ಬುಧವಾರ, 15 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿಂದಕ್ಕೆ ದಬ್ಬುವ ಗೆಲುವಿನ ಮಾನದಂಡ

ಮಹಿಳಾ ರಾಜಕಾರಣದ ಸವಾಲು
Last Updated 28 ಮಾರ್ಚ್ 2014, 19:30 IST
ಅಕ್ಷರ ಗಾತ್ರ

ದೇಶದ ಜನಸಂಖ್ಯೆಯಲ್ಲಿ ಮಹಿಳೆಯರ ಪ್ರಮಾಣ ಶೇ 49ರಷ್ಟಿದೆ. ಎಲ್ಲ ರಾಜ­ಕೀಯ ಪಕ್ಷಗಳು ನಿರ್ವಿವಾದವಾಗಿ ಒಪ್ಪತಕ್ಕ ವಿಚಾರ ಇದಾಗಿದೆ. ಈ ಅನುಪಾತಕ್ಕೆ ತಕ್ಕ ರಾಜ­ಕೀಯ ಪ್ರಾತಿನಿಧ್ಯ ಅವರಿಗೆ ಸಿಕ್ಕಿಲ್ಲ ಎನ್ನುವುದು ಕೂಡ ಅಷ್ಟೇ ಸತ್ಯ ಸಂಗತಿಯಾಗಿದೆ. ಈಗ ಅವಧಿ ಪೂರೈಸುತ್ತಿರುವ ಲೋಕಸಭೆಯಲ್ಲಿ ಮಹಿಳಾ ಪ್ರತಿ­ನಿಧಿ­ಗಳ ಪ್ರಮಾಣ ಶೇ 10.8ರಷ್ಟಿದೆ (ಜಗತ್ತಿನ ಸರಾ­ಸರಿ ಶೇ 20). ರಾಜಕೀಯ ಆಡಳಿತದಲ್ಲಿ ಮಹಿಳೆ­ಯರು ಹೊಂದಿರುವ ಪಾಲಿನ ಲೆಕ್ಕಾಚಾರ­ದಲ್ಲಿ ಭಾರತ 108ನೇ ಸ್ಥಾನ ಪಡೆದಿದೆ.

ಸದ್ಯದ ವಾತಾವರಣದಲ್ಲಿ ಮಹಿಳಾ ಮೀಸಲಾತಿ ಎನ್ನು­ವುದಿಲ್ಲ. ಅದು ಯಾವಾಗ ಸಿಗುತ್ತದೆ ಎನ್ನು­ವುದು ಯಾರಿಗೂ ಗೊತ್ತಿಲ್ಲ. ಸಾಮಾನ್ಯ ಕ್ಷೇತ್ರಗ­ಳಲ್ಲೇ ಸ್ಪರ್ಧಿಸಿ, ಗೆಲ್ಲಬೇಕಿರುವುದು ಮಹಿಳೆ ಮುಂದಿ­ರುವ ಈಗಿನ ಏಕೈಕ ದಾರಿ. ಯಾವುದೇ ರಾಜಕೀಯ ಪಕ್ಷ,  ಟಿಕೆಟ್‌ ನೀಡಲು ಸಾಮಾನ್ಯವಾಗಿ ಅನುಸರಿ­ಸುವ ಮಾನದಂಡ ಯಾವುದು? ಹೌದು, ಗೆಲ್ಲುವ ಸಾಧ್ಯತೆಯನ್ನೇ ಎಲ್ಲಕ್ಕಿಂತ ಮುಖ್ಯವಾಗಿ ಪರಿಗಣಿಸ­ಲಾಗುತ್ತದೆ. ಗೆಲ್ಲುವ ಸಾಧ್ಯತೆಯನ್ನು ಲೆಕ್ಕ ಹಾಕುವುದು ಅಭ್ಯರ್ಥಿಗೆ ಇರುವ ಬೆಂಬಲಿಗರ ಪಡೆ ಮತ್ತು ಜಾತಿ ಬಲದಿಂದ.

ಗೆಲುವಿನ ಇಂತಹ ಮಾನದಂಡ ಪ್ರಾಥಮಿಕ ಹಂತದಲ್ಲೇ ಮಹಿಳೆಯನ್ನು ಹಿಂದಕ್ಕೆ ದಬ್ಬುತ್ತದೆ. ಏಕೆಂದರೆ, ಬೆಂಬಲಿಗರ ಪಡೆಯಲ್ಲಿ ಸಾಮಾನ್ಯ­ವಾಗಿ ಪುರುಷರೇ ತುಂಬಿರುತ್ತಾರೆ. ಮನೆ–ಮಠಗ­ಳನ್ನು ಬಿಟ್ಟು ತಿಂಗಳಪರ್ಯಂತ ಅಲೆಯಲು ಅವರಿ­ಗಷ್ಟೇ ಸಾಧ್ಯ. ಪ್ರಚಾರ

ಸಭೆಗಳಿಗೆ ದುಡಿಯುವುದು, ರಾತ್ರಿಯೆಲ್ಲ ಅಲೆದಾಡಿ ಪೋಸ್ಟರ್‌ ಹಚ್ಚುವುದು, ಮನೆ ಕಡೆಗೆ ಚಿಂತೆಯಿಲ್ಲದೆ ಕೆಲಸ ಮಾಡುವುದು... ಇಂತಹ ಕಾರ್ಯಭಾರಗಳಿಗೆ ಪುರುಷ ಬೆಂಬಲಿಗರೇ ಬೇಕು. ಅವರು ಆಯ್ದುಕೊಳ್ಳುವುದು ನಾಯಕ­ನನ್ನೇ ಹೊರತು ನಾಯಕಿಯನ್ನಲ್ಲ.

ಮಹಿಳಾ ಬೆಂಬಲಿಗರೂ ಚುನಾವಣಾ ಕಾರ್ಯ­ದಲ್ಲಿ ತೊಡಗಿಕೊಳ್ಳುವುದು ಈಗ ಹೆಚ್ಚಾಗಿದೆ. ಆದರೆ, ಅವರಿಗೆ ಕೆಲವು ಮಿತಿಗಳಿವೆ. ಬೆಳಿಗ್ಗೆ ಮನೆ ಮಂದಿಗೆಲ್ಲ ಆಹಾರ ಸಿದ್ಧಪಡಿಸಿ ಬರಬೇಕು. ರಾತ್ರಿಯಾಗುತ್ತಲೇ ಮತ್ತೆ ಮನೆ ಸೇರಬೇಕು. ಈ ಮಿತಿಗಳು ಪುರುಷ ಬೆಂಬ­ಲಿ­ಗರಿಗೆ ಇಲ್ಲ. ಜಾತಿ ಆಧಾರಿತ ಮತ ಬುಟ್ಟಿ­ಗಳು ಇರುವಂತೆ ಮಹಿಳಾ ಮತ ಕೇಂದ್ರಗಳು ಇಲ್ಲ. ದೇಶದ ತುಂಬಾ ಅವರು ಸಮಾನ ಸಂಖ್ಯೆಯಲ್ಲಿ ಹರಿದು ಹಂಚಿಹೋಗಿ­ದ್ದಾರೆ. ಈ ಸಂಕೀರ್ಣ ಸಮ­ಸ್ಯೆ­­ಗ­­ಳನ್ನೆಲ್ಲ ವಿಶ್ಲೇ­ಷಣೆ ಮಾಡಿ ನೋಡಿ­ದಾಗ ಸಾಮಾನ್ಯ ಮಹಿಳೆಗೆ ರಾಜಕೀಯ ಪ್ರವೇಶ, ಅದ­ರಲ್ಲೂ ಚುನಾವಣಾ ರಾಜಕೀಯ ಪ್ರವೇಶ ಸದ್ಯದ ಸ್ಥಿತಿಯಲ್ಲಿ ಕಷ್ಟವೇ ಸರಿ.

ಹಾಗಾದರೆ, ಮಹಿಳೆಗೆ ರಾಜಕೀಯ ಎನ್ನುವುದು ಗಗನಕುಸುಮವೇ? ಹಾಗೇನಿಲ್ಲ. ಈಗಿನ ಸ್ಥಿತಿಯಲ್ಲಿ ಅದು ಕೆಲವು ಮಹಿಳೆಯರಿಗಷ್ಟೇ ಸೀಮಿತವಾಗಿದೆ ಅಷ್ಟೇ. ತಂದೆ ಇಲ್ಲವೆ ಪತಿ ಸಕ್ರಿಯ ರಾಜಕಾರಣ­ದಲ್ಲಿ ಇದ್ದರೆ ರಾಜಕೀಯ ಪ್ರವೇಶ ಬಲು ಸುಲಭ. ತಂದೆ ಅಥವಾ ಪತಿ ಬೆಂಬಲಿಗರ ಪಡೆ ಸ್ವಯಂ­ಪ್ರೇರಿತ­ವಾಗಿ ಮಹಿಳಾ ಅಭ್ಯರ್ಥಿಯತ್ತ ಹೊರ­ಳು­ತ್ತದೆ. ಜಾತಿ ಬಲವೂ ಕೈಹಿಡಿಯುತ್ತದೆ.

ಸಿನಿಮಾ ನಟಿಯರ ರಾಜಕೀಯ ಪ್ರವೇಶಕ್ಕೆ ಒಂದು ಹೆಚ್ಚುವರಿ ಅವಕಾಶವಿದೆ. ಅದೆಂದರೆ ಜನ ಅವ­ರನ್ನು ಬಲುಬೇಗ ಗುರುತಿಸುತ್ತಾರೆ. ಮಿಕ್ಕಂತೆ ಅವರೂ ರಾಜಕೀಯದ ಎಲ್ಲ ಅಡೆತಡೆಗಳನ್ನು ದಾಟು­ತ್ತಲೇ ಸಾಗಬೇಕು. ಯಾವ ಬೆಂಬಲವೂ ಇಲ್ಲದೆ ಮಹಿಳೆಯೊಬ್ಬಳು ರಾಜಕೀಯದಲ್ಲಿ ಗುರು­ತಿ­ಸಿ­­ಕೊಳ್ಳಲು ಕನಿಷ್ಠ 20 ವರ್ಷ ಬೇಕಾ­ಗುತ್ತದೆ. ಆಶಾವಾದ ಕಳೆದುಕೊಳ್ಳದೆ ಈ ಸುದೀರ್ಘ ಅವಧಿ­ಯಲ್ಲಿ ಹೋರಾಟ ಮಾಡುತ್ತಲೇ ಸಾಗಬೇಕು.

ಈ ಕ್ಷೇತ್ರಕ್ಕೆ ಧುಮುಕುವ ಮಹಿಳೆಯರು ಕನಿಷ್ಠ ಪದವೀಧರರಾಗಿರಬೇಕು. ಇದರಿಂದ ರಾಜಕೀಯ ವ್ಯವಸ್ಥೆ, ಅದರ ಒಳ–ಹೊರಗು, ಒಳಸುಳಿಗಳನ್ನು ಗ್ರಹಿ­ಸಲು ಸಾಧ್ಯವಾಗುತ್ತದೆ. ನಾಯಕತ್ವ ಗುಣ­ವನ್ನು ಬೆಳೆಸಿಕೊಳ್ಳಲೂ ಇದರಿಂದ ಅನುಕೂಲ. ಮಹಿಳೆ­ಯರಿಗೆ ಅವಕಾಶ ಸೃಷ್ಟಿಸಲು ಮೀಸಲಾತಿ ಅನಿ­ವಾರ್ಯ. ಈ ಸಂಬಂಧ ಸಾಂವಿಧಾನಿಕ ಮತ್ತು ಕಾನೂನು ಕ್ರಮಗಳು ಎಷ್ಟುಬೇಗ ನಡೆಯುತ್ತ­ವೆಯೋ ಅಷ್ಟು ಒಳ್ಳೆಯದು. ಇಲ್ಲದಿದ್ದರೆ ಯಾವ ಪಕ್ಷವೂ ಮಹಿಳಾ ಅಭ್ಯರ್ಥಿಗಳನ್ನು ಚುನಾವಣೆಗೆ ನಿಲ್ಲಿಸಲು ಮುಂದೆ ಬರುವುದಿಲ್ಲ. ಇಷ್ಟಕ್ಕೂ ಚುನಾ­ವಣೆ ಎಂದರೆ ಸಂಖ್ಯಾ ಆಟ ತಾನೆ?

ಸ್ಥಳೀಯ ಸಂಸ್ಥೆಗಳಲ್ಲಿ ಮೀಸಲಾತಿ ಸೌಲಭ್ಯ ಒದಗಿಸಿದ ಮೇಲೆ ಸಾಕಷ್ಟು ಬದಲಾವಣೆಯಾಗಿದೆ. ಮೊದ–ಮೊದಲು ಗ್ರಾಮ ಪಂಚಾಯ್ತಿ ಸದಸ್ಯ­ರಾಗಿ­ದ್ದವರು ತಮ್ಮ ಪತ್ನಿಯರನ್ನೇ ಚುನಾವಣೆಗೆ ನಿಲ್ಲಿಸಿ ಗೆಲ್ಲಿಸಿದರು. ಈಗ ಅಂತಹ ವಾತಾವರಣ ಹೊರಟುಹೋಗಿದೆ. ಸಾಮಾನ್ಯ ಮಹಿಳೆಯೂ ಸ್ಪರ್ಧಿಸಿ ಗೆಲ್ಲುತ್ತಿದ್ದಾಳೆ. ಲೋಕಸಭೆ ಮತ್ತು ವಿಧಾನಸಭೆಯಲ್ಲೂ ಮೀಸಲಾತಿ ಸಿಕ್ಕರೆ ಮೊದ–ಮೊದಲು ರಾಜಕೀಯ ನೇತಾರರ ಪತ್ನಿ–ಪುತ್ರಿಯರೇ ಅದರ ಲಾಭ ಪಡೆಯುವ ಸಾಧ್ಯತೆ ಇದೆ. ಆದರೆ, ದೂರಗಾಮಿಯಾಗಿ ಎಲ್ಲ ಮಹಿಳೆಯರಿಗೂ ಇದರಿಂದ ಅನುಕೂಲವಾಗಲಿದೆ. ಒಂದೆರಡು ಚುನಾವಣೆಗಳಲ್ಲಿಯೇ ಈ ಬದಲಾವಣೆ ಮೂಡಿಬರಲಿದೆ.
(ಲೇಖಕಿ ಬಿಜೆಪಿ ರಾಜ್ಯ ಘಟಕದ ಸಹವಕ್ತಾರರು)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT