ಭಾರತದ ಪತ್ರಿಕಾರಂಗದ ಇತಿಹಾಸ ಒಂದು ರೀತಿಯಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕಾಗಿ ನಡೆದ ಹೋರಾಟದ ಇತಿಹಾಸ. ಅಭಿವ್ಯಕ್ತಿ ಸ್ವಾತಂತ್ರ್ಯ ಗಳಿಸಿದ ನಂತರ ಅದನ್ನು ಕಸಿಯುವ ಅನೇಕ ಪ್ರಯತ್ನಗಳು ರಾಜಕೀಯ ಸ್ವಾತಂತ್ರ್ಯ ಗಳಿಸಿದ ನಂತರವೂ ನಡೆದಿವೆ. ಆದರೆ ಪ್ರಭುತ್ವ ನಡೆಸಿದ ಅಂಥ ಯತ್ನ ಸಫಲವಾಗಿಲ್ಲ.

ಮೂಲಭೂತ ಹಕ್ಕಾಗಿರುವ ಅಭಿವ್ಯಕ್ತಿ ಸ್ವಾತಂತ್ರ್ಯದ ಭಾಗವಾಗಿ ಪತ್ರಿಕಾ ಸ್ವಾತಂತ್ರ್ಯ ದೇಶದಲ್ಲಿ ಬೆಳೆದಿದೆ. ಸ್ವಾತಂತ್ರ್ಯ ಹೋರಾಟದ ಕಾಲದಲ್ಲಿ ಪತ್ರಿಕೆಗಳಿಗೆ ಇದ್ದ ಗುರಿ ಸ್ವಾತಂತ್ರ್ಯ. ನಂತರ ಪತ್ರಿಕೆಗಳು ಸಮಾಜಮುಖಿಯಾಗಿ ಅಭಿವೃದ್ಧಿಯ ಭಾಗವಾಗಿ ಬೆಳೆದಿವೆ. ವ್ಯಕ್ತಿ ಮತ್ತು ಆದರ್ಶ ಕೇಂದ್ರಿತವಾಗಿದ್ದ ಪತ್ರಿಕಾವೃತ್ತಿ ಉದ್ಯಮದ ಸ್ವರೂಪ ಪಡೆದ ಮೇಲೆ ಗಮನಾರ್ಹ ಬದಲಾವಣೆಗೆ ಒಳಗಾಗಿದೆ.

ಮುಕ್ತ ಆರ್ಥಿಕ ವ್ಯವಸ್ಥೆಗೆ ಭಾರತ ತೆರೆದುಕೊಂಡ ಮೇಲಂತೂ ಅದು ಸ್ಪರ್ಧೆಯ ಭಾಗವಾಗಿದೆ. ಹೊಸ ಆಯಾಮವನ್ನು ಪಡೆದುಕೊಂಡಿದೆ. ಲಾಭ ಮತ್ತು ಬದ್ಧತೆಯನ್ನು ಸಮತೋಲನದಲ್ಲಿ ತೂಗಿಸಿಕೊಂಡು ಮುಂದುವರಿಯಬೇಕಾದ ಕಠಿಣ ದಾರಿಯಲ್ಲಿ ಅದು ನಡೆಯುತ್ತಿದೆ. ಹೀಗಾಗಿಯೇ ಸಮಾಜದಲ್ಲಿ ಕಂಡುಬರುವಂಥ ಎಲ್ಲ ಬಿಕ್ಕಟ್ಟುಗಳು ಪತ್ರಿಕೋದ್ಯಮದಲ್ಲೂ ಕಾಣುತ್ತಿವೆ.

ಭ್ರಷ್ಟಾಚಾರ, ದುರಾಡಳಿತದಿಂದ ಆಡಳಿತ ವ್ಯವಸ್ಥೆ ಶಿಥಿಲಗೊಂಡಿದೆ. ಹಗರಣಗಳ ಮೇಲೆ ಹಗರಣಗಳು ಬಯಲಿಗೆ ಬರುತ್ತಿವೆ. 2ಜಿ ಸ್ಪೆಕ್ಟ್ರಮ್ ಮತ್ತು ಕಾಮನ್ವೆಲ್ತ್ ಕ್ರೀಡಾಕೂಟದ ಹಗರಣಗಳು ಬಯಲಾದದ್ದೇ ಮಾಧ್ಯಮಗಳಿಂದ. ನ್ಯಾಯಾಲಯಗಳು ಭ್ರಷ್ಟಾಚಾರದ ವಿಚಾರದಲ್ಲಿ ಕಠಿಣ ನಿಲುವು ಪ್ರಕಟಿಸುತ್ತಿರುವುದರಿಂದ ಆಡಳಿತ ವ್ಯವಸ್ಥೆ ಇಕ್ಕಟ್ಟಿಗೆ ಸಿಲುಕಿದೆ.

ಹಗರಣಗಳನ್ನು ಬಯಲು ಮಾಡಿದ ಮತ್ತು ಅವುಗಳ ಬಗ್ಗೆ ಕಠಿಣ ನಿಲುವು ತಳೆಯುತ್ತಿರುವ ನ್ಯಾಯಾಲಯಗಳು ವ್ಯವಸ್ಥೆಯಿಂದ ತೀವ್ರ ಟೀಕೆಗೆ ಒಳಗಾಗುತ್ತಿವೆ. ಮಾಧ್ಯಮಗಳೂ ಅಧಿಕಾರಾರೂಢರ ಕೆಂಗಣ್ಣಿಗೆ ಗುರಿಯಾಗಿವೆ. ಈ ಹಿನ್ನೆಲೆಯಲ್ಲಿಯೇ ಮಾಧ್ಯಮಗಳಿಗೆ ಸಂಬಂಧಿಸಿದ ಹಗರಣಗಳೂ ಬಯಲಾಗಿವೆ.

ದೆಹಲಿಯ ಶಾಲೆಯೊಂದರ ಶಿಕ್ಷಕಿ ಉಮಾ ಖುರಾನಾ ಮತ್ತು ವೈದ್ಯರೊಬ್ಬರ ಪುತ್ರಿ ಆರುಶಿ ತಲ್ವಾರ್ ಪ್ರಕರಣ ಟಿ.ವಿ ಮಾಧ್ಯಮದ ಹುಳಕನ್ನು ಬಯಲಿಗೆಳೆದರೆ `ಹಣಕ್ಕಾಗಿ ಸುದ್ದಿ~ ಹಗರಣ ಪತ್ರಿಕೆಗಳ ಮಾನ ಹರಾಜಿಗೆ ಇಟ್ಟಿದೆ. ನೀರಾ ರಾಡಿಯಾ ಪ್ರಕರಣವಂತೂ ಕಾರ್ಪೊರೇಟ್ ಸಂಸ್ಥೆ ಮತ್ತು ಪತ್ರಕರ್ತರ ನಡುವಣ ಅನೈತಿಕ ಸಂಬಂಧವನ್ನು ಬಯಲಿಗೆ ತಂದಿದೆ. ಆದರ್ಶಗಳ ಸಂಕೇತವಾಗಿದ್ದ ಪತ್ರಿಕೋದ್ಯಮದ ವಿಶ್ವಾಸಾರ್ಹತೆಗೆ ಈ ಪ್ರಕರಣಗಳಿಂದ ಭಂಗವಾಗಿದೆ. ಬಹುಪಾಲು ಪತ್ರಿಕೆಗಳು ತಮ್ಮ ಅದರ್ಶವಾದ ಸತ್ಯಾನ್ವೇಷಣೆಯನ್ನು ಮತ್ತಷ್ಟು ತೀವ್ರವಾಗಿ ನಡೆಸುತ್ತಿವೆಯಾದರೂ ಕೆಲವು ಪತ್ರಿಕೆಗಳು ಹಿಡಿದ ಅಡ್ಡದಾರಿ ಈ ಪರಿಸ್ಥಿತಿಗೆ ಕಾರಣವಾಗಿದೆ. ಈ ಸಂದರ್ಭದಲ್ಲಿ ಪತ್ರಿಕಾ ಮಂಡಲಿಗೆ ಹೊಸದಾಗಿ ಅಧ್ಯಕ್ಷರಾಗಿ ನೇಮಕಗೊಂಡ ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ಮಾರ್ಕಂಡೇಯ ಖಟ್ಜು ಅವರು ಮಾಧ್ಯಮಗಳ ಬಗ್ಗೆ ಮಾಡಿದ ಆರೋಪ ಮತ್ತು ವಿಶ್ಲೇಷಣೆ ಸಹಜವಾಗಿಯೇ ವಿವಾದ ಎಬ್ಬಿಸಿದೆ.

ಭಾರತದಲ್ಲಿ ಪ್ರಜಾತಂತ್ರ ವ್ಯವಸ್ಥೆಯ ಮೌಲ್ಯಗಳನ್ನು ಜೀವಂತವಾಗಿರಿಸುವಲ್ಲಿ ಪತ್ರಿಕಾ ಮಾಧ್ಯಮದ ಪಾತ್ರ ಹಿರಿದು. ಜನತಂತ್ರ ವ್ಯವಸ್ಥೆಯ ಲೋಪಗಳು ಮತ್ತು ಅವುಗಳಿಂದ ಆಗುತ್ತಿರುವ ಅನಾಹುತಗಳನ್ನು ಪತ್ರಿಕೆಗಳು ಬಯಲಿಗೆಳೆಯುತ್ತ ಬರುತ್ತಿರುವುದರಿಂದ ಜನಪರವಾದ ಕೆಲಸಗಳು ಸ್ವಲ್ಪವಾದರೂ ನಡೆಯುತ್ತಿವೆ. ಆಡಳಿಗಾರರ ಮುದ್ದಿನ `ನಾಯಿ~ಗಳಾಗಿರುವ ಪತ್ರಿಕೆಗಳೂ ಇವೆ, ಪತ್ರಕರ್ತರೂ ಇದ್ದಾರೆ ಎನ್ನುವುದು ನಿಜ.

ಆದರೆ `ಕಾವಲು ನಾಯಿ~ಗಳಾಗಿ ಕೆಲಸ ಮಾಡುತ್ತಿರುವ ಪತ್ರಿಕೆಗಳು ಮತ್ತು ಪತ್ರಕರ್ತರ ಸಂಖ್ಯೆಯೇ ಹೆಚ್ಚು. ಈ ವಾಸ್ತವಾಂಶದ ತಿಳಿವಳಿಕೆಯಿಲ್ಲದ ಖಟ್ಜು ಅವರು ಏನೇನೋ ಮಾತನಾಡಿದ್ದಾರೆ. ಅನಗತ್ಯವಾಗಿ ಪತ್ರಕರ್ತರ ವಿರುದ್ಧ ಆರೋಪಮಾಡಿದ್ದಾರೆ. ಪತ್ರಿಕಾ ಸಂಸ್ಥೆಗಳನ್ನೇ ಸಂಶಯದಿಂದ ನೋಡಿದ್ದಾರೆ. ಪತ್ರಿಕೆಗಳು ಮತ್ತು ಪತ್ರಕರ್ತರನ್ನು ಶಿಕ್ಷಿಸುವ ಅಧಿಕಾರ ಪತ್ರಿಕಾ ಮಂಡಲಿಗೆ ಬೇಕೆಂದು ಕೇಂದ್ರ ಸರ್ಕಾರವನ್ನು ಕೇಳಿರುವುದು ಆಘಾತಕಾರಿಯಾದುದೇ ಸರಿ. ಪ್ರಸ್ತುತ ವಿವರಣೆ ಕೇಳುವ ಮತ್ತು ಛೀಮಾರಿ ಹಾಕುವ ಅಧಿಕಾರ ಮಾತ್ರ ಮಂಡಲಿಗೆ ಇದೆ. ದಂಡ ಹಾಕುವ, ಶಿಕ್ಷಿಸುವ, ಜಾಹೀರಾತು ನಿಲ್ಲಿಸುವ ಮತ್ತು ಪ್ರಕಟಣೆ ಪರವಾನಗಿಯನ್ನು ರದ್ದು ಮಾಡುವ ಅಧಿಕಾರ ಬೇಕೆಂಬ ಅವರ ಆಗ್ರಹ ಭಯಾನಕವಾದುದು. ಈ ಆಗ್ರಹದಲ್ಲಿ ಹೊಸದೇನೂ ಇಲ್ಲ. ಹಿಂದೆಯೂ ಅಂಥ ಬೇಡಿಕೆಯನ್ನು ಮಂಡಲಿಯ ಹಿಂದಿನ ಕೆಲವು ಅಧ್ಯಕ್ಷರೂ ಮಾಡಿದ್ದಾರೆ.

ಅಧಿಕಾರಕ್ಕೆ ಬಂದ ಎಲ್ಲ ಸರ್ಕಾರಗಳೂ ಮಾಧ್ಯಮಗಳನ್ನು ನಿಯಂತ್ರಿಸಲು ಪ್ರಯತ್ನಿಸುತ್ತ ಬಂದಿವೆ. ತುರ್ತುಪರಿಸ್ಥಿತಿಯ ಕರಾಳ ದಿನಗಳನ್ನು ಪತ್ರಿಕೆಗಳು ಇನ್ನೂ ಮರೆತಿಲ್ಲ. ನಿರ್ಬಂಧಗಳೆಂದರೆ ಪತ್ರಿಕೆಗಳ ಕತ್ತು ಹಿಸುಕಿದಂತೆಯೇ ಸರಿ. ಪತ್ರಿಕೆ ಆರಂಭದ ಹಂತದಿಂದ ಹಿಡಿದು, ಮುದ್ರಣ, ಜಾಹೀರಾತು. ಪತ್ರಿಕೆ ಪ್ರಕಟಣೆಯವರೆಗೆ ಮಾಧ್ಯಮ ಅನೇಕ ಕಟ್ಟುಪಾಡುಗಳಿಗೆ ಈಗಾಗಲೇ ಸಿಕ್ಕಿದೆ. ಇನ್ನು, ಮಾಧ್ಯಮದಲ್ಲಿ ಏನಿರಬಾರದು ಎಂದು ಹೇಳುವ ಅಧಿಕಾರವನ್ನು ಮಂಡಲಿಗೆ ನೀಡಿದರೆ ಅಲ್ಲಿಗೆ ಪತ್ರಿಕೋದ್ಯಮದ ಚರಮಗೀತೆ ಹಾಡಿದಂತೆಯೆ. ಕಾನೂನಿನ ಮೂಲಕ ಪತ್ರಿಕಾ ಮಂಡಲಿ ಅಸ್ತಿತ್ವಕ್ಕೆ ತರುವ ಸಂದರ್ಭದಲ್ಲಿಯೇ ಇಂಥ ಪ್ರಶ್ನೆಗಳು ಉದ್ಭವಿಸಿದ್ದವು. ಆ ಬಗ್ಗೆ ವಿವರವಾಗಿಯೇ ಚರ್ಚೆ ನಡೆದಿದೆ.

ಪತ್ರಿಕಾ ಮಂಡಲಿ ರಚನೆಯ ಮುಖ್ಯ ಉದ್ದೇಶ ಪತ್ರಕರ್ತರು ಮತ್ತು ಪತ್ರಿಕಾ ಸಂಸ್ಥೆಗಳನ್ನು ಶಿಕ್ಷಿಸುವುದಲ್ಲ. ಪತ್ರಿಕಾ ಸ್ವಾತಂತ್ರ್ಯವನ್ನು ಕಾಪಾಡುವುದು ಮತ್ತು ಪತ್ರಿಕೋದ್ಯಮದ ಗುಣಮಟ್ಟವನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯುವುದು ಮಾತ್ರ. ಹೀಗಾಗಿಯೇ ಶಿಕ್ಷಿಸುವ ಅಧಿಕಾರವನ್ನು ಮಂಡಲಿಗೆ ನೀಡಿಲ್ಲ. ಖಟ್ಜು ಅವರು ಮಂಡಲಿಯ ಹುಟ್ಟು ಮತ್ತು ಇತಿಹಾಸವನ್ನು ಸರಿಯಾಗಿ ತಿಳಿಯುವ ಪ್ರಯತ್ನವನ್ನು ಇನ್ನಾದರೂ ಮಾಡಬೇಕು.

ಬದಲಾವಣೆ ಆಗಬಾರದು ಎಂದೇನಿಲ್ಲ; ಆದರೆ ಅದು ಒಳ್ಳೆಯ ಬದಲಾವಣೆ ಆಗಬೇಕಷ್ಟೆ.
ಈ ವಿವಾದಕ್ಕೆ ಪ್ರಭುತ್ವದಷ್ಟೇ ಮಾಧ್ಯಮಗಳೂ ಕಾರಣ. ಕೆಲವು ಪತ್ರಿಕಾ ಸಂಸ್ಥೆಗಳು ಮತ್ತು ಪತ್ರಕರ್ತರು ಹಿಡಿದ ಅಡ್ಡದಾರಿಯಿಂದಾಗಿ ಇಂದು ಈ ಸ್ಥಿತಿ ನಿರ್ಮಾಣವಾಗಿದೆ. ಎಲ್ಲ ಪತ್ರಿಕೆಗಳು, ಪತ್ರಕರ್ತರು, ಪತ್ರಿಕಾ ಸಂಸ್ಥೆಗಳು ಅಂಥ ದಾರಿ ತುಳಿದಿಲ್ಲ. ಈ ಹಿಂದೆ ಪ್ರಸ್ತಾಪಿಸಿದ ಉಮಾ ಖುರಾನ, ಆರುಶಿ ತಲ್ವಾರ್ ಮತ್ತು `ಹಣಕ್ಕಾಗಿ ಸುದ್ದಿ~ ಮುಂತಾದ ಪ್ರಕರಣಗಳು ನಡೆಯದಿದ್ದರೆ ಬಹುಶಃ ಶಿಕ್ಷೆಯ ಬೆದರಿಕೆಯನ್ನು ಈಗ ಎದುರಿಸಬೇಕಾದ್ದಿರಲಿಲ್ಲ. ಈ ಹಿಂದೆ ಪ್ರಕರಣವೊಂದರಲ್ಲಿ ತಾನು ಮಾಡಿದ್ದು ತಪ್ಪು ಎಂದು ಗೊತ್ತಾದ ಮೇಲೂ ಆ ತಪ್ಪನ್ನು ಒಪ್ಪಿಕೊಳ್ಳುವ ಪ್ರ್ರಾಮಾಣಿಕತೆಯನ್ನು ದೊಡ್ಡ ಇಂಗ್ಲಿಷ್ ಪತ್ರಿಕೆಯೊಂದು ಪ್ರದರ್ಶಿಸಲಿಲ್ಲ. ಈ ವಿಚಾರವಾಗಿ ಪತ್ರಿಕಾ ಮಂಡಲಿ ನೀಡಿದ ಸೂಚನೆಯನ್ನೂ ಆ ಪತ್ರಿಕೆ ಪಾಲಿಸಲಿಲ್ಲ. ತಪ್ಪುದಾರಿ ತುಳಿದೂ ತಪ್ಪು ತಿದ್ದಿಕೊಳ್ಳದೆ, ಸ್ವೇಚ್ಛಾಚಾರ ಮೆರೆದ ಅನೇಕ ನಿದರ್ಶನಗಳಿವೆ.

ಶಿಕ್ಷೆ ವಿಧಿಸುವ, ದಂಡ ಹಾಕುವ ಪ್ರಶ್ನೆ ಉದ್ಭವವಾಗುವುದು ಇಂಥ ಧೋರಣೆಗಳಿಂದಾಗಿಯೇ. ಹಲವು ಪತ್ರಿಕೆಗಳು ಕೋಮು ಗಲಭೆಗಳನ್ನು ವರದಿ ಮಾಡುವಲ್ಲಿ ಮತ್ತು ಆ ಸುದ್ದಿ ಪ್ರಕಟಿಸುವಲ್ಲಿ ಅನುಸರಿಸಬೇಕಾದ ನೀತಿ ನಿಯಮಗಳನ್ನು ಪಾಲಿಸದೆ ಇರುವ ಉದಾಹರಣೆಗಳಿವೆ. ಮಂಡಲಿಯ ಮೇಲೆ ಒತ್ತಡ ತಂದು `ಹಣಕ್ಕಾಗಿ ಸುದ್ದಿ~ ಹಗರಣದ ತನಿಖಾ ವರದಿಯನ್ನು ಮುಚ್ಚಿ ಹಾಕುವ ಪ್ರಯತ್ನವನ್ನು ಪತ್ರಿಕಾ ಸಂಸ್ಥೆಗಳು/ಪತ್ರಕರ್ತರು ಮಾಡಿರುವ ಬೆಳವಣಿಗೆ ಪತ್ರಿಕೋದ್ಯಮದ ನೀತಿ ನಿಯಮಗಳಿಗೇ ವಿರುದ್ಧವಾದುದು. ಬೇರೆಯವರಿಂದ ಪಾರದರ್ಶಕತೆ ಮತ್ತು ಸ್ವಚ್ಛತೆಯನ್ನು ಪತ್ರಿಕೋದ್ಯಮ ಬಯಸುತ್ತದೆ ಮತ್ತು ಒತ್ತಾಯಿಸುತ್ತದೆ. ಆದರೆ ತನ್ನ ವಿಷಯದಲ್ಲಿ ಮಾತ್ರ ಅದನ್ನು ಒಪ್ಪುವುವುದಿಲ್ಲ. ಇದೊಂದು ರೀತಿಯಲ್ಲಿ ಕಪಟ. ಈ ಕಾರಣದಿಂದಾಗಿಯೇ ನಿರ್ಬಂಧಗಳನ್ನು ಹೇರಲು ಸರ್ಕಾರ ಮತ್ತು ಮಾಧ್ಯಮಕ್ಕೆ ಸಂಬಂಧಿಸಿದ ಸಂಸ್ಥೆಗಳು ತುದಿಗಾಲಲ್ಲಿ ನಿಂತಿರುವುದು. ಬೇರೆ ಯಾರೂ ಬೊಟ್ಟು ಮಾಡಿ ಹೇಳದಂತೆ ಪತ್ರಿಕೋದ್ಯಮದಲ್ಲಿ ಕೆಲಸಮಾಡುವವರೆಲ್ಲರೂ ನಡೆದುಕೊಂಡರೆ ಹೊರಗಿನಿಂದ ನಿರ್ಬಂಧಗಳನ್ನು ಹೇರುವ ಪ್ರಶ್ನೆ ಉದ್ಭವಿಸುವುದಿಲ್ಲ.

ಸ್ವಾತಂತ್ರ್ಯ ಎನ್ನುವುದು ಅನಿರ್ಬಂಧಿತವಾದುದೇನಲ್ಲ. ಸ್ವಾತಂತ್ರ್ಯ ಜವಾಬ್ದಾರಿಯಿಂದ ಕೂಡಿರಬೇಕು. ಆಗ ಮಾತ್ರ ಸ್ವಯಂ ನಿಯಂತ್ರಣಕ್ಕೆ ಅರ್ಥ ಬರುತ್ತದೆ. ಹಾಗೆ ನೋಡಿದರೆ, ಪತ್ರಿಕಾ ಮಾಧ್ಯಮ ಸೇರಿದಂತೆ ಎಲ್ಲ ಮಾಧ್ಯಮಗಳೂ ಸ್ವಯಂ ನಿಯಂತ್ರಣ ವಿಧಿಸಿಕೊಂಡರೆ ಸಮಸ್ಯೆಗಳೇ ಇರುವುದಿಲ್ಲ. ಪರಿಸ್ಥಿತಿ ಬಿಗಡಾಯಿಸಿದ ಮೇಲೆ, ಟಿ.ವಿ ಸುದ್ದಿ ಚಾನೆಲ್ಗಳು ಮತ್ತು ಸಿನಿಮಾ ಮತ್ತಿತರ ಮನರಂಜನೆ ಕಾರ್ಯಕ್ರಮಗಳನ್ನು ಬಿತ್ತರಿಸುವ ಚಾನೆಲ್ಗಳು ಸ್ವಯಂ ನಿಯಂತ್ರಣದ ಮಾರ್ಗಸೂಚಿಗಳನ್ನು ರಚಿಸಿ ಪಾಲಿಸುತ್ತಿರುವುದಾಗಿ ಹೇಳುತ್ತಿವೆ. ಕೆಲವು ಪತ್ರಿಕೆಗಳು ಅಂಥ ಅಲಿಖಿತ ಸ್ವಯಂ ನಿಯಂತ್ರಣವನ್ನು ಈಗಾಗಲೇ ಸಾಧಿಸಿವೆ. ಆದರೆ ಎಲ್ಲ ಪತ್ರಿಕೆಗಳೂ ಇಂಥ ಸ್ವಯಂ ನಿಯಂತ್ರಣಕ್ಕೆ ಒಳಪಡದಿರುವುದೇ ಸಮಸ್ಯೆ. ಬ್ರಿಟನ್, ಅಮೆರಿಕ, ಫ್ರಾನ್ಸ್ ಹಾಗೂ ಯೂರೋಪಿನ ಹಲವು ದೇಶಗಳಲ್ಲಿ ಸ್ವಯಂ ನಿಯಂತ್ರಣ ಜಾರಿಯಲ್ಲಿದೆ. ಸ್ವಯಂ ನಿಯಂತ್ರಣ ಪರಿಣಾಮಕಾರಿಯಾಗಿಲ್ಲ ಎನ್ನುವ ಕೂಗು ಆ ದೇಶಗಳಲ್ಲಿ ಇದ್ದರೂ ನಿಯಂತ್ರಣ ಹೇರುವ ಪ್ರಯತ್ನಗಳು ನಡೆದಿಲ್ಲ.

ಭಾರತದ ಮಾಧ್ಯಮಗಳು ಕೂಡಾ ತಮ್ಮದೇ ಆದಂಥ ಸ್ವಯಂ ನಿಯಂತ್ರಣ ಮಾದರಿಯನ್ನು ರೂಪಿಸಿ ಜಾರಿಗೊಳಿಸಬೇಕು. ಅದನ್ನು ಎಲ್ಲರೂ ಪಾಲಿಸುವಂತೆ ಮಾಡುವುದು ಮಾಧ್ಯಮಗಳ ಒಡೆಯರ ಮತ್ತು ಅವುಗಳಲ್ಲಿ ಕೆಲಸಮಾಡುವ ಪತ್ರಕರ್ತರ ಜವಾಬ್ದಾರಿ. ಮಾಧ್ಯಮಗಳಿಗೆ ಸಂಬಂಧಿಸಿದಂತೆ ಇನ್ನೂ ಹಲವು ಸಮಸ್ಯೆಗಳಿವೆ. ಪತ್ರಿಕೆ ಸೇರಿದಂತೆ ಬಹುಪಾಲು ಮಾಧ್ಯಮ ಸಂಸ್ಥೆಗಳು ಖಾಸಗಿಯವರ ಹಿಡಿತದಲ್ಲಿವೆ. ಹಣ ಮಾಡುವುದೇ ಮುಖ್ಯ ಉದ್ದೇಶವಾದ ಮತ್ತು ಪತ್ರಿಕಾಧರ್ಮ ಹಿಂದೆ ಸರಿಯುತ್ತಿರುವ ಬೆಳವಣಿಗೆಯ ಮೊದಲ ಹೆಜ್ಜೆಗಳು ಕಾಣುತ್ತಿವೆ. ಪತ್ರಿಕಾ ಸ್ವಾತಂತ್ರ್ಯವನ್ನು ಅದರ ಎಲ್ಲ ಅರ್ಥಗಳಲ್ಲಿ ಉಳಿಸಿ ಬೆಳೆಸುವ ದೃಷ್ಟಿಯಿಂದ ಸುದ್ದಿ ಮತ್ತು ಜಾಹೀರಾತುಗಳ ಮೇಲೆ ಕೆಲವು ಪತ್ರಿಕಾ ಸಂಸ್ಥೆಗಳು ಪರೋಕ್ಷವಾಗಿ ಸಾಧಿಸಿರುವ ಏಕಸ್ವಾಮ್ಯ, ಪತ್ರಕರ್ತರ ಗುತ್ತಿಗೆ ಪದ್ಧತಿ, ಇತರ ವಾಣಿಜ್ಯ ಹಿತಾಸಕ್ತಿ, ಕಾರ್ಪೊರೇಟ್ ಸಂಸ್ಥೆ ಮತ್ತು ರಾಜಕಾರಣಿ ಹಾಗೂ ಪತ್ರಕರ್ತರ ನಡುವಣ ಸಂಬಂಧ ಕುರಿತಂತೆಯೂ ಮಾಧ್ಯಮ ಸಂಸ್ಥೆಗಳು ವಿವರವಾಗಿ ಚರ್ಚಿಸಿ ಸಾರ್ವಜನಿಕರೂ ಸೇರಿದಂತೆ ಎಲ್ಲರೂ ಒಪ್ಪುವಂಥ ನೀತಿ, ನಿಯಮಾವಳಿಗಳನ್ನು ರೂಪಿಸಬೇಕಿದೆ.

ಈ ವಿಚಾರದಲ್ಲಿ ಪಾರದರ್ಶಕತೆ ಮತ್ತು ನೀತಿ ನಿಯಮಗಳ ಪರಿಪಾಲನೆ ಬಹಳ ಮುಖ್ಯ. ಪತ್ರಿಕಾ ಸಂಸ್ಥೆಗಳು ಮತ್ತು ಪತ್ರಕರ್ತರು ಇತರರಿಗೆ ಮಾದರಿಯಾಗಿಯೇ ಇರಬೇಕಾಗಿದೆ. ವೃತ್ತಿಗೆ ಸಂಬಂಧಿಸಿದಂತೆ ಪತ್ರಿಕಾ ಮಂಡಲಿಯೂ ಕೆಲವು ನೀತಿಗಳನ್ನು, ಹಾಕಿಕೊಳ್ಳಬೇಕಾದ ಕಟ್ಟುಪಾಡುಗಳನ್ನು ರೂಪಿಸಿದೆ. ಬಹುಪಾಲು ಪತ್ರಿಕೆಗಳು, ಪತ್ರಕರ್ತರು ಕೆಲವು ನೀತಿ ನಿಯಮಗಳನ್ನು ಮೊದಲಿನಿಂದಲೂ ಪಾಲಿಸಿಕೊಂಡೇ ಬರುತ್ತಿದ್ದಾರೆ. ಯಾವುದೇ ಬದ್ಧತೆಯಿಲ್ಲದ ಕೆಲವರಿಂದಾಗಿಯೇ ಈ ಸಮಸ್ಯೆ. ಪತ್ರಿಕೆಗಳೇ ಸ್ವತಂತ್ರವಾಗಿ ಸ್ವಯಂ ನಿಯಂತ್ರಣವನ್ನು ಸಾಧಿಸಿದರೆ ಬಹುಶಃ ಪತ್ರಿಕಾ ಮಂಡಲಿಯ ಅಗತ್ಯವೇ ಇರುವುದಿಲ್ಲ. ಪತ್ರಿಕಾ ಮಾಧ್ಯಮದಲ್ಲಿ ತೊಡಗಿಸಿಕೊಂಡಿರುವ ಎಲ್ಲರೂ ಒಗ್ಗಟ್ಟಾಗಿ ಇದನ್ನು ಸಾಧಿಸಬೇಕಿದೆ. ಸರ್ಕಾರ ಅಥವಾ ಸರ್ಕಾರ ನೇಮಿಸಿದ ಯಾವುದೇ ಸಂಸ್ಥೆಗೆ ನಿಯಂತ್ರಣ ಅಧಿಕಾರ ನೀಡುವುದು ಅಪಾಯಕಾರಿ. ಅಂಥ ಕಾನೂನುಗಳ ದುರುಪಯೋಗವೇ ಹೆಚ್ಚು. ಹೀಗಾಗಿ ಸ್ವಯಂ ನಿಯಂತ್ರಣದ ಮೂಲಕ ಮಾತ್ರ ಪತ್ರಿಕಾ ಮಾಧ್ಯಮ ಸರ್ವತೋಮುಖವಾಗಿ ಏಳಿಗೆ ಪಡೆಯಬಲ್ಲದು. ಆದರೆ ಸ್ವಯಂ ನಿಯಂತ್ರಣವನ್ನು ಹಾಕಿಕೊಳ್ಳುವ ಇಚ್ಛಾಶಕ್ತಿಯನ್ನು ಪತ್ರಿಕಾ ಮಾಧ್ಯಮ ಸಂಸ್ಥೆಗಳು ಪ್ರದರ್ಶಿಸುತ್ತವೆಯೇ ಎನ್ನುವುದು ಸದ್ಯಕ್ಕೆ ಉತ್ತರ ಸಿಗದ ಪ್ರಶ್ನೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.