ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಡಬೇಕಾದುದು ಏನು?

Last Updated 5 ಆಗಸ್ಟ್ 2016, 19:30 IST
ಅಕ್ಷರ ಗಾತ್ರ

ಆರ್ಥಿಕ ಬೆಳವಣಿಗೆ ಮತ್ತು ಸಮೃದ್ಧಿಗೆ ಕಾರಣವಾಗಿರುವ ತೀವ್ರಗತಿಯ ನಗರೀಕರಣ ಪ್ರಕ್ರಿಯೆಯು ಪರಿಸರಕ್ಕೆ ಧಕ್ಕೆ ಉಂಟು ಮಾಡಿರುವುದೂ ನಿಜ. ಬೆಂಗಳೂರು ಮತ್ತು ಗುರುಗ್ರಾಮದಲ್ಲಿ ಈಚೆಗೆ ಸುರಿದ ಮಳೆಯಿಂದಾಗಿ ನಗರಗಳ ಜನಜೀವನ ಅಸ್ತವ್ಯಸ್ತವಾಯಿತು. ನಮ್ಮ ದೇಶದ ಒಂದಲ್ಲ ಒಂದು ಕಡೆ ಪ್ರತಿವರ್ಷ ಸೃಷ್ಟಿಯಾಗುವ ಗೊಂದಲಗಳಿಗೆ, ಈ ಎರಡು ನಗರಗಳಲ್ಲಿ ಈಗ ಆಗಿರುವುದು ಒಂದು ನಿದರ್ಶನ ಮಾತ್ರ.

ಕೆಲವು ಸಂದರ್ಭಗಳಲ್ಲಿ, ಸಾಧಾರಣ ಮಳೆ ಕೂಡ ನಗರಗಳಲ್ಲಿ ಪ್ರವಾಹ ಸೃಷ್ಟಿಸುತ್ತದೆ. ಇಂಥ ಪರಿಸ್ಥಿತಿ ನಿರ್ವಹಿಸುವ ವಿಚಾರದಲ್ಲಿ ನಮ್ಮ ನಗರ ಆಡಳಿತಗಳು ಅಸಹಾಯಕವೇನೋ ಅನಿಸುತ್ತದೆ. ಸಮಸ್ಯೆ ಇರುವುದು ಭಾರಿ ಪ್ರಮಾಣದ ಮಳೆಯಲ್ಲಿ ಅಲ್ಲ. ಸಮಸ್ಯೆ ತೀರಾ ಸಂಕೀರ್ಣವಾಗಿದೆ. ಇದು ನಗರೀಕರಣ ಎಂಬ ಇಡೀ ಪ್ರಕ್ರಿಯೆಗೆ ಸಂಬಂಧಿಸಿದ್ದು. ಈಚಿನ ವರ್ಷಗಳಲ್ಲಿ ನಮ್ಮ ನಗರಗಳು ಹೇಗೆ ಬೆಳೆದಿವೆ ಎಂಬುದನ್ನು ಮೊದಲು ಗಮನಿಸೋಣ.

1991ರಲ್ಲಿ 21.7 ಕೋಟಿ ಇದ್ದ ಭಾರತದ ನಗರಗಳ ಜನಸಂಖ್ಯೆ 2011ರಲ್ಲಿ 37.7 ಕೋಟಿಗೆ ಏರಿದೆ. ಅಂದರೆ ಸರಿಸುಮಾರು ಶೇಕಡ 75ರಷ್ಟು ಹೆಚ್ಚಾಗಿದೆ. ಈ ಅವಧಿಯಲ್ಲಿ ಬೆಂಗಳೂರಿನ ಜನಸಂಖ್ಯೆ ಎರಡು ಪಟ್ಟು ಹೆಚ್ಚಾಗಿದೆ. ಅಂದರೆ 41 ಲಕ್ಷ ಇದ್ದಿದ್ದು 84 ಲಕ್ಷಕ್ಕೆ ಏರಿದೆ. ಮುಂಬೈ ಜನಸಂಖ್ಯೆ 1.2 ಕೋಟಿಯಿಂದ 1.8 ಕೋಟಿಗೆ, ಹೈದರಾಬಾದ್ ಜನಸಂಖ್ಯೆ 42 ಲಕ್ಷದಿಂದ 77 ಲಕ್ಷಕ್ಕೆ ಹೆಚ್ಚಿದೆ.

ನಗರಗಳ ಭೌತಿಕ ವಿಸ್ತೀರ್ಣ ಕೂಡ ನಿರಂತರವಾಗಿ ಹೆಚ್ಚುತ್ತಿದೆ. ವಿಸ್ತಾರವಾದ ಪ್ರದೇಶದಲ್ಲಿ ಅಸ್ತವ್ಯಸ್ತವಾಗಿ ಹರಡಿಕೊಳ್ಳುತ್ತಿದೆ. 750 ಚದರ ಕಿ.ಮೀ. ವಿಸ್ತೀರ್ಣದಲ್ಲಿರುವ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಪ್ರದೇಶ ಭಾರತದ ಅತಿದೊಡ್ಡ ನಗರ ಪ್ರದೇಶ ಪ್ರಪಂಚದ ಅತಿ ದೊಡ್ಡ ನಗರ ಪ್ರದೇಶಗಳಲ್ಲಿ ಇದೂ ಒಂದು.

ನಗರಗಳ ಬೆಳವಣಿಗೆಯು ಅಲ್ಲಿನ ಭೂಮಿ ಮತ್ತು ಇತರ ವ್ಯವಸ್ಥೆಗಳ ಮೇಲೆ ಭಾರಿ ಪ್ರಮಾಣದ ಒತ್ತಡ ಸೃಷ್ಟಿಸಿದೆ. ನಗರದ ಅಂಚಿನಲ್ಲಿದ್ದ ಕೃಷಿ ಜಮೀನು ಪರಿವರ್ತನೆ ಮಾಡಿ ಅಲ್ಲಿ ರಸ್ತೆ ಮತ್ತು ಕಟ್ಟಡಗಳನ್ನು ಭಾರಿ ಪ್ರಮಾಣದಲ್ಲಿ ನಿರ್ಮಿಸಿರುವ ಕಾರಣ, ನೀರು ಇಂಗಲು ಜಾಗ ಇಲ್ಲದಂತಾಗಿದೆ. ನೀರಿನ ಸಂಗ್ರಹಕ್ಕೂ ಜಾಗದ ಕೊರತೆ ಎದುರಾಗಿದೆ.

ಮಳೆ ಭಾರಿ ಪ್ರಮಾಣದಲ್ಲಿ ಸುರಿದಾಗ, ಅಷ್ಟು ನೀರನ್ನು ಹೊರಹಾಕಲು ಈಗಿರುವ ಚರಂಡಿ ವ್ಯವಸ್ಥೆ ಮತ್ತು ರಾಜಕಾಲುವೆಗಳಿಗೆ ಆಗುತ್ತಿಲ್ಲ. ಹೆಚ್ಚುವರಿ ನೀರನ್ನು ಸಾಮಾನ್ಯ ಸಂದರ್ಭಗಳಲ್ಲಿ ಹೊರಗೆ ಕೊಂಡೊಯ್ಯುವ ಚೆನ್ನೈನ ಕೋವಮ್‌ ನದಿ ಮತ್ತು ಬಕಿಂಗ್‌ಹ್ಯಾಂ ಕಾಲುವೆಯಲ್ಲಿ ಹೂಳು ತುಂಬಿದೆ, ಕೆಲವೆಡೆ ಅವುಗಳ ಒತ್ತುವರಿ ಆಗಿದೆ.

ಮುಂಬೈನ ನೀರನ್ನು ಸಮುದ್ರಕ್ಕೆ ಒಯ್ಯುವ ಮಿಥಿ ನದಿಯು ತ್ಯಾಜ್ಯ ಎಸೆಯುವ ತೊಟ್ಟಿಯಾಗಿದೆ. ಅಲ್ಲಲ್ಲಿ ಈ ನದಿಯ ದಂಡೆಯನ್ನು ಒತ್ತುವರಿ ಮಾಡಿಕೊಳ್ಳಲಾಗಿದೆ. ಬೆಂಗಳೂರಿನ ಕೆರೆ ದಂಡೆಗಳು, ಮಳೆ ನೀರಿನ ಕಾಲುವೆಗಳು, ಬಯಲು ಪ್ರದೇಶಗಳು ಯಾವ ಪರಿ ಒತ್ತುವರಿ ಆಗಿವೆ ಎಂಬುದು ಎಲ್ಲರಿಗೂ ತಿಳಿದಿರುವ ಸಂಗತಿ. ಬೆಂಗಳೂರು ಜಿಲ್ಲಾಡಳಿತ ಈಚೆಗೆ ನಡೆಸಿದ ಸಮೀಕ್ಷೆಯೊಂದರ ಪ್ರಕಾರ, ಮಳೆ ನೀರಿನ ಕಾಲುವೆಗಳು 14 ಸಾವಿರ ಕಡೆ ಒತ್ತುವರಿಯಾಗಿವೆ. ಇದರಿಂದಾಗಿ, ಭಾರಿ ಮಳೆ ಸುರಿದಾಗ ನೀರು ರಸ್ತೆಗಳಲ್ಲಿ ತುಂಬಿಕೊಳ್ಳುತ್ತದೆ, ಮನೆಗೆ ನುಗ್ಗುತ್ತದೆ. ತಗ್ಗು ಪ್ರದೇಶಗಳಲ್ಲಿ ಇದು ಹೆಚ್ಚು.

ಅಂದಹಾಗೆ, ನಗರ ಪ್ರದೇಶಗಳಲ್ಲಿ ಪ್ರವಾಹ ಉಂಟಾಗುವುದು ಭಾರತಕ್ಕೆ  ಮಾತ್ರ ಸೀಮಿತವಲ್ಲ. ಇದು ಬೇರೆ ಬೇರೆ ದೇಶಗಳನ್ನೂ, ಅದರಲ್ಲೂ ಪ್ರಮುಖವಾಗಿ ಅಭಿವೃದ್ಧಿ ಹೊಂದುತ್ತಿರುವ ಪ್ರದೇಶಗಳ, ತೀವ್ರ ಗತಿಯ ನಗರೀಕರಣ ಕಾಣುತ್ತಿರುವ ಎಲ್ಲ ದೇಶಗಳಲ್ಲಿರುವ ಸಮಸ್ಯೆ. ಐದು ವರ್ಷಗಳ ಹಿಂದೆ ಬ್ಯಾಂಕಾಕ್‌ ನಗರ ಐದು ತಿಂಗಳ ಕಾಲ ಪ್ರವಾಹ ಎದುರಿಸಬೇಕಾಯಿತು. ಬ್ರೆಝಿಲ್‌ನ ರಿಯೊ ಡಿ ಜನೈರೊ, ವಿಯೆಟ್ನಾಂ ದೇಶದ ಹನೋಯಿ, ಆಸ್ಟ್ರೇಲಿಯಾದ ಬ್ರಿಸ್ಬೇನ್‌ ನಗರಗಳು ಕೂಡ ಪ್ರವಾಹಕ್ಕೆ ತುತ್ತಾಗುತ್ತವೆ.

ಪ್ರಾಕೃತಿಕ ವಿಕೋಪಗಳಿಗೆ, ಹವಾಮಾನ ಬದಲಾವಣೆ ಪರಿಣಾಮಗಳಿಗೆ ನಗರಗಳು ಬಲಿಯಾಗುತ್ತಿರುವುದು ಈಚಿನ ದಿನಗಳಲ್ಲಿ ಹೆಚ್ಚುತ್ತಿದೆ. ಹಾಗಾಗಿ, ಪರಿಸ್ಥಿತಿ ಎದುರಿಸಲು ರಾಜ್ಯ ಮತ್ತು ಸ್ಥಳೀಯ ಆಡಳಿತಗಳು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು.

ನಗರ ಎಲ್ಲಿದೆ, ಅದರ ಸ್ವರೂಪ ಹೇಗಿದೆ ಎಂಬುದನ್ನು ಆಧರಿಸಿ ಯಾವ ಬಗೆಯ ಕ್ರಮ ಕೈಗೊಳ್ಳಬೇಕು ಎಂಬುದು ತೀರ್ಮಾನವಾಗುತ್ತದೆ. ಹಾಗಾಗಿ, ಪ್ರತಿ ನಗರದ ಬಗ್ಗೆ ಅಧ್ಯಯನ ಆಧಾರಿತ ಮಾಹಿತಿ ಕಲೆಹಾಕಬೇಕು. ಸಮುದ್ರದ ಅಂಚಿನಲ್ಲಿರುವ ಚೆನ್ನೈ, ಶಿಖರದ ಮೇಲಿರುವ ಶ್ರೀನಗರ, ನದಿ ದಂಡೆಯಲ್ಲಿರುವ ವಾರಾಣಸಿ, ಕೆರೆಗಳು ಹೆಚ್ಚಿರುವ ಬೆಂಗಳೂರು... ಹೀಗೆ ಒಂದೊಂದು ನಗರಕ್ಕೆ ಒಂದೊಂದು ಮಾದರಿ ಅನುಸರಿಸಬೇಕು.

ಎಲ್ಲ ಆಸ್ತಿಗಳ ಸಮೀಕ್ಷೆ, ಪ್ರವಾಹಕ್ಕೆ ತುತ್ತಾಗುವ ಪ್ರದೇಶಗಳ ಭೌಗೋಳಿಕ ಮಾಹಿತಿ ಸಂಗ್ರಹಣೆ ಆಗಬೇಕು. ನಿಖರ ಮಾಹಿತಿ ಆಧರಿಸಿ, ತುರ್ತು ಸಂದರ್ಭಗಳಲ್ಲಿ ಕೈಗೊಳ್ಳಬೇಕಾದ ಕ್ರಮಗಳು ಏನು ಎಂಬ ಬಗ್ಗೆ ಕ್ರಿಯಾ ಯೋಜನೆ ಸಿದ್ಧಪಡಿಸಬೇಕು.

ಸಮಗ್ರ ನಗರ ಯೋಜನೆಯತ್ತ ನಾವು ಹೊರಳಬೇಕು. ನಗರ ಯೋಜನೆ ಕಾನೂನುಗಳ ಅಡಿ ಸಿದ್ಧಪಡಿಸಿದ ಮಾಸ್ಟರ್‌ ಪ್ಲಾನ್‌ಗಳಲ್ಲಿ ಜಮೀನನ್ನು ಬೇರೆ ಬೇರೆ ಉದ್ದೇಶಗಳಿಗೆ ಮೀಸಲಿಡುವುದಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಬೆಂಗಳೂರು ಮಾಸ್ಟರ್ ಪ್ಲ್ಯಾನ್‌ – 2015ರಲ್ಲಿ ಪರಿಸರದ ಬಗ್ಗೆ, ಮಳೆ ನೀರಿನ ಕಾಲುವೆಗಳ ಬಗ್ಗೆ, ಅವುಗಳನ್ನು ಪುನಃ ರೂಪಿಸುವ ಬಗ್ಗೆ ಆದ್ಯತೆ ಇದೆ. ಆದರೆ ಯೋಜನೆಗಳ ಅನುಷ್ಠಾನ ಆಗಿರುವುದು ತೀರಾ ಕಡಿಮೆ ಪ್ರಮಾಣದಲ್ಲಿ.

ಮರಗಳು, ನೀರಿನ ನೆಲೆಗಳು, ಉದ್ಯಾನಗಳು, ಜೌಗುಪ್ರದೇಶಗಳು ಮತ್ತು ಬಯಲು ಪ್ರದೇಶಗಳಿಗೆ ಸೂಕ್ತ ಆದ್ಯತೆ ಕಲ್ಪಿಸುವ ಯೋಜನೆ ಬೇಕು. ಆದರೆ, ನಗರಗಳಲ್ಲಿ ನಾವು ಲಭ್ಯವಿರುವ ಎಲ್ಲ ಪ್ರದೇಶಗಳನ್ನು ಮಾನವನ ಬಳಕೆಗೆ ಮಾತ್ರ ಬಳಸಿಕೊಳ್ಳುತ್ತಿದ್ದೇವೆ, ಅಲ್ಲೆಲ್ಲ ಕಾಂಕ್ರೀಟ್ ಹೊದಿಕೆ ಹಾಕುತ್ತಿದ್ದೇವೆ.

