ಗುರುವಾರ, 23 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಪದ ಕೈಗೆ ಬುದ್ಧಿ ಕೊಟ್ಟಾಗ...

Last Updated 6 ಜನವರಿ 2018, 19:30 IST
ಅಕ್ಷರ ಗಾತ್ರ

ಜನರು ಏನೇ ಹೇಳಲಿ, ಬಾಬೂರಯ್ಯನ ನಿಕಟವರ್ತಿಗಳು, ಅವನೊಂದಿಗೆ ವ್ಯವಹರಿಸಿದ್ದವರು ಮತ್ತು ಅವನ ಬಗ್ಗೆ ಕೇಳಿದ್ದವರು ಆತ ಕೊಲೆ ಮಾಡಿರಬಹುದು ಎಂದು ನಂಬಲು ಸಿದ್ಧರಿರಲಿಲ್ಲ. ಮೊದಲನೆಯದಾಗಿ ಅವನೇನೂ ವೃತ್ತಿಪರ ದುಷ್ಕರ್ಮಿಯಲ್ಲ; ಅಪರಾಧಿಕ ಹುಟ್ಟೊಲವಿನವನೂ ಅಲ್ಲ; ದೊಮ್ಮಣ್ಣನನ್ನು ಸಾಯಿಸಬೇಕೆಂಬ ಉದ್ದೇಶವನ್ನೂ ಹೊಂದಿರಲಿಲ್ಲ. ಆದರೂ, ಸಂದರ್ಭ ಅವನಿಗೆ ಕೊಲೆಗಾರನೆಂಬ ಹಣೆಪಟ್ಟಿಯನ್ನು ಕಟ್ಟಿಯೇ ಬಿಟ್ಟಿತು.

ಅಲ್ಲಿ ಸತ್ತವನೊಬ್ಬನಿದ್ದ, ಮೇಲ್ನೋಟಕ್ಕೆ ಸಾವಿಗೆ ಕಾರಣ ಬಾಬೂರಯ್ಯ ಎಂದು ಸೂಚಿಸುವ ಸನ್ನಿವೇಶಗಳಿದ್ದವು. ಕೊಲೆ ಆರೋಪ ಹೊತ್ತು ಜೈಲು ಪಾಲಾದ. ಆನಂತರದ ಘಟನೆಗಳು ಕೊಲೆಗಿಂತಲೂ ಭೀಕರವಾದವು.

ಬಾಬೂರಯ್ಯ ಯಾವ ನಕಾರಾತ್ಮಕ ಬಾಯಿಗೂ ಬೀಳದಂತೆ ಬದುಕು ಸಾಗಿಸುತ್ತಿದ್ದ. ಸಾಹುಕಾರ ದೊಮ್ಮಣ್ಣನಿಂದ ಆಗಾಗ್ಗೆ ಸಾಲ ಪಡೆದು ಮಗ ಕಲಾಧರನನ್ನು ದೊಡ್ಡ ವಿದ್ಯಾವಂತನನ್ನಾಗಿ ಮಾಡಿದ. ಕಲಾಧರ ಪಡೆದ ವಿದ್ಯೆಯು ಆತ ತುಂಬಾ ಅಸಂಸ್ಕೃತ ಸ್ಥಿತಿವಂತರ ಮನೆಯ ಹೆಣ್ಣಿನೊಂದಿಗೆ ಮದುವೆಗೆ ದಾರಿ ಮಾಡಿತು. ಮದುವೆಯ ನಂತರ ದೊಡ್ಡ ಹುದ್ದೆಗಾಗಿ ಸಂಸಾರದ ಜೊತೆ ಅಮೆರಿಕಕ್ಕೆ ಹಾರಿದ.

ಬಾಬೂರಯ್ಯ ಇದನ್ನು ನಿರೀಕ್ಷಿಸಿರಲಿಲ್ಲ. ಮಗ ತಾಳಿದ ದಿಢೀರ್ ನಿಲುವು ಬಾಬೂರಯ್ಯ ಮತ್ತು ಅವನ ಹೆಂಡತಿ ತಾಯಮ್ಮನಿಗೆ ಮಾನಸಿಕವಾಗಿ ದೊಡ್ಡ ಪೆಟ್ಟು ಕೊಟ್ಟಿತು. ಕಲಾಧರನ ವಿಶೇಷ ವಿದ್ಯಾಭ್ಯಾಸಕ್ಕಾಗಿ ಮತ್ತು ಅವನ ಮದುವೆಗಾಗಿ ಮಾಡಿದ ಸಾಲ ಇನ್ನೂ ತೀರಿರಲಿಲ್ಲ. ಅಮೆರಿಕಕ್ಕೆ ಹೋದ ಮಗ ಅನೇಕ ತಿಂಗಳುಗಳೇ ಆದರೂ ಸಾಲವನ್ನು ತೀರಿಸಲು ಹಣವನ್ನು ಕಳಿಸುವ ಲಕ್ಷಣಗಳು ಕಂಡುಬರಲಿಲ್ಲ.

ಬಾಬೂರಯ್ಯ ಮತ್ತು ತಾಯಮ್ಮ ದಂಪತಿಗೆ ಇದೊಂದು ಕಷ್ಟಕಾಲವಾಗಿ ಪರಿಣಮಿಸಿತು. ಈ ಮಧ್ಯೆಯೇ ಮಗಳು ಜಯದೇವಿಯನ್ನು ಮದುವೆಯಾಗುವ ಬೇಡಿಕೆ ಅನುಕೂಲಸ್ಥರ ಮನೆತನದವರಿಂದ ಬಂದಿತು. ಮಧ್ಯಸ್ಥಿಕೆ ವಹಿಸಿದ್ದವರು ಆ ಮನೆತನಕ್ಕೆ ಜಯದೇವಿಯನ್ನು ಸೇರಿಸುವ ಪೂರ್ವಭಾವಿ ಮಾತುಕತೆ ನೆರವೇರಿಸಿ, ಮದುವೆಯ ದಿನಾಂಕವನ್ನು ಗೊತ್ತುಪಡಿಸಿಯೇಬಿಟ್ಟರು.

ಬಾಬೂರಯ್ಯ ತನಗೆ ಹಣ ಬೇಕಾದಾಗಲೆಲ್ಲಾ ದೊಮ್ಮಣ್ಣನಿಂದ ಸಾಲ ಪಡೆದು ಬಡ್ದಿ ಸಮೇತ ಸಕಾಲದಲ್ಲೇ ತೀರಿಸುತ್ತಿದ್ದನಾದರೂ, ಮಗನಿಗಾಗಿ ತಂದ ಸಾಲದ ಬಡ್ಡಿಯನ್ನು ಕೊಡಲಾಗದೆ ಎಡವಟ್ಟು ಮಾಡಿಕೊಂಡಿದ್ದ. ಇದರಿಂದಾಗಿ ದೊಮ್ಮಣ್ಣನು ಬಾಬೂರಯ್ಯನನ್ನೂ ಬೇರೆಲ್ಲ ಸಾಲಗಾರರನ್ನು ಕಾಣುವಂತೆಯೇ ಕಾಣತೊಡಗಿದ. ಆಗರ್ಭ ಶ್ರೀಮಂತನಾದ ದೊಮ್ಮಣ್ಣ ಸುತ್ತಲಿನ ಹತ್ತಾರು ಗ್ರಾಮಗಳ ‘ಕಠಿಣ ಸಂದರ್ಭಗಳ ಮಾಲೀಕ’ನಾಗಿದ್ದ. ಹಣ ಅವನಲ್ಲಿ ಅಹಂಕಾರ ಮತ್ತು ಮಾಯಾಚಾರವನ್ನು ಬೆಳೆಸಿತ್ತು. ಶ್ರೀಮಂತನಾಗಲು ಎಷ್ಟೊ ಅನೈತಿಕ ಕಸುಬುಗಳಿಗೆ ಕೈಹಾಕಿ ಬೆಳೆದುಕೊಂಡಿದ್ದ ಅವನಿಗೆ, ಒಣಪ್ರತಿಷ್ಠೆಯ ಮೋಹವಿತ್ತು. ಯಾರಾದರೂ ದಿಟ್ಟಿಸಿ ನೋಡಿದರೂ ಕುಪಿತನಾಗುವಷ್ಟು ಕೊಬ್ಬಿದ್ದ.

ಬಾಬೂರಯ್ಯನಿಗೆ ಮಗಳ ಮದುವೆಗಾಗಿ ಹಣ ಹೊಂದಿಸಲು ತೋಚಿದ್ದು ದೊಮ್ಮಣ್ಣನೇ. ಬೇರೆ ಮಾರ್ಗಗಳೇ ಇಲ್ಲದೆ ಅವನಲ್ಲಿ ಹೋಗಿ ಮತ್ತೆ ಸಾಲಕ್ಕಾಗಿ ಬೇಡಿಕೆಯಿಟ್ಟ. ಹಳೆಯ ಸಾಲ ವಾಪಸು ಮಾಡದೆ, ಅದಕ್ಕೆ ಬಡ್ಡಿಯನ್ನೂ ಕೊಡದೆ ಅಂತಹದೊಂದು ವ್ಯವಹಾರ ನಡೆದೇ ಇಲ್ಲವೆನ್ನುವಂತೆ ಬಾಬೂರಯ್ಯ ನಟಿಸುತ್ತಿರುವನೆಂದು ದೊಮ್ಮಣ್ಣ ತಿಳಿದ.

‘ಬೇರೆಲ್ಲಾ ಸಾಲಗಾರರು ಸಾಲ ಕೇಳ್ಬೇಕಾದ್ರೆ, ಯಾರನ್ನಾದ್ರೂ ಜೊತೇಲಿ ಕರ್ಕೊಂಡೇ ಬರ್ತಾರೆ. ವ್ಯವಹಾರದಲ್ಲಿ ಹೆಚ್ಚುಕಮ್ಮಿ ಆದ್ರೆ ಸಾಲಗಾರನ ಜೊತೆ ಬಂದು ಹೋಗೋರನ್ನಾದ್ರೂ ತರಾಟೆಗೆ ತಗೊಳ್ಬೋದು. ನಿನ್ನಂಥ ಬೇವರ್ಸಿ ಹತ್ರ ಮಾಡೋದಾದ್ರೂ ಏನು..? ಯಾವಾಗ್ ಬಂದ್ರೂ ಒಬ್ನೇ ಬರೋ ಪರಿಪಾಟ ನಿಂದು, ನೀನ್ ಮಾತ್ಗೆ ತಪ್ಪಿದ್ರೆ ನಾನಿಡ್ಕೊಳ್ಳೋದ್ ಯಾರ್ನ? ನಿನ್‌ ಹೆಂಡ್ತೀನಾ ಇಲ್ಲಾ ಮಗಳನ್ನ ಹಿಡ್ಕೊಳ್ಳೇನು?’ ಎಂದು ಹೀನಾಯವಾಗಿ ಪ್ರಶ್ನಿಸಿದ.

ಬಾಬೂರಯ್ಯ ತನ್ನ ಕೈಯಲ್ಲಿರುವ ರೇಖೆಗಳೆಲ್ಲಾ ಅಳಿಸಿಹೋಗುವಷ್ಟು ದುಡಿಮೆ ಮಾಡಿದವನು. ಅಂತಹ ಯೋಗ್ಯ ದುಡಿಮೆಯಿಂದ ಸಂಸಾರದ  ಪಾವಿತ್ರ್ಯವನ್ನ ರಕ್ಷಿಸಿಕೊಂಡು ಬಂದವನು. ತನ್ನ ಹೆಂಡತಿ ಮತ್ತು ಮಗಳನ್ನ ಕುರಿತು ದೊಮ್ಮಣ್ಣನ ದ್ವಂದ್ವಾರ್ಥದ ಮಾತುಗಳಿಂದ ದಂಗಾದನು. ಎದುರು ಮಾತಾಡುವ, ಪ್ರಶ್ನಿಸುವ ಸ್ವಭಾವ ಬಾಬೂರಯ್ಯನಿಗಿರಲಿಲ್ಲ. ಅದೇಕೋ ಹೆಂಡತಿ ಮತ್ತು ಮಗಳನ್ನು ಕುರಿತು ಆಡಿದ ಮಾತುಗಳಿಂದ ಕೆರಳಿದ ಬಾಬೂರಯ್ಯ, ‘ನೀವು ನನ್ನ ಹೆಂಡ್ತಿ, ಮಗಳ ವಿಷ್ಯಕ್ಕೆಲ್ಲಾ ಬಂದ್ರೆ ನಾನು ಮನುಷ್ಯನಾಗಿರೋದಿಲ್ಲ!’ ಎಂದೇಬಿಟ್ಟ.

ಬಾಬೂರಯ್ಯನ ಮಾತುಗಳಿಂದ ವ್ಯಾಘ್ರನಂತೆ ಕೆರಳಿದ ದೊಮ್ಮಣ್ಣ, ‘ಲೇ ಬಾಬೂರಿ, ನೀನು ಏನಾದ್ರು ಹೆಚ್ಗೆ ನಾಲ್ಗೆ ಚಾಚಿದ್ರೆ ನಿನ್ನ ಹೆಂಡ್ತಿ - ಮಗಳ ಮೊಲೆಗಳ್ನ ಕುಯ್ಕೊಂಡು ಬಂದು, ತಲೆದಿಂಬು ಮಾಡ್ಕೊಂಡು ಬಿಡ್ತೀನಿ, ತಿಳ್ದಿರ್ಲೀ...’ ಎನ್ನುತ್ತಿದ್ದಂತೆ ದಢಾರನೆ ಹಿಂದಕ್ಕೆ ಬೀಳುವಂತೆ ಬಾಬೂರಯ್ಯ ಅವನ ಹೊಟ್ಟೆಗೆ ಜಾಡಿಸಿ ಒದ್ದ. ಹಠಾತ್ತಾಗಿ ಹೊಟ್ಟೆಗೆ ಬಿದ್ದ ಪೆಟ್ಟಿನಿಂದಾಗಿ ದೊಮ್ಮಣ್ಣ ಮೇಲೇಳಲೇ ಇಲ್ಲ.

ಬಾಬೂರಯ್ಯ ಜೈಲಿಗೆ ಸೇರ್ಪಡೆಯಾಗುತ್ತಿದ್ದಂತೆ ಮಗಳ ಮದುವೆ ಮುರಿದುಬಿತ್ತು. ಈ ಪೆಟ್ಟಿನಿಂದ ಬಾಬೂರಯ್ಯ, ಅವನ ಹೆಂಡತಿ ಮತ್ತು ಮಗಳು ಅನುಭವಿಸಿದ ವೇದನೆ ಹೇಳತೀರದಂತಿತ್ತು.

ಬಾಬೂರಯ್ಯ ದಿಕ್ಕು ತೋಚದೆ ಇವೆಲ್ಲಾಬೆಳವಣಿಗೆಗಳನ್ನು ಮಗನಿಗೆ ತಿಳಿಸಿದರೆ ಸಹಾಯಕ್ಕೆ ಧಾವಿಸಿ ಬರುತ್ತಾನೆಂದು ನಂಬಿ ಒಂದು ಪತ್ರವನ್ನು ತಯಾರಿಸಿ ಜೈಲು ಅಧಿಕಾರಿಯ ಮೂಲಕ ಅಮೆರಿಕಕ್ಕೆ ಕಳುಹಿಸಿದ.

ಕೆಲವೇ ದಿನಗಳಲ್ಲಿ ಅಮೆರಿಕದಿಂದ ಉತ್ತರ ಬಂದಿತಾದರೂ ಅದರಲ್ಲಿದ್ದ, ‘ಅದೆಲ್ಲಾ ನಿಮ್ಮ ಹಣೆಬರಹ, ಅವುಗಳನ್ನು ಸಂಭಾಳಿಸಿಕೊಳ್ಳುವುದು ನಿಮಗೇ ಬಿಟ್ಟ ವಿಷಯ. ನಾನು ನಿಮ್ಮ ವಿಷಯಗಳಿಗೆ ತಲೆಹಾಕಲು ಸಾಧ್ಯವಿಲ್ಲ. ನನ್ನ ತಾತನ ಆಸ್ತಿಯಾಗಲೀ, ನಿಮ್ಮ ಆಸ್ತಿಯಾಗಲೀ ನನಗೆ ಬೇಕಿಲ್ಲ. ಅದನ್ನೆಲ್ಲ ನಿಮ್ಮ ಮಗಳಿಗೇ ಕೊಟ್ಟು ದುರಂತಗಳನ್ನು ಸರಿಪಡಿಸಿಕೊಳ್ಳಿ’ ಎಂಬ ಚುಚ್ಚು ವಿಷಯಗಳನ್ನು ಓದಿಕೊಂಡ ಬಾಬೂರಯ್ಯ ಯಾರನ್ನು ದೂಷಿಸಬೇಕೆಂದು ಗೊತ್ತಾಗದೆ ಕಂಗಾಲಾದ.

ಮಗನ ಮದುವೆಯ ವಿಚಾರದಲ್ಲಿ ವ್ಯವಹರಿಸುತ್ತಿದ್ದಾಗ ಬೀಗ–ಬೀಗತಿ ಮತ್ತು ಸೊಸೆಯನ್ನು ಕುರಿತು ತನ್ನ ಹಿತೈಷಿಗಳು ಆಡಿದ್ದ ಮಾತುಗಳು ನೆನಪಾಗಿ, ಇದು ಸೊಸೆಯ ಚಿತಾವಣೆ ಎಂದು ಮನದಟ್ಟಾಯಿತು. ಪತ್ರದ ವಿವರ ಮನೆಯಲ್ಲಿ ಗೊತ್ತಾಗಿ ಹೆಂಡತಿ-ಮಗಳು ನಡುಗಿದರು. ಇದಾದ ಕೆಲವು ವಾರಗಳಲ್ಲೇ ನ್ಯಾಯಾಲಯದಲ್ಲಿ ದೊಮ್ಮಣ್ಣನ ಕೊಲೆ ವಿಚಾರಣೆ ಪ್ರಾರಂಭವಾಗುವುದಿತ್ತು.

ಈ ಅವಧಿಯಲ್ಲಿ ಬಾಬೂರಯ್ಯನ ತಮ್ಮನ ಮಗಳ ಮದುವೆ ಏರ್ಪಾಡಾಯಿತು. ಮದುವೆ ಕಾರ್ಯಕ್ಕೆ ಬಾಬೂರಯ್ಯನಿಗೆ ತಾತ್ಕಾಲಿಕ ಜಾಮೀನನ್ನು ಪಡೆಯಲು ನಾನು ಪ್ರಯತ್ನಿಸಿದೆನಾದರೂ ಸಫಲನಾಗಲಿಲ್ಲ.

ಬಾಬೂರಯ್ಯ ಮದುವೆಗೆ ಹೋಗಲು ಸಾಧ್ಯವಿಲ್ಲವೆಂದಾಗಿ ತಾಯಮ್ಮ ಮತ್ತು ಜಯದೇವಿ ಸಕ್ರಿಯವಾಗಿ ಭಾಗವಹಿಸಲು ಅವರಿಂದ ಮಾತು ಪಡೆದ. ಅಲ್ಲದೇ ಅವರು ಹಾಗೆ ಮಾಡಿದಲ್ಲಿ ತಾನೇ ಬಂದು ಮದುಮಗಳನ್ನು ಆಶೀರ್ವದಿಸಿದಷ್ಟು ಸಂತೋಷ-ಸಮಾಧಾನವಾಗುವುದೆಂದು ತಿಳಿಸಿದ.

ಬಾಬೂರಯ್ಯನ ಮಾತುಗಳಿಂದ ಉತ್ತೇಜನಗೊಂಡ ಹೆಂಡತಿ ಮತ್ತು ಮಗಳು, ಮದುವೆಯಲ್ಲಿ ಭಾಗವಹಿಸಲು ಮುಂದಾದರು. ಬಾಬೂರಯ್ಯನ ಮಗಳು ಜಯದೇವಿ, ಮದುಮಗಳಿಗೆ ವರಸೆಯಲ್ಲಿ ಅಕ್ಕ ಆಗಿದ್ದರಿಂದ ಮದುವೆಯಲ್ಲಿ ಅವಳಿಂದಲೇ ಕಳಸವನ್ನು ಹಿಡಿಸಿದರೆ ಬಾಬೂರಯ್ಯ ಮತ್ತು ಅವನ ಹೆಂಡತಿ ಸಂತೋಷಪಡುವರೆಂದು ಇತರರು ಅವಳಿಗೆ ಆ ಅವಕಾಶಕ್ಕಾಗಿ ಸಿದ್ಧಮಾಡತೊಡಗಿದರು.

ಮಾರನೆಯ ದಿನ ವರನನ್ನು ವಧುವಿನ ಮನೆಗೆ ಮೆರವಣಿಗೆಯಲ್ಲಿ ಕರೆತರಲು ಹೊರಟಾಗ ಕಳಸವನ್ನು ಹಿಡಿಯಲು ವರನ ಕಡೆಯವರೂ ಮುಂದಾಗಿ ತೀವ್ರ ಪೈಪೋಟಿ ಏರ್ಪಟ್ಟಿತು. ಮದುವೆ ಕಾರ್ಯದಲ್ಲಿ ವಧು–ವರರನ್ನು ಬಿಟ್ಟರೆ ಕಳಸ ಹಿಡಿಯುವ ವ್ಯಕ್ತಿಯೇ ಮೂರನೆಯ ಮುಖ್ಯ ವ್ಯಕ್ತಿಯಾಗಿ ಪರಿಗಣಿತವಾಗಿರುವುದುಂಟು. ವರನ ಕಡೆಯವರು ಆ ಮೂರನೆಯ ಮುಖ್ಯ ವ್ಯಕ್ತಿ ತಮ್ಮ ಕಡೆಯವರೇ ಆಗಬೇಕೆಂದು ರಾದ್ಧಾಂತಕ್ಕೂ ಸಿದ್ಧವಾದರು.

ಈ ಮಧ್ಯೆ ವರನ ಕಡೆಯ ಒಬ್ಬ ಮಹಿಳೆ, ‘ಜಯದೇವಿಯ ತಂದೆ ಕೊಲೆ ಆರೋಪ ಹೊತ್ತು ಜೈಲಿನಲ್ಲಿದ್ದಾನೆ, ಆಕೆ ಮತ್ತು ಅವಳ ಅಮ್ಮ ಮೈಲಿಗೆಯ ವ್ಯಕ್ತಿಗಳಾಗಿದ್ದು ಬಾಬೂರಯ್ಯನ ಹೆಂಡತಿಯಾಗಲೀ ಅಥವಾ ಮಗಳಾಗಲೀ ಮದುವೆಯ ಯಾವ ಶಾಸ್ತ್ರದಲ್ಲೂ ಭಾಗವಹಿಸಲು ಬಿಡಬಾರದು’ ಎಂದು ಅಮಾನವೀಯವಾಗಿ ವರ್ತಿಸುತ್ತ, ಸತ್ಯ ಸಾರುವವಳಂತೆ ಅಬ್ಬರಿಸಿದಳು.

ಇದರಿಂದ ತಾಯಮ್ಮ, ಜಯದೇವಿದಿಗ್ಭ್ರಾಂತರಾದರು. ರಕ್ತಸಂಬಂಧಿಗಳು ಆಘಾತಗೊಂಡರು. ಮದುವೆ ಕಾರ್ಯಕ್ಕೆ ಊನವಾಗಬಾರದೆಂದು ವರನ ಕಡೆಯವರೇ ಕಳಸವನ್ನು ಹಿಡಿಯಲು ಅವಕಾಶ ಮಾಡಿಕೊಟ್ಟರು.

ಈ ಘಟನೆ ತಾಯಮ್ಮ ಮತ್ತು ಜಯದೇವಿ ಮೇಲೆ ನಾಶಕಾರಕ ಪರಿಣಾಮವನ್ನುಂಟುಮಾಡಿತು. ಮುರಿದುಬಿದ್ದ ಮಗಳ ಮದುವೆಯ ಆಘಾತದಿಂದ ಎಚ್ಚೆತ್ತುಕೊಳ್ಳುತ್ತಿದ್ದ ತಾಯಮ್ಮನಿಗೆ ಇದು ಅನಿಷ್ಟಗಳನ್ನು ಸೂಚಿಸುವಂತೆ ಕಾಣತೊಡಗಿತು. ಮದುವೆ ಮನೆಯಲ್ಲಿ ತನಗೂ, ತನ್ನ ಮಗಳಿಗೂ ಆದ ಅವಮಾನದಿಂದ ಕ್ಷೋಭೆಗೊಳಗಾಗಿ ಹೊರಬರಲಾಗದೆ ಮಾರನೇ ದಿನ ಆತ್ಮಹತ್ಯೆ ಮಾಡಿಕೊಂಡಳು. ವಿಷಯ ತಿಳಿದ ಬಾಬೂರಯ್ಯನಿಗೆ ಹೆಂಡತಿಯನ್ನು ತಾನೇ ಕೈಯಾರೆ ಕೊಂದಷ್ಟು ವೇದನೆಯಾಯಿತು.

ತಾಯಮ್ಮನ ಅಂತಿಮ ಕ್ರಿಯೆಗೆ ಬಾಬೂರಯ್ಯನನ್ನು ಜೈಲಿನಿಂದ ಹೊರತರಲು ನಾನು ಪ್ರಯತ್ನಿಸಿದೆ. ಅದು ಫಲಿಸಲು ಎರಡರಿಂದ ಮೂರು ದಿನಗಳ ಕಾಲಾವಧಿಯ ಅಗತ್ಯವಿತ್ತು. ತಾಯಮ್ಮನ ಆತ್ಮಹತ್ಯೆಯನ್ನು ಅವಳ ಬಂಧುಗಳು ಪೊಲೀಸರಿಂದ ಮರೆಮಾಚಿದ್ದರು. ಈ ಕಾರಣದಿಂದ ಅಂತ್ಯಕ್ರಿಯೆ
ಯನ್ನು ಬೇಗನೆ ಮಾಡಿ ಮುಗಿಸಲು ನಿರ್ಧರಿಸಿದರು.

ತಾಯಮ್ಮನ ಸಾವಿನ ವಿಚಾರವನ್ನು ಅಮೆರಿಕದಲ್ಲಿದ್ದ ಮಗನಿಗೆ ತಿಳಿಸುವ ಅವಶ್ಯಕತೆಯಿಲ್ಲವೆಂದು ಬಾಬೂರಯ್ಯ ಮತ್ತು ಜಯದೇವಿ ಒಕ್ಕೊರಲಿನಿಂದ ಸಾರಿದರು. ಜಯದೇವಿಯೇ ಎಲ್ಲ ಆಘಾತಗಳನ್ನು ಕೊಡವಿಕೊಂಡು, ಸೆಟೆದು ನಿಂತು ತಾಯಿಯ ಅಂತ್ಯಕ್ರಿಯೆಗೆ ಸಂಬಂಧಿಸಿದ ಶಾಸ್ತ್ರಗಳನ್ನು
ಖುದ್ದಾಗಿ ನೆರವೇರಿಸಿದಳು. ನೆರೆದಿದ್ದ ಜನ ಜಯದೇವಿಯ ನಿಲುವನ್ನು ಕೊಂಡಾಡುತ್ತ ಜೈಕಾರ ಕೂಗಿದರು. ಬಾಬೂರಯ್ಯನ ವಿಚಾರಣೆ ನ್ಯಾಯಾಲಯದಲ್ಲಿ ಪ್ರಾರಂಭವಾಯಿತು. ಬಹುಮುಖ್ಯ ಸಾಕ್ಷಿಯೆಂದು ಪರಿಗಣಿಸಲಾಗಿದ್ದ, ಶವಪರೀಕ್ಷೆಯಲ್ಲಿ ಭಾಗಿಯಾಗಿದ್ದ ವೈದ್ಯರಿಂದ ನನ್ನ ಪಾಟಿಸವಾಲಿನಲ್ಲಿ, ‘ಮನುಷ್ಯನಿಗೆ ದೈಹಿಕವಾಗಿ ಹಠಾತ್ತನೆ ಆಘಾತವಾದರೆ ಅದು ದೇಹದಲ್ಲಿ ಅಡ್ರೆನಲಿನ್‌ನ ಉತ್ಪಾದನೆಯನ್ನು ಉಲ್ಬಣಗೊಳಿಸಿ ಮನುಷ್ಯನ ಹೃದಯದ ಬಡಿತ ಬೆರುಗುಗೊಳಿಸುವ ಮಟ್ಟದಲ್ಲಿ ನಿಲ್ಲುವಂತೆ ಮಾಡುತ್ತದೆ’ ಎಂಬ ಉತ್ತರವನ್ನು ಪಡೆಯಲು ಸಾಧ್ಯವಾಯಿತು.

ಇತರ ಸಾಕ್ಷಿದಾರರಿಂದ ಪಾಟಿ ಸವಾಲಿನಲ್ಲಿ ನಾನು ಪಡೆದುಕೊಂಡ ಉತ್ತರಗಳ ಒಟ್ಟು ಮೊತ್ತ, ‘ಆರೋಪಿಯು ಗಂಭೀರ ಮತ್ತು ಹಠಾತ್ಪ್ರ ಚೋದನೆಯಿಂದಾಗಿ ತನ್ನ ಮೇಲಿನ ಹತೋಟಿಯನ್ನು ಕಳೆದುಕೊಂಡು ಆ ಪ್ರಚೋದನೆಗೆ ಕಾರಣನಾದ ವ್ಯಕ್ತಿಯ ಮರಣವನ್ನುಂಟುಮಾಡಿದ. ಆರೋಪಿಯು ಪ್ರಚೋದನೆಯನ್ನು ತಾನೆ ಉಂಟುಮಾಡಲಿಲ್ಲ’ ಎಂಬುದೇ ಆಗಿತ್ತು.

ನ್ಯಾಯಾಲಯವು ತನ್ನ ತೀರ್ಪಿನಲ್ಲಿ, ಆರೋಪಿ ಬಾಬೂರಯ್ಯ ದೊಮ್ಮಣ್ಣನ ಹೊಟ್ಟೆಗೆ ಒದ್ದಾಗ ಮರಣವುಂಟಾಗುವ ಸಂಭವವಿದೆಯೆಂದು ತಿಳಿದಿದ್ದ, ಆದರೆ ಮರಣವನ್ನುಂಟುಮಾಡುವ ಉದ್ದೇಶವಿಲ್ಲದೆ ಆ ಕೃತ್ಯ ಮಾಡಿದ್ದರಿಂದ ಹತ್ತು ಸಾವಿರ ರೂಪಾಯಿ ಜುಲ್ಮಾನೆಯಿಂದ ದಂಡಿಸಲು ಮುಂದಾಯಿತು.

ಜಯದೇವಿ ತನ್ನ ಸಂಬಂಧಿಗಳನ್ನು ಕಂಡು ಅಷ್ಟು ಹಣವನ್ನು ಸಂಚಯಿಸಿ ನ್ಯಾಯಾಲಯದಲ್ಲಿ ಸಂದಾಯಿಸಿ ತಂದೆಯನ್ನು ಜೈಲಿನಿಂದ ಬಿಡುಗಡೆ ಮಾಡಿಸಿಕೊಂಡು ಬಂದಳು. ತೀರ್ಪಿನ ವಿಚಾರವನ್ನು ತನ್ನ ಅತ್ತೆ-ಮಾವರಿಂದ ತಿಳಿದುಕೊಂಡ ಬಾಬೂರಯ್ಯನ ಮಗ ಕಲಾಧರ ಅಮೆರಿಕದಿಂದ ಸಾಕಷ್ಟು ಹಣವನ್ನೂ ಕಳುಹಿಸಿದ.

ಮಾನಧನರಾದ ಬಾಬೂರಯ್ಯ ಮತ್ತು ಜಯದೇವಿ ಒಂದು ಪತ್ರದೊಂದಿಗೆ ಆ ಹಣವನ್ನು ಕಲಾಧರನಿದ್ದ ಜಾಗಕ್ಕೆ ವಾಪಸ್ಸು ಮಾಡಿದರು. ಆ ಪತ್ರ ಒಳಗೊಂಡಿದ್ದ ಅಂಶಗಳೇನಿರಬಹುದೆಂದು ಯಾರಿಗಾದರೂ ಊಹಿಸಲು ಸಾಧ್ಯ.

ಅಪರಾಧವೆಸಗುವುದನ್ನೇ ವೃತ್ತಿಯನ್ನಾಗಿಸಿಕೊಂಡ ವ್ಯಕ್ತಿಗಳ ಮನೆಮಂದಿ, ಅವರ ಅಪರಾಧಿಕ ಕೃತ್ಯಗಳು ಉಂಟುಮಾಡುವ ಆಘಾತಗಳಿಗೆ ಒಗ್ಗಿರುತ್ತಾರೆ. ಅವು ಅನಿವಾರ್ಯ ದುರದೃಷ್ಟಗಳೆಂದು ಭಾವಿಸಲು ಸದಾ ಸಿದ್ಧರಿರುತ್ತಾರೆ. ಇತರೆ ಪ್ರಕರಣಗಳಲ್ಲಿ ಆರೋಪಿಗಳ ಅಥವಾ ಅಪರಾಧಿಗಳ ಸಂಸಾರಗಳು ನಾಶವಾಗುತ್ತವೆ.

ಬುದ್ಧಿಯನ್ನು ಕೋಪದ ಕೈಗೆ ಕೊಟ್ಟಾಗ ಏನಾಗುತ್ತದೆಂಬುದಕ್ಕೆ ಬಾಬೂರಯ್ಯನ ಪ್ರಕರಣದಂಥ ಪ್ರಕರಣಗಳು ಜ್ವಲಂತ ಸಾಕ್ಷಿ. ಕೋಪ ಬಂದಾಗ ಹತ್ತು ಎಣಿಸು (COUNT TEN WHEN YOU GET ANGRY) ಎಂಬ ಮಾತಿನ ಉದ್ದೇಶ ಗಂಡಾಂತರಗಳಿಂದ ವ್ಯಕ್ತಿಯನ್ನು ಪಾರು ಮಾಡುವುದೇ ಆಗಿದೆ.

(ಹೆಸರುಗಳನ್ನು ಬದಲಾಯಿಸಲಾಗಿದೆ )

ಲೇಖಕ ಹೈಕೋರ್ಟ್‌ ವಕೀಲ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT