವರು ‘ಪ್ರಜಾವಾಣಿ’ಗೆ ತಿಳಿಸಿದರು. 

ಜಾತ್ರೆಯಲ್ಲಿ ಏನಿರಲಿದೆ?: ದೇವರ ಪೂಜೆ, ರಥೋತ್ಸವ ಬಿಟ್ಟರೆ ಈ ಜಾತ್ರೆಯಲ್ಲಿ ಮತ್ತೆಲ್ಲವೂ ಇವೆ. ಆಹಾರ ಮಳಿಗೆಗಳು, ಆಟಿಕೆಗಳು, ಮನೋರಂಜನಾ ಆಟಗಳು, ಸಾಂಸ್ಕೃತಿಕ ಕಲಾ ತಂಡಗಳು... ಹೀಗೆ ಜಾತ್ರೆಯಲ್ಲಿ ಏನೆಲ್ಲ ಇರುತ್ತವೆಯೋ ಅದೆಲ್ಲವೂ ಇರಲಿದೆ. 

‘ಜಿಲ್ಲೆಯಲ್ಲಿ ಒಂದರಿಂದ 10ನೇ ತರಗತಿವರೆಗೆ ಓದುತ್ತಿರುವ 1,369 ಮಕ್ಕಳಿದ್ದಾರೆ. ಜಿಲ್ಲೆಯ ಐದು ಶೈಕ್ಷಣಿಕ ವಲಯಗಳಲ್ಲಿ ಚಾಮರಾಜನಗರದಲ್ಲೇ 439 ಅಂಗವಿಕಲ ಮಕ್ಕಳು ಇದ್ದಾರೆ. ಎಲ್ಲ ಮಕ್ಕಳೂ ಇದರಲ್ಲಿ ಭಾಗವಹಿಸಬೇಕು ಎಂಬುದು ನಮ್ಮ ಆಶಯ. 500ರಿಂದ 600 ಮಕ್ಕಳು ಬರಲಿದ್ದಾರೆ ಎಂಬ ನಿರೀಕ್ಷೆ ನಮ್ಮದು’ ಎಂದು ರಾಜಣ್ಣ ಹೇಳಿದರು. 

‘ಜಾತ್ರೆಯಲ್ಲಿ ಭಾಗವಹಿಸುವ ಎಲ್ಲ ಮಕ್ಕಳಿಗೆ ನಾವು ಕೂಪನ್‌ ಕೊಡುತ್ತೇವೆ. ಅವರು ಆಹಾರ ಮಳಿಗೆಗಳಿಗೆ ಭೇಟಿ ಕೊಟ್ಟು, ತಮಗೆ ಬೇಕಾದ ಆಹಾರ ಖರೀದಿಸಬಹುದು. ಭಾಗವಹಿಸುವ ಮಕ್ಕಳಿಗೆ ಆಟಿಕೆಗಳನ್ನೂ ಉಚಿತವಾಗಿ ಕೊಡುತ್ತೇವೆ. ಇದಕ್ಕೆ ದಾನಿಗಳು ನಮಗೆ ನೆರವಾಗಿದ್ದಾರೆ’ ಎಂದು ಕಾರ್ಯಕ್ರಮದ ರೂಪುರೇಷೆಯನ್ನು ಅವರು ವಿವರಿಸಿದರು. 

ಆತ್ಮವಿಶ್ವಾಸ ತುಂಬುವ ಪ್ರಯತ್ನ

‘ಅಂಗವಿಕಲ ಮಕ್ಕಳು ಮನೆಯಿಂದ ಹೊರಗಡೆ ಬರುವುದಿಲ್ಲ. ಜಾತ್ರೆಯ ಗೌಜು ಗದ್ದಲ ಅವರು ನೋಡಿರುವುದಿಲ್ಲ. ಅವರಿಗೂ ಅದರ ಅನುಭವವಾಗಲಿ ಎಂಬ ಉದ್ದೇಶದಿಂದ ಜಾತ್ರೆಯನ್ನು ಹಮ್ಮಿಕೊಂಡಿದ್ದೇವೆ’ ಎಂದು ರಾಜಣ್ಣ ಹೇಳಿದರು.

‘ಅಂಗವಿಕಲ ಮಕ್ಕಳು ತಮ್ಮ ಸ್ಥಿತಿಯ ಬಗ್ಗೆ ಕೊರಗುತ್ತಿರುತ್ತಾರೆ. ಕೀಳರಿಮೆಯೂ ಅವರನ್ನು ಬಾಧಿಸುತ್ತಿರುತ್ತದೆ. ಇಂತಹ ಕಾರ್ಯಕ್ರಮದಲ್ಲಿ ಭಾಗವಹಿಸುವುದರಿಂದ ಅವರು ಖುಷಿಯಿಂದ ಇರಬಹುದು. ಮನಸ್ಸಿನ ಪರಿವರ್ತನೆಯೂ ಆಗಬಹುದು. ಅಂಗವೈಕಲ್ಯ ತನ್ನನ್ನು ಮಾತ್ರ ಬಾಧಿಸುತ್ತಿಲ್ಲ; ತನ್ನಂತೆಯೇ ಹಲವರು ಇದ್ದಾರೆ ಎಂಬುದು ಮನಸ್ಸಿಗೆ ಬರಬಹುದು. ಒಟ್ಟಾರೆಯಾಗಿ ಅವರಲ್ಲಿ ಸ್ಫೂರ್ತಿ ಹಾಗೂ ಆತ್ಮವಿಶ್ವಾಸ ತುಂಬುವ ಪ್ರಯತ್ನ ಇದು’ ಎಂದು ತಿಳಿಸಿದರು.

ಅಂಕಿ ಸಂಖ್ಯೆ

ಜಿಲ್ಲೆಯಲ್ಲಿ 1ರಿಂದ 10ನೇ ತರಗತಿವರೆಗೆ ಓದುತ್ತಿರುವ ಅಂಗವಿಕಲ ಮಕ್ಕಳ ಸಂಖ್ಯೆ 1,369. ಜಾತ್ರೆಯಲ್ಲಿ ಪಾಲ್ಗೊಳ್ಳಲಿರುವ ಅಂಗವಿಕಲರ ಸಂಖ್ಯೆ 500–600

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.