ನಗರಗಳಲ್ಲಿ ಜನಸಂಖ್ಯೆ ಹೆಚ್ಚುತ್ತಿದೆ. ಜನರಿಗೆ ಸೂರು ಒದಗಿಸಬೇಕು ಎಂಬುದು ನಿಜ. ಆದರೆ ಸೂರು ಒದಗಿಸುವ ಯೋಜನೆಗಳು ಮತ್ತು ಕಟ್ಟಡಗಳ ನಿರ್ಮಾಣದಲ್ಲಿ ಬದಲಾವಣೆ ಆಗಬೇಕು. ಪರಿಸರಕ್ಕೆ ತೀರಾ ಕಡಿಮೆ ಹಾನಿ ಉಂಟುಮಾಡುವ ತಂತ್ರಜ್ಞಾನ ಅಳವಡಿಸಿಕೊಳ್ಳಲು ಈಗ ಸಾಧ್ಯವಿದೆ.

ನಗರ ಯೋಜನಾ ಪ್ರಕ್ರಿಯೆಗಳಲ್ಲಿ ನೈಸರ್ಗಿಕ ಸಂಪನ್ಮೂಲಗಳ ನಿರ್ವಹಣೆ ಅವಿಭಾಜ್ಯ ಅಂಗವಾಗಬೇಕು. ನಮ್ಮ ಯೋಜನೆಗಳನ್ನು ಸಾಕಾರಗೊಳಿಸಲು ನಾವು ನಗರ ಆಡಳಿತದ ಕಡೆಯೂ ಗಮನ ನೀಡಬೇಕು. ಕಾನೂನಿನ ಅನುಷ್ಠಾನ ನಾವು ಎದುರಿಸುತ್ತಿರುವ ಪ್ರಮುಖ ಸಮಸ್ಯೆಗಳಲ್ಲಿ ಒಂದು.

ಕಟ್ಟಡ ನಿರ್ಮಾಣಕ್ಕೆ ಸಂಬಂಧಿಸಿದ ನಿಯಮಗಳನ್ನು ದೊಡ್ಡ ಪ್ರಮಾಣದಲ್ಲಿ ಉಲ್ಲಂಘಿಸುವುದರಿಂದ, ಪ್ರವಾಹ ಅಥವಾ ಇನ್ನಿತರ ನೈಸರ್ಗಿಕ ವಿಕೋಪಗಳ ಸಂದರ್ಭದಲ್ಲಿ ಉಂಟಾಗುವ ಅಪಾಯದ ಪ್ರಮಾಣ ಹೆಚ್ಚಾಗುತ್ತದೆ. ಹಿಂದೆ ಆಗಿರುವ ಎಲ್ಲ ಕಾನೂನು ಉಲ್ಲಂಘನೆಗಳನ್ನು ಈ ಹಂತದಲ್ಲಿ ಸರಿಪಡಿಸುವುದು ಕಷ್ಟವಿರಬಹುದು. ಆದರೆ, ಇನ್ನು ಮುಂದೆ ಉಲ್ಲಂಘನೆ ಆಗದಂತೆ, ಜೀವಕ್ಕೆ, ಆಸ್ತಿಗೆ ಹಾನಿಯಾಗದಂತೆ ನೋಡಿಕೊಳ್ಳಲು ತಕ್ಷಣ ಕ್ರಮ ಕೈಗೊಳ್ಳಬೇಕು.

ಪ್ರವಾಹ ಮತ್ತು ಇತರ ಅಪಾಯಕಾರಿ ಸಂದರ್ಭ ಎದುರಿಸುವ ಸಾಮರ್ಥ್ಯ ಹೆಚ್ಚಿಸಬೇಕು. ಜನ, ಸ್ವಯಂಸೇವಾ ಸಂಸ್ಥೆಗಳು ಹಾಗೂ ನಗರ ನಿರ್ವಹಣಾ ಸಂಸ್ಥೆಗಳಿಗೆ ಈ ಮಾತು ಅನ್ವಯವಾಗುತ್ತದೆ. ಬೇರೆ ಬೇರೆ ವಿಧದ ಸೇವೆಗಳನ್ನು ಒದಗಿಸುವ ಹಲವಾರು ಸಂಸ್ಥೆಗಳು ನಗರದಲ್ಲಿವೆ. ಆದರೆ ಅವುಗಳ ನಡುವಣ ಸಮನ್ವಯದ ಪ್ರಮಾಣ ಕಡಿಮೆ.

ನಗರಪಾಲಿಕೆ, ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ, ಸಾರಿಗೆ ಮತ್ತು ಸಂಚಾರ ಪ್ರಾಧಿಕಾರಗಳು ಹಾಗೂ ಯೋಜನಾ ಪ್ರಾಧಿಕಾರಗಳು ಒಟ್ಟಾಗಿ ಕೆಲಸ ಮಾಡಬೇಕು.

ಅಧಿಕಾರಿಗಳಿಗೆ ತಾಂತ್ರಿಕ ಹಾಗೂ ಆಡಳಿತ ನಿರ್ವಹಣೆ ತರಬೇತಿ ನೀಡಬೇಕು. ತುರ್ತು ಸನ್ನಿವೇಶಗಳನ್ನು ಎದುರಿಸುವುದು ಹೇಗೆ ಎಂಬ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಬೇಕು. ಪೂರ್ವಸಿದ್ಧತೆ ಇಲ್ಲದಿದ್ದರೆ ಗೊಂದಲ, ಭಯ ಉಂಟಾಗುತ್ತದೆ.

ಸಂದರ್ಭ ಎದುರಿಸಲು ಸಿದ್ಧರಾಗಿರುವುದು ಎಂದರೆ, ಸನ್ನಿವೇಶಕ್ಕೆ ಹೊಂದಿಕೊಳ್ಳುವುದು ಮತ್ತು ಮೊದಲಿನ ಸ್ಥಿತಿಗೆ ಮರಳಲು ಕ್ರಮ ಕೈಗೊಳ್ಳುವುದು. ನಗರೀಕರಣದ ಸವಾಲನ್ನು ನಿರ್ವಹಿಸುವುದು, ದುರಂತಗಳಿಂದ ಪುಟಿದೇಳಬಲ್ಲ ಸುಸ್ಥಿರ ನಗರಗಳನ್ನು ನಿರ್ಮಿಸುವುದು ಇಂದಿನ ಅತಿದೊಡ್ಡ ಸವಾಲು. ವೃತ್ತಿಪರ ಸಾಮರ್ಥ್ಯ ಇಲ್ಲದಿರುವುದರ ಜೊತೆಗೆ, ನಾಯಕತ್ವದ ಕೊರತೆ ಇರುವುದೂ ದೊಡ್ಡ ಸವಾಲು.

ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಇರುವಂತೆ, ಏಷ್ಯಾ ಮತ್ತು ಲ್ಯಾಟಿನ್ ಅಮೆರಿಕದ ಕೆಲವು ದೇಶಗಳಲ್ಲಿ ಇರುವಂತೆ ನಗರದ ಮೇಯರ್ ನಾಯಕನಂತೆ ವರ್ತಿಸಬೇಕು ಎಂದು ಜನ ಬಯಸುತ್ತಾರೆ. ಆದರೆ ಭಾರತೀಯ ಸಂದರ್ಭದಲ್ಲಿ ಮೇಯರ್‌ಗೆ ಅಗತ್ಯ ಅಧಿಕಾರ ಇರುವುದಿಲ್ಲ. ಹಾಗಾಗಿ ಜನರ ಬಯಕೆ ಈಡೇರುವುದಿಲ್ಲ.

ಇಂದಿನ ಸಂದರ್ಭದಲ್ಲಿ ಸಂಪುಟ ದರ್ಜೆ ಸಚಿವರೊಬ್ಬರನ್ನು ಬೆಂಗಳೂರಿನ ಎಲ್ಲ ಸಮಸ್ಯೆಗಳಿಗೆ ಉತ್ತರದಾಯಿ ಮಾಡಿ, ಸಮಸ್ಯೆ ಪರಿಹರಿಸಲು ಬೇಕಿರುವ ಅಧಿಕಾರವನ್ನು ಆ ಸಚಿವರಿಗೆ ನೀಡಬೇಕು. ಆದರೆ ಅಂತಹ ಸಚಿವರಿಗೆ ಬೆಂಗಳೂರಿನಲ್ಲಿ, ಅದರಲ್ಲೂ ಮುಖ್ಯವಾಗಿ ಇಲ್ಲಿನ ರಿಯಲ್ ಎಸ್ಟೇಟ್‌ ಉದ್ದಿಮೆಯಲ್ಲಿ ಯಾವುದೇ ಹಿತಾಸಕ್ತಿ ಇರಬಾರದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT