ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿದ್ಧ ಮಾದರಿ ಮುರಿದ ನಟ

Last Updated 23 ಜುಲೈ 2017, 19:30 IST
ಅಕ್ಷರ ಗಾತ್ರ

ಅದೊಂದು ಅವಿಭಕ್ತ ಕುಟುಂಬ. ಮನೆ ತುಂಬಾ ಜನ. ಜತೆಗೆ ಬಡತನ. ಎಂಟು ಮಕ್ಕಳ ಪೈಕಿ ಹಿರಿಯನವನಾದ ಆ ಹುಡುಗನ ಕಣ್ಣುಗಳಲ್ಲಿ ಕನಸಿನ ಸಿರಿವಂತಿಕೆ ಇತ್ತು. ಓದು ಮುಗಿಸಿ ಕೆಲಸಕ್ಕೆ ಅಲೆದಾಡಿದರೂ ಕನಸು ನನಸಾಗುವ ಕಾಲವಿನ್ನೂ ದೂರವೇ ಇತ್ತು. ಆದರೂ ಆ ಹುಡುಗ ಕನಸು ಕಾಣುವುದನ್ನು ಬಿಡಲಿಲ್ಲ. ಎದೆಯೊಳಗೆ ಮಹತ್ವಕಾಂಕ್ಷೆಯ ದೀವಟಿಗೆಯನ್ನು ಉರಿಸುತ್ತಲೇ ಆ ಹುಡುಗ ಸಾಧನೆಯ ಹಾದಿ ಹಿಡಿದ. ಅನೇಕ ಪ್ರಶಸ್ತಿಗಳನ್ನೂ ಬಾಚಿಕೊಂಡ. ಆ ಹುಡುಗ ಬೇರಾರೂ ಅಲ್ಲ ಬಾಲಿವುಡ್ ನಟ ನವಾಜುದ್ದೀನ್ ಸಿದ್ದಿಕಿ.

ಉತ್ತರ ಪ್ರದೇಶದ ಮುಜಾಫರ್‌ನಗರದ ಬುಧಾನ ಎನ್ನುವ ಸಣ್ಣ ಹಳ್ಳಿಯಲ್ಲಿ 1974ರ ಮೇ 19ರಂದು ಸಾಮಾನ್ಯ ಮುಸ್ಲಿಂ ಕುಟುಂಬದಲ್ಲಿ ಜನಿಸಿದವರು ನವಾಜುದ್ದೀನ್. 32 ಸಾವಿರ ಜನಸಂಖ್ಯೆಯುಳ್ಳ ಬುಧಾನದಲ್ಲಿ ನವಾಜುದ್ದೀನ್ ಬಾಲ್ಯವನ್ನು ಕಳೆದಿದ್ದು ಅಪ್ಪಟ ಸಾಂಸ್ಕೃತಿಕ ವಾತಾವರಣದಲ್ಲಿ. ದೇಸಿ ಸೊಗಡಿನ ಕಲಾಪ್ರಕಾರಗಳನ್ನು ಬಾಲ್ಯದಲ್ಲಿ ಕಣ್ಣರಳಿಸಿ ನೋಡುತ್ತಿದ್ದ ಅವರಿಗೆ, ತಾನೂ ಅದರ ಭಾಗವಾಗಬೇಕೆಂಬ ಆಸೆ ಮೊಳೆತಿದ್ದು ಚಿಕ್ಕ ವಯಸ್ಸಿನಲ್ಲೇ.

ಶಾಲಾ ಓದಿನ ಜತೆಗೆ ಸಾಂಸ್ಕೃತಿಕ ಪಾಠವನ್ನೂ ಅಷ್ಟೇ ಆಸ್ಥೆಯಿಂದ ಮನದಟ್ಟು ಮಾಡಿಕೊಂಡಿದ್ದ ನವಾಜುದ್ದೀನ್‌ಗೆ ತಾನೊಬ್ಬ ಕಲಾವಿದನಾಗಬೇಕೆಂಬ ಹಂಬಲವೂ ಇತ್ತು. ಆದರೆ, ಮನೆಯಲ್ಲಿ ಅಪ್ಪ–ಅಮ್ಮ ಬೈದಾರೆಂಬ ಭಯಕ್ಕೆ ಕಲಾವಿದನಾಗುವ ಬಯಕೆಯನ್ನು ಹತ್ತಿಕ್ಕಿಕೊಂಡೇ ಹರಿದ್ವಾರದಲ್ಲಿ ವಿಜ್ಞಾನ ಪದವಿ ಪಡೆದರು.

ಪದವಿ ಬಳಿಕ ವಡೋದರದಲ್ಲಿ ಒಂದು ವರ್ಷ ಕೆಮಿಸ್ಟ್ ಆಗಿಯೂ ಕೆಲಸ ಮಾಡಿದ ನವಾಜುದ್ದೀನ್‌ಗೆ ತಾನು ಕಲೆಯ ಮೂಲಕ ಜನರ ಮನಸಿಗೆ ಔಷಧಿ ಕೊಡಬೇಕೆಂಬ ಹೊರತು ಕೆಮಿಸ್ಟ್ ಆಗಿ ಅಲ್ಲ ಎಂದು ಅನಿಸಲು ತಡವಾಗಲಿಲ್ಲ. ವಡೋದರದಿಂದ ಸೀದಾ ದೆಹಲಿಗೆ ಹಾರಿದ ಅವರ ಗಮನ ಸೆಳೆದಿದ್ದು ರಂಗಭೂಮಿ.

ರಾಷ್ಟ್ರೀಯ ನಾಟಕ ಶಾಲೆಯಲ್ಲಿ (ಎನ್ಎಸ್‌ಡಿ) ನಟನಾ ತರಬೇತಿ ಪಡೆಯಬೇಕೆಂಬ ಆಸೆ ಅಷ್ಟು ಸುಲಭವಾಗಿ ಈಡೇರಲಿಲ್ಲ. ಅದಕ್ಕಾಗಿ ಹಲವು ಬಾರಿ ಸೈಕಲ್ ಹೊಡೆದದ್ದೂ ಆಯಿತು. ಕೊನೆಗೆ ಸ್ಥಳೀಯ ರಂಗತಂಡಗಳ ಜತೆ ಬೆರೆತು ಒಂದು ಹಂತದ ತನಕ ತಾನು ಅಭಿನಯಿಸಬಲ್ಲೆ ಎಂದು ವಿಶ್ವಾಸ ಮೂಡಿದ ಮೇಲೆ ಎನ್ಎಸ್‌ಡಿಯತ್ತ ಪಯಣ. ಮುಂದೆ ನಡೆದಿದ್ದೆಲ್ಲಾ ಇತಿಹಾಸ.

ನವಾಜುದ್ದೀನ್ ಸದಾ ಯಶಸ್ಸನ್ನೇ ನಂಬಿದವರಲ್ಲ. ‘ಗೆಲುವು ಯಾವತ್ತೂ ಶಾಶತ್ವವಲ್ಲ. ಅದು ಬರುತ್ತೆ ಹೋಗುತ್ತೆ. ಒಂದೇ ಯಶಸ್ಸನ್ನು ನಂಬಿಕೊಂಡು ಇಡೀ ಜೀವನ ಬದುಕಲು ಸಾಧ್ಯವಿಲ್ಲ’ ಅನ್ನೋದು ಅವರ ಅನುಭವದ ನುಡಿ. ಜೀವನ ಪ್ರತಿಹಂತದಲ್ಲೂ ಬದಲಾಗುತ್ತಾ ವಿಭಿನ್ನ ಘಟ್ಟಗಳಿಗೆ ತೆರೆದುಕೊಳ್ಳುತ್ತಾ ಹೋಗುತ್ತದೆ. ಅದಕ್ಕೆ ತಕ್ಕಂತೆ ನಮ್ಮನ್ನು ರೂಪಿಸಿಕೊಳ್ಳಬೇಕು ಮಾಡಿಕೊಳ್ಳಬೇಕು ಎನ್ನುವುದು ಅವರ ನಂಬಿಕೆ.

‘ಕಲಾವಿದ ಕೆಲವೊಮ್ಮೆ ಸ್ವಾರ್ಥಿಯಾಗುತ್ತಾನೆ. ಆಗ ಆತ ತನ್ನ ಪಾತ್ರದ ಬಗ್ಗೆ ಮಾತ್ರ ಯೋಚಿಸುತ್ತಾನೆ. ತನ್ನ ಮೂಡಿನಿಂದ ಸಿನಿಮಾದ ಮೇಲೆ ಏನು ಪರಿಣಾಮ ಬೀರುತ್ತದೆ ಎಂಬುದನ್ನು ಆತ ಯೋಚಿಸುವುದೇ ಇಲ್ಲ. ಆದರೆ, ನಿರ್ದೇಶಕ ಹಾಗಲ್ಲ. ಇಡೀ ಸಿನಿಮಾದಲ್ಲಿ ಯಾವ ನಟನಿಂದ ಎಷ್ಟು ಅಭಿನಯ ತೆಗೆಸಬೇಕು ಎಂಬುದು ಆತನಿಗೆ ಗೊತ್ತಿರುತ್ತದೆ. ಹಾಗಾಗಿ, ನಾನು ನಿರ್ದೇಶಕರ ಕೂಸು’ ಎಂದು ನವಾಜುದ್ದೀನ್ ಸಂದರ್ಶನವೊಂದರಲ್ಲಿ ಹೇಳಿದ್ದು, ಅವರೊಳಗಿನ ಕಲಾವಿದನ ಪ್ರಬುದ್ಧತೆಯ ದ್ಯೋತಕ.

ಎನ್‌ಎಸ್‌ಡಿಯಲ್ಲಿ ಕಲಿತ ರಂಗಪಟ್ಟುಗಳನ್ನು ಸಿನಿಮಾ ಲೋಕದಲ್ಲಿ ಪ್ರಸ್ತುತ ಪಡಿಸುವಲ್ಲಿ ಯಶಸ್ವಿಯಾಗಿರುವ ನವಾಜುದ್ದೀನ್ ಈಗ ಹೊಸಬರಿಗೂ ಅಭಿನಯದ ಪಟ್ಟುಗಳನ್ನು ಹೇಳಿಕೊಡಬಲ್ಲ ಪರಿಣತ. ‘ಪಾತ್ರ ಮಾಡುವಾಗ ನಟನೊಬ್ಬ ತಾನು ಏನು ಮಾಡಬೇಕು ಎಂಬುದನ್ನು ಎಷ್ಟು ಅರಿತಿರುತ್ತಾನೋ ಅಂತೆಯೇ ಏನನ್ನು ಮಾಡಬಾರದು ಎಂಬುದನ್ನೂ ಅಷ್ಟೇ ಪ್ರಮಾಣದಲ್ಲಿ ಅರಿತಿರಬೇಕಾದದ್ದು ಮುಖ್ಯ. ಒಂದು ದೃಶ್ಯದಲ್ಲಿ ನಿಮ್ಮ ಅಭಿನಯ ಶೇ 5ರಷ್ಟು ಮಾತ್ರ ಬೇಕಿದ್ದಾಗ ನೀವು ಶೇ 10ರಷ್ಟು ಅಭಿನಯಿಸಲು ಹೋಗಲೇಬಾರದು. ಹಾಗೆ ಅಭಿನಯಿಸಿದಲ್ಲಿ ನಿಮ್ಮ ಪಾತ್ರಕ್ಕೆ ನಿಜಕ್ಕೂ ನ್ಯಾಯ ಸಲ್ಲಿಸಿದಂತಾಗುವುದಿಲ್ಲ’ ಎಂಬುದು ನವಾಜುದ್ದೀನ್ ಅವರ ಅಭಿನಯದ ಪಾಠ.

‘ಹೊರ ಜಗತ್ತಿನ ಅನುಭವ ಪಡೆದು ನಟಿಸುವುದು ಸವಾಲಿನ ವಿಷಯ. ನನ್ನೆಲ್ಲಾ ಸಿನಿಮಾಗಳ ಪಾತ್ರಗಳನ್ನು ಮಾಡುವಾಗ ನಿಜ ಜೀವನದಲ್ಲಿ ಕಂಡ ಎಷ್ಟೋ ಜೀವಂತ ಪಾತ್ರಗಳನ್ನು ಅಲ್ಲಿ ಆವಾಹಿಸಿಕೊಂಡು ನಟಿಸಿದ್ದೇನೆ. ಅದರಿಂದಾಗಿಯೇ ಸುಲಭವಾಗಿ, ಸಹಜವಾಗಿ ಅಭಿನಯಿಸಿದ್ದೇನೆ. ನಾನು ಹೀರೊ ಮೆಟಿರೀಯಲ್ ಅಲ್ಲ ಅಂತ ನನಗೆ ಗೊತ್ತು. ಸಿಕ್ಸ್ ಪ್ಯಾಕ್, ಒಳ್ಳೆಯ ಕಂಠ, ಈಜು, ಡಾನ್ಸ್, ಫೈಟಿಂಗ್ ಈ ಯಾವ ಕೌಶಲವೂ ನನ್ನಲ್ಲಿಲ್ಲ. ಆದರೆ, ನನಗೆ ಅಭಿನಯ ಮಾತ್ರ ಗೊತ್ತು’ ಎನ್ನುವ ನವಾಜುದ್ದೀನ್ ಅವರ ವಿನಮ್ರ ಮಾತುಗಳು ಹೊಸಪೀಳಿಗೆಯ ನಟರಲ್ಲಿರುವ ಅಭಿನಯ ಕಲೆಯ ಕೊರತೆಯನ್ನು ಮುಖಕ್ಕೆ ಹೊಡೆದಂತೆ ಹೇಳುತ್ತವೆ. ಅಂತೆಯೇ ನಟನೊಬ್ಬನಿಗೆ ಇರಬೇಕಾದ ಅರ್ಹತೆಯ ಸಿದ್ಧಮಾದರಿಯನ್ನು ಮುರಿದವರ ಸಾಲಿನಲ್ಲಿ ನವಾಜುದ್ದೀನ್ ಅವರ ಹೆಸರೂ ಈಗ ಸೇರಿಕೊಂಡಿದೆ.

ಸೌಂದರ್ಯ ಅನ್ನೋದು ನಮ್ಮೊಳಗೆಯೇ ಅಡಗಿರುತ್ತದೆ. ನಮ್ಮೊಳಗೆ ಒಬ್ಬ ರೊಮ್ಯಾಂಟಿಕ್ ಹೀರೊ, ಒಬ್ಬ ಕೆಟ್ಟ ಖಳನಾಯಕ, ಒಬ್ಬ ಒಳ್ಳೆಯ ಸ್ನೇಹಿತ ಅಡಗಿದ್ದಾನೆ. ಅದನ್ನು ಆಯಾ ಸಂದರ್ಭಕ್ಕೆ ತಕ್ಕಂತೆ ಹೊರತೆಗೆಯಬೇಕಷ್ಟೇ ಅನ್ನುವ ನವಾಜುದ್ದೀನ್ ಮಾತು ಅವರ ಅಭಿನಯ ಜೀವನದ ಪ್ರತಿಬಿಂಬದಂತಿದೆ.

ನವಾಜುದ್ದೀನ್ ಬರೀ ಅಭಿನಯ ಚತುರ ಮಾತ್ರವಲ್ಲ, ಪ್ರಸ್ತುತ ವಿದ್ಯಮಾನಗಳಿಗೂ ದನಿಯಾಗುವ ನಟ. ಕೋಮುವಾದ ಮೇಲುಗೈ ಸಾಧಿಸುವಾಗ ಎಲ್ಲ ಧರ್ಮಗಳ ಬಗ್ಗೆ ಸಮಾನತೆಯ ಸಂದೇಶ ಸಾರುವ ವಿಡಿಯೊವೊಂದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿ ಜನರ ಮನಸನ್ನು ತಿಳಿಗೊಳಿಸುವ ಪ್ರಯತ್ನ ಮಾಡಿದವರು ಅವರು. ಅಂತೆಯೇ ಚಿತ್ರರಂಗದಲ್ಲಿ ನಡೆಯುತ್ತಿರುವ ವರ್ಣಭೇದದ ತಾರತಮ್ಯವನ್ನೂ ಬಿರುನುಡಿಯಲ್ಲೇ ಟ್ವೀಟ್ ಮಾಡಬಲ್ಲ ಛಾತಿಯೂ ಅವರದ್ದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT