ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೀರ್ಯ ಬಿತ್ತುವ ಮೊದಲು

Last Updated 18 ಡಿಸೆಂಬರ್ 2015, 19:53 IST
ಅಕ್ಷರ ಗಾತ್ರ

ಭಾರತೀಯ ಕೌಟುಂಬಿಕ ವ್ಯವಸ್ಥೆಯಲ್ಲಿ ರೂಢಿಗತವಾಗಿ ಒಂದು ಪದ್ಧತಿ ಬೆಳೆದುಕೊಂಡು ಬಂದಿದೆ. ಮನೆಯಲ್ಲಿ ಗರ್ಭಿಣಿಯಾದರೆ ಸಾಕು ಶುರುವಾಗಿ ಬಿಡುತ್ತದೆ ಪಥ್ಯದ ಸೇವೆ. ಅದನ್ನು ತಿಂದರೆ ನೆಗಡಿ, ಇದನ್ನು ತಿಂದರೆ ಕೆಮ್ಮು  ಹಾಗೇ, ಹೀಗೆ ಅಂತ ಹೇಳಿ ಗರ್ಭಿಣಿಯರನ್ನು ಹೈರಾಣು ಮಾಡುತ್ತೆವೆ. ಇದರಲ್ಲಿ ಕೆಲವು ವೈಜ್ಞಾನಿಕ ಸತ್ಯಗಳು ಅಡಗಿರುವುದು ಸುಳ್ಳಲ್ಲ ಬಿಡಿ! ಆದರೆ ವೀರ್ಯ ಬಿತ್ತುವ ಪುರುಷರ ವಿಚಾರದಲ್ಲಿ ಮಾತ್ರ ಇದು ಪೂರ್ಣ ಉಲ್ಟಾ!

ಅವರು ಏನು ಬೇಕಾದರೂ ತಿನ್ನಬಹುದು, ಕುಡಿಯಬಹುದು, ಅವರಿಗೆ ಮಾತ್ರ ಯಾವುದೇ ಪಥ್ಯ–ನೇಪಥ್ಯಗಳು ಇಲ್ಲ ಎಂದೇ ಭಾವಿಸಿದ್ದೇವೆ! ಆಗಂತಾ ನಾವು ಇನ್ನು ಮುಂದೆ  ಸುಮ್ಮನೆ ಕೂರುವಂತಿಲ್ಲ? ಯಾಕೆಂದರೆ ಇದೀಗ ಪುರುಷರು ಕೂಡ ಪಥ್ಯ ಮಾಡಬೇಕು ಎಂಬ ಎಂಬ ಬ್ರೇಕಿಂಗ್‌ ಕಮ್‌ ಶಾಕಿಂಗ್‌ ಸುದ್ದಿಯನ್ನು ಬ್ರಿಟನ್‌ ವಿಶ್ವವಿದ್ಯಾಲಯ ತಂದಿದೆ! ವೀರ್ಯ ಬಿತ್ತುವ ಮೊದಲು ಪುರುಷರು ಕೂಡ ಪಥ್ಯ  ಮಾಡಬೇಕು ಎಂದು ಹೇಳುತ್ತದೆ ಬ್ರಿಟನ್‌ನ ಕೊಪನ್‌ಹೆಗನ್‌ ವಿಶ್ವವಿದ್ಯಾಲಯದ ವೈದ್ಯಕೀಯ ಸಂಶೋಧನಾ ತಂಡ!

ಯಾವುದೇ ದಂಪತಿ ಮಗು ಪಡೆಯುವ ಯೋಜನೆ ಹೊಂದಿದ್ದರೆ  ಗರ್ಭಕಟ್ಟುವ ಮೂರು ತಿಂಗಳಲ್ಲಿ ಪುರುಷರು ಕೂಡ ಪಥ್ಯವನ್ನು ಅನುಸರಿಸಬೇಕು! ಅಂದರೆ ಮದ್ಯಪಾನ, ಧೂಮಪಾನ ಮಾಡಬಾರದು, ಜತೆಗೆ ತೂಕವನ್ನು ಹೆಚ್ಚಿಸಿಕೊಳ್ಳಬಾರದು ಎಂದು ವರದಿ ತಿಳಿಸುತ್ತದೆ. ಒಂದು ವೇಳೆ ಈ ಸಮಯದಲ್ಲಿ ತೂಕ ಹೆಚ್ಚಿಸಿಕೊಂಡರೆ ಅಥವಾ ಮದ್ಯಪಾನ, ಧೂಮಪಾನ ಮಾಡಿದರೆ ಮಕ್ಕಳು ಸ್ಥೂಲಕಾಯ ದವರಾಗಿಯೂ, ಬುದ್ದಿ ಮಾಂದ್ಯರಾಗಿಯು, ಕಡಿಮೆ ಬುದ್ದಿಶಕ್ತಿಯವರಾಗಿಯೂ ಹುಟ್ಟುತ್ತಾರೆ ಎಂಬುದನ್ನು ಈ ಸಂಶೋಧನಾ ವರದಿ ವೈಜ್ಞಾನಿಕ ಪುರಾವೆಗಳಿಂದ ದೃಢಪಡಿಸಿದೆ.

ಕೋಪನ್‌ಹೆಗನ್‌ ವಿಶ್ವವಿದ್ಯಾಲಯದ ಹಿರಿಯ ಪ್ರಾಧ್ಯಾಪಕ ರೋಮೆನ್‌ ಬ್ಯಾರಿಸ್‌ ಎಂಬುವರು ಈ ಸಂಶೋಧನೆ ನಡೆಸಿದ್ದಾರೆ. ಸಪೂರ ಮತ್ತು ಸ್ಥೂಲಕಾಯದ ಪುರುಷರು ಹಾಗೂ ಮದ್ಯ ಮತ್ತು ಧೂಮ ವ್ಯಸನಿಗಳ ವೀರ್ಯವನ್ನು ಪರೀಕ್ಷೆಗೆ ಒಳಪಡಿಸುವ ಮೂಲಕ ಸಂಶೋಧನೆ ನಡೆಸಿದ್ದಾರೆ. ಆ ಪ್ರಕಾರ ನೀಳ ಕಾಯದ ಪುರುಷರು ಹಾಗೂ ಸ್ಥೂಲಕಾಯದ ಪುರುಷರ ವೀರ್ಯಾಣುವಿನಲ್ಲಿ ಸಾಕಷ್ಟು ವ್ಯತ್ಯಾಸಗಳಿರುವುದನ್ನು ಗಮನಿಸಿದ್ದಾರೆ.

ನಂತರದ ದಿನಗಳಲ್ಲಿ ಸ್ಥೂಲಕಾಯದ ಪುರುಷರನ್ನು ಶಸ್ತ್ರ ಚಿಕಿತ್ಸೆಗೆ ಒಳಪಡಿಸಿ ಅವರ ತೂಕವನ್ನು ಕಡಿಮೆ ಮಾಡಿ ಮತ್ತೆ ಅವರಿಂದ ವೀರ್ಯ ಪಡೆದು ಪರೀಕ್ಷೆಗೆ ಒಳಪಡಿಸಿದಾಗ ಸಾಕಷ್ಟು ಬದಲಾವಣೆಗಳಾಗಿರುವುದನ್ನು ರೋಮೆನ್‌ ಪತ್ತೆ ಹಚ್ಚಿದ್ದಾರೆ. ಸಪೂರ ಕಾಯದ ಪುರುಷರ ವೀರ್ಯದ ಸಾಮ್ಯತೆಗೂ  ಹಾಗೂ ಸ್ಥೂಲಕಾಯದವರ ವೀರ್ಯದ ಸಾಮ್ಯತೆಗೂ ಮೊದಲಿನಷ್ಟು ಗಮನಾರ್ಹ ವ್ಯತ್ಯಾಸಗಳಿರಲಿಲ್ಲ  ಎಂದು ಅವರು ಹೇಳುತ್ತಾರೆ.

ಇದೇ ತಂತ್ರ ಬಳಸಿ ಮದ್ಯ ಹಾಗೂ ಧೂಮ ವ್ಯಸನಿಗಳು ಮತ್ತು ಇವುಗಳಿಂದ ಮುಕ್ತರಾದವರ ಮೇಲೆ ಸಂಶೋಧನೆ ನಡೆಸಿ ಹಲವು ವ್ಯತ್ಯಾಸ ಮತ್ತು ಸಾಮ್ಯತೆಗಳನ್ನು ಕಂಡುಕೊಂಡು ರೋಮೆನ್‌ ಈ ಅಧ್ಯಯನದ ವರದಿ ತಯಾರಿಸಿದ್ದಾರೆ ಎಂದು ಕೋಪನ್‌ಹೆಗನ್‌ ವಿಶ್ವವಿದ್ಯಾಲಯ ಪ್ರಕಟನೆಯಲ್ಲಿ ತಿಳಿಸಿದೆ. ಮಕ್ಕಳನ್ನು ಪಡೆಯುವ ಯೋಚನೆ ಮಾಡಿದ ನಂತರದ ಮೂರು ತಿಂಗಳಲ್ಲಿ ಪುರುಷರು ಮದ್ಯಪಾನ, ಧೂಮಪಾನ ಮಾಡಬಾರದು ಹಾಗೂ ತೂಕ ಹೆಚ್ಚಾಗುವಂತಹ ಪದಾರ್ಥಗಳನ್ನು ಸೇವಿಸಬಾರದು ಎಂಬುದು ಈ ಅಧ್ಯಯನದ ಒಟ್ಟು ಸಾರ.

ಮೂರು ತಿಂಗಳು ಕಟ್ಟುನಿಟ್ಟಿನ ಈ ಡಯೆಟ್‌ ಅನುಸರಿಸಿದ ಬಳಿಕ ಗರ್ಭಧಾರಣೆಯ ಯೋಜನೆಯನ್ನಿಟ್ಟುಕೊಂಡರೆ ಹುಟ್ಟುವ ಮಗುವಿನ ಕ್ರೊಮೊಸೊಮ್‌ ಹಾಗೂ ಜೀನ್ಸ್‌ಗಳು ಅತಿ ಆರೋಗ್ಯವಂತವಾಗಿರುತ್ತವೆ. ಎನ್ನುತ್ತಾರೆ ರೋಮೆನ್‌ ಬ್ಯಾರಿಸ್‌. ಮಹಿಳೆಯರಿಗೆ ಮಾತ್ರ ಇದ್ದ ಈ ಪಥ್ಯ ಇನ್ನು ಮುಂದೆ ಪುರುಷರಿಗೂ ವಿಸ್ತರಣೆಯಾಗಿದೆ... ಆ ಮೂಲಕ ಸಾಮಾ ಜಿಕ ನ್ಯಾಯ ದೊರೆದಂತಾಗಿದೆ ಎಂದು ಕೆಲ ಮಹಿಳಾ ವಾದಿಗಳು ಸಂಭ್ರಮಿಸಿದ್ದಾರೆ ಎಂಬ  ಸುದ್ದಿಯೂ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT