ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮದುವೆ... ಇಬ್ಬರ ನಡಿಗೆ

ನನ್ನ ಕನಸಿನ ಮದುವೆ
Last Updated 19 ಜುಲೈ 2018, 19:30 IST
ಅಕ್ಷರ ಗಾತ್ರ

ಮದುವೆ ಯಾವತ್ತಿಗೂ ಇಬ್ಬರ ನಡುವಿನ ಸಂಬಂಧವಾಗಿ ಇರಲಿಲ್ಲ. ಅದೊಂದು ಸಾಮಾಜಿಕ ಕ್ರಿಯೆ. ‌ ಹೆಣ್ಣು ಮಕ್ಕಳಿಗೆ ವಯಸ್ಸು 20 ದಾಟುತ್ತಿದ್ದಂತೆ ಆಕೆಯಲ್ಲೇ ಮೊಳೆಯಬೇಕಾಗಿದ್ದ ‘ಮದುವೆ ಕನಸು’ ಅನ್ನು ಸಮಾಜ ಬಿತ್ತಲು ಶುರು ಮಾಡಿಬಿಡುತ್ತದೆ.

ಈ ಪ್ರಕ್ರಿಯೆಯಲ್ಲಿ ಅಪ್ಪ, ಅಮ್ಮ ಕೇವಲ ಪಾತ್ರ ಮಾತ್ರವಷ್ಟೆ. ಹೆಣ್ಣಿಗೆ ಎಲ್ಲೊ ಒಂದು ಕಡೆ, ಹೌದು ನಾನು ಮದುವೆ ಆದಾಗಲೇ ಜೀವನ ಸಂಪೂರ್ಣ ಎಂಬುದು ತಲೆಯಲ್ಲಿ ಉಳಿಯುತ್ತದೆ. ಇದಕ್ಕಿಂತಲೂ ಹೆಚ್ಚಾಗಿ ನಾನು ‘ಸುಭದ್ರತೆ’ ಎನ್ನುವ ‘ವ್ಯಾವಹಾರಿಕ’ ಅಂಶವನ್ನು ಆಕೆ ತಲೆತುಂಬಿಕೊಳ್ಳುತ್ತಾ ಹೋಗುತ್ತಾಳೆ. ಹೀಗೆ ಒಂದಕ್ಕೊಂದು ಬೆಸೆದುಕೊಂಡು ಇದೊಂದು ವ್ಯಕ್ತಿಗತ ಗಡಿ ದಾಟಿ, ತೋರುಗಾಣಿಕೆ ಆಗಿಬಿಡುತ್ತದೆ. ನಾವೆಲ್ಲರೂ ಇದಕ್ಕೆ ಒಗ್ಗಿಕೊಂಡಿದ್ದೇವೆ ಮತ್ತು ಇದೇ ನಮ್ಮ ಆದರ್ಶವಾಗಿದೆ ಕೂಡ.

ಮದುವೆ ಎಲ್ಲರನ್ನೂ ಒಳಗೊಳ್ಳುವ ಕ್ರಿಯೆ ಆದರೂ, ಮದುವೆ ಮನೆ ಸಂಭ್ರಮ ಮುಗಿದ ಬಳಿಕ ಅದು ಇಬ್ಬರು ಸಾಗುವ ಹಾದಿ. ಹೇಳಹೊರಟಿರುವುದು ಇಷ್ಟೇ. ಮದುವೆ ಪ್ರಕ್ರಿಯೆ ಸಾಮುದಾಯಿಕವಾಗಿರಬಹುದು, ಆದರೆ, ಅದು ಇಬ್ಬರ ನಡಿಗೆ. ಮದುವೆ, ಆಗುವವರ ಇಚ್ಛೆ. ಅಲ್ಲಿ ಮಂತ್ರಘೋಷಗಳು ಬೇಕಾಗಿಲ್ಲ. ಆಗ್ನಿಸಾಕ್ಷಿ ಆಗಬೇಕಿಲ್ಲ. ನಮಗೆ ನಾವು ಸಾಕ್ಷಿ ಆಗಬೇಕು. ನಮಗೆ ನಾವೇ ಉತ್ತರದಾಯಿಗಳಾಗಬೇಕು.

ಈ ಜವಾಬ್ದಾರಿಯೊಂದಿನ ನಡಿಗೆ, ಖಂಡಿತವಾಗಿಯೂ ಆದರ್ಶವಾಗಬಹುದು. ಮನುಷ್ಯರು ಇಂದು ಜಾತಿ, ಧರ್ಮ ಎನ್ನುವುದಕ್ಕಾಗಿ ಬಡಿದಾಡುತ್ತಿದ್ದೇವೆ. ಜವಾಬ್ದಾರಿಯೊಂದಿಗಿನ ‘ಬಂಧನ’ ಇವಕ್ಕೆ ಒಂದು ಬಗೆಯ ಉತ್ತರವಾಗಬಹುದಷ್ಟೇ. ಇಂತಹ ಸಮಾಜಕ್ಕಾಗಿ ಕಾಯಬೇಕಿದೆ.
–ಆಲಾಪ, ಸಾಗರ

***
ಸಾರ್ಥಕವಾದ ಮದುವೆ...
ನನಗೆ ಬಾಲ್ಯದಿಂದಲೂ ಸಾಹಿತ್ಯದ ಅಭಿರುಚಿ. ದೊಡ್ಡವನಾದಂತೆ ಈ ಅಭಿರುಚಿ ಪುಸ್ತಕಗಳ ಸಾಂಗತ್ಯಕ್ಕೆ ಎಡೆ ಮಾಡಿಕೊಟ್ಟಿತು. ಮದುವೆಯ ವಯಸ್ಸಿನ ಹೊತ್ತಿಗೆ ಸುತ್ತಮುತ್ತ ನಡೆಯುತ್ತಿದ್ದ ಮದುವೆಗಳನ್ನು ನೋಡಿ ನನ್ನ ಮದುವೆ ಹೇಗಿರಬೇಕೆಂಬ ಸ್ಪಷ್ಟ ಕಲ್ಪನೆ ಮೂಡಿತ್ತು. ನನ್ನ ಮದುವೆ ಅರ್ಥಪೂರ್ಣವಾಗಿ ಮತ್ತು ಸರಳವಾಗಿ ಆಗಬೇಕೆಂಬ ಆಸೆ ಹೊತ್ತೆ. ನನ್ನಾಸೆಗೆ ತಕ್ಕಂತೆ ಅನುರೂಪಳಾದ ಹುಡುಗಿಯೂ ದೊರೆತಳು.

ಆದರೆ ತಮ್ಮ ಘನತೆಗೆ ತಕ್ಕಂತೆ ಮಗಳನ್ನು ಮದುವೆ ಮಾಡಿಕೊಡಬೇಕೆಂದುಕೊಂಡಿದ್ದ ಹುಡುಗಿಯ ಮನೆಯವರು ಏನೋ ಮಾಡಲು ಹೋಗಿ ಎಲ್ಲಿ ತಮಗೆ ಆಭಾಸವಾಗುತ್ತದೆಯೋ ಎಂದು ಅಂಜಿದರೂ, ಕೊನೆಗೆ ಹೊಸತನಕ್ಕೆ ಅವಕಾಶವೆಂದು ಒಪ್ಪಿಕೊಂಡರು. ಅವರ ಒಪ್ಪಿಗೆಗೆ ಋಣಿಯಾದ ನಾನು ಸಾಹಿತಿಗಳಾದ ಡಾ.ಶ್ರೀಕಂಠ ಕೂಡಿಗೆ, ಡಾ.ಸಣ್ಣರಾಮ ಮತ್ತು ಕರಿಬಸಪ್ಪ ಅವರನ್ನು ಆಹ್ವಾನಿಸಿ, ನಾನೇ ಬರೆದ ‘ಚೊಂಬೇಶ ಮುಕ್ತಕ’ವೆಂಬ ಚೌಪದಿಗಳ ವೈಚಾರಿಕ ಕೃತಿಯನ್ನು ಅವರಿಂದ ಬಿಡುಗಡೆ ಮಾಡಿಸಲು ತಯಾರಿ ನಡೆಸಿದೆ. ಮದುವೆಯ ಅರ್ಥವನ್ನು ಅವರ ಮೂಲಕ ಅರ್ಥವತ್ತಾಗಿ ಹೇಳಿಸಿ, ನಂತರ ಗುರು-ಹಿರಿಯರ, ಬಂಧು-ಬಾಂಧವರ ಸಮ್ಮುಖದಲ್ಲಿ ಅರ್ಥಪೂರ್ಣವಾಗಿ ಮದುವೆಯಾದೆ.

ಮಂತ್ರಮಾಂಗಲ್ಯದ ಕನಸು ಹೊತ್ತಿದ್ದ ನನಗೆ ಕೆಲವು ಅನಿವಾರ್ಯತೆಗಳಿಂದಾಗಿ ಅದನ್ನು ಸಾರ್ಥಕಗೊಳಿಸಿ ಕೊಳ್ಳಲು ಸಾಧ್ಯವಾಗದಿದ್ದರೂ ಇನ್ನೊಂದು ಕನಸಿನಂತೆ ಒಂದು ವೈಚಾರಿಕ ಕೃತಿಯನ್ನು ಬಿಡುಗಡೆ ಮಾಡುವುದರ ಮೂಲಕ ಮದುವೆಯಲ್ಲಿ ಒಂದು ಸಣ್ಣ ಬದಲಾವಣೆಗೆ ಕಾರಣವಾದೆ ಎಂಬ ಸಾರ್ಥಕವಿದೆ.


-ರಾಘವೇಂದ್ರ ಈ. ಹೊರಬೈಲು, ಬಟ್ಲಹಳ್ಳಿ, ಚಿಕ್ಕಬಳ್ಳಾಪುರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